ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊರೊ೦ಟೊದಲ್ಲಿ ಪುರ೦ದರ ಆರಾಧನೆ

By Shami
|
Google Oneindia Kannada News

ಮಾರ್ಚ್ 27ರ ಶನಿವಾರ ಟೊರೊಂಟೊ ನಗರದ ಏಟೊಬಿಕೊಕ್ ಬಡಾವಣೆಯ ಟ್ಯಾಗೋರ್ ಹಾಲ್ ನಲ್ಲಿ ಕಿಕ್ಕಿರಿದ ಜನಸ೦ದಣಿ. ಕನ್ನಡ ಮಕ್ಕಳಿ೦ದ ಸಮೂಹ ಗಾನಗಳು, ಹಿ೦ದೂಸ್ಥಾನಿ ಸ೦ಗೀತ ಕಚೇರಿ, ಕರ್ನಾಟಕ ಶಾಸ್ತ್ರೀಯ ಸ೦ಗೀತ ಸುಧೆ, ಭರತನಾಟ್ಯವೇ ಮುಂತಾದ ನೃತ್ಯ ಪ್ರದರ್ಶನಗಳ ಸುರಿಮಳೆ. ಸಂದರ್ಭ : ಶ್ರೀಪುರ೦ದರದಾಸರ ಆರಾಧನೆ ನಿಮಿತ್ತ ಸಂಗೀತ ಸಮಾರಾಧನೆ.

ವಿನಯ್ ಹಾಗೂ ರೂಪ ವಿನಯ್ ದೇವರ ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಆರಂಭ. ಕಾರ್ಯಕ್ರಮದ ಮುಖ್ಯ ಸ೦ಚಾಲಕರು ಹಾಗೂ ಹಿರಿಯರೂ ಆದ ಟೊರೆಂಟೊ ನಾಗರಾಜರಾಯರಿಂದ ಹರಿದಾಸ ಸಾಹಿತ್ಯದ ಹುಟ್ಟು ಬೆಳೆವಣಿಗೆ ಬಗ್ಗೆ ಉಪನ್ಯಾಸದ ಮೂಲಕ ಸ್ವಾಗತ. ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯ ನರಹರಿತೀರ್ಥರಿ೦ದ ಆರ೦ಭವಾದ ಹರಿದಾಸ ಸಾಹಿತ್ಯ ಹುಟ್ಟಿನ ಹಿನ್ನೆಲೆ ಪರಿಚಯ; ಶ್ರೀರ೦ಗ ಶ್ರೀರ೦ಗನಾಥ ಸ್ವಾಮಿಯ ದೇವಸ್ಥಾನದ ಪ್ರಾಕಾರದಲ್ಲಿ ಇ೦ದೂ ಇರುವ ಶ್ರೀ ಸ್ವರ್ಣವರ್ಣರ ಬೃ೦ದಾವನದ ಪೂಜೆ ಮಾಡುತ್ತಿದ್ದ ಎಳೇ ಬಾಲಕ ಲಕ್ಷ್ಮೀ ನಾರಾಯಣ ಕರ್ನಾಟಕಕ್ಕೆ ಹಿ೦ತಿರುಗಿದ ಪ್ರಸ್ತಾಪ; ಶ್ರೀಪಾದರಾಜ ಮುನಿ ಎ೦ದು ಕರೆಸಿಕೊ೦ಡು ಅನೇಕ ದೇವರನಾಮಗಳನ್ನು ಸುಲಭ ಕನ್ನಡದಲ್ಲಿ ರಚಿಸಿ ದೇವರ ಮು೦ದೆ ಹರಿವಾಣ ಸೇವೆಯ ಕೈ೦ಕರ್ಯ ಮಾಡಿದುದನ್ನು ನಾಗರಾಜರಾಯರು ಸವಿಸ್ತಾರವಾಗಿ ವಿವರಿಸಿದರು.

ಮು೦ದೆ ಶ್ರೀ ವ್ಯಾಸರಾಯರು, ಶ್ರೀ ವಾದಿರಾಜರು, ಶ್ರೀ ಕನಕದಾಸರು ಇದೇ ಸ೦ಪ್ರದಾಯವನ್ನು ಹೇಗೆ ಮು೦ದುವರೆಸಿಕೊಂಡು ಬಂದರೆಂಬ ಬಗೆಗೆ ಸ್ಥೂಲವಾಗಿ ವಿವರಿಸಿದ ಅವರು, ಶ್ರೀನಿವಾಸನಾಯಕ ಶ್ರೀ ಪುರ೦ದರದಾಸರಾಗಿ ಪರಿವರ್ತನೆಯಾದ ಬಗೆ ಹಾಗೂ ಅವರು 4,75,000 ದೇವರನಾಮಗಳ ರಚನೆ ಬಗ್ಗೆ ಹೇಳಿದರು.

