• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರ ಕನ್ನಡಿಗರ ಸಿಂಗಾರ ಉತ್ಸವ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

ಮಕ್ಕಳ ಚಿಲಿಪಿಲಿ ಕಲರವ, ಅತ್ತಲಿಂದತ್ತ ಓಡುವಾಟ, ಹೆಂಗಸರ ಮಾತು, ನಗು, ಗಡಿಬಿಡಿ, ಸಜ್ಜುಗೊಳಿಸುವಿಕೆ ಇವೆಲ್ಲವೂ ಇದ್ದರೆ ತಾನೇ "ಉತ್ಸವ". ಇಂತಹ ಉತ್ಸವದ ಸಂಭ್ರಮ ಮೇ 1ರಂದು ಸಿಂಗಪುರ ಕನ್ನಡ ಸಂಘದ ವತಿಯಿಂದ "ಸಿಂಗಾರ ಉತ್ಸವ" ಕಾರ್ಯಕ್ರಮ ಇಲ್ಲಿನ ಪಾಲಿಟೆಕ್ನಿಕ್ ಸಭಾಂಗಣದಲಿ ನಡೆಯಿತು.

ಶುಭಕಾರ್ಯಕ್ಕೆ ಶಾರದೆಯ ಸ್ತುತಿಯೊಂದಿಗೆ ನಾಂದಿ ಹಾಡಿದರು ಶುಭಾರಘು. ಸಿಂಗಾರ ಉತ್ಸವ ಕಾರ್ಯಕ್ರಮ ಇಲ್ಲಿ ನೆಲೆಸಿಹ ಕನ್ನಡಿಗರ ಪ್ರತಿಭೆಗಳ ಬೆಳಕು ಚೆಲ್ಲಲು ಹಾಗೂ ಮುಂಬರುವ ಪ್ರತಿಭೆಗಳಿಗೆ ಒಂದು ಸದವಕಾಶ ನೀಡುವ ವೇದಿಕೆಯಾಗಿತ್ತು.

ಮೊದಲಿಗೆ 4-12 ವಯಸ್ಸಿನ ಪುಟ್ಟ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಜ್ಜಾದರು. ಮಕ್ಕಳಾಟಿಕೆ ಹೇಗಿದ್ದರೂ ಚೆಂದ ಅಲ್ಲವೇ? ಕೆಲವು ಮಕ್ಕಳು ಯಾವ ಸಿಗ್ಗು, ಭಯ ಇಲ್ಲದೆ ಹೇಳಿಕೊಟ್ಟದ್ದನ್ನು ಗಿಳಿಪಾಠದಂತೆ ಒಪ್ಪಿಸಿದರೆ, ಮತ್ತೆ ಕೆಲವು ಮಕ್ಕಳು ಬಿಮ್ಮನೆ ಮೈಕ್ ಹಿಡಿದು ನಿಂದರು. ಹೆದರುವ ಕಣ್ಣೋಟ, ಹೆತ್ತವರಿಗೆಗಾಗಿ ಹುಡುಕಾಟ, ನೋಡಿದಾಕ್ಷಣ ತನ್ನವರು ಇದ್ದಾರೆ ಎಂಬ ಹೆಮ್ಮೆ, ಕಲಿಸಿದ್ದು ಪಟಪಟನೆ ಹೇಳಿದಾಗ ಚಪ್ಪಾಳೆ ಸುರಿಮಳೆ, ದೊಡ್ಡ ಬಹುಮಾನ ಸಿಕ್ಕಿತೆಂಬ ಸಂಭ್ರಮ ನೋಡುವುದೇ ಚೆಂದ. ನಾವು ಪ್ರೇಕ್ಷಕರಾಗಿ ವೀಕ್ಷಿಸುವ ಆ ಮಕ್ಕಳ ಮುಗ್ದಾಟ ಚೆಲ್ವಯ್ಯ, ಚೆಲುವೋ.

