ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಇಂಗ್ಲೆಂಡ್ನಲ್ಲಿ ಯುಗಾದಿ ಸಂಭ್ರಮ  

By * ಮಧುಸೂಧನ್ ಅಕ್ಕಿಹೆಬ್ಬಾಳ್, ಬೋಸ್ಟನ್
|
Google Oneindia Kannada News

GP Rajarathnam
ಯುಗಾದಿ ಅಂದರೆ ನಮಗೆಲ್ಲ ನೆನಪಾಗೋದು ಚಿಗುರು ಮಾವು, ಬೇವು-ಬೆಲ್ಲ, ಬೇಳೆ ಒಬ್ಬಟ್ಟು, ಇತ್ಯಾದಿ. ಅಮೇರಿಕಾದ ನ್ಯೂ ಇಂಗ್ಲೆಂಡ್ ಕನ್ನಡಿಗರಿಗೆ ಯುಗಾದಿ ಅಂದರೆ ಇವೆಲ್ಲದರ ಜೊತೆ ಇನ್ನೂ ಒಂದು ನಿರೀಕ್ಷೆ 'ಮಂದಾರ'. ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ವಿಕೃತಿನಾಮ ಸಂವತ್ಸರ ಯುಗಾದಿ ಹಬ್ಬದಲ್ಲಿ ನಾಟಕ ಪ್ರದರ್ಶನ. ಕಳೆದ ವರ್ಷಗಳಲ್ಲೂ ಹೆಸರಾಂತ ಕಲಾವಿದರಲ್ಲದೆ ಸ್ಥಳೀಯ ತಂಡಗಳೂ ಉತ್ತಮ ನಾಟಕಗಳನ್ನು ಪ್ರದರ್ಶಿಸಿಕೊಂಡು ಬಂದಿದ್ದಾರೆ. ಕನ್ನಡ ನಾಟಕಗಳೆಂದರೆ ಮಂದಾರ ಕನ್ನಡ ಸಂಘಕ್ಕೆ ಅತಿಪ್ರೀತಿ.

ಈ ವರ್ಷದ ಯುಗಾದಿಗೆ ಬೆಂಗಳೂರಿನ ತಂಡ "Kriyative Theatre" ಅವರ ನಾಟಕಗಳ ಬಗ್ಗೆ ಬಹಳ ನಿರೀಕ್ಷೆ. ತಂಡದ ನಿರ್ದೇಶಕಿ ರಂಗಕರ್ಮಿ ಲಕ್ಷ್ಮಿ ಚಂದ್ರಶೇಖರ್. ಚುಮು ಚುಮು ಮಳೆಯನ್ನೂ ಲೆಕ್ಕಿಸದೆ ಸುಮಾರು 200 ಕ್ಕೂ ಹೆಚ್ಚು ಕನ್ನಡಿಗರು ಶನಿವಾರ, ಏಪ್ರಿಲ್ 17 2010 ರಂದು ಫ್ರಮೀನ್ಘಾಂ ನ Keefe Tech Auditorium ನಲ್ಲಿ ಕಲೆತಿದ್ದರು.

ಕಾರ್ಯಕಾರಿಣಿ ಸಮಿತಿಯ ಸದಸ್ಯರಿಂದ ಗಣೇಶ ವಂದನೆ ಹಾಗು ಯುಗಾದಿ ಗೀತೆಗಳ ನಂತರ "ರತ್ನನ್ ಪರ್ಪಂಚ" ನಾಟಕ ಪ್ರದರ್ಶನ. ಜಿ.ಪಿ. ರಾಜರತ್ನಂ ಅವರ ಜೀವನ ಹಾಗು ಸಾಧನೆಯ ಮೇಲೆ ಆಧಾರಿತವಾದ ಈ ನಾಟಕ ರಚಿಸಿದವರು Kriyative ನ ಲಕ್ಷ್ಮಿ ಚಂದ್ರಶೇಖರ್ ಹಾಗೂ ಸುಂದರ್ ಅವರು . ವಿಶೇಷ ಅಂದರೆ ಈ ನಾಟಕಕ್ಕೆ ಮುಂಚೆ ಜೀ.ಪೀ.ಆರ್ ಅವರ ಸೊಸೆ ಶೈಲಾ ಶ್ರೀಧರ ಅವರಿಂದ ಜೀ.ಪೀ.ಆರ್ ಅವರ ಬಗ್ಗೆ ಒಂದೆರಡು ಮಾತು.

