ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇವು ಬೆಲ್ಲ ಮೆದ್ದ ಹೊಯ್ಸಳ ಕನ್ನಡ ಕೂಟ

By * ಮಲ್ಲಿ ಸಣ್ಣಪ್ಪನವರ್
|
Google Oneindia Kannada News

Hoysala Kannada Koota celebrates Ugadi
ಹೊಯ್ಸಳ ಕನ್ನಡ ಕೂಟದವರು ದಿನಾಂಕ ಏಪ್ರಿಲ್ 10ರಂದು ವಿಕೃತಿನಾಮ ಸಂವತ್ಸರವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಮಿಡಲ್-ಟೌನ್ ದೇವಸ್ಥಾನದವರು ಹೊಸದಾಗಿ ನಿಮಿ೯ಸಿರುವ ಸಭಾಂಗಣ ಸಂಭ್ರಮಕ್ಕೆ ಡಬ್ಬಲ್ ಮೆರಗು ನೀಡಿತ್ತು. "ಕನೆಕ್ಟಿಕಟ್ ಕನ್ನಡಿಗರು ಕಮ್ಮಿ" ಅನ್ನೋ ಬಾಯಿಗಳಿಗೆ ಬೀಗ ಹಾಕೋ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸೇರಿಕೊಂಡಿದ್ದರು.

ಮಧ್ಯಾಹ್ನ ಸುಮಾರು 3 ಗಂಟೆಗೆ "ಜಯ-ಭಾರತ ಜನನಿಯ ತನುಜಾತೆ..." ನಾಡಗೀತೆಯೊಂದಿಗೆ ಕಾಯ೯ಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ಸಲದ ಕಾಯ೯ಕ್ರಮದ ನಿವ೯ಹಣೆಯ ಭಾರ ಆಶಾ ಹಾಗು ಯಶವಂತರಾಜ ಗಡ್ಡಿ ದಂಪತಿಗಳಿಗೆ ಹೊರಿಸಲಾಗಿತ್ತು. ಕಾಯ೯ಕ್ರಮ ನಿವ೯ಹಣೆ ವಿನೂತನ ಶೈಲಿಯಲ್ಲಿ ಇದ್ದು ಆಕರ್ಷಣೀಯವಾಗಿತ್ತು. ಕನ್ನಡ ಕೂಟದ ಅಧ್ಯಕ್ಷ ಶ್ರೀನಿವಾಸ ಕೊಮಲಾ೯ ಎಲ್ಲರನ್ನು ಉಗಾದಿಯ ಹಬ್ಬದ ಆಚರಣೆಗೆ ಸ್ವಾಗತ ಕೋರಿದರು. ಶ್ರೀನಿವಾಸರವರು ಎಳೆಯ ಹಾಗು ಹಳೆಯ ಕನೆಕ್ಟಿಕಟ್ ಕನ್ನಡಿಗರನ್ನು ಒಂದು ಗೂಡಿಸಿ ಗಟ್ಟಿ-ಮುಟ್ಟಾದ ಕನ್ನಡ ಕೂಟ ಕಟ್ಟಿದ್ದು ಕನೆಕ್ಟಿಕಟ್ ಪಾಲಿಗೆ ದಂತಕತೆ ಎಂದರೆ ತಪ್ಪಾಗಲಾರದು. ಸ್ವಾಗತ ಭಾಷಣದ ನಂತರ ಪ್ರಾಥ೯ನೆ ಸರದಿ, ಅಮಿತಾ ಶಾಸ್ತ್ರಿ ಪ್ರಾರ್ಥಿಸಿದರೆ, ಅದಕ್ಕೆ ತಕ್ಕ ಲಯಬದ್ದವಾದ ವೈಯಲಿನ್ ಸಾಥ್ ಕೊಟ್ಟಿದ್ದು ಮೇಘಾ ರಾವ್.

