• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಲಿಗೆ ಕನ್ನಡ ಸಂಘದ ಯುಗಾದಿ ಸಂಭ್ರಮ

By * ಪೂರ್ಣಿಮಾ ಸುಬ್ರಹ್ಮಣ್ಯ
|

ಭಾರತದಲ್ಲಿ ಇರುವವರಿಗೆ ಯುಗಾದಿ, ದೀಪಾವಳಿ ಎಲ್ಲಾ ಒಂದೆರಡು ದಿನಗಳ ಪ್ರಮುಖ ಹಬ್ಬವಾದರೆ, ಅನಿವಾಸಿಗಳಿಗೆ ಒಂದು ರೀತಿಯ ಉತ್ಸವಕಾಲ (ಸೀಸನ್). ಇಲ್ಲಿಯ ಕನ್ನಡ ಸಂಘಗಳಲ್ಲೆಲ್ಲಾ ಸದಸ್ಯರು, ಸಭಾಂಗಣಗಳ ಅನುಕೂಲತೆ ಮೇರೆಗೆ ಮಾರ್ಚ್ ಇಂದ ಮೇ ವರೆಗೂ ಯುಗಾದಿ ಸಡಗರ. ನಮ್ಮ ಡಲ್ಲಾಸ್‌ನ ಮಲ್ಲಿಗೆ ಸಂಘದಲ್ಲೂ ಮೇ 1ರಂದು ಯುಗಾದಿ ಸಂಭ್ರಮ. ಅಂದು ಕಾಲೋನಿ ಹೈಸ್ಕೂಲ್‌ನಲ್ಲಿ, ಸತ್ಯ ಶಾಸ್ತ್ರಿ ಮತ್ತು ಅಕ್ಷತಾ ಶಾಸ್ತ್ರಿ ನಿರೂಪಣೆಯಲ್ಲಿ ಕಾರ್ಯಕ್ರಮಗಳ ಸುರಿಮಳೆ.

ಅಶ್ವಿನಿ ಕುಲಕರ್ಣಿ ತೆರೆಯ ಮೇಲಿನ ಸೂತ್ರಧಾರನಿಗೆ ಸುಶ್ರಾವ್ಯವಾಗಿ ವಂದಿಸಿದ ನಂತರ, ಏಳೆಂಟು ಮಕ್ಕಳು ಸಂಕಟ ನಾಶನ ಗಣಪತಿಯನ್ನು ಭರತನಾಟ್ಯದ ಮೂಲಕ ಅರ್ಚಿಸಿದರು. ನಂತರ ಇಲ್ಲಿಯ ಅರಳುಮಲ್ಲಿಗೆ ಕನ್ನಡ ಶಾಲೆಯ ಹಿರಿಯ ಮಕ್ಕಳು, ಹಳ್ಳಿ ಮಕ್ಕಳ ವೇಷದಲ್ಲಿ "ಕೋಳೀಕೆ ರಂಗ" ಹಾಡ್ದಾಗ, ಸೇರ್ದೋರೆಲ್ಲಾ ಬಾಯ್ಬಿಟ್ಕೊಂಡ್ಬೆರ್‍ಗಾಗ್ಬಿಟ್ರು. ಅತ್ಯಂತ ಕ್ಲಿಷ್ಟಕರ ಹಾಡನ್ನು ಇಲ್ಲಿನ ಹುಡುಗರ ನಾಲಿಗೆಯಲ್ಲಿ ಸುಲಲಿತವಾಗಿ ನುಡಿಸಿದವರು ಜಯಶ್ರೀ ಮೂರ್ತಿ. ಆದರೆ, ಹಾಡಿನ ಹಿಮ್ಮೇಳಕ್ಕೆ ಹಾಕಿದ್ದ ಸಂಗೀತ ಹುಡುಗರ ಶ್ರಮಕ್ಕೆ ಸಹಕಾರಿಯಾಗಿರಲಿಲ್ಲ.

