ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹ ಸೌಧಕ್ಕೆ ಕೆಕೆಎನ್ ಸಿ ಸಿಮೆಂಟು

By * ಮಧು ಕೃಷ್ಣಮೂರ್ತಿ
|
Google Oneindia Kannada News

Madhu Krishnamurthy
ಸ್ಯಾನ್‍ಫ್ರ್ಯಾನ್ಸಿಸ್ಕೊ ಬೇ ಏರಿಯಾದಲ್ಲಿ ಒಂದು ಅಂದಾಜಿನಂತೆ ಸುಮಾರು ಐದು ಸಾವಿರ ಕನ್ನಡಿಗರಿದ್ದಾರೆ. ಈ ಸಮುದಾಯವು ತನ್ನ ಭಾಷೆ, ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಕಾರ್ಯದಲ್ಲಿ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಪಾತ್ರ ಅಗ್ರಮಾನ್ಯವಾದುದು. ಪ್ರತಿವರುಷ ನಾಲಕ್ಕು ಅಥವ ಐದು ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಈ ಕೂಟ ಇತ್ತೀಚಿನ ವರುಷಗಳಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿಯನ್ನು ನಿಭಾಯಿಸುತ್ತ ಬಂದಿದೆ. ಅಂತೆಯೆ ಕನ್ನಡಕೂಟದ ಈ ವರುಷದ ಚಟುವಟಿಕೆಗಳ ಮೊದಲ ಕಾರ್ಯಕ್ರಮ "ಸ್ನೇಹ ಸಪ್ತಮಿ" ಫೆಬ್ರವರಿ 20ರಂದು ಸನ್ನಿವೇಲ್ ದೇವಸ್ಥಾನದಲ್ಲಿ ಜರುಗಿತು.

ಸಾಂಸ್ಕೃತಿಕ ಮತ್ತು ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಆ ದಿನ ಬೇ ಏರಿಯಾದಲ್ಲಿ ಹರಡಿಕೊಂಡಿರುವ ಕನ್ನಡಿಗರ ನಡುವೆ ಸ್ನೇಹ ಮತ್ತು ಬಾಂಧವ್ಯದ ಭದ್ರ ಬೆಸುಗೆ ಹಾಕುವುದು ಸಪ್ತಮಿಯ ಉದ್ದೇಶವಾಗಿತ್ತು. ಸ್ನೇಹಮಯ ವಾತಾವರಣವನ್ನು ಉಂಟುಮಾಡಲು ಅಧ್ಯಕ್ಷರಾದ ರಘು ಹಾಲುರ್ ಮತ್ತು ಇತರ ಪದಾಧಿಕಾರಿಗಳು ಬಹಳ ಶ್ರಮವಹಿಸಿ ದಿನದ ಚಟುವಟಿಕೆಗಳನ್ನು ಆಯೋಜಿಸಿದ್ದರು. ಸದಸ್ಯರನ್ನು ಪ್ರವೇಶ ದ್ವಾರದಲ್ಲಿ ನಗು ಮುಖದೊಂದಿಗೆ ಕೂಟದ ಸ್ವಯಂಸೇವರು ಬರಮಾಡಿಕೊಳ್ಳುತ್ತಿದ್ದರು. ಪ್ರವೇಶ ದ್ವಾರದ ಬಳಿ ಬಹಳ ಸುಂದರವಾಗಿ ಅಲಂಕರಿಸಲ್ಪಟ್ಟ ಪ್ರದರ್ಶನ ಮುದ ನೀಡುವಂತಿತ್ತು.

ಸಭಾಂಗಣದ ಒಳಗೆ ಜನರು ಮನರಂಜನಾ ಕಾರ್ಯಕ್ರಮಗಳನ್ನು ಆನಂದಿಸುತ್ತ ಬಿಡುವಿನ ಸಮಯದಲ್ಲಿ ಇತರರೊಂದಿಗೆ ಒಂದೇ ಮನೆಯ ಸದಸ್ಯರಂತೆ ಉತ್ಸಾಹದಿಂದ ಬೆರೆಯುತ್ತ ಇದ್ದುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದಾದವು. ಕಾರ್ಯಕಾರಿ ಸಮಿತಿಯ ಉತ್ಸಾಹ ಮತ್ತು ಧ್ಯೇಯಗಳು ಒಂದು ಸಂಸ್ಥೆಯ ಸದಸ್ಯರ ಮೇಲೆ ಹೇಗೆ ಉತ್ತಮ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ.