ತಮ್ಮ ಪುಟಾಣಿಗಳಿಗೆ ವಿವಿಧ ವೇಷಭೂಷಣಗಳನ್ನು ಹಾಕಿ ಕಾಯುತ್ತಿದ್ದ ಅಪ್ಪ-ಅಮ್ಮಂದಿರು ಚಂದ್ರಶೇಖರ್ ಭಟ್ ಅವರನ್ನು ಸ್ಟೇಜ್ ಮೇಲೆ ನೋಡಿ ನಿರಾಳರಾದರು. ಚಂದ್ರಶೇಖರ್ ಭಟ್ ನೀಟಾಗಿ ನಡೆಸಿಕೊಟ್ಟ ವಿವಿಧ ವೇಷಭೂಷಣ ಕಾಯ೯ಕ್ರಮಕ್ಕೆ ಮಕ್ಕಳು ತುಂಬಾ ಆನಂದಿತರಾಗಿ ಭಾಗವಹಿಸಿದರು. 5 ತಿಂಗಳ ಸಚಿತ್ ಹುಲ್ಲಿಕೆರೆ ಬಾಲಗೋಪಾಲನಾಗಿ, ಅನಿಕೇತ್ ಚೆಲುವ ಹಳ್ಳಿಮೇಷ್ಟ್ರಾಗಿ, ಅನನ್ಯ ಕೊರವಂಜಿಯಾಗಿ, ರಿಯಾ ಬೆಂಗಳೂರ ಹುಡುಗಿಯಾಗಿ, ಭುವನ್ ಹೊಸಪೇಟೆ ಸುಬ್ರಮಣ್ಯನಾಗಿ, ಓಂಕಾರ ಮರಳ್ಳಪ್ಪನವರ್ ಮೈಕಲ್ ಜಾಕ್ಸನ್‌ನಾಗಿ, ರುಹಿ ಹಾರ್ಯಾಡಿ ಕಾಶ್ಮೀರಿ ಚೆಲುವೆಯಾಗಿ, ತನಿಷ್ಕಾ ಶಕು೦ತಲೆಯಾಗಿ ಗಮನ ಸೆಳೆದರೆ, 3 ವಷ೯ದ ರಿಚಾ ನಾರಪ್ಪ ಮಾಡಿದ ನೃತ್ಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆಯಾಯಿತು.

ಇದಾದ ನಂತರ ಸ್ವಣ೯ ಮೋದಿ ನಿದೇ೯ಶನದಲ್ಲಿ ಮೂಡಿಬಂದ ಪುಟಾಣಿ ಏಜೆಂಟ್ಸ್ : "ಅಪಾಯ ಬಂದಾಗ ಬೇಕು ಉಪಾಯ" ಎಂಬ ನೃತ್ಯ ರೂಪಕದಲ್ಲಿ ಮಕ್ಕಳು ಕಣ್ಮನ ತುಂಬುವ ಹಾಗೆ ಕುಣಿದು-ನಟಿಸಿದರು. ಇದಕ್ಕೆ ಸ್ವಣಾ೯ ತಯಾರಿಸಿದ ಬ್ಯಾಕ್-ಡ್ರಾಪ್ ಅವರ ಕ್ರೀಯಾಶೀಲತೆಗೆ ಹಿಡಿದ ಕನ್ನಡಿ ಎಂದರೆ ಅಡ್ಡಿಯಿಲ್ಲ. ನಂತರ ಪ್ರಿಯಾ ಹಾಯಾ೯ಡಿ ನೃತ್ಯ ನಿದೇ೯ಶನದಲ್ಲಿ ಯುಗಾದಿ ಹಬ್ಬದ ವಿವಿಧ ಮಜಲುಗಳು ಸಾರುವ ನೃತ್ಯೋತ್ಸವ. ತೋರಣ, ರಂಗೋಲಿ, ಪೂಜೆ, ಹಬ್ಬದೂಟ ಹಾಗು ಉತ್ಸವ ಹೀಗೆ ವಿವಿದ ಹಾಡುಗಳಿಗೆ ಸುಮಾರು 3 ವಷ೯ದಿಂದ ಹಿಡಿದು 14 ವಷ೯ದ ವಯೋಮಿತಿಯ ಸುಮಾರು 40 ಮಕ್ಕಳಿಗೆ ನೃತ್ಯ ಸಂಯೋಜಿಸಿ, ಕಲಿಸಿಕೊಟ್ಟ ಪ್ರಿಯಾ ಅವರ ಉತ್ಸಾಹ ಹಾಗು ಶ್ರದ್ದೆಗೆ ಉಘೇ..ಉಘೇ.

