• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಥೇಮ್ಸ್ ನದಿದಂಡೆ ಮೇಲೆ ಒಂದು ಶನಿವಾರ

By * ಶ್ರೀನಿವಾಸ ಮಹೇಂದ್ರಕರ್, ಯುಕೆ
|

"ಮಗಾ ಮೇ 15 ಶನಿವಾರ ರಘು ದೀಕ್ಷಿತ್ ಕಾರ್ಯಕ್ರಮ ಲಂಡನ್ ನಲ್ಲಿ ಇದೆ ಬರ್ತಿಯಾ" ಅಂತಾ ನನ್ನ ಸ್ನೇಹಿತ ವಿವೇಕ್ ಫೋನಾಯಿಸಿದ. ಮರುಮಾತಿಲ್ಲದೆ ಹೂಂ ಅಂದೆ. ನಾನು ಮತ್ತು ನನ್ನ ಸ್ನೇಹಿತರು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಲಂಡನ್ ನ ಹ್ಯಾರೊನಲ್ಲಿರೊ ಕ್ಯಾನನ್ ಪ್ರೌಢಶಾಲೆ ಹತ್ತಿರ ಸೇರೋ ನಿರ್ಧಾರ ಮಾಡಿದ್ವಿ. ನಾವು ಎಡ್ಜ್-ವೇರ್ ಸುರಂಗ ರೈಲುನಿಲ್ದಾಣದಿಂದ ಹೊರಗೆ ಬಂದಾಗ ನಮ್ಮ ಕನ್ನಡ ಮಾತುಗಳನ್ನ ಗಮನಿಸಿ ನೀವು ಕನ್ನಡಿಗರು ಯುಕೆಯ ವಸಂತೋತ್ಸವಕ್ಕೆ ಹೋಗ್ತಿದ್ದೀರಾ ಅಂತಾ ಅಪ್ಪಟ ಕನ್ನಡದ ವ್ಯಕ್ತಿಯೊಬ್ಬರು ನಮ್ಮನ್ನ ಕೇಳಿದ್ರು. ಹೌದು ಎಂದು ಹೇಳಿದಾಗ ಎಲ್ಲರು ಒಟ್ಟಿಗೆ ಸೇರಿ ಕ್ಯಾನನ್ ಶಾಲೆಯ ಕಡೆಗೆ ಹೋಗುವ ಬಸ್ಸನ್ನು ಹತ್ತಿದೆವು.

ಆ ವ್ಯಕ್ತಿ ತಮ್ಮನ್ನ ಅಕ್ಕಿಕಾಳು ವೆಂಕಟೇಶ್ ಅಂತ ಪರಿಚಯ ಮಾಡಿಕೊಟ್ಟರು. ಇವರು ಒಂದು ಅಕ್ಕಿಕಾಳಿನ ಮೇಲೆ ಕನ್ನಡದಲ್ಲಿ ರಾಷ್ಟ್ರಗೀತೆಯನ್ನ ಬರೆದು ವಿಶ್ವ ದಾಖಲೆ ಮಾಡಿದ್ದಾರೆ. ಇಂಥವರನ್ನ ನಮಗೆ ಪರಿಚಯ ಮಾಡಿಸೋಕೆ ಅಂತ ಕನ್ನಡಿಗರು ಯುಕೆ ಆಯೋಜಕರು ಇವರನ್ನ ವಸಂತೋತ್ಸವಕ್ಕೆ ಅತಿಥಿಯಾಗಿ ಬರಮಾಡಿಕೊಂಡಿದ್ದಾರೆ. ಕರೆಸಿದರೆ ಇಂಥವರನ್ನು ಕರೆಸಬೇಕು.