ಮಕ್ಕಳು ಹಾಡಿದ ಚೆಲ್ವಿ ಚೆಲ್ವಿ, ಜೋಗದ ಸಿರಿ, ಅಪಾರ ಕೀತಿ ಗಳಿಸಿ ಮೆರವ, ಬೇಡ ಕೃಷ್ಣ ಹಾಡುಗಳು, ಮೂಡಲ್ ಕುಣಿಗಲ್ ಕೆರೆ, ಹೋಗನೇಳು ಜಾತ್ರೆಗೆ, ಕುಂತ್ರೆ ನಿಂತ್ರೆ ಅವನ ಧ್ಯಾನ ಜಾನಪದ ನೃತ್ಯ ಮನ ಮುಟ್ಟಿತು. ಸನ್ ಸನನಾರೆ ಹಾಡಿಗೆ ನೃತ್ಯ ಚೆನ್ನಿತ್ತು. ಹಿಂದೂಸ್ಥಾನಿ ಶಾಸ್ತ್ರೀಯ ಶೈಲಿಯ ವೃಂದಗಾನ, ಪಕ್ಕವಾದ್ಯ ಮೂರ್ತಿ ಚಿಕ್ಕದಾದರೂ... ಅಬ್ಬಾ ಅದೆಂಥ ಸೊಗಸು ಎಂದಿತು. ಮೇಘನಾ ಹೆಬ್ಬಾರ್ ಅವರಿಂದ "ಭೋ ಶಂಭೋ" ಹಾಗು ಖ್ಯಾತ ನೃತ್ಯ ಕಲಾವಿದೆ ದೀಪ್ತಿ ಅವರಿಂದ "ಪುಷ್ಪಾಂಜಲಿ, ಕೃತಿ ಹಾಗೂ ತಿಲ್ಲಾನ" ಭರತನಾಟ್ಯ ಸೊಗಸಾಗಿ ಮೂಡಿ ಬಂದಿತು.

ಈ ಮಕ್ಕಳ ಸಂಗೀತ, ನೃತ್ಯ ಹಾಗೊ ವೃಂದಗಾನಕ್ಕೆ ತರಬೇತು ಮಾಡಿದ ಶೋಭಾರಘು, ಸಾಧನಾ ರಾಜರಾಂ ಹಾಗೂ ವಿನುತಾ ಭಟ್ ಅವರ ಶ್ರಮ ಶ್ಲಾಘನೀಯ. ಗುರುರಾಜಚಾರ್ ಅವರಿಂದ ಸ್ವರಚಿತ ಕವನ ವಾಚನ "ಮುಪ್ಪು ಬರಬಾರದು ರೀ ಹಾಗೊ ನೀವು ನಗ್ತೀರ ಇಲ್ಲ ನಾನು ನಗಲಾ".

ಸ್ಥಳೀಯ ಪ್ರತಿಭೆಗೆ ಸದವಕಾಶ ನೀಡುವ "ಸಿಂಗಾರ ಉತ್ಸವ"ದ ಅಧ್ಯಕ್ಷತೆ ವಹಿಸಿದವರು ಮತ್ತೋರ್ವ ಪ್ರತಿಭಾಶಾಲಿ, ವಿಜ್ಞಾನಿ ಡಾ.ಭೈರಪ್ಪ ವೆಂಕಟೇಶ್. ವೆಂಕಟೇಶ್ ಅವರ ಸಂಶೋಧನೆಯ ವಿಷಯ ಮನುಷ್ಯನಲ್ಲಿ ಇರುವ ಜೀನ್‌ಗಳು. ಇವುಗಳನ್ನು ಗುರುತಿಸಿ, ಅವುಗಳ ಕಾರ್ಯ, ಉಪಯೋಗ, ನ್ಯೂನತೆಗಳ ಪರಿಶೀಲನೆ, ನ್ಯೂನತೆ ಇದ್ದಲ್ಲಿ ಬರುವ ಖಾಯಿಲೆಗಳು, ಆ ಜೀನ್‌ಗಳ ಬೇರ್ಪಡಿಕೆ ಸಾಧ್ಯವೇ, ಹೇಗೆ ಎಂಬುದರ ಸಂಶೋಧನೆಯ ಕೆಲವು ಮಾಹಿತಿಗಳನ್ನು ಸಭಿಕರಿಗೆ ತಿಳಿಯಪಡಿಸಿದರು.

ಇತ್ತೀಚೆಗೆ ಬಹುತೇಕರ ಹವ್ಯಾಸ ಕರೌಕೆ. ಸಿಂಗಾರ ಉತ್ಸವದಲಿ ಹಿರಿಯರಿಗಾಗಿ ಕರೌಕೆ ಸ್ಪರ್ಧೆ ಇದ್ದಿತು. ಈ ಕನ್ನಡ ಚಿತ್ರಗೀತೆಗಳ ಕರೌಕೆ ಸ್ಪರ್ಧೆಯಲಿ ಮೊದಲ ಬಹುಮಾನ ನೀರ-ಬಿಟ್ಟು ನೆಲದ ಮೇಲೆ ಹಾಡಿಗೆ ರಮ್ಯಾ ವೈ.ಎಸ್., ಎರಡನೆಯ ಬಹುಮಾನ ವಿನುತಾ ಭಟ್ ಹಾಗೂ ಮೂರನೆಯ ಬಹುಮಾನ ರೇಖಾ ಸುದರ್ಶನ್ ಅವರಿಗೆ ದೊರಕಿತು.

