ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆಯ ಕನಸುಬೇಕು ಬಾಳಿನುದ್ದಕ್ಕೂ, ನನಸಾಗಲು

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Vani Ramdas, Singapore
ಗುಂಪೊಂದ ಕಂಡು ಇಣುಕಿ ನೋಡಿದೆ. ಗಿಣಿಶಾಸ್ತ್ರದವನೊಬ್ಬನ ಸುತ್ತ ಐದಾರು ಜನ ಕೂಲಿಯವರು. ಅಯ್ಯೋ, ಹೊಟ್ಟೆಗೇ ಹಿಟ್ಟಿಲ್ಲದಿದ್ದರೂ ಈ ಬಡಪಾಯಿಗಳು "ನಾಳೆ ಒಳ್ಳೆಯದಾಗುತ್ತೆ" ಎಂಬ ನಿರೀಕ್ಷೆಯಲಿ ಮತ್ತೊಬ್ಬರ ಹೊಟ್ಟೆಗೆ ಊಟ ಹಾಕುತ್ತಾರಲ್ಲಾ ಎನಿಸಿತು. ಹೊಟ್ಟೆ ಪಾಡೆಂದು ಬಂದಾಗ ಎಲ್ಲರೂ ಮಾಡೋದು "ನಾಳೆ ಮಾಡುವ ಕೆಲಸ ಇಂದೇ ಮಾಡು, ನೀ ನಾಳೆ ಎಂಬ ಮಾತ ಮುಂದೆ ದೂಡು" ಎಂದು. ಏಕೆಂದರೆ ಆ ಗಿಣಿಶಾಸ್ತ್ರದವನಿಗೂ ಗೊತ್ತಿಲ್ಲ ಮುಂದಿನ ನಿಮಿಷದಲಿ ಅವನಿಗೆ ಅಲ್ಲಿಂದ 'ಎತ್ತಂಗಡಿ' ಆಗುವುದು ಎಂದು.

ಗಿಣಿ ಶಾಸ್ತ್ರ, ನಾಡಿ ಶಾಸ್ತ್ರ, ಭವಿಷ್ಯ, ನ್ಯೂಮರಾಲಜಿ ಹೆಸರಿಪ ನಾನಾರು ಫಲಕಗಳು ಭಾರತದಲ್ಲಿ ಮಾತ್ರವಲ್ಲ ಸಿಂಗಪುರ, ಥೈಲಾಂಡ್, ಮಲೇಶಿಯಾದಲ್ಲಿ ಕೂಡ ಕಣ್ಬಿಟ್ಟು ನೋಡಿದರೆ ಕಂಡಾವು. ಏನ್ ಮಾಡ್ತೀರ ಸ್ವಾಮಿ ಎಲ್ಲೆಡೆಯೂ "ಉದರನಿಮಿತ್ತಂ..." ನಾಮವೊಂದೇ ರೂಪ ಹಲವು.

ಆ ನಾಳೆ ಅಂಬೋದು ಅದೆಷ್ಟೊಂದು ಸೋಜಿಗದ ವಿಷಯ ನೋಡಿ! ಭವಿಷ್ಯತ್ ಆಗಿದ್ದು, ವರ್ತಮಾನಕ್ಕೆ ಬದಲಾಗಿ ಅದು ಭೂತದೊಡನೆ ಕರಗೇ ಹೋಗುತ್ತದೆ. ನಾಳೆಯ ನೀರಿಕ್ಷೆಗಳಿಲ್ಲದೆ, ನಿನ್ನೆಯ ನೆನಪಿಲ್ಲದೆ ಈ ಬದುಕು ಜಟಕಾ ಬಂಡಿಯಲಿ ಬದುಕಲು ಸಾಧ್ಯವೇ?