ಕನ್ನಡ ಕೂಟದ ಕಾರ್ಯಕ್ರಮಗಳು ಏಳೆಂಟು ಗಂಟೆಗಳ ಅಡೆ ತಡೆಗಳೊಂದಿಗೆ ಸಾಗುವುದು ಮತ್ತು ಕೆಲ ಸಮಯ ರಾತ್ರಿ 11 ಘಂಟೆಯಾದರೂ ಮುಗಿಯದೆ ಸಭಿಕರಿಗೆ ಬಳಲಿಕೆ ಉಂಟುಮಾಡುವುದು, ಸದಸ್ಯರ ಟೀಕೆಗೆ ಕಾರಣವಾಗಿದೆ. ಸಮಯ ಪಾಲನೆಯನ್ನು ಪರಮ ಧ್ಯೇಯವನ್ನಾಗಿಟ್ಟುಕೊಂಡು ಈ ಬಾರಿ ಕಾರ್ಯಕ್ರಮಗಳ ಸಂಖ್ಯೆ ಮತ್ತು ಕಾಲಾವಧಿ ಹಿತಮಿತವಾಗಿತ್ತು. ಕಾರ್ಯಕ್ರಮದ ನಿರ್ವಹಣೆಯಲ್ಲಿ ಮತ್ತು ನಿರೂಪಣೆಯಲ್ಲಿ ಕಂಡು ಬಂದ ದಕ್ಷತೆ ಮತ್ತು ಅಚ್ಚುಕಟ್ಟುತನ ಮೆಚ್ಚುಗೆ ಗಳಿಸಿತು.

ಪದ್ಮಜ ಕಿಶೋರ್ ಅವರ ಶಿಷ್ಯವೃಂದ ಸುಮಧುವಾರದ ಸಂಗೀತದೊಂದಿಗೆ ದಿನದ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಅನಿತ ಮತ್ತು ತಂಡದ ಯುವತಿಯರು "ಚೆಲುವಯ್ಯ ಚೆಲುವೋ ತಾನಿ ತಂದಾನ" ಪ್ರಸಿದ್ಧ ಜನಪದ ಗೀತೆಗೆ ಬಹಳ ಉತ್ಸಾಹದಿಂದ ನರ್ತಿಸಿದರು. ಹೀಗೆ ನಡೆದ ಸಂಗೀತ ಮತ್ತು ಜನಪದ ನೃತ್ಯದ ನಂತರ ರೀಮಾ ಕಶ್ಯಪ್ ಅವರ ತರಬೇತಿಯಲ್ಲಿ ಮಕ್ಕಳು ಭರತನಾಟ್ಯದ ಶೈಲಿಯಲ್ಲಿ ಕೃಷ್ಣನ ಬಾಲ ಲೀಲೆಯನ್ನೊಳಗೊಂಡ "ಕಾಳಿಂಗ ಮರ್ದನ" ಎಂಬ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು. ಇದಾದ ನಂತರ ಕಿರಣ್ ಮೋಹನ್ ಅವರ ನೇತೃತ್ವದಲ್ಲಿ ಆರೇಳು ಜನರ ಯುವ ತಂಡ "ಮ್ಯಾಡ್ ಆಡ್ಸ್" ಎಂಬ ಕಾರ್ಯಕ್ರಮವನ್ನು ಹುರುಪಿನಿಂದ ನಡೆಸಿಕೊಟ್ಟರು. ಇಂದಿನ ವಿದ್ಯಮಾನಗಳು ಮತ್ತು ಸ್ಥಳೀಯ ವಿಷಯಗಳ ಮೇಲೆ ವಕ್ರ ನೋಟ ಬೀರಿ ಅವುಗಳನ್ನು ಅಣಕ ಮಾಡುತ್ತ ಸಭಿಕರಲ್ಲಿ ನಗೆಯ ಅಲೆಗಳನ್ನು ಚಿಮ್ಮಿಸಿದರು.

