ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸೇಂಜಲಿಸ್ ಕನ್ನಡ ಸಂಘದ ಚುನಾವಣೆ

By Shami
|
Google Oneindia Kannada News

Election at KCA-SC
ಬೆಂಗಳೂರು, ಏ. 19 : ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿ ತೀರದಲ್ಲಿರುವ ಪ್ರಭಾವಿ ಕನ್ನಡ ಸಂಘಗಳಲ್ಲಿ ಒಂದಾದ ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ (KCA-SC) ನಾಯಕತ್ವ ಬದಲಾವಣೆ ಕಾಲ ಸನ್ನಿಹಿತವಾಗಿದೆ. ಇದೇ ಏಪ್ರಿಲ್ 24 ಶನಿವಾರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಗೆ ಬಿರುಸಿನ ಚುನಾವಣಾ ವೇದಿಕೆ ಸಿದ್ಧವಾಗಿದೆ.

ಫಾಲ್ಕೆ ಪ್ರಶಸ್ತಿ ವಿಜೇತ, ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬದ ದಿನವಾದ ಏಪ್ರಿಲ್ 24ರಂದೇ ಲಾಸ್ ಏಂಜಲಿಸ್ ಕನ್ನಡಿಗರ 'ಒಗ್ಗಟ್ಟಿಗೆ' ಸಂಕೇತವಾದ ಕೆಸಿಎ ಎಸ್ ಸಿಯಲ್ಲಿ ಹೊಸ ಆಡಳಿತಗಾರರ ನೇಮಕಕ್ಕೆ ಚುನಾವಣೆ ಜರುಗುತ್ತಿರುವುದು ಕಾಕತಾಳಿಯ ವಿಶೇಷವೆನಿಸಿದೆ.

ಒಂದು ಸ್ಥಳೀಯ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕೆಸಿಎ ನಿರ್ದೇಶಕ ಸ್ಥಾನಗಳಿಗೆ ಈ ಬಾರಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಆರಿಸಿಬರಲಿದ್ದು ಆಯಕಟ್ಟಿನ ಅಧಿಕಾರ ಸ್ಥಾನಗಳು ಕೂಡ ಮಹಿಳೆಯರ ಪಾಲಾಗುವ ನಿರೀಕ್ಷೆಯಿದೆ.

ಸಂಘದ ಆಡಳಿತ ಮಂಡಳಿಯಲ್ಲಿ ಒಟ್ಟು 9 ನಿರ್ದೇಶಕ ಸ್ಥಾನಗಳಿದ್ದು ಆಯ್ಕೆಯಾಗಲು ಬಯಸುವ ಸಂಘದ ಅರ್ಹ ಸದಸ್ಯರಿಂದ ನಾಮಪತ್ರ ಸ್ವೀಕಾರ, ನಾಮಪತ್ರ ಪರಿಷ್ಕಾರ ಮುಂತಾದ ಚುನಾವಣಾ ಪ್ರಕ್ರಿಯೆಗಳು ಇದೀಗ ಮುಗಿದಿದ್ದು ಚುನಾವಣೆಗೆ ವೇದಿಕೆ ಅಣಿಯಾಗಿದೆ. ಸಂಘದ ಆಜೀವ ಸದಸ್ಯರು ಮತ್ತು ಕಳೆದ 90 ದಿನಗಳಲ್ಲಿ ತಮ್ಮ ಸದಸ್ಯತ್ವವನ್ನು ಜೀವಂತವಾಗಿರಿಸಿಕೊಂಡಿರುವ ಸದಸ್ಯರು ಮಾತ್ರ ಮತದಾನ (ಅಗತ್ಯ ಬಿದ್ದಲ್ಲಿ) ಮಾಡುವ ಅರ್ಹತೆ ಪಡೆದಿರುತ್ತಾರೆ. ಹಿರಿಯ ಕನ್ನಡಿಗ ಪಿಜಿ ತ್ಯಾಮಗೊಂಡ್ಲು ಅವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರತರಾಗಿರುತ್ತಾರೆ.

ಸಂಘದಲ್ಲಿ ಒಟ್ಟು 107 ಮಂದಿ ಆಜೀವ ಸದಸ್ಯರು ಹಾಗೂ 103 ಮಂದಿ ವಾರ್ಷಿಕ ಸದಸ್ಯರಿರುತ್ತಾರೆ. ಈ ಬಾರಿಯ ಮಹಾಸಭೆಯ ಜತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಸುಗೆ ಹಾಕಲಾಗಿದ್ದು ಕಾರ್ಯಕ್ರಮಗಳು ಲೇಕ್ ವುಡ್ ನಲ್ಲಿರುವ ಹೂವರ್ ಮಾಧ್ಯಮಿಕ ಶಾಲೆಯಲ್ಲಿ ನಡೆಯುತ್ತವೆ. ವಿಕೃತಿ ನಾಮ ಸಂವತ್ಸರದ ಯುಗಾದಿ ಹಾಗೂ ವಸಂತೋತ್ಸವ ಹಾಗು ಸಂಘದ ವಾರ್ಷಿಕ ಮಹಾಸಭೆ ಹೀಗೆ ಮೂರು ಕಾರ್ಯಕ್ರಮಗಳ ತ್ರಿವೇಣಿ ಸಂಗಮಕ್ಕೆ ಏಪ್ರಿಲ್ 24 ಸಾಕ್ಷಿಯಾಗಲಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘವು ಸ್ವತಂತ್ರವಾಗಿ ಯೋಚಿಸುವ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಒಂದು ಕನ್ನಡ ಕೂಟವಾಗಿದೆ. ಇದೇ ಜುಲೈನಲ್ಲಿ ಸ್ಥಳೀಯವಾಗಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನ ಮತ್ತು ನ್ಯೂ ಜೆರ್ಸಿಯಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಅಕ್ಕ ವಿಶ್ವಕನ್ನಡ ಸಮ್ಮೇಳನದ ಜಾಹಿರಾತುಗಳು ಏಕಕಾಲಕ್ಕೆ ಸಂಘದ ಅಂತರ್ ಜಾಲತಾಣದಲ್ಲಿ ಜಾಗ ಪಡೆದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X