ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ ಯುವ ಕನ್ನಡಿಗರ ಮೇಳ ಸಂಪನ್ನ

By * ರಾಜಾರಾಮ್ ಕಾವಳೆ, ಇಂಗ್ಲೆಂಡ್
|
Google Oneindia Kannada News

C. Guru Rajarao
ಕಳೆದ ಶನಿವಾರ ಮತ್ತು ಭಾನುವಾರ ಏಪ್ರಿಲ್ 24-25 ಇಂಗ್ಲೆಂಡಿನ ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ಕನ್ನಡಬಳಗ ಯುಕೆ ಸಂಘವು, ವಿಕೃತಿ ಸಂವತ್ಸರದ ಯುಗಾದಿ ಹಬ್ಬ ಮತ್ತು ಕನ್ನಡಯುವ ಮೇಳವನ್ನು ಅದ್ದೂರಿಯಿಂದ ಆಚರಿಸಿತು. ಸಮಾರಂಭದ ವೈಶಿಷ್ಟ್ಯವೆಂದರೆ ಈ ಎರಡುದಿನಗಳ ಸಮಾರಂಭವನ್ನು ನಡೆಸಿಕೊಟ್ಟವರು ಇಲ್ಲಿ ನೆಲೆಸಿರುವ ಎರಡನೆಯ ಪೀಳಿಗೆಯ ಕನ್ನಡ ಯುವಕ ಯುವತಿಯರು.

ಸಮಾರಂಭದ ಮುಖ್ಯ ಅತಿಥಿಗಳು ಕನ್ನಡಿಗರೇ ಆಗಿದ್ದುದು ಮೇಳಕ್ಕೆ ವಿಶೇಷ ಮೆರಗು ತಂದುಕೊಟ್ಟಿತು. ಅಲ್ಲದೆ ಶುದ್ಧ ಉಡುಪಿ ಶೈಲಿಯ ಆಹಾರ ವ್ಯವಸ್ಥೆ, ಮೈಸೂರು ಸುಗಂಧದ ಊದುಬತ್ತಿಗಳ ಪರಿಮಳ ಮತ್ತು ಎಲ್ಲೆಲ್ಲೂ ಕನ್ನಡ ಮಾತುಗಳು. ಸಭಾಂಗಣದಲ್ಲಿ ಶುದ್ಧ ಕನ್ನಡ ಹಬ್ಬದ ವಾತಾವರಣ.

