ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಕ್ಕಿಂತ ಒಂದು ಕ್ರಿಯೇಟಿವ್ ಐಡಿಯಾ

By * ಶ್ರೀವತ್ಸ ಜೋಶಿ
|
Google Oneindia Kannada News

What is the substitute for Bevu Bella?
"ಸರ್ವೋಪಚಾರ ಪೂಜಾರ್ಥೇ ಅಕ್ಷತಾಂ ಸಮರ್ಪಯಾಮಿ" ಅಂತಂದ್ರೆ ಮುಗೀತು, ಅಕ್ಕಿಕಾಳು ಎಲ್ಲದಕ್ಕೂ ಸಬ್‌ಸ್ಟಿಟ್ಯೂಟ್ ಆಗಬಲ್ಲದು ಅಂತೀರಾ? ಅಷ್ಟು ಸುಲಭವಾಗಿ ಹಬ್ಬಮಾಡಿದರೆ ಮನಸ್ಸಿಗೆ ತೃಪ್ತಿ ಸಿಗದು. ಕೆಲವರು ಸಬ್‌ಸ್ಟಿಟ್ಯೂಟಿಂಗ್‌ನಲ್ಲೂ ಸೃಜನಶೀಲರಾಗುವುದು ಆವಾಗಲೇ. ಯಾವ ಥರ? ಅದನ್ನು ತಿಳಿಯುವುದಕ್ಕೆಂದೇ ಮೊನ್ನೆ ನಾನೊಂದು ಚಿಕ್ಕ ಸಮೀಕ್ಷೆ ನಡೆಸಿದೆ. ಈ ಅಂಕಣದ ಓದುಗರಾಗಿ ಪರಿಚಿತರಾಗಿರುವ ಕೆಲವು ಅನಿವಾಸಿ ಕನ್ನಡಿಗ ಕುಟುಂಬಗಳಿಗೆ ಇಮೇಲ್ ಬರೆದು "ನೀವು ಹಬ್ಬದಾಚರಣೆಯಲ್ಲಿ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ಸಬ್‌ಸ್ಟಿಟ್ಯೂಟಿಂಗ್‌ಗೆ ಶರಣಾಗುವ, ಸ್ವಲ್ಪ ಅಡ್ಜಸ್ಟ್' ಮಾಡ್ಕೊಳ್ಳುವ ಪರಿಪಾಠ ಇದೆಯಾ? ಸ್ವಾರಸ್ಯಕರವಿದ್ದರೆ ತಿಳಿಸುತ್ತೀರಾ?" ಎಂದು ಕೇಳಿದೆ. ಆಗ ಬಂದವು ನೋಡಿ ಒಂದಕ್ಕಿಂತ ಒಂದು ಕ್ರಿಯೇಟಿವ್ ಐಡಿಯಾಗಳು!

ಯುಗಾದಿಯಂದು ಬೇವುಬೆಲ್ಲ ಮಾಡಲಿಕ್ಕೆ ಬೇವಿನಸೊಪ್ಪು ಸಿಗೋದಿಲ್ಲಾಂತ ಬೆಲ್ಲದ ಜತೆ ಮೆಂತ್ಯದ ಕಾಳುಗಳನ್ನು ಕುಟ್ಟಿ ಹದವಾದ ಸಿಹಿ-ಕಹಿ ಮಿಶ್ರಣ ಮಾಡ್ತಾರಂತೆ ಷಿಕಾಗೊದಲ್ಲಿರುವ ಅನುಪಮಾ ಮಂಗಳವೇಢೆ. ಅವರ ಲಾಜಿಕ್ ಏನೆಂದರೆ ಬೇವಾದರೇನು ಮೆಂತ್ಯವಾದರೇನು ರುಚಿಯಲ್ಲೆರಡೂ ಕಹಿಯಲ್ಲವೇನು? ಎಂದು. ಕ್ಯಾಲಿಫೋರ್ನಿಯಾದ ಮಧುಕಾಂತ್ ಬರೆಯುತ್ತಾರೆ, ನಮ್ಮಮ್ಮ ಇಲ್ಲಿಗೆ ಬಂದಿದ್ದಾಗ ಯುಗಾದಿಯಂದು ಬೆಲ್ಲದ ಜತೆ ಹಾಗಲಕಾಯಿ ರುಬ್ಬಿ ಮಿಶ್ರಣ ತಯಾರಿಸಿದ್ದರು. ಥೇಟ್ ಬೇವುಬೆಲ್ಲ ಥರನೇ ಇತ್ತು. ಬಹುಶಃ ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ ಅನ್ನೋ ಗಾದೆ ಹುಟ್ಟಿದ್ದೇ ಹಾಗೆ ಇರಬಹುದು. ಇರಲಿ, ಬೇವಿಗೆ ಸಬ್‌ಸ್ಟಿಟ್ಯೂಟ್ ಆಗಿ ಮೆಂತ್ಯ ಅಥವಾ ಹಾಗಲಕಾಯಿ ಬಳಸಬಹುದಂತ ಯಾರಿಗೇ ಆದ್ರೂ ಸುಲಭದಲ್ಲೇ ಹೊಳೆಯಬಹುದು. ಅಥವಾ ನ್ಯೂಜೆರ್ಸಿಯ ವಸಂತಾ ಶಶಿ ಅವರಂತೆ ಕರಿಬೇವಿನ ಎಲೆನಾದ್ರೂ ಉಪಯೋಗಿಸಬಹುದು. ಆದರೆ ಸ್ವಿಡ್ಜರ್ಲೆಂಡ್‌ನಲ್ಲಿರುವ ಅಶ್ವಿನಿ ಆಶ್ರಿತ್ ಅವರ ಬೇವುಬೆಲ್ಲ ರೆಸಿಪಿ ಕೇಳಿದ್ರೆ ನೀವು ದಿಗಿಲುಗೊಳ್ಳುವುದು ಖಂಡಿತ. ಸ್ಕಿನ್ ಟ್ರೀಟ್‌ಮೆಂಟ್‌ಗಂತ ಭಾರತದಿಂದ ತಂದಿದ್ದ ಆಯುರ್ವೇದಿಕ್ ನೀಮ್ ಟ್ಯಾಬ್ಲೆಟ್‌ಗಳನ್ನು ಬೆಲ್ಲದೊಟ್ಟಿಗೆ ಕುಟ್ಟಿ ಪುಡಿಮಾಡಿ ಇಲ್ಲಿ ನಾವು ಯುಗಾದಿಗೆ ಬೇವುಬೆಲ್ಲ ತಯಾರಿಸಿದ್ದೇವೆ ಅಂತಾರೆ ಅವರು! ಕುವೆಂಪು ಏನಾದ್ರೂ ಇದನ್ನೆಲ್ಲ ಕೇಳಿಸಿಕೊಂಡಿದ್ದಿದ್ರೆ ಎಲ್ಲಾದರೂ ಇರು ಎಂತಾದರೂ ಇರು ಹೇಗಾದ್ರೂ ಸರಿ ಬೇವುಬೆಲ್ಲ ಮಾಡಿ ತಿನ್ನುತ್ತಿರು ಅಂತಿದ್ರೋ ಏನೋ!