ನಂತರದ ಸರದಿ ಪಡ್ಡೆಹುಡುಗರದು, ಹದಿಹರೆಯದ ಪಡ್ಡೆಗಳಲ್ಲಾ, ಇವರು ಪುಟಾಣಿ ಪಡ್ಡೆಗಳು, ರಶ್ಮಿ ವಿಶ್ವನಾಥ್ ನಿವ೯ಹಣೆಯಲ್ಲಿ "ಒಂದೇ ಒಂದು ಸಾರಿ..." ಹಾಡಿಗೆ ಪುಟಾಣಿಗಳು ಟೋಪಿ ಕುಣಿಸುತ್ತಾ ಡ್ಯಾನ್ಸ್ ಮಾಡಿದ್ದು ಮಾತ್ರ ಸೂಪರ್ ! ಇಂದು ದೊಡ್ದಮನೆ ಸಂಯೋಜನೆಯಲ್ಲಿ ಭಾವಗಾನ ಎಲ್ಲರ ಗಮನ ಸೆಳೆಯಿತು. ಅನಿತಾ ಜೋಯಿಷರ ನಿದೇ೯ಶನದಲ್ಲಿ ಪಂಚತಂತ್ರ ನೀತಿಯ "ಮಿತ್ರನ ಲಾಭ-ಆನೆಯ ಸ್ನೇಹ " ಕಿರುನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಅಂಜು ಸೋಮನಾಥ್ ನಿದೇ೯ಶನದ "ಬ್ರಾಹ್ಮಣ ಮತ್ತು ಆಡು" ಕಿರುನಾಟಕ ಮನೋರಂಜನೆ ಜೊತೆ ಜೊತೆ ನೀತಿಪಾಠ ಸಾರಿಸಾರಿ ಹೇಳಿತು.

ವಿರಾಮದ ನಂತರ ಶುರುವಾಗಿದ್ದು ದಿನೇಶ್ ಹಾರ್ಯಾಡಿ ಸಂಯೋಜನೆಯಲ್ಲಿ ವಿನೂತನ ರಂಜನೆ "ವಿಚಿತ್ರ ಮಂಜರಿ", ಚಿತ್ರಗೀತೆಗಳಿಗೆ ವಿಚಿತ್ರ ಭಂಗಿಗಳನ್ನು ತೋರಿಸುತ್ತಾ , ಪ್ರೇಕ್ಷಕರಿಗೆ ನಗೆಯ ಬಂಗಿಜಂಪ್ ಹೊಡೆಸುತ್ತಾ ಬಲು ರಂಜನೀಯ ರಸಗವಳ ಬಡಿಸಿದ ಕಾಯ೯ಕ್ರಮ ಇದಾಗಿತ್ತು.

"ವಾರೇವ್ಹಾ..ಯಾರಿವಾ...ಹೀರೊನಾ...ಚೋರಾನಾ" ಅನ್ಕೊಂಡು ಹೆಂಡತಿಯರು ಮುಂದೆ ನೆಡೆದರೆ, ಅವರ ಹಿಂದೆ ಹಿಂದೆ "ಬೆಳದಿಂಗ್ಳೂ ಇವ್ಳೆ.. ಬೊಂಬಾಟಾಗವ್ಳೇ.." ಅನ್ನುತ್ತಾ ಗಂಡಂದಿರು ಸಿಂಹದ ನಡಿಗೆಯಲ್ಲಿ ನಡೆದು ಬಂದರು, ಕಾಯ೯ಕ್ರಮದ ಹೆಸರು "ರೂಪದಶಿ೯ ನಡೆ : ಸುಂದರ ಸಂಗಾತಿಗಳು", ಸರಿತಾ ಮಸರೂರು ಸಾರಥ್ಯದಲ್ಲಿ ಮೂಡಿಬಂದ ಈ ಕಾಯ೯ಕ್ರಮ ನೋಡುತ್ತಿದ್ದಾಗ ಪ್ರೇಕ್ಷಕರ ಬ್ಲಾಕ್ ಅಂಡ್ ವೈಟ್ ಕಣ್ಣುಗಳಲ್ಲಿ ಕಲರ್‌ಫುಲ್ ಸ್ಯಾಂಡಲ್‌ವುಡ್ ಮಿಂಚಿಮರೆಯಾಯಿತು.