"ಅಪಾರ ಕೀರ್ತಿ ಗಳಿಸಿ ಮೆರೆವ ಕರ್ನಾಟಕ"ವನ್ನು ನೀಹಾರಿಕಾ ಮತ್ತು ಪೃಥ್ವಿ ವರ್ಣಿಸಿದ ಮೇಲೆ "ಹಿಮಗಿರಿ ತನಯೆ ಹೇಮಲತೆ"ಗೆ ನಾಟ್ಯಾರ್ಚನೆ. ನಾಲ್ಕು ಪುಟ್ಟ ಪೋರಿಯರಿಗೆ "ಯಾಕ್ ಹಿಂಗಾಡ್ತಾರೋ ಈ ಹುಡುಗರು" ಎಂದು ಛೇಡಿಸುವುದನ್ನು ಕಲಿಸಿದ್ದು ಸುಶ್ಮಾ ರಂಗಸ್ವಾಮಿ. ಬಾಲ ದತ್ತ ಕನ್ನಡ ಶಾಲೆಯ ಮಕ್ಕಳಿಂದ ಪುಣ್ಯಕೋಟಿಯ ನೃತ್ಯನಾಟಕ ಮತ್ತು "ಸರ ಸರ" ಹಾಡು. ಮಕ್ಕಳಿಗೆ ಉತ್ತಮವಾಗಿ ತರಬೇತಿ ಕೊಟ್ಟದ್ದು ಚೈತ್ರಾ ಶ್ರೀಧರ್.

ಸಂಧ್ಯಾ ಹೊನ್ನವಳ್ಳಿ ಅವರು ಪುಟ್ಟ ಮಕ್ಕಳಿಗೆ ಕಲಿಸಿದ ಘಲ್ಲು ಘಲ್ಲೆನುತಾ ಕೋಲಾಟ ಬಹಳ ಚಂದ. ರೂಪ ಉಪಾಧ್ಯ ಮತ್ತು ಶುಭ ಶ್ರೀವತ್ಸರ ಮುಂದಾಳತ್ವದಲ್ಲಿ ಮೂಡಿ ಬಂದ "ಮುಂಜಾನೆದ್ದು ಕುಂಬಾರಣ್ಣ" ಮೋಹಕ ನೃತ್ಯ. 10-12 ವರ್ಷದ ಮಕ್ಕಳ ಉಡಿಗೆ-ತೊಡಿಗೆ ಲಯಬದ್ಧ ಜಾನಪದ ನೃತ್ಯಕ್ಕೆ ಪೂರಕವಾಗಿತ್ತು. ನಂತರ ರೇಖಾ ಮಂಜುನಾಥ್, ರಾಜಶ್ರೀ ಜೋಶಿ ಅವರು ಸಣ್ಣ ಮಕ್ಕಳಿಗೆ ಕಲಿಸಿದ ಛಮಕ್-ಛಮಕ್ ಚಿತ್ರಗೀತೆಗಳ ಡ್ಯಾನ್ಸ್ ಮೆಡ್ಲೇ. ಅರಳು ಮಲ್ಲಿಗೆ ಕನ್ನಡ ಶಾಲೆಯ ಮಕ್ಕಳು ಅಭಿನಯಿಸಿದ, ಪ್ರಕೃತಿ ಮತ್ತು ಸಮತೋಲನವನ್ನು ವಿವರಿಸಿದ ಮೂಕನೃತ್ಯ ವಿಭಿನ್ನ ಹಾಗೂ ವಿಶಿಷ್ಟ; ಪರಿಕಲ್ಪನೆ ಮತ್ತು ನಿರ್ದೇಶನ ರೂಪಾ ಶ್ರೀನಿವಾಸ್.

