• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮ್ಮನ ಪ್ರೀತಿ ಬೆಲ್ಲಬೆಣ್ಣೆ ಮುದ್ದೆ..

By * ಆಹಿತಾನಲ, ದಕ್ಷಿಣ ಕ್ಯಾಲಿಫೋರ್ನಿಯ
|

ಮೊನ್ನೆ ನನ್ನಾಕೆ ಹಿಂದಿನ ದಿನ ಮಾಡಿ ಉಳಿದಿದ್ದ ಸಾಂಬಾರು ಮತ್ತು ಅನ್ನ ಕಲಸಿ, ಊಟಕ್ಕೆ ಬಡಿಸಿದ್ದಳು. ಅದನ್ನು ಅವಳು 'ಕೈತುತ್ತು" ಎಂದು ಕರೆಯದೆ, Sambar Rice ಎಂದು ಕರೆದಿದ್ದಳು. ಅದನ್ನು ತಿನ್ನುತ್ತಿದ್ದಂತೆ, ಹಿಂದೆ ನನ್ನ ಅಮ್ಮನ ಕೈತುತ್ತಿನ ಜ್ಞಾಪಕ ಬಂತು. ಹಾಗೆಯೇ ಕೈ ಮೂಸಿದಾಗ, ಅಮ್ಮ ಕೊಟ್ಟ ಕೈತುತ್ತಿನ ಗಮಗಮವಿನ್ನೂ ಕೈಯಲ್ಲೆ ಉಳಿದಿದೆ ಎಂಬ ಅನುಭವ ನನಗಾಗಿ, ನನ್ನಲ್ಲಿ ಒಂದು ಅವ್ಯಕ್ತ ಹಿತ ಭಾವನೆ ಮೂಡಿಸಿತು. ಆ 'ಗಮ-ಗಮ", ಹಿಂದೆ ನಡೆದ ಒಂದು ಪುಟ್ಟ ಭಾವುಕ ಸನ್ನಿವೇಶದ ನೆನಪಿನೆಡೆಗೆ ನನ್ನನ್ನು ಕೊಂಡೊಯ್ದಿತು.

ಚಿಕ್ಕಂದಿನಲ್ಲಿ ಶಾಲೆಯಿಂದ ಬಂದವರೇ ನಾವು ಸ್ಕೂಲು ಚೀಲವನ್ನು ಚಾವಡಿಯಲ್ಲೆಸೆದು ಬಾವಿಕಟ್ಟೆಯಲ್ಲಿ ಕೈಕಾಲು ತೊಳೆಯುತ್ತಿದ್ದಂತೆ ಅಮ್ಮನನ್ನು 'ಇವತ್ತೇನು ತಿಂಡಿ....?" ಎಂದು ಕೂಗಿ ಕಾಡುತ್ತಿದ್ದೆವು. ಪ್ರತಿ ದಿನ ಏನಾದರೊಂದು ತಿಂಡಿಯನ್ನು ನಮ್ಮ ತಾಯಿ ಕೊಡುತ್ತಿದ್ದಳೆನ್ನಿ! ಕೆಲವೊಮ್ಮೆ ತಿಂಡಿ ಮಾಡಲು ಸಮಯ ಸಿಕ್ಕದಾಗಲೋ ಅಥವಾ ಮತ್ತಿನ್ನೇನಾದರೂ ಅನಾನುಕೂಲತೆಯಿಂದಲೋ, ಮಧ್ಯಾಹ್ನದ ಹುಳಿಯನ್ನೇ ಅನ್ನದಲ್ಲಿ ಕಲಸಿ 'ಕೈತುತ್ತು" ಮಾಡಿ ನಮ್ಮಮ್ಮ ನಮಗೆ ಕೊಡುತ್ತಿದ್ದಳು. ಅದನ್ನು ತಿನ್ನುತ್ತಿದ್ದಾಗ ನಮಗೆ ಸಂತೋಷವೋ ಸಂತೋಷ!

ಆದರೆ, ನಾನು ಹೇಳಬೇಕೆಂದಿರುವ 'ಸನ್ನಿವೇಶ" ಇದಲ್ಲ. ಅದು ನನಗೆ ತುಂಬ ಇಷ್ಟವಾದ 'ಬೆಲ್ಲ-ಬೆಣ್ಣೆ" ಮಿಶ್ರಣಕ್ಕೆ ಸಂಬಂಧಿಸಿದ್ದು. ಅದರ ಜೊತೆಗೆ ಅಮ್ಮನ ಪ್ರೀತಿಯೂ ಕೂಡಿಕೊಂಡು, ನನ್ನ ಮನಸ್ಸಿನಲ್ಲಿ ಎಲ್ಲಿಲ್ಲದ ಪರಿಣಾಮವನ್ನುಂಟುಮಾಡಿದೆ. ದೋಸೆ ಮಾಡಿದಾಗ ನಮ್ಮಮ್ಮ ಬೆಲ್ಲ ಮತ್ತು ಬಲು ಚಿಕ್ಕಗಾತ್ರದ ಬೆಣ್ಣೆ ಮುದ್ದೆಯನ್ನು ಬಡಿಸುತ್ತಿದ್ದಳು. ಅವೆರಡನ್ನೂ ಕಲಸಿ ದೋಸೆ ತುಣುಕಿನ ಜೊತೆ ತಿಂದರೆ ಅದರ ರುಚಿಯೇ ಅದ್ಭುತ!