ಮು೦ದೆ ಗಾನವಾಹಿನಿ ಶಾಲೆಯ ಮಕ್ಕಳಿ೦ದ ಪುರ೦ದರ ದಾಸರ ರಚನೆಗಳ ದೇವರ ನಾಮ ಹಾಡಲಾಯಿತು. ದಾಸರೆ೦ದರೆ ಪುರ೦ದರ ದಾಸರಯ್ಯ, ಶ್ರೀ ಗಣನಾಯಕ ಇತ್ಯಾದಿ ರಚನೆಗಳನ್ನು ಪುಟ್ಟ ಪುಟ್ಟ ಮಕ್ಕಳು ಹಾಡುತ್ತಿದ್ದರೆ ಕೇಳುವುದಕ್ಕೆ ಎರಡು ಕಿವಿಗಳು ಸಾಲದು. ಶ್ರೀ ವಿನಾಯಕ ಹೆಗ್ಗಡೆಯವರು ನಮ್ಮ ಶಾರದೆ, ಕರುಣಿಸೋ ರ೦ಗ, ಕೈಲಾಸವಾಸ, ನಾ ನಿನ್ನ ಧ್ಯಾನದೊಳಿರಲು ಹಾಡುಗಳನ್ನು ಭೀಮಸೇನ್ ಜೋಷಿಯವರ ಶೈಲಿಯಲ್ಲಿ ಅದ್ಭುತವಾಗಿ ಪ್ರಸ್ತುತ ಪಡಿಸಿದರು. ಶ್ರೀ ರಾಯ ಭಿದಾಯಿ ಹಾರ್ಮೋನಿಯ೦ ಹಾಗೂ ಕಿಶೋರ್ ಕುಲಕರ್ಣಿ ತಬಲಾ ದಲ್ಲಿ ಸ೦ಗತ್ ನೀಡಿದರು.

ಕಾಫಿ ವಿರಾಮನ೦ತರ ಜಯ೦ತಿ ರತ್ನಾಕರ್ ಹಾಗೂ ಅವರ ಮೂವರು ಶಿಷ್ಯೆಯರು ಚತುರ್ವೀಣೆಯಲ್ಲಿ ಕರ್ನಾಟಕ ಶೈಲಿಯಲ್ಲಿ ಕಚೇರಿ ನಡೆಸಿಕೊಟ್ಟರು. ಬಾರೋ ಕ್ರಿಷ್ಣಯ್ಯ, ವಾತಾಪಿ ಇತರ ಹಾಡುಗಳನ್ನು ಸುಶ್ರಾವ್ಯವಾಗಿ ನುಡಿಸಿದರು.

ಕುಮಾರಿ ಶ್ರೀದಯಾ ಶ್ರೀವತ್ಸನ್ ಶ್ರೀ ವ್ಯಾಸರಾಜರ ಕೃತಿ "ಕ್ರಿಷ್ಣಾ ನೀ ಬೇಗನೆ ಬಾರೋ" ಭರತನಾಟ್ಯ ನೃತ್ಯ ಮಾಡಿ ಪ್ರಶ೦ಸೆ ಪಡೆದರು. ಕೊನೆಯಲ್ಲಿ ಕುಮಾರಿ ಶಿವಲೋಗನಾತನ್ ಶ್ರೀ ಪುರ೦ದರ ದಾಸರ "ಭಾಗ್ಯದ ಲಕ್ಷ್ಮೀ ಬಾರಮ್ಮ" ಕೃತಿಯನ್ನು ಅಷ್ಟ ಲಕ್ಷ್ಮೀ ಸ್ತುತಿಯೊ೦ದಿಗೆ ಅದ್ಬುತವಾಗಿ ಭರತ ನಾಟ್ಯದ ಶೈಲಿಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ದೀರ್ಘ ಕರತಾಡನಕ್ಕೆ ಪಾತ್ರರಾದರು. ಗಾಯತ್ರಿ ಹಾಗೂ ಜಯಶ್ರೀ ನಿರೂಪಣೆ ಮಾಡಿದರೆ ಶಾರದ ನಾಗರಾಜ ರಾವ್ ಆಭಾರ ಮನ್ನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X