"ಹಚ್ಚೇವು ಕನ್ನಡದ ದೀಪ" ಎಂದು ಕನ್ನಡಾಂಬೆಗೆ ಧೂಪಾರತಿ. ತಲೆ ಮೇಲೆ,ಕೈಯಲ್ಲಿ ದೀಪಗಳನ್ನು ಹೊತ್ತು ಸಮತೋಲನ ಕಾಪಾಡಿಕೊಂಡು ಮಾಡಿದ ಕ್ಲಿಷ್ಟಕರ ಭಂಗಿಗಳ ನೃತ್ಯ ಎಲ್ಲರ ಪ್ರಶಂಸೆ ಗಳಿಸಿತು. ಎಲ್ಲಾ ಭರತನಾಟ್ಯ ಕಾರ್ಯಕ್ರಮಗಳಿಗೂ ತರಬೇತಿ ಕೊಟ್ಟವರು ಭರತನಾಟ್ಯ ಗುರು ಮಮತಾ ದೀಪಕ್. ಗತಿಸಿದ ವಿಷ್ಣುವರ್ಧನ್ ಸ್ಮರಣೆಗಾಗಿ ನಾಗರಹಾವು ಚಿತ್ರದ "ಕನ್ನಡ ನಾಡಿನ ವೀರ ರಮಣಿಯ" ಪ್ರಸ್ತುತಿ ಅರಳು ಮಲ್ಲಿಗೆ ಕನ್ನಡ ಶಾಲೆಯ ಮಕ್ಕಳಿಂದ. ಕಲಿಸಿದ್ದು ಜಯಶ್ರೀ ಮೂರ್ತಿ.

ಸ್ನೇಹಾ ಮತ್ತು ಸಂಗೀತ ಕುರದ ಸುಶ್ರಾವ್ಯವಾಗಿ ರಾಮನಾಮ ಸಂಕೀರ್ತನೆ ಹಾಡಿದರು. ಪುಟಾಣಿ ಸುಹೃತ ಭೂಷಣ್ "ಕಂಡೇ ಕಂಡೇ ಗೋವಿಂದನಾ" ಎಂದು ಮೋಹಕವಾಗಿ ನರ್ತಿಸಿದಳು. ನಂತರ ಹುಮ್ಮಸ್ಸಿನ ಮಹಿಳಾಮಣಿಯರ ನರ್ತನದಿಂದ ಮದರಂಗಿಯಲ್ಲಿ ಮನಸಿನ ರಂಗು ಮೂಡಿತು. ಉಡಿಗೆ ತೊಡಿಗೆಯಲ್ಲಿ ಇನ್ನೂ ಸೊಗಸಿದ್ದರೆ ಮತ್ತಷ್ಟು ರಂಗೇರುತ್ತಿತ್ತು. ನೃತ್ಯ ಕಲಿಸಿದವರು ಸುಲತಾ ತಲಗೇರಿ.

ಸಮಯ ಆಗಲೇ ರಾತ್ರಿ 7:30. ಮಕ್ಕಳಿಗೆಲ್ಲಾ ಹಸಿವು. ಅವರಿಗೆ ಪಿಜ್ಜಾ ಮತ್ತು ದೊಡ್ಡವರಿಗೆ ಪಕೋಡದ ವ್ಯವಸ್ಥೆ ಆಗಿತ್ತು. ನಿರೀಕ್ಷೆಗಿಂತ ಹೆಚ್ಚಿನ ಜನ ಆಗಮಿಸಿದ್ದರಿಂದ ಕೊರತೆಯೂ ಆಯಿತು. ವಿರಾಮದ ನಂತರ ಕೃಷ್ಣಮೂರ್ತಿಯವರು ಕಳೆದ 2 ವರ್ಷಗಳ ಚಟುವಟಿಕೆಯನ್ನು ಛಾಯಾಚಿತ್ರಗಳ ಮೂಲಕ ತೋರಿಸಿದರು. ನಂತರ ಹೊರಹೋಗುತ್ತಿರುವ ಸಮಿತಿಯ ಅಧ್ಯಕ್ಷ ಮಧು ಶಾಸ್ತ್ರಿ ಅವರ ಸುದೀರ್ಘ ಭಾಷಣ. ಹೊಸ ಸಮಿತಿ ಅಧ್ಯಕ್ಷೆ ರಾಜಶ್ರೀ ರಮೇಶ್ ಮತ್ತು ಇತರ ಸದಸ್ಯರ ಪರಿಚಯ. ಭಾಷಣ ಸ್ವಲ್ಪ ಚಿಕ್ಕದಿದ್ದರೆ ಚೆನ್ನಿತ್ತು. ಪ್ರಾಯೋಜಕರಿಗೆ, ಸ್ವಯಂಸೇವಕರಿಗೆ, ಸದಸ್ಯರಿಗೆ, ಪ್ರೇಕ್ಷಕರಿಗೆ ವಂದನಾರ್ಪಣೆ ಸಲ್ಲಿಸಿದ ಬಳಿಕ ಮತ್ತೆ ಕಾರ್ಯಕ್ರಮಗಳು ಆರಂಭ.