ಮೇರಿಲ್ಯಾಂಡ್‌ನ ಶೈಲಜಾ ಗುಂಡೂರಾವ್‌ಗೆ ಬೇವಿನಸೊಪ್ಪಿನ ಅಲಭ್ಯತೆಯ ಸಮಸ್ಯೆ ಇಲ್ಲ. ಅವರ ಸ್ನೇಹಿತೆಯೊಬ್ಬರು ಫ್ಲೋರಿಡಾದಲ್ಲಿದ್ದಾರಂತೆ, ಅವರು ಬೇವು ಮಾವು ತುಳಸಿ ಇತ್ಯಾದಿಗಳನ್ನು ತಮ್ಮ ಮನೆಹಿತ್ತಲಲ್ಲೇ ಬೆಳೆಸಿದ್ದು ಯುಗಾದಿಗೆ ಮೊದಲೇ ಖಾಸಾಗೆಳತಿಯರಿಗೆಲ್ಲ ಕೊರಿಯರ್‌ನಲ್ಲಿ ಬಟವಾಡೆ ಮಾಡ್ತಾರಂತೆ. ಮಿಕ್ಕಂತೆ ಶೈಲಜಾ ಅವರ ಸಬ್‌ಸ್ಟಿಟ್ಯೂಟ್ ಲಿಸ್ಟ್ ಚೆನ್ನಾಗಿದೆ. ಎಳ್ಳುಬೆಲ್ಲದ ಬದಲು ಎಳ್ಳಿನ ಚಿಕ್ಕಿ, ಸಕ್ಕರೆಅಚ್ಚಿನ ಬದಲು ಚಾಕಲೇಟ್, ಕಬ್ಬಿನ ಬದಲು ಬಾಳೆಹಣ್ಣು, ಬಾಗಿನದಲ್ಲಿ ಅರಸಿನಕುಂಕುಮ ಪ್ಯಾಕೆಟ್ ಬದಲು ಬಿಂದಿಸ್ಟಿಕ್ಕರ್ಸ್, ಕನ್ನಡಿ-ಬಾಚಣಿಗೆ ಬದಲು ನೈಲ್‌ಪಾಲಿಶ್! ನಾರ್ತ್ ಕೆರೊಲಿನಾದಲ್ಲಿರುವ ಸವಿತಾ ರವಿಶಂಕರ್ ಬರೀತಾರೆ, ತೋರಣಕ್ಕೆ ಮಾವಿನೆಲೆ ಬದಲಿಗೆ ಮಾಗ್ನೊಲಿಯಾ ಲೀವ್ಸ್, ಕಲಶಕ್ಕೆ ವೀಳ್ಯದೆಲೆ ಬದಲಿಗೆ ಮನಿಪ್ಲಾಂಟ್ ಲೀವ್ಸ್, ಪ್ಲಾಸ್ಟಿಕ್‌ನ ಬಾಳೆದಿಂಡು, ಪ್ಲಾಸ್ಟಿಕ್ ಮಲ್ಲಿಗೆಮಾಲೆಗೆ ಜಾಸ್ಮಿನ್ ಸೆಂಟ್ ಸಿಂಪಡಣೆ, ಸೀರೆ-ಖಣದ ಬದಲು ಬಟ್ಟೆಯ ಶಾಪಿಂಗ್‌ಬ್ಯಾಗ್... ಅಷ್ಟೇಅಲ್ಲ ಪುರೋಹಿತರ ಬದಲಿಗೆ ಲ್ಯಾಪ್‌ಟಾಪ್. ಪುರೋಹಿತರಾದರೆ ಅವಸರ ಮಾಡ್ತಾರೆ, ಅದಕ್ಕಿಂತ ಲ್ಯಾಪ್‌ಟಾಪ್ ಅಥವಾ ಸಿ.ಡಿ ಪ್ಲೇಯರ್ ಆದರೆ ಬೇಕೆಂದಾಗ ನಿಲ್ಲಿಸಿ, ನೈವೇದ್ಯ ಎಲ್ಲ ಅಣಿ ಮಾಡಿ ಆಮೇಲೆ ಮತ್ತೆ ಮುಂದುವರಿಸಬಹುದು. ಇವೆಲ್ಲ ನಮಗೀಗ ಎಷ್ಟು ರೂಢಿಯಾಗಿದೆಯೆಂದರೆ ಶಾಸ್ತ್ರದಲ್ಲಿರೋದೇ ಹೀಗೆ ಎಂದುಕೊಳ್ಳಬೇಕು!