ಅದರಲ್ಲೂ, ಹೆಚ್ಚಿನಂಶದ 'ಬೆಲ್ಲ-ಬೆಣ್ಣೆ" ಮುದ್ದೆಯನ್ನು ಕೊನೆಯ ದೋಸೆ ತುಣುಕಿಗೆ ಬಳಸಿಕೊಳ್ಳಲು ಉಳಿಸಿಕೊಂಡು, ಅದನ್ನು ತಿನ್ನುವಾಗ ಅನುಭವಿಸುವ ಸಂತೋಷವನ್ನು ಇಲ್ಲಿ ವರ್ಣಿಸುವುದು ಕಷ್ಟ. ಅದನ್ನು ತಿನ್ನುತ್ತಿದ್ದಂತೆ ನನ್ನ ತಮ್ಮಂದಿರನ್ನು 'ಬ್ಯಾಂಡ್" ಬಾರಿಸುವಂತೆ ('ತೂರಿ ತುತ್ರುರೂರಿ... ತುತ್ರುತೂರಿ...ರಿ...ರಿ...." ಎಂಬ ಶಬ್ದ ಮಾಡುವಂತೆ) ಆದೇಶ ಕೊಟ್ಟು, ಆ ರುಚಿಯ ಸವಿಯನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತಿದ್ದೆ.

ನಮ್ಮದು ಒಂದು ದೊಡ್ಡ ಕುಟುಂಬ. ಹಾಗಾಗಿ ಬೆಣ್ಣೆ, ತುಪ್ಪ, ಮೊಸರು, ಹಾಲು ಮುಂತಾದುವುಗಳ ಸರಬರಾಜು ಬಹಳ ಸೀಮಿತ. ನನ್ನ ಚಿಕ್ಕಪ್ಪ ಬೇರೆ ಕಾಯಿಲೆಯಿಂದ ನರಳುತ್ತಿದ್ದರು. ಹಾಗಾಗಿ, ಹೆಚ್ಚಿನ ಹಾಲು, ತುಪ್ಪಗಳ ಪಾಲು ಅವರಿಗೆ ಕಾದಿರಿಸಲಾಗುತ್ತಿತ್ತು. ಅಳಿದುಳಿದ ಸರಬರಾಜು ಉಳಿದವರ ಪಾಲಾಗಿತ್ತು. ಅದರಲ್ಲೂ ನಮ್ಮಂಥ ಚಿಕ್ಕವರ ಪಾಲು ತೀರ ಸೀಮಿತವಾದುದು. ಆದರೆ, ನನ್ನ ತಾಯಿ ಅದರಲ್ಲೂ ನಮ್ಮ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ನಮ್ಮ ಪಾಲನ್ನು ಆದಷ್ಟು ಹೆಚ್ಚಿಸುತ್ತಿದ್ದಳು.

ಒಮ್ಮೆ ದೋಸೆ ಮಾಡಿದಾಗ ಬೆಣ್ಣೆಯ ಸರಬರಾಜು ತೀರ ಕಡಿಮೆಯಾಗಿತ್ತು. ಎಲ್ಲರಿಗೂ ನೆಲ್ಲಿಕಾಯಿ ಗಾತ್ರದ ಬೆಣ್ಣೆ ಮುದ್ದೆ ಮಾತ್ರ ದೊರಕಿತ್ತು. ಅದನ್ನು ನೋಡಿದ ನಾನು, 'ಅಯ್ಯೋ.... ಇಷ್ಟೇನಾ....?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದೆ. ನನ್ನ ತಾಯಿ ಅದನ್ನು ಗಮನಿಸಿ, ತನ್ನ ಪಾಲಿನ ಗೋಲಿಯಾಕಾರದ ಬೆಣ್ಣೆ ಮುದ್ದೆಯನ್ನು ಪ್ರೀತಿಯಿಂದ ನಮಗೆ ಪಾಲು ಮಾಡಿ ಬಡಿಸಿದಳು. ನನ್ನ ಮತ್ತು ಅವಳ ಪಾಲಿನ ಬೆಣ್ಣೆಯನ್ನು ಕಲಸಿ, ನನ್ನ ತಮ್ಮಂದಿರ 'ಬ್ಯಾಂಡ್" ವಾದನದೊಂದಿಗೆ ಕೊನೆಯ ದೋಸೆ ತುಣುಕು ತಿನ್ನುತ್ತಿದ್ದ ನನ್ನ ಸಂತೋಷವನ್ನು ನೋಡಿದ ತೃಪ್ತಿ, ಆಕೆಯ ಕಣ್ಣಲ್ಲಿ ಹೊಳೆಯುತ್ತಿದ್ದುದು ನನ್ನ ಕಣ್ಮುಂದೆ ಈಗಲೂ ಕಟ್ಟುತ್ತಿದೆ; ಪರಿಣಾಮವಾಗಿ ನನ್ನ ಕಣ್ಣು ಈಗಲೂ ಒದ್ದೆಯಾಗುತ್ತಿದೆ.