ಶಾಲೆಯ ಪ್ರವೇಶ ಮಾಡುತಿದ್ದಂತೆಯೇ, ರೇಶ್ಮೆ ಸೀರೆಯುಟ್ಟ ತರುಣಿಯರು ನಮ್ಮನ್ನ ಸ್ವಾಗತಿಸಿ, ನೋಂದಣಿಪಟ್ಟಿಯಿಂದ ನಮ್ಮನ್ನ ಗುರುತಿಸಿ, ಕೂಪನ್ ಕೈಗೆ ಕೊಟ್ಟು ಭೋಜನಗೃಹದ ಕಡೆಗೆ ಹಾದಿ ತೋರಿಸಿದ್ರು. ಊಟ ಅಚ್ಚುಕಟ್ಟಾಗಿ ಸ್ವಾದಿಷ್ಟಭರಿತವಾಗಿತ್ತು. ಫ್ರೆಂಚ್ ದಾಡಿ, ಜೀನ್ಸ್ ಪ್ಯಾಂಟ್ ಮತ್ತು ಟೀಶರ್ಟ್ ತೊಟ್ಟು ಕೈಲಿ ಊಟದ ತಟ್ಟೆ ಹಿಡಿದು ಧಢೂತಿಕಾಯದ ರಘು ಧೀಕ್ಷಿತ್ ನಮ್ಮ ಬಳಿಗೆ ಬಂದು ನಿಂತಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ನಮ್ಮ ತಂಡದಲ್ಲಿ ಯಾರೋಒಬ್ಬ, ನಿಮ್ಮ ಹಾಡುಗಳನ್ನ ಯೂ ಟೂಬ್ ನಲ್ಲಿ ನೋಡಿದ್ದೇವೆ ಅಂತ ಅಂದಾಗ "ಗೊತ್ತು ಗೊತ್ತು ನೀವೆಲ್ಲ ಪೈರಸಿ ಪ್ರಿಯರು " ಅಂತ ರಘು ಚಟಾಕಿ ಹಾರಿಸಿದ್ರು.

ತುಸು ತಡವಾದರೂ ಅರುಣ್ ಕುಕ್ಕೆ ತಂಡದ ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯ್ತು. ಸಿಲ್ಲಿ ಲಲ್ಲಿ ಧಾರವಾಹಿಯ ಮೂಲಕ ರಂಜಿಸುತ್ತ ಇದ್ದ ರೂಪ ಮತ್ತು ಪ್ರಶಾಂತ್ ನಿರೂಪಕರಾಗಿ ಹಾಜರಾದದ್ದು ಕಾರ್ಯಕ್ರಮಕ್ಕೆ ಕಳೆ ಕಟ್ಟಿತು. ಎಲ್ಲರಿಂದ ಸಿಳ್ಳೆ ಚಪ್ಪಾಳೆಗಳನ್ನ ಸುರಿಸಿತು. ಸರಿಗಮಪ ಸಂಗೀತ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾದ ಐದು ಜನರಲ್ಲಿ ಒಬ್ಬರಾದ ಅಶ್ವಿನಿಯವರು ತಮ್ಮ ಸುಮಧುರ ಗಾನ ಕೌಶಲದಿಂದ ಎಲ್ಲರನ್ನೂ ರಂಜಿಸಿದರು.

ಸ್ಥಳೀಯ ಪ್ರತಿಭೆಗಳಾದ ಅನು ವಿನಯ್ ಮಾಧುರಿ ದೀಕ್ಷಿತ್ ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಆಜ ನಾಚ್ಲೆಗೆ ನರ್ತಿಸಿ, ಅನುಷ್ಕ ಮತ್ತು ತಂಡ, ಅರ್ಪಿತ ಮತ್ತು ಜ್ಯೋತಿ ಚಿಣ್ಣರ ತಂಡಗಳು ಬಾಲಿವುಡ್ ಸಂಗೀತಕ್ಕೆ ಹೆಜ್ಜೆ ಹಾಕುತಿದ್ದಾಗ, ಜಿಂಕೆ ಮರಿಗಳ ನಾಟ್ಯ ಕಣ್ಮುಂದೆ ಬಂದಂತೆ ಕೆಲವರಿಗೆ, ತಮ್ಮ ಬಾಲ್ಯ ಮರಳಿ ಬಂದಂತೆ ಕೆಲವರಿಗೆ ಭಾಸವಾಗಿ, ಮಕ್ಕಳ ಹೆಜ್ಜೆಯ ಜೊತೆ ತಮ್ಮ ಹೆಜ್ಜೆ ಸೇರಿಸಿ ಕುಣಿದದ್ದು ತುಂಬಾ ಮನೋಹರವಾಗಿತ್ತು.