ಮಲ್ಲಿಕಾ ಮೋರೊ ನಿರ್ದೇಶನದಲ್ಲಿ "ಜಲ್ಲೆ ಕಬ್ಬು" ಹಾಡಿಗೆ ಮೂಡಿ ಬಂದದ್ದು ಮನಸೂರೆಗೊಂಡ ಜಾನಪದ ನೃತ್ಯ. ನರ್ತಿಸಿದವರ ಹೊಂದಾಣಿಕೆ, ಹಾವ ಭಾವ, ವಸ್ತ್ರವಿನ್ಯಾಸ, ಕೇಶಾಲಂಕಾರ ಎಲ್ಲವೂ ಸೊಗಸೋ ಸೊಗಸು. ಹಾಡಿನ ಭಾವ ಮೊಗದಲ್ಲಿತ್ತು, ನೃತ್ಯದ ಸಂತಸ ನಡೆಯಲ್ಲಿತ್ತು. ನಂತರ 5 ವರ್ಷದ ಹಿಂದೆ ಯಶಸ್ವಿಯಾಗಿ ಪ್ರದರ್ಶಿಸಿದ "ಬೀಗರ ಕಲಹ" ನಾಟಕದ ಮುಂದುವರೆದ ಭಾಗ. 5 ವರ್ಷದ ಹಿಂದೆ ಪುಷ್ಪಾ-ಶ್ರೀನಿ ಮದುವೆಯಲ್ಲಿ ನಡೆದ ಬೀಗರ ಕಲಹ, ಈಗ ಪುಷ್ಪನ ಸೀಮಂತದಲ್ಲೂ ಮುಂದುವರೆಯಿತು. ಉಮಾ ಸರ್ವೇಶ್ ರಚನೆ-ನಿರ್ದೇಶನದ ಚಿಕ್ಕ ಚೊಕ್ಕ ನಾಟಕ ಪ್ರೇಕ್ಷಕರನ್ನು ನಗಿಸುವಲ್ಲಿ ಸಫಲವಾಯಿತು.

ನಂತರ ಸ್ವಾದಿಷ್ಟ ಭೋಜನದಲ್ಲಿ ಕಾರ್ಯಕ್ರಮ ಮುಕ್ತಾಯ. ಇಲ್ಲಿಯ ಕನ್ನಡಿಗರ ನಡುವೆ ಈಗ ನಡೆಯುತ್ತಿರುವುದು ಕಾರ್ಯಕ್ರಮದ ಬಗ್ಗೆ ಮಾತು-ಕತೆ, ವಿಮರ್ಶೆ, ಮುಂದಿನ ಕಾರ್ಯಕ್ರಮದ ನಿರೀಕ್ಷೆ. ತಮ್ಮೆಲ್ಲಾ ಸ್ವಂತ ಕೆಲಸಗಳ ನಡುವೆ, ಪ್ರತಿಫಲ ನಿರೀಕ್ಷಿಸದೆ ಈ ಸುಂದರ ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ ಕಾರ್ಯಕಾರೀ ಸಮಿತಿಗೆ ಅಭಿನಂದನೆಗಳು. ಕಾರ್ಯಕ್ರಮದ ಚಿತ್ರಪಟಗಳಿಗಾಗಿ ಭೇಟಿ ಕೊಡಿ ಮಲ್ಲಿಗೆ ಕನ್ನಡ ಸಂಘ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more