• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಳುಗಾಡು ಕನ್ನಡಿಗರ ಪ್ರಥಮ ಸಾಹಿತ್ಯ ಸಂಭ್ರಮ

By * ಅರ್ಶದ್ ಹುಸೇನ್, ದುಬೈ
|

ದುಬೈ, ಏ. 30 : ಕನ್ನಡದ ಏಳ್ಗೆಗೆ ಹಾಗೂ ಉಳಿವಿಗೆ ಸಾಹಿತ್ಯ ಸಮ್ಮೇಳನಗಳು ಅತೀ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಧ್ವನಿ ಪ್ರತಿಷ್ಠಾನ ಶ್ಲಾಘನೀಯ ಕಾರ್ಯನಿರ್ವಹಿಸುತ್ತಿದೆ ಎಂದು ದುಬೈನಲ್ಲಿ ಜರುಗಿದ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕನ್ನಡ ನಾಡಿನ ಖ್ಯಾತ ಕವಿ ಚೆನ್ನವೀರ ಕಣವಿ ನುಡಿದಿದ್ದಾರೆ. ಮರಳುನಾಡಿನ ಕನ್ನಡ ಹಬ್ಬಕ್ಕೆ ಧ್ವನಿ ಪ್ರತಿಷ್ಠಾನದ ಬೆಳ್ಳಿಹಬ್ಬ ಹೆಚ್ಚಿನ ಮೆರುಗನ್ನು ನೀಡಿತ್ತು.

ನಗರದ ದುಬೈ ಜೆಮ್ಸ್ ಪ್ರೈವೇಟ್ ಶಾಲಾ ಸಭಾಂಗಣದಲ್ಲಿ ಶುಕ್ರವಾರ(ಏ.23) ಆಯೋಜಿತವಾಗಿದ್ದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಬಿ.ಕೆ. ಗಣೇಶ್ ರೈಯವರು ನಿರ್ಮಿಸಿದ ವೇದಿಕೆ ಅತ್ಯಂತ ಸುಂದರವಾಗಿ ಮೂಡಿಬಂದಿತ್ತು. ಎಡಬಲಗಳಲ್ಲಿ ರನ್ನ ದ್ವಾರ ಹಾಗೂ ಪೊನ್ನ ದ್ವಾರಗಳಿಂದ ವಿರಚಿತ ಪಂಪ ಮಹಾಮಂಟಪದ ಮೇಲ್ಭಾಗದಲ್ಲಿ ಕನ್ನಡ ದಿಗ್ಗಜರ ಚಿತ್ರಪಟಗಳನ್ನು ತೂಗುಬಿಡಲಾಗಿದ್ದು ಅಪ್ಪಟ ಕರ್ನಾಟಕದ ಒಂದು ರೂಪ ಬಿಂಬಿತವಾಗಿತ್ತು.