ಕನ್ನಡಿಗರನ್ನೆಲ್ಲಾ ಅಗಲಿದ ಡಾ. ವಿಷ್ಣುವರ್ಧನ್ ಅವರನ್ನು ನೆನೆಯುತ್ತಾ ಅವರ ಆಪ್ತಮಿತ್ರ ಹಾಗು ಆಪ್ತರಕ್ಷಕ ಹಾಡುಗಳಿಗೆ ಪ್ರಿಯಾ ಹಾರ್ಯಾಡಿ ಅವರ ನೃತ್ಯ ನಿದೇ೯ಶನದ "ಹಾಕು ಹೆಜ್ಜೆ ಹಾಕು : ಆಪ್ತಮಿತ್ರನ ಸ್ಮರಣೆ " ಪ್ರೇಕ್ಷರ ಮನಸೂರೆಗೊಂಡಿತು. ರೂಪಾ ಅಮೃತ್ ಅವರ ಸಂಯೋಜನೆಯ "ಕಾನನ ಜನರ ಸಂಭ್ರಮ" ಕುಣಿತ ಪ್ರೇಕ್ಷಕರನ್ನು ಕುಣಿದಾಡಿಸಿತು. "ಅಡವಿ ದೇವಿಯ..ಕಾಡು ಜನಗಳ ಈ ಹಾಡು..." ಹಾಡಿಗೆ ಎಲ್ಲರೂ ಮೆಚ್ಚುವಂತೆ ಹೆಜ್ಜೆ ಹಾಕಿದ್ದು ಲತಾ ಗುಡ್ಡೇರ, ಪ್ರಿಯಾ ಹಾರ್ಯಾಡಿ, ಆಶಾ ಗಡ್ಡಿ ಮತ್ತು ರೂಪಾ ಅಮೃತ್.

ಕಾಯ೯ಕ್ರಮದ ಕೊನೆಯಲ್ಲಿ ಕೂಟದ ಸದಸ್ಯರ ತಂಡದಿಂದ "ಅಮೇರಿಕಾದಲ್ಲಿ ಯಮರಾಜ" ಹಾಸ್ಯ ನಾಟಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ಮಹೇಶ್ ಹುಲಿಕೆರೆ, ಸದಾನಂದ ಮಸರೂರು, ಸರಿತಾ ಮಸರೂರು, ಪ್ರದೀಪ್ ಡೊಳ್ಳಿನ್, ರಮೇಶ್ ಕಬ್ಬಿನದ, ಗಿರೀಶ್ ಕಬ್ಬಿನದ, ಜ್ಯೋತಿ ಕಬ್ಬಿನದ, ಶಿವಕುಮಾರ್, ರಾಜೇಶ್ ಚೆಲುವ, ರಘು ಸೋಸಲೆ, ಲೋಕೇಶ್ ಸಿದ್ದಯ್ಯ ಇವರುಗಳ ಅಭಿನಯ ಎಲ್ಲರ ಗಮನ ಸೆಳೆಯಿತು. ಅಷ್ಟೊತ್ತಿಗೆ ಭಜ೯ರಿ ಹಬ್ಬದ ಹೋಳಿಗೆ ಊಟ ರೆಡಿಯಾಗಿತ್ತು.

ಎಲ್ಲಾ ಯಶಸ್ವಿ ಕಾಯ೯ಕ್ರಮಗಳಲ್ಲಿ ತೆರೆಮರೆಯಲ್ಲಿ ಕೆಲವರು ಕೆಲಸ ಮಾಡುತ್ತಾರೆ, ಯಾವುದೇ ಲೈಮ್-ಲೈಟ್‌ಗೆ ಬರದೇ, ಸ್ಟೇಜ್ ಬಳಿ ಸುಳಿಯದೆ ದೂರದಲ್ಲೇ ಉಳಿದು ಕೆಲಸ ಮಾಡುತ್ತಾರೆ, ಹೊಯ್ಸಳ ಕನ್ನಡ ಕೂಟ ಅದಕ್ಕೆ ಹೊರತಾಗಿಲ್ಲ. ಅಂತ ಹಲವರಲ್ಲಿ ಕೆಲವರೆಂದರೆ ವೇಣು ಗುಡ್ಡೇರ, ರವಿ ಮತ್ತು ಸುಮನಾ ಕೀರ್ತಿ, ಕೃಷ್ಣಮೂತಿ೯ ಬೀಮನಕಟ್ಟೆ, ದೀಪಕ್ ಮೂತಿ೯ ಇವರಿಗೆಲ್ಲಾ ಕನೆಕ್ಟಿಕಟ್ ಕನ್ನಡಿಗರ ಪರವಾಗಿ ಸ್ಪೆಷಲ್ ಥ್ಯಾಂಕ್ಸ್ ಮತ್ತು "ಹ್ಯಾಟ್ಸ್ ಆಫ್".

ಗ್ಯಾಲರಿ : ಯುಗಾದಿ ಸಂಭ್ರಮ ನೋಡಲು ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X