ಈ ನಿನ್ನೆ ಹಾಗೂ ನಾಳೆಗಳು ಒಂದೇ ನಾಣ್ಯದ ಎರಡು ಮುಖಗಳು ಅಲ್ಲವೇ? 'ನಾಳೆ ಮಾಡುವ ಕೆಲಸ ಇಂದೇ ಮಾಡು ನೀ ನಾಳೆ ಎಂಬ ಮಾತ ಮುಂದೆ ದೂಡು...'ಆದರೆ ಕೆಲವರಿಗೆ ಹಲವು ದುರಭ್ಯಾಸಗಳಿದ್ದಂತೆ "ನಾಳೆ, ಆಮೇಲೆ" ಮಾಡ್ತೀನಿ ಎಂಬ ದುರಭ್ಯಾಸವೂ ಉಂಟು. ಏನೇ ಕೇಳು "ನಾಳೆ, ಆಮೇಲೆ" ಅಂತಾನೇ ತಳ್ತಾರೆ. ನೀವೇ ಹೇಳಿ ಎಲ್ಲಾನೂ "ನಾಳೆ" ಎಂದು ತಳ್ಳೋಕೆ ಆಗುತ್ಯೇ? ಏನ್ ಮಾಡ್ತೀರ ಕೆಲವರು ಹಾಗೇ "ಎಲ್ಲಾ ಜಾಣ, ತುಸ ಕೋಣ" ಜಾತಿಗೆ ಸೇರಿದವರು. ಈ ಕೆಟ್ಟ ಅಭ್ಯಾಸ, ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅಂತ ಗಾದೆ ಇದೆಯಲ್ಲ ಹಾಗೆ. ನಾಳೆ ಎಂಬುದು ಇಂದಾಗಿ, ಇಂದು ನಿನ್ನೆಯಾಗಿ ಮುಗಿದೇ ಹೋಗಿರುತ್ತೆ. ಆ ನಾಳೆ ಬರೋದೇ ಇಲ್ಲ. ಹಳ್ಳಿ ಕಡೆ ಹಿತ್ತಲ ಬಾಗಿಲ ಮೇಲೆ ಇಂದಿಗೂ ಬರೆದಿರುತ್ತಾರೆ "ನಾಳೆ ಬಾ" ಎಂದು ದೊಡ್ಡದಾಗಿ. ಏಕೆಂದರೆ ಕೆಟ್ಟದ್ದು ಅಥವಾ ಪಿಶಾಚಿ ಅದನ್ನು ನೋಡಿ "ನಾಳೆ ಬಾ" ಎಂದು ಹೊರಟು ಹೋಗುವುದಂತೆ. ಅದನ್ನು ಓದಿ ಪರಿಪಾಲಿಸುವಷ್ಟು ಜ್ಞಾನ ಅದ್ರೂ ಇದೆ ಬಿಡಿ ಪಿಶಾಚಿಗಳಿಗೆ.

ಈ ನಾಳೆಯ ನೀರೀಕ್ಷೆಗಳ ಜೊತೆಗೆ ನಿನ್ನೆಯ ಹೊರೆಗಳೂ ಕೂಡಿರುತ್ತದೆ. ಇಂದಲ್ಲ ನಾಳೆ ಒಳ್ಳೆಯದಾಗುತ್ತೆ ಎಂಬ ಆಶಾಭಾವದಲಿ ಆ ಕ್ಷಣಕ್ಕೆ ಮನಕೆ ಖುಷಿ ಸಿಗುತ್ತೆ. ಆ ಆಶಾಭಾವವಿಲ್ಲದಿವನು ನಿರಾಶಾವಾದಿ ಹೌದು ತಾನೆ? ನಾಳೆ ಒಳ್ಳೆಯದಾಗುತ್ತೆ ಎಂಬ ನಿರೀಕ್ಷೆ ಇಲ್ಲದೆ ಬದುಕುವವರು ಪಲಾಯನವಾದಿಗಳು. ನಾಳೆ ಇಲ್ಲವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಮಾನವ ಜನ್ಮ ದೊಡ್ಡದು, ಹುಚ್ಚಪ್ಪಗಳಿರಾ. ಅದಕ್ಕೆ ಹಿರಿಯರು ಹೇಳಿರೋದು "ತಾಳಿದವ ಬಾಳಿಯಾನು" ಎಂದು. ಇಂದಿನ ಕೆಲಸವನ್ನು ಈಗಲೇ ಪೂರೈಸು, ಫಲಾಫೇಕ್ಷೆ ನಾಳೆ (ಭವಿಷ್ಯದಲಿ) ಎದುರು ನೋಡು ಎಂದು.

ಮನೆಯಲಿ ಹಿರಿಯರು ಮರ ನೆಡ್ತಾರೆ, ಅದಕ್ಕೆ ಕಷ್ಟ ಪಟ್ಟು ಹಗಲೂ ರಾತ್ರಿ ಕಾಪಾಡಿ ನೀರು ಸುರೀತಾರೆ. ಅದು ಫಲಾಪೇಕ್ಷೆ ಇಲ್ಲದೆ ಮಾಡುವ ಕಾರ್ಯ. ಆ ನಾಳಿನ ಚಿಂತೆಯೂ ಹಾಗೆ. ಇಂದು ನಿನ್ನ ಕಾರ್ಯ, ಕರ್ತ್ಯವ್ಯಗಳನು ಪೂರ್ಣಗೊಳಿಸು. ನಾಳೆ ನಾ ಮಾಡಿದ ಫಲ ಉಂಬ ಚಿಂತೆ ಬೇಡವಯ್ಯಾ ಎಂದು.