ಕಾರ್ಯಕ್ರಮ ಶ್ರೀ ಗದಾಧರ ಅವರು ಶಾಸ್ತ್ರೋಕ್ತ ಗಣಪತಿ ಪೂಜೆಯಿಂದ ಆರಂಭವಾಯಿತು. ಆನಂತರ ಮುಖ್ಯ ಅತಿಥಿಗಳಾದ ಸಿ.ಗುರುರಾಜಾರಾವ್ ಅವರನ್ನು ವೇದಿಕೆಯಮೇಲೆ ಆಮಂತ್ರಿಸಲಾಯಿತು. ಮುಖ್ಯ ಅತಿಥಿಗಳ ಜೊತೆಗೆ ಕನ್ನಡಬಳಗದ ಅಧ್ಯಕ್ಷೆ ಡಾ.ಭಾನುಮತಿ, ಬಳಗದ ಕಾರ್ಯದರ್ಶಿ ಡಾ. ಆನಂದ ನಾಡಿಗೇರ್, ಖಜಾಂಚಿಯರಾದ ಶ್ರೀಮತಿ ಸುರೇಣು ಜಯರಾಮ್ ಮತ್ತು ಉಪಾಧ್ಯಕ್ಷೆ ಕುಮಾರಿ ಮೃಣಾಲಿನಿ ಪುರಾಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷೆ ಭಾನುಮತಿಯವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಅವರನ್ನು ಸಭೆಗೆ ಪರಿಚಯಮಾಡಿಕೊಟ್ಟರು. ಮಾನ್ಯ ಗುರುರಾಜಾರಾವ್ ಅವರು ಅಚ್ಚಕನ್ನಡಿಗರು. ಇದೇ ಮೊದಲ ಬಾರಿಗೆ ಆಂಗ್ಲನಾಡಿನಲ್ಲಿ ಭಾರತದ ರಾಯಭಾರ ನಿಯೋಗ ಮಂಡಲಿಯ ಅಧಿಕಾರಿಯಾಗಿ ಒಬ್ಬ ಕನ್ನಡಿಗರು ನೇಮಕಗೊಂಡಿರುವುದು ನಮ್ಮೆಲ್ಲರ ಸಂತಷ ಮತ್ತು ಸುಕೃತವೆಂದು ಭಾನುಮತಿ ಹೇಳಿದರು. ಗುರುರಾಜಾರಾವ್ ಅವರು ಬರ್ಮಿಂಗ್ ಹ್ಯಾಮಿನ ಭಾರತದ ರಾಯಭಾರ ನಿಯೋಗದ ಮುಖ್ಯಸ್ಥರಾಗಿ ನಿಯಮಿತರಾಗಿದ್ದಾರೆಂದು ತಿಳಿಸಿದರು. ಅವರಿಗೆ ಕನ್ನಡಬಳಗ ಯು.ಕೆ ಸಂಸ್ಥೆಯ ವಿಚಾರವಾಗಿ ವಿವರಿಸಿ ಈ ಸಂಸ್ಥೆ ಆಂಗ್ಲನಾಡಿನಲ್ಲಿ ಉದಯಿಸಿ ಈಗಾಗಲೇ ಇಪ್ಪತ್ತೇಳು ವರ್ಷಗಳಾಗಿ 2008 ರಲ್ಲಿ ಬಳಗವು ತನ್ನ 25 ನೇ ಹುಟ್ಟುಹಬ್ಬದ ಸಂಕೇತವಾಗಿ ರಜತಮಹೋತ್ಸವವನ್ನು ಆಚರಿಸಿದುದನ್ನು ವಿವರಿಸಿದರು.

ಭಾರತ ಸರ್ಕಾರವು ಕಡಲಾಚೆಯ ಭಾರತ ಪೌರತ್ವದ ಬಗ್ಗೆ ಇತ್ತೀಚೆಗೆ ಜಾರಿಗೆ ತಂದಿರುವ ನಿಯಮಾವಳಿಗಳ ಬಗ್ಗೆ ಸ್ವಲ್ಪ ವಿವರಿಸಬೇಕೆಂದು ಮುಖ್ಯ ಅತಿಥಿಗಳಿಗೆ ಮನವಿ ಮಾಡಿಕೊಂಡರು. ಅದಕ್ಕೆ ಉತ್ತರವಾಗಿ ಗುರುರಾಜಾರಾವ್ ಅವರು ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ, ದ.ರಾ. ಬೇಂದ್ರೆಯವರ "ಯುಗಾದಿ" ಕವನವನ್ನು ಓದಿದಾಗ ಸಭಿಕರು ಹರ್ಷೋದ್ಘಾರದಿಂದ ಕರತಾಡನಮಾಡಿದರು. ಅವರೂ ಇದೇ ಮೊದಲನೆಯಬಾರಿಗೆ ಹೊರದೇಶದಲ್ಲಿ ಇಷ್ಟೊಂದು ಕನ್ನಡಿಗರನ್ನು ಒಟ್ಟಿಗೆ ನೋಡಿರುವುದಾಗಿ ತಿಳಿಸಿದರು. ಕವನ ವಾಚನದ ನಂತರ ಅವರು ಕಡಲಾಚೆಯ ಭಾರತ ಪೌರತ್ವದ ಬಗ್ಗೆ ವಿವರಿಸಿ ಅದರಬಗ್ಗೆ ಇನ್ನೂ ಹೆಚ್ಚಿನಮಾಹಿತಿಗೆ ಭಾರತ ರಾಯಭಾರ ನಿಯೋಗದ ಅಂತರ್ಜಾಲದ ತಾಣಕ್ಕೆ ಭೇಟಿಕೊಟ್ಟು ಈ ಹೊಸ ನಿಯಮಾವಳಿಗಳಬಗ್ಗೆ ಪೂರ್ಣವಿವರಗಳನ್ನು ಪಡೆಯಬಹುದು ಎಂದರು.