ಕಾರ್ಯಕ್ರಮಗಳಲ್ಲಿಯ ವೈವಿಧ್ಯತೆಗೆ ದ್ಯೋತಕವಾಗಿ ಇದಾದ ನಂತರ ಪದ್ಮ ರಾವ್ ಅವರ ನಿರ್ದೇಶನದಲ್ಲಿ "ಮೈಸೂರು ಮಲ್ಲಿಗೆ" ಕಾರ್ಯಕ್ರಮ ಮೂಡಿಬಂದಿತು. ಇತ್ತೀಚೆಗೆ ವಿಧಿವಶರಾದ ಕನ್ನಡ ಸುಗಮ ಸಂಗೀತದ ಪ್ರಮುಖ ಕಲಾವಿದ ಡಾ. ಸಿ ಆಶ್ವಥ್ ಅವರ ಸಂಗೀತ ನಿರ್ದೇಶನದಲ್ಲಿ ದಿವಂಗತ ಕೆಎಸ್ ನರಸಿಂಹಸ್ವಾಮಿ ಅವರ ಖ್ಯಾತ ಪ್ರೇಮಗೀತೆಗಳನ್ನು ಒಳಗೊಂಡ ಚೊಕ್ಕದಾದ ಈ ನಿರೂಪಣೆ ಉತ್ತಮ ಗಾಯನ ಮತ್ತು ಮನಸೆಳೆವ ನಾಟಕೀಯ ತುಣುಕುಗಳೊಂದಿಗೆ ಮೆಚ್ಚುಗೆ ಗಳಿಸಿತು.

"ಸಾಮರಸ್ಯಕ್ಕೊಂದು ಸಲಹೆ" ಹಾಸ್ಯ ನಾಟಕ ಆ ದಿನದ ಕೊನೆಯ ಕಾರ್ಯಕ್ರಮ. ಅನೇಕ ನಾಟಕಗಳನ್ನು ರಚಿಸಿ, ನಟಿಸಿ ಮತ್ತು ನಿರ್ದೇಶಿಸಿ ಪಕ್ವಗೊಂಡಿರುವ ಅಲಮೇಲು ಅಯ್ಯಂಗಾರ್ ಸಭಿಕರ ಅಭಿರುಚಿಯನ್ನು ಚೆನ್ನಾಗಿ ಅರಿತಿದ್ದಾರೆ. ಪುರುಷರ ಮತ್ತು ಮಹಿಳೆಯರ ಗುಣಗಳನ್ನು ಮೊನಚಾದ ಹಾಸ್ಯ ಬಳಸಿ ಅಣಕಿಸುವ ಸಂಭಾಷಣೆ ಇದ್ದ ಈ ನಾಟಕ, ಪ್ರೇಕ್ಷಕರು ತಮ್ಮ ಮನೋದೌರ್ಬಲ್ಯಗಳನ್ನು ಗುರುತಿಸಿಕೊಳ್ಳುವಂತೆ ಮಾಡುವುದರ ಮೂಲಕ ಸಭಿಕರಿಗೆ ಕಚಗುಳಿ ಇಟ್ಟು ಅವರನ್ನು ನಗೆಗಡಲಿನಲ್ಲಿ ಮುಳುಗಿಸಿತು.

ಸತೀಶ್ ಹೆಡ್ಡೆಸೆ ಮತ್ತು ಕಾವ್ಯ ಕುರ್ಬೂರ್ ಅವರು ಕಾರ್ಯಕ್ರಮಗಳನ್ನು ಗ್ರಾಮ್ಯ ಶೈಲಿಯ ಭಾಷೆಯಲ್ಲಿ ನಿರೂಪಿಸಿದರು. ಇತ್ತೀಚಿನ ವರುಷಗಳಲ್ಲಿ ಕನ್