ಡಾ||ಸುಮನಾರವರು ವಿವಿಧ ಕರ್ನಾಟಕ ಸಂಗೀತದ ತಾಳಗಳಿಗೆ ಭರತನಾಟ್ಯದ ಹೆಜ್ಜೆ ಹಾಕಿ ಕುಣಿದಾಗ, ಒಂದುಕ್ಷಣ ಇದು ಇಂದ್ರನ ಸಭೆಯೇನೊ ಎಂದೆನ್ನಿಸಿದ್ದಂತು ನಿಜ. ಅನಂತರ ಅಂತರ್ದೀಪ್ ಮತ್ತು ಡಾ|| ಸುಮನಾರ ಫ್ಯೂಶನ್ ನೃತ್ಯ ಎಲ್ಲರ ಮನಸೂರೆಗೊಂಡಿತು. ಕುಮಾರ್ ಕುಂತಿಕಾನಮಠ ಅವರ ಯಕ್ಷಗಾನವಂತೂ ನಮ್ಮನ್ನೆಲ್ಲ ಯಕ್ಷಲೋಕಕ್ಕೇ (ಅಥವ ನಮ್ಮ ಕರಾವಳಿ ತೀರಕ್ಕೆ) ಎಳೆದೊಯ್ಯಿತು.

ಮಧ್ಯದಲ್ಲಿ ನಿಮಗೆ ಮೊದಲೇ ಪರಿಚಯಿಸಿದ ಅಕ್ಕಿಕಾಳು ವೆಂಕಟೇಶ್ ವೇದಿಕೆಗೆ ಆಗಮಿಸಿ, ಎಲ್ಲರ ಮುಂದೆ ತಮ್ಮ ಕಲೆಯ ಕೌಶಲ್ಯವನ್ನ ಪ್ರದರ್ಶಿಸಿದರು. "ಕನ್ನಡಿಗರು ಯುಕೆ" ಎಂದು ಮುದ್ರಿಸಿದ ಅಕ್ಕಿಕಾಳನ್ನು ಆಯೋಜಕರಿಗೆ ಉಡುಗೊರೆಯಾಗಿ ನೀಡಿದರು. ಈ ಕಲೆಯ ವಿಶೇಷತೆ ಮತ್ತು ಅದರ ಉಳಿವಿಗಾಗಿ ಅವರು ಹಾಕಿಕೊಂಡಿರುವ ಯೋಜನೆಗಳ ಪರಿಚಯ ಎಲ್ಲರಿಗೂ ಮಾಡಿಕೊಟ್ಟರು.

ಈ ಎಲ್ಲ ಕಾರ್ಯಕ್ರಮಗಳ ಜೊತೆಗೇ ನಿರೂಪಕರಾದ ರೂಪ ಮತ್ತು ಪ್ರಶಾಂತ್ ಲಂಡನ್ನಿಂದ ಹೋಗುವ ಮೊದಲು ಒಂದು ಕನ್ನಡ ಚಿತ್ರ ನಿರ್ಮಾಣ ಮಾಡೋ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಉತ್ತಮ ಕಥೆ, ಉತ್ತಮ ಸಂಗೀತ, ಉತ್ತಮ ನೃತ್ಯ ನಿರ್ದೇಶಕ, ಉತ್ತಮ ನಾಯಕನ ಹುಡುಕಾಟ ಶುರು ಮಾಡಿದ್ದರು. ಈ ಹುಡುಕಾಟದಲ್ಲಿ ಹರಿದು ಬಂದ ಹಾಸ್ಯ ನಮ್ಮೆಲ್ಲರನ್ನ ಆನಂದದ ಸಾಗರಕ್ಕೆ ಹೊತ್ತೊಯ್ದಿದ್ದು ಮಾತ್ರ ಸುಳ್ಳಲ್ಲ.

ಎಲ್ಲರೂ ಆತುರದಿಂದ ಕಾಯುತಿದ್ದ ಘಳಿಗೆ ಎದುರಾದಾಗ ವೇದಿಯನ್ನ ನಾಲ್ಕು ಜನ ಧಾಂಡಿಗರು ಆಕ್ರಮಣ ಮಾಡಿದ್ದರು. ಇವರೇ ಜನಪದ ರಾಕ್ ಗಾಯಕ ಮತ್ತು ನಿರ್ದೇಶಕ ರಘು ದೀಕ್ಷಿತ್ ಮತ್ತು ತಂಡ. ಈ ಸಂಗೀತದ ಮೋಡಿಗಾರ ತನ್ನ ಕೌಶಲ್ಯದಿಂದ ಎಲ್ಲರನ್ನೂ ಬಂಧಿಸಿ, ನಾವೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದ್ದು ಆ ಸಂಜೆಯ ವಿಶೇಷವಾಗಿತ್ತು. ಕಾವ್ಯಮಯವಾಗಿ ಹೇಳೋದಾದ್ರೆ,