"ನಾಳೆ" ಪ್ರತಿಯೋರ್ವನಿಗೂ ತನ್ನದೇ ಆದ ಅರ್ಥವನ್ನು ಕೊಡುತ್ತದೆ. ಕಷ್ಟ ಬಂದಾಗ ಇನ್ನು ಮುಂದೆ ಹೇಗಪ್ಪಾ ಎಂಬ ಚಿಂತೆ ಅಡಗಿದಲ್ಲಿ, ಸುಖ ಎಂಬುದು ಕ್ಷಣ ಮಾತ್ರದಲಿ ಕಳೆದು ಹೋಗುತ್ತದೆ. ಈ ಜೀವನದ ಕಾಲಚಕ್ರ ಭೂತ-ಭವಿಷ್ಯತ್-ಹಾಗೂ ವರ್ತಮಾನಗಳಿಂದ ಕೂಡಿದೆ. ನಾಳೆ ಇಂದಾಗುವುದು, ಇಂದು ನೆನ್ನೆಯದಾಗುವುದು.

ಬರಲಿರುವ ನಾಳೆ ತರಲಿರುವುದೇನು?
ನಿನ್ನೆ ಇಂದಿನದಲ್ಲ, ಇಂದು ನಾಳೆಯದಲ್ಲ,
ನಿನ್ನೆ ನಾಳೆಯ-ನಡುವೆ- ದೊರಕುವುದು "ಈ ಹೊತ್ತು"
ಅದರ ಸವಿ ಸವಿಯಣ್ಣ ನೀನು.

ಒ೦ದು ಇರುಳು ಕಳೆದು ಇನ್ನೊ೦ದು ಮು೦ಜಾನೆ ಬ೦ದಾಗ... ಒ೦ದು ಕನಸು ಕರಗಿ ಇನ್ನೊ೦ದು ವಾಸ್ತವ ಸು೦ದರವಾಗಿ ಮೂಡಿದ ಹಾಗೆ ಈ ನಾಳೆಯ ನೀರೀಕ್ಷೆ ಎಂಬುದು. ಕನಸಿಗೆ ತಾನು ಕನಸೆ೦ಬ ಅರಿವಿಲ್ಲ; ವಾಸ್ತವಕ್ಕೆ ತಾನು ವರ್ತನಮಾನವೆನ್ನುವ ತಿಳಿವೂ ಇಲ್ಲ. ದಿನ ನಿತ್ಯ ಜೀವನದಲ್ಲಿ ನಿನ್ನೆಗೂ ಇ೦ದಿಗೂ ಯಾವ ವ್ಯತ್ಯಾಸವೂ ಇಲ್ಲ. ನಿನ್ನೆ - ಇ೦ದು ಮತ್ತು ನಾಳೆಯ ನಡುವೆ ಏನಾದರೂ ವ್ಯತ್ಯಾಸವಿದ್ದರೆ ಅದು ನಮ್ಮ ನಮ್ಮ ಮನಸ್ಸು, ಕ್ರಿಯೆ, ಕಾರ್ಯಗಳು.

ಇಂದು-ನಿನ್ನೆ-ನಾಳೆಗಳ ಈ ಕಾಲಚಕ್ರದಿಂದ ಪಲಾಯನ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ ಆದರೂ ಆ ಕಾಲಚಕ್ರದ ತೆಕ್ಕೆಗೆ ಮತ್ತೆ ಮತ್ತೆ ಮರಳಿ ಅಲ್ಲಿಗೇ ತಲುಪುತ್ತೇವೆ. ಈ ಕಾಲವು ಹೀಗೆಯೇ ನಮ್ಮನ್ನು ಸತಾಯಿಸುತ್ತದೆ. ಈ ಕಾಲಚಕ್ರದ ಗರ್ಭದಲಿ "ನಾಳೆ ಎಂಬುದು ಕನಸು ಅದು ನನಸಾಗುವುದೋ ಇಲ್ಲವೋ ಯಾರೂ ಅರಿಯರು". ಇದು ಅರಿತಿದ್ದೂ ನಾಳಿನ ಕನಸುಬೇಕು ಬಾಳಿನುದ್ದಕ್ಕೂ, ಮತ್ತೆ ಆ ನಾಳೆಯ ಕನಸು ಕಾಣಲು.

ನಿನ್ನೆ ನಿನ್ನೆಗೆ ಇಂದು ಇಂದಿಗೆ ನಾಳೆ ನಾಳೆಗೆ ಇಂದು ನಮ್ಮಗೆ ಚಿಂತೆ ಏತಕೆ... ಬಲು ಸುಲಭದ ಮಾತಿದು. ನಾಳಿನ ಚಿಂತೆಯಿಲ್ಲದೆ ಬದುಕಲು ಸಾಧ್ಯವೇ? ಎಲ್ಲರಿಗೂ ಬೇಕು.. ಎಲ್ಲರ ಹಾರೈಕೆಯೂ ಹೌದು ಅದು ನಾಳೆ ಒಳ್ಳೇ ದಿನ, ಶುಭಕಾಲ ಬರುತೈತೆ, ಶುಭಕಾಲ ಬರುತೈತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X