ಗಣ್ಯರ ಉಪಸ್ಥಿತಿ : ಕಾರ್ಯಕ್ರಮಕ್ಕೆ ನಾಡಿನಿಂದ ಮಾತ್ರವಲ್ಲದೇ ಯು.ಎ.ಇ.ಯ ಪ್ರಮುಖ ಕನ್ನಡಿಗರೂ ಆಗಮಿಸಿದ್ದರು. ಯು.ಎ.ಇ.ಯ ಪ್ರಮುಖ ಉದ್ಯಮಿ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿ, ಜೈನ್ ಇಂಟರ್ನ್ಯಾಶನಲ್ ಸಂಸ್ಥೆಯ ಜಫರುಲ್ಲಾ ಖಾನ್, ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಅನಿವಾಸಿ ಸಚಿವಾಲಯದ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಖ್ಯಾತ ಗೀತರಚನಾಕಾರ ಜಯಂತ್ ಕಾಯ್ಕಿಣಿ, ವಿಜಯ ಕರ್ನಾಟಕ ದೈನಿಕದ ಸಂಪಾದಕರಾದ ವಿಶ್ವೇಶ್ವರ ಭಟ್, ಚಿತ್ರನಟಿ ತಾರಾ, ಅವರ ಪತಿ ವೇಣುಗೋಪಾಲ್, ಗಾಯಕ ಶಶಿಧರ ಕೋಟೆ, ರಂಗಕರ್ಮಿ ವೆಂಕಟರಾಜು, ಚುಟುಕುಕವಿ ಜರಗನಹಳ್ಳಿ ಶಿವಶಂಕರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಬಿ.ಆರ್. ಶೆಟ್ಟಿಯವರು ಕನ್ನಡಕ್ಕೆ ತಮ್ಮ ಪ್ರೋತ್ಸಾಹ ಹಿಂದಿನಂತೆ ಮುಂದೆಯೂ ಮುಂದುವರೆಸುವ ಭರವಸೆ ನೀಡಿದರು. ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ, ವಿದೇಶದಲ್ಲಿ ಕನ್ನಡಿಗರ ಈ ಸಂಭ್ರಮಕ್ಕೆ ತಮ್ಮ ಶ್ಲಾಘನೆ ವ್ಯಕ್ತಪಡಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಹಾ ಧ್ವನಿ ಬಳಗದ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು. ವಿದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಇಂತಹ ಸಮ್ಮೇಳನಗಳು ಅತೀ ಅವಶ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಯು.ಎ.ಇ.ಯಲ್ಲಿ ನೆಲೆಸಿರುವ ಯುವ ಲೇಖಕ ಶ್ರೀನಾಥ್ ರಾಜಣ್ಣರವರು ಸಂಪಾದಿಸಿದ 'ಕನ್ನಡ ಸಾಹಿತ್ಯ ಲೋಕದ ದಿಗ್ಗಜರು' ಕೃತಿಯನ್ನು ಮನು ಬಳಿಗಾರ್ ಅವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಜಫರುಲ್ಲಾ ಖಾನ್ ನಾಡಿನಿಂದ ದೂರವಿದ್ದ ಬಳಿಕವಷ್ಟೇ ನಾಡಿನ ಪ್ರೀತಿ ನಮಗೆ ಅರ್ಥವಾಗುವುದು, ಈ ನಾಡಿಗಾಗಿ ನಮ್ಮ ಕೈಲಾದ ದೇಣಿಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಪುರಸ್ಕಾರ, ಸನ್ಮಾನ : ಕನ್ನಡಕ್ಕಾಗಿ ಸಲ್ಲಿಸಿದ ಜಫರುಲ್ಲಾ ಖಾನ್, ಅರಬ್ ಉಡುಪಿ ಹೋಟೆಲ್ ಗುಂಪಿನ ಮಾಲಿಕರಾದ ಶೇಖರ್ ಶೆಟ್ಟಿ, ಜೇಮ್ಸ್ ಮೆಂಡೋನ್ಸಾ, ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಅಶೋಕ್ ಶೆಟ್ಟಿ, ಉದಯ ಕುಮಾರ್ ಕಟೀಲ್ ಹಾಗೂ ಜಯರಾಮ ಸೋಮಯಾಜಿಯವರನ್ನು ಸನ್ಮಾನಿಸಲಾಯಿತು. ಎಲ್ಲರಿಗೂ ಶಾಲು, ಫಲಾಪುಷ್ಪ, ಸ್ಮರಣಿಕೆ ಹಾಗೂ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಗೌತಮ್, ರಾಜೇಶ್, ಪೃಥ್ವಿ, ಸರಳಾ, ಸಂಗೀತ, ಸೋನಿಯಾ ಹಾಗೂ ಯಶೋದರವರು ಹಾಡಿದ ಜನಪದಗೀತೆ ಮನಸೆಳೆದರು. ಮಧ್ಯಾಹ್ನದ ಊಟವನ್ನು ಉಚಿತವಾಗಿ ಆಯೋಜಿಸಲಾಗಿತ್ತು. ಅಪ್ಪಟ ಸಸ್ಯಾಹಾರ ಭೋಜನ ಆಗಮಿಸಿದವರ ಜಿಹ್ವಾಚಾಪಲ್ಯವನ್ನು ತಣಿಸಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ "ಧ್ವನಿ ಪ್ರತಿಷ್ಠಾನ ಬೆಳ್ಳಿಹಬ್ಬ ಪುರಸ್ಕಾರ-2010" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಯಂತ ಕಾಯ್ಕಿಣಿ(ಸಾಹಿತ್ಯ), ವಿಶ್ವೇಶ್ವರ ಭಟ್(ಮಾಧ್ಯಮ), ತಾರಾ(ಚಲನಚಿತ್ರ), ಶಶಿಧರ್ ಕೋಟೆ(ಸಂಗೀತ)ಯವರಿಗೆ ಪ್ರಶಸ್ತಿ ನೀಡಲಾಯಿತು.

ಭೋಜನದ ಬಳಿಕ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ 'ಕನ್ನಡ ಸಾಹಿತ್ಯದ ವಿವಿಧ ನೆನೆಗಳು' ಎಂಬ ಶೀರ್ಷಿಕೆಯಡಿ ಆಹ್ವಾನಿತ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಾಹಿತಿ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಗೋಷ್ಠಿಯಲ್ಲಿ ಕಾವ್ಯದ ವಿಷಯದಲ್ಲಿ ಜರಗನಹಳ್ಳಿ ಶಿವಶಂಕರ್, ಚಲನಚಿತ್ರದ ವಿಷಯದಲ್ಲಿ ನಟಿ ತಾರಾ, ಸಂಗೀತದ ವಿಷಯದಲ್ಲಿ ಶಶಿಧರ್ ಕೋಟೆ, ರಂಗಭೂಮಿಯ ವಿಷಯದಲ್ಲಿ ವೆಂಕಟರಾಜು, ಮಹಿಳಾ ಸಾಹಿತ್ಯದ ವಿಷಯದಲ್ಲಿ ಅಭಿಲಾಷಾ ಹಾಗೂ ಸಣ್ಣಕತೆಗಳ ವಿಷಯದಲ್ಲಿ ಸೌದಿ ಅರೇಬಿಯಾದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಕನಕರಾಜು ತಮ್ಮ ತಮ್ಮ ಪಾಲಿನ ವಿಷಯಗಳನ್ನು ಮಂಡಿಸಿದರು.