ಮುಖ್ಯ ಅತಿಥಿಗಳ ಭಾಷಣದ ನಂತರ ಬಳಗದ ಮನರಂಜನೆಯ ಕಾರ್ಯಕ್ರಮಗಳು ಒಂದಾದರೋಂದರಮೇಲೆ ಬರತೊಡಗಿದವು. ಕರ್ನಾಟಕದಿಂದ ಬರಬೇಕಾದ ಹಲವು ಕಲಾವಿದರು, ವೀಸಾ ತೊಂದರೆ ಮತ್ತು ಐಸ್ ಲ್ಯಾಂಡಿನ ಅಗ್ನಿಪರ್ವತದ ಬೂದೀಮೋಡದ ಕಾರಣಗಳಿಂದ ಈ ದೇಶಕ್ಕೆ ಬರಲಾಗಲಿಲ್ಲ. ಆದರೂ ಬಳಗಕ್ಕೆ ಸ್ಥಳೀಯ ಕನ್ನಡ ಕಲಾವಿದರುಗಳ ಕೊರತೆಯೇನೂ ಇರಲಿಲ್ಲ. ಎದೆ ತುಂಬಿ ಹಾಡಿದೆನು ಟಿವಿ ಕಾರ್ಯಕ್ರಮದಲ್ಲಿ ಮಿಂಚಿದ ಶ್ರಿಮತಿ ಶ್ರುತಿ ಸುಧೀರ್ ಅವರಿಂದ ಇಂಪಾದ ಸುಗಮ ಸಂಗೀತ, ಚಿತ್ರಲೇಖ ಕಲಾವಿದರಿಂದ "ಪಂಚತಂತ್ರ" ಕತೆಯ ಮನಕರಗಿಸುವ ಯಕ್ಷಗಾನ, ಅಲ್ಲದೆ ಜ್ಯೋತ್ಸ್ನಾ ಶ್ರೀಕಾಂತ್ ಅವರ ಪೌರ ಪಾಶ್ಚಿಮಾತ್ಯ ಮಿಲನ ಸಂಗೀತಕ್ಕೆ ಸಭಿಕರು ಚಿಮ್ಮಿ ಕುಣಿದಾಡಿದರು.

ಸುವರ್ಣ ಟೀವಿ ಯ Confident Star Singer ಕಾರ್ಯಕ್ರಮದಲ್ಲಿ ಬೆಳಗಿದ ಶ್ರಿಮತಿ ಸಂಗೀತ ರಾಜೀವ ಅವರ ಬಾಲಿವುಡ್ ಮತ್ತು ಕನ್ನಡ ಚಲನಚಿತ್ರ ಸಂಗೀತ ಎಲ್ಲರ ಮನಸೆಳೆಯಿತು. ಇವರು ಮತ್ತೆ ಭಾನುವಾರ ಬೆಳಗ್ಗೆ ಚಿತ್ರಸಂಗೀತಗಳನ್ನು ಹಾಡಿದರು. ಶ್ರಿಮತಿ ದೇವಿಕ ಅವರು ಯಕ್ಷಗಾನ ಮತ್ತು ಕನ್ನಡ ಚಲನಚಿತ್ರ "ಗಾಳಿಪಟ"ದ ಪ್ರದರ್ಶನದೊಂದಿಗೆ 2010ರ ಇಂಗ್ಲೆಂಡ್ ಯುವ ಕನ್ನಡಿಗರ ಮೇಳ ಮುಕ್ತಾಯವಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X