ಈಗ ಅಮೆರಿಕಕ್ಕೆ ಬಂದು ನೆಲೆಸಿ ಸಾಕಷ್ಟು ಬೆಣ್ಣೆ ತಿನ್ನಬಹುದಾದ 'ಸುಖ" ಅನುಭವಿಸುತ್ತಿದ್ದೇವೆ. ಆದರೆ, 'ಹಲ್ಲಿದ್ದಾಗ ಕಡಲೆ ಇಲ್ಲ; ಕಡಲೆ ಇದ್ದಾಗ ಹಲ್ಲಿಲ್ಲ" ಎಂಬ ಗಾದೆಯಂತೆ, ಆರೋಗ್ಯ ದೃಷ್ಟಿಯಿಂದ ವಯಸ್ಸಾದ ನನಗೆ ಬೆಣ್ಣೆಯಂಥ ಕೊಬ್ಬು ಪದಾರ್ಥ ತಿನ್ನುವ ಯೋಗ ಇಲ್ಲದಂತಾಗಿದೆ. ಆದರೇನು! ನಾನು ಹಿಂದೆ ಅನುಭವಿಸಿದ ಆ ಸಂತೋಷದ ಸವಿ ಮೆಲುಕಲು ಅಭ್ಯಂತರವೇನು? ಅಂದು ನನ್ನಾಕೆ ಹುಳಿಯನ್ನ ಬಡಿಸಿದಾಗ (ಅವಳು ಅದ್ಯಾವ ಆಧುನಿಕ ಫ್ಯಾನ್ಸಿ ಹೆಸರಿನಲ್ಲೇ ಕರೆಯಲಿ, ಅದು ನನ್ನಮ್ಮನ ಕೈತುತ್ತಿಗೆ ಸಮಾನ!) ನನ್ನಲ್ಲಿ ಅದು ಅಮ್ಮನ 'ಕೈತುತ್ತಿ"ನ ಜೊತೆಗೆ 'ಬೆಲ್ಲ-ಬೆಣ್ಣೆ" ತಿಂದ ನೆನಪನ್ನು ಮರುಕಳಿಸಿತು.

ನನ್ನ ತಾಯಿಯ ಸ್ಮರಣೆ ಬಂದಾಗಲೆಲ್ಲ ಒಂದು ತರಹ ವೇದನೆಯಾದರೂ, ಆ ನೋವಿನ ಜೊತೆಯಲ್ಲೇ ಅದೇನೋ ಅವ್ಯಕ್ತ ಹಿತ ಪಡೆಯುವಂತಾಗುತ್ತದೆ. ಈಗ ಅಮ್ಮ ನನ್ನ ಸ್ಮರಣೆಯಲ್ಲಿ ಮಾತ್ರ ಉಳಿದಿದ್ದಾಳೆ. ಎಲ್ಲ ಕಡೆಯಲ್ಲೂ ಇತ್ತೀಚೆಗೆ ಆಚರಿಸುತ್ತಿರುವ Mothers' Day ಸಮಯವಲ್ಲದೆ, ಅವಳ ಆ ನಿಸ್ವಾರ್ಥ ಪ್ರೀತಿಯನ್ನು ಮತ್ತೆ ಮತ್ತೆ ಮನಸ್ಸಿನಲ್ಲೆ ಮೆಲುಕುವ 'ಪುಣ್ಯ"ವನ್ನು ಅವಳು ಹಿಂದೆ ಬಿಟ್ಟು ಹೋಗಿರುತ್ತಾಳೆ. ಅಮ್ಮ ಎಂಬುದು ಬರಿಯ ಕರೆಯಲ್ಲ; ಅದು ಅಕ್ಕರೆಯ ಪ್ರತೀಕ. ಅಕ್ಷರ ಮಾಲೆಯಲ್ಲಿ 'ಅ" ಗೆ ಮೊದಲ ಸ್ಥಾನ. ನಿಸ್ವಾರ್ಥ ಪ್ರೀತಿಯಲ್ಲಿ 'ಅ"ಯಿಂದ ಪ್ರಾರಂಭವಾಗುವ (ಜೊತೆಯಲ್ಲಿ ಮ-ಮ ಕಾರಗಳು ಸೇರಿ 'ಮ್ಮ" ಆಗಿ) 'ಅಮ್ಮ"ನಿಗೇ ಅಗ್ರಸ್ಥಾನ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more