ನಾಟಕದ highlight ಅಂದರೆ ಜೀ.ಪೀ.ಆರ್ ಅವರ ವ್ಯಕ್ತಿತ್ವ, ಬದುಕು ಹಾಗು ಸಾಧನೆಗಳ ಬಗ್ಗೆ ಸಮರ್ಪಕ ನಿರೂಪಣೆ. ಜೀ.ಪೀ.ಆರ್ ಅವರ ಕನ್ನಡ ಪ್ರೇಮ, ಪ್ರಕಟಣೆಗಳು, ಅವರ ಎದುರಿಸಿದ ಕಷ್ಟ, ಬಾಲ್ಯದ ನೆನಪುಗಳು, ಅವರ ಪದಗಳ ಸಂಕಲನ ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿರೂಪಿಸಿದ ಹೆಗ್ಗಳಿಕೆ Kriyative ತಂಡಕ್ಕೆ ಸಲ್ಲುತ್ತದೆ. ಜೀ.ಪೀ.ಆರ್ ಅವರ ಪದ್ಯಗಳನ್ನು ಆಧರಿಸಿದ ಹಿನ್ನೆಲೆ ಹಾಡುಗಳು ನಾಟಕ್ಕೆ ಪೂರಕವಾಗಿದವು. ಕೇವಲ ನಾಲ್ಕು ಕಲಾವಿದರು (ಲಕ್ಷ್ಮಿ ಚಂದ್ರಶೇಖರ್, ಸುಂದರ್, ಗಜಾನನ ಟೀ. ನಾಯಕ್, ರಾಮಕೃಷ್ಣ ಕನ್ನರ್ಪಾಡಿ) ನಾಟಕದ ಎಷ್ಟೊಂದು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದು ಶ್ಲಾಘನೀಯ. ಪ್ರೇಕ್ಷಕರನ್ನು ಬೇರೆಯೇ ಒಂದು ಪ್ರಪಂಚಕ್ಕೆ ಕರೆದೊಯ್ದ "ರತ್ನನ್ ಪರ್ಪಂಚ" ಪ್ರದರ್ಶನ ಸಾರ್ಥಕ.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ emcee ಕಾವ್ಯಶ್ರೀ ಮಲ್ಲಣ್ಣ ಅವರು ಪ್ರೇಕ್ಷಕರಿಗೆ ಒಂದು surprise ಕಾದಿದೆ ಎಂದು ಕಾರ್ಯದರ್ಶಿ ರಾಜು ಅವರನ್ನು ವೇದಿಕೆಗೆ ಆಹ್ವಾನಿಸಿದಾಗ ನಮಗೆಲ್ಲ ಕಾತರ. ರಾಜು ಅವರು ಮಂದಾರ ಕೂಟದ ಹೊಚ್ಚ ಹೊಸ ಅಂತರ್ಜಾಲ ತಾಣ ಅನಾವರಣ ಮಾಡಲು ಹಿರಿಯ ಸದಸ್ಯ ರಾಜೇಂದ್ರ ರಾವ್ ಅವರನ್ನು ಬರಮಾಡಿಕೊಂಡಾಗ ಎಲ್ಲರಿಗೂ ಸಂತೋಷ . ಈ ಹೊಸ ಅಂತರ್ಜಾಲ ತಾಣದ ರೂವಾರಿ ವಿನಯ್ ರಾವ್. ನಂತರ ಸ್ಥಳೀಯ ತಂಡಗಳಿಂದ ನೃತ್ಯ ಪ್ರದರ್ಶನ. ವಿವಿಧ ನೃತ್ಯ ಶಾಲೆಯವರಿಂದ "ಬಿಂದಾಸ್" ಚಿತ್ರದ ಹಾಡಿಗೆ salsa ಮತ್ತು tap ನೃತ್ಯ, ಹಾಗು ವಿಸ್ಮಯ ತಂಡ ಹಲವು ಕನ್ನಡ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿದ್ದು ಪ್ರೇಕ್ಷಕರ ಮನರಂಜಿಸಿತು.

ಎರಡನೇ ನಾಟಕ ಟಿ.ಸುನಂದಮ್ಮ ಅವರ "ಹೀಗಾದ್ರೆ ಹೇಗೆ?". ಉತ್ತಮ ಗೀತೆಗಳು, ತಿಳಿ ಹಾಸ್ಯ, ವಿಡಂಬನೆ, ಸರಳವಾಗಿದ್ದೂ ಸಮರ್ಪಕವಾದಂಥ ರಂಗಸಜ್ಜಿಕೆಯಿಂದ ಪ್ರೇಕ್ಷಕರನ್ನು ನಕ್ಕು ನಗಿಸಿದ ಈ ನಾಟಕದಲ್ಲಿ Kriyative ನ ಕಲಾವಿದರು ತಮ್ಮ ಅಭಿನಯ ಪ್ರೌಢಿಮೆ ಮೆರೆದರು. ಒಟ್ಟಿನಲ್ಲಿ ಯುಗಾದಿ ಹಬ್ಬಕ್ಕೆ ಅತ್ತ್ಯುತ್ತಮ ನಾಟಕಗಳಿಂದ ಎಲ್ಲರ ಮನ ಗೆದ್ದ Kriyative ತಂಡಕ್ಕೆ ಪ್ರೇಕ್ಷಕರ ಪ್ರಚಂಡ ಕರತಾಡನ.

ಸಮಾರಂಭವನ್ನು ಉತ್ತಮವಾಗಿ ನಡೆಸಿದಂಥ ಮಂದಾರ ಕಾರ್ಯಕಾರಿಣಿ ಸಮಿತಿಯ ಸದಸ್ಯರಿಗೂ, ಕಲಾವಿದರು ಹಾಗು ಎಲ್ಲ ಪ್ರೇಕ್ಷಕರಿಗೂ ಕಾರ್ಯದರ್ಶಿ ರಾಜು ಧನ್ಯವಾದ ಅರ್ಪಿಸಿದರು. ಇನ್ನು, ಚೆನ್ನಾಗಿ ಹಸಿದಿದ್ದ ಎಲ್ಲರಿಗೂ Minerva restaurant ನವರ ಭರ್ಜರಿ ಭೋಜನ ಕಾದಿತ್ತು. ನಂತರ, ಮತ್ತೆ ಬೇಸಿಗೆ ಪಿಕ್ನಿಕ್ ನಲ್ಲಿ ಸಿಗೋಣ ಅಂತ ಮಾತಾಡಿಕೊಂಡು ಮನೆಗೆ ಹೊರಟಾಗ ಎಲ್ಲರ ಮನಸಿನಲ್ಲೂ ಜೀ.ಪೀ.ಆರ್ ಅವರ ಪದ "ನರಕಕ್ಕಿಳ್ಸಿ ನಾಲಗೆ ಸೀಳ್ಸಿ, ಬಾಯ್ ಒಲ್ಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ, ನನ್ನ ಮನ್ಸನೀಕಾಣೆ"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X