ಫ್ಲೋರಿಡಾದಲ್ಲಿರುವ ರೇಖಾ ಹೆಗಡೆ ಚೌತಿ-ನವರಾತ್ರಿಗಳಲ್ಲಿ ಕರ್ಜಿಕಾಯಿ ಮಾಡಲು ಅಕ್ಕಿಯ ಅರಳು ಸಿಗದಿದ್ದಾಗ ಜೋಳ ತಂದು ಪಾಪ್‌ಕಾರ್ನ್ ಮಾಡಿ ಅದರ ಹುಡಿಯಿಂದ ಸಿಹಿತಿಂಡಿ ಮಾಡ್ತಾರಂತೆ. ರಂಗೋಲಿಹುಡಿ ಸಿಗದಿದ್ದರೆ ಫ್ಲೋರಿಡಾದ ಬೀಚುಗಳಲ್ಲಿ ಧಾರಾಳವಾಗಿ ಸಿಗುವ ನುಣುಪಾದ ಬಿಳಿ ಮರಳನ್ನು ತಂದು ರಂಗೋಲಿ ಹಾಕ್ತಾರಂತೆ! ಮೇರಿಲ್ಯಾಂಡ್‌ನ ಮಧುಶಾಲಿನಿ ಭಾಸ್ಕರ್ ಗೌರಿಹಬ್ಬದ ಬಾಗಿನಕ್ಕೆ ಬಿದಿರಿನ ಮೊರ ಸಿಗುವುದಿಲ್ಲಾಂತ ನಾಲ್ಕೈದು ತಿಂಗಳ ಮೊದಲು ಈಸ್ಟರ್ ಹಬ್ಬದ ವೇಳೆ ಇಲ್ಲಿನ ಅಂಗಡಿಗಳಲ್ಲಿ ಸಿಗುವ ಬಣ್ಣಬಣ್ಣದ ಬೆತ್ತದಬುಟ್ಟಿಗಳನ್ನು ತಂದಿಟ್ಟು ಅದರಲ್ಲಿ ಬಾಗಿನ ಕೊಡ್ತಾರಂತೆ. ಸಂಕ್ರಾಂತಿಗೆ ಎಳ್ಳಿನ ಜತೆಗೆ ಕುಸುರಿಕಾಳು ಇರಬೇಕೆಂದು ಬೇಕಿಂಗ್‌ನಲ್ಲಿ ಬಳಸುವ ಸಣ್ಣಸಣ್ಣ ಬಿಳಿಬಣ್ಣದ Hershey's kisses ಚಾಕಲೇಟ್ ಬಳಸ್ತಾರಂತೆ. ದೀಪಾವಳಿಯಂದು ನೀರುತುಂಬುವ ಹಬ್ಬದ ಸಂಭ್ರಮ ಹೆಚ್ಚಿಸಲಿಕ್ಕೆಂದು ಬೇಸ್‌ಮೆಂಟ್‌ನಲ್ಲಿರುವ ವಾಟರ್‌ಬಾಯ್ಲರ್‌ಗೇ ಅರಸಿನ-ಕುಂಕುಮ ಹಚ್ಚಿ ಪೂಜೆ ಮಾಡ್ತಾರಂತೆ!

ಮುಂದೆ ಓದಿ : ತೆಂಗಿನಕಾಯಿಗೆ ಸಬ್‌ಸ್ಟಿಟ್ಯೂಟ್ ಜುಟ್ಟು! »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X