ಗಾನಂ, ನಾಟ್ಯಂ ಆದ ಮೇಲೆ ನಾಟಕಂ ಇಲ್ಲದಿದ್ದರೇ ಹೇಗೆ? ನಾಲ್ವರು ಕೂಡಿದಲ್ಲಿ ಹಾಸ್ಯ ಇರದಿದ್ದರೆ ಉತ್ಸವಕ್ಕೆ ಕಳೆ ಕಟ್ಟುವುದುಂಟೇ? ಕಿವಿಗೆ ಇಂಪುಗಾನ, ಕಣ್ಣಿಗೆ ಸುಂದರ ನೃತ್ಯ ನೋಡಿ ಸ್ವಲ್ಪವೂ ತಲೆ ಕೊರಿಯದಿದ್ದರೆ ಹೇಗ್ರೀ? ಅದಕ್ಕೆಂದೇ ಕೊರಿಯಲು ಬಂದರು "ಕೊರಿಯಪ್ಪನವರ ಕೊರಿಯೋಗ್ರಾಫಿ" ಟ್ರೂಪ್. "ಕೊರಿತಾನೆ ಕಣೆ" ಈ ಪದ ಕಾಲೇಜ್ ಬಿಟ್ಟ ಮೇಲಂತೂ ಮರೆತೇ ಹೋಗಿತ್ತು. ಕಾಲೇಜಿನಲ್ಲಿ ಅದು ಎಲ್ಲರ ಬಾಯಲ್ಲಿ ನಿತ್ಯ ಮಂತ್ರವಾಗಿತ್ತು. ಯಾವುದೋ ಲೆಕ್ಚರ್ ಇಷ್ಟವಾಗಲಿಲ್ಲ, ಕೊರಿತಾನೆ ಅವ್ನು ಎಂಬುದು ಎಲ್ಲರ ಡೈಲಾಗ್.

ದುಂಡಿರಾಜ್ ವಿರಚಿತ, ಗಿರೀಶ್ ಜಮದಗ್ನಿ ಅವರ ನಿರ್ದೇಶನದಲ್ಲಿ ಸಾಹಿತಿ ಕೊರಿಯಪ್ಪ ದಂಪತಿಗಳಾಗಿ ರಮೇಶ್ ಮತ್ತು ಲಕ್ಷ್ಮೀ, ಸಂದರ್ಶಕನಾಗಿ ವೆಂಕಟ್, ಬೀಡಾಶಾಪ್ ನರಸಿಂಹ ಭಟ್, ಪ-ಉಪಕಾರಿಯಾಗಿ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್, ಸಾಹಿತಿಯ ತಂಗಿಯಾಗಿ ವಿನುತಾ ಐತಾಳ್ ಹಾಗೂ ಹೋಗೆಂದರೂ ಹೋಗಲೊಲ್ಲದ ರಿಪೇರ್‌ಮ್ಯಾನ್ ಆಗಿ ಸುರೇಶ್ ಸೊಗಸಾಗಿ ಅಭಿನಯಿಸಿದರು. ಕೊರೆಯೋಗ್ರಫಿಯ ಈ ಸಕುಟುಂಬ ತುಂಬಿದ್ದ ಸಭೆಯಲ್ಲಿ ಕುಳಿತಿದ್ದ ಸಭಿಕರ ಕಿವಿಯನ್ನು ಕಿಂಚಿತ್ತೂ ಕೊರೆಯದೆಯೇ ಮನದಲಿ "ಕೊರೆಯಪ್ಪ ನಾಟಕ" ಚೆನ್ನಾಗಿತ್ತಪ್ಪ ಎಂದು ಮೊರೆಯುವ ಹಾಸ್ಯದಲಿ ಮುಳುಗಿಸಿದರು.

ಸಭಿಕರ ಕರತಾಡನ ಮುಟ್ಟಿದಂತೆ ಸಂಘದ ಕಾರ್ಯದರ್ಶಿ ಕೆ.ಜೆ. ಶ್ರೀನಿವಾಸ್ ಉತ್ಸವಕ್ಕೆ ಮಂಗಳ ಹಾಡಿದರು. ಅಂದಿನ ಕಾರ್ಯಕ್ರಮದ ನಿರೂಪಣೆ-ಅರ್ಚನಾ ಪ್ರಕಾಶ್ ಹಾಗೂ ಮೋಹನ್ ಬಿ.ವಿ.ಸ್ವಾಗತ ಭಾಷಣ-ಉಪಾಧ್ಯಕ್ಷ ಬಿ.ಕೆ.ರಾಮದಾಸ್ ನಿರ್ವಹಿಸಿದರು. ಸಿಂಗಾರ ಉತ್ಸವದ ಸಹಪ್ರಾಯೋಜಕರು "ಸ್ಪೈಸ್ ಆಫ್ ಇಂಡಿಯಾ", ಡಿವೈನ್ ಪಾರ್ಕ್, ಸಾಲಿಗ್ರಾಮ.

ಕಾರ್ಯಾಕ್ರಮದ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X