ಮೈ ಮರೆತು ಕುಣಿಯಿತು ಜೀವಾ

ಮಾಂತ್ರಿಕನ ಮೋಡಿಗೆ

ಹಾಡೊಳಗಿನ ಭಾವ ಸ್ಪೂರ್ತಿಯಾಯ್ತು

ನನ್ನ ಹೃದಯದ ನಾಡಿಗೆ

ತಮ್ಮ ಜನಪ್ರಿಯ ಹಾಡುಗಳಾದ "ಹೇ ಭಗವಾನ್", "ಮೈಸೂರ್ ಸೆ ಆಯಿ", "ಗುಡುಗುಡಿಯಾ ಸೇದಿ ನೋಡು" ಇನ್ನೂ ಹಲವಾರು ಹಾಡುಗಳ ಔತಣವನ್ನು ರಘು ಧಿಕ್ಷಿತ್ ಎಲ್ಲರಿಗೂ ನೀಡಿದ್ರು. ಪೌಂಡ್ ಬೆಲೆ ಕಡಿಮೆಯಾಗಿ, ಖರ್ಚು ಜಾಸ್ತಿಯಾಗಿ, ಇಲ್ಲಿ ಕೆಲಸ ಮಾಡಿದರೂ ಪ್ರಯೋಜನವಿಲ್ಲ ಬೆಂಗಳೂರಿಗೆ ಮರಳಬೇಕು ಅಂತಾ ಒಂದೊಂದು ಸಾರಿ ಯೋಚಿಸೋ ಮನಸ್ಸಿಗೆ, "ಬಾರೋ ಸಾಧನ ಕೇರಿಗೆ" ಎಂಬ ದರಾ ಬೇಂದ್ರೆರವರ ಹಾಡು ರಘು ದೀಕ್ಷಿತ್ ರ ಕಂಠದಿಂದ ಹೊರ ಬಂದಾಗ, ತಕ್ಷಣವೇ ವಿಮಾನ ಹಿಡಿದು ಬೆಂಗಳೂರಿಗೆ ಹೋಗೋಣ ಅನ್ನಿಸಿತು.

ಹಾಡುಮುಗಿದಾಗ, ಸಂಜೆ ಕಳೆದಾಗ, ಮತ್ತೆ ನಾವೆಲ್ಲ ನೈಜ ಬದುಕಿಗೆ ಮರಳಿದಾಗ ಬೆಂಗಳೂರಿಗೆ ಮರಳುವ ಮನಸ್ಸು ಮತ್ತೆ ಮಾಯವಾಗಿತ್ತು. ಆದರೆ ಕಾರ್ಯಕ್ರಮದ ಹ್ಯಾಂಗೋವರ್ ಎರಡು ದಿನಗಳು ಕಳೆದರೂ ಮಾಯವಾಗಿರಲಿಲ್ಲ. ಕಾರ್ಯಕ್ರಮದ ವಿಜೃಂಭಣೆಯಿಂದ ದಂಗುಬಡಿದ ನಮಗೆ ಸುಧಾರಿಸಿಕೊಳ್ಳಲು ಕೆಲವು ದಿನಗಳೇ ಬೇಕಾಯ್ತು. ಆಂಗ್ಲನಾಡಿನ ಕನ್ನಡಿಗರನ್ನು ಒಂದೆಡೆ ಕಲೆಹಾಕಿದ ಕನ್ನಡಿಗರು ಯುಕೆ ತಂಡಕ್ಕೆ ಅನಂತಾನಂತ ಧನ್ಯವಾದಗಳು. ಇಂತಹ ಅನೇಕ ಕಾರ್ಯಕ್ರಮಗಳು ನಿಮ್ಮವತಿಯಿಂದ ಆಂಗ್ಲ ನೆಲದಲ್ಲಿ ಮೂಡಿಬರಲಿ ಎಂಬುದೇ ನಮ್ಮೆಲ್ಲರ ಆಶಯ.

ವಸಂತೋತ್ಸವದ ಛಾಯಾಚಿತ್ರ ಸಂಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more