ಬಳಿಕ ನಡೆದ ಮಾಧ್ಯಮಗೋಷ್ಠಿಯ ಅಧ್ಯಕ್ಷತೆಯನ್ನು ವಿಶ್ವೇಶ್ವರ ಭಟ್ ವಹಿಸಿದ್ದರು. ಮನೋಹರ ತೋನ್ಸೆ, ರೇಡಿಯೋ ಸ್ಪೈಸ್ ನ ಹರ್ಮನ್ ಲೂವಿಸ್ ಹಾಗೂ ಸಾಹಿಲ್ ಆನ್ಲೈನ್ ತಾಣದ ಅರ್ಶದ್ ಹುಸೇನ್ ತಮ್ಮ ತಮ್ಮ ವಿಷಯಗಳನ್ನು ಮಂಡಿಸಿದರು. ಗೋಪಿಕಾ ಮಯ್ಯ ತಮ್ಮ ಲವಲವಿಕೆಯ ಧ್ವನಿಯಿಂದ ಮಾಧ್ಯಮಗೋಷ್ಠಿಯನ್ನು ನಡೆಸಿಕೊಟ್ಟರು. ಸಮಯದ ಆಭಾವದಿಂದ ಶಶಿಧರ ಕೋಟೆಯವರ ಸಂಗೀತಗೋಷ್ಠಿಯನ್ನು ಕೇವಲ ಕಾಲಮಿತಿಗೆ ಮೊಟಕುಗೊಳಿಸಬೇಕಾಯ್ತಾದರೂ ಕೊಟ್ಟ ಸಮಯದಲ್ಲಿ ಶಶಿಧರ್ ಹಾಗೂ ತಂಡದವರು ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ಬಳಿಕ ನಡೆದ ಹನಿಗವನ ಗೋಷ್ಠಿಯ ಅಧ್ಯಕ್ಷತೆಯನ್ನು ಜರಗನಹಳ್ಳಿ ಶಿವಶಂಕರ್ ರವರು ವಹಿಸಿದ್ದರು. ಪ್ರಕಾಶ್ ಪಯ್ಯಾರ್, ಈರಣ್ಣ ಮೂಲಿಮನಿ, ಗೋಪಿನಾಥ ರಾವ್ ಹಾಗೂ ಇರ್ಶಾದ್ ಮೂಡಬಿದ್ರಿ ತಮ್ಮ ತಮ್ಮ ಕವನಗಳಿಂದ ನೆರೆದವರನ್ನು ರಂಜಿಸಿದರು.

ಬೆಳಿಗ್ಗೆ ನಡೆದ ರಂಗೋಲಿ ಸ್ಪರ್ಧೆ ಹಾಗೂ ಕನ್ನಡ ಪುಸ್ತಕ ಪ್ರದರ್ಶನದಲ್ಲಿ ತಮ್ಮ ಪುಸ್ತಕಗಳನ್ನು ಪ್ರದರ್ಶಿಸಿ ಸಹಕರಿಸಿದವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಗೋಪಿನಾಥ್ ರಾವ್ ರವರ ಸಹಯೋಗದೊಂದಿಗೆ ಕನ್ನಡ ಪುಸ್ತಕ ಪ್ರದರ್ಶನ - 'ಗ್ರಂಥ ಸಂಭ್ರಮ' ಹಾಗೂ ಸರಳಾರವರ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇತ್ತೀಚೆಗೆ ಈ ಸಮ್ಮೇಳನದ ತಯಾರಿಗಳು ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿದ್ದು ಗೌರವ ಪ್ರಶಸ್ತಿ ಪ್ರಕಾಶ್ ರಾವ್ ಪಯ್ಯಾರ್ ರವರಿಗೆ ಸಂದಿದ್ದು ಸದಸ್ಯರಿಗೆ ಅತೀವ ಹರ್ಷ ಉಂಟುಮಾಡಿದ್ದು ಸದಸ್ಯರು ಪ್ರಕಾಶ್ ರಾವ್ ಪಯ್ಯಾರ್ ಹಾಗೂ ಕುಸುಮಾ ಪ್ರಕಾಶ್ ರಾವ್ ದಂಪತಿಗಳನ್ನು ಅನಿರೀಕ್ಷಿತವಾಗಿ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸುವ ಮೂಲಕ ತಮ್ಮ ಸಂತೋಷವನ್ನು ಪ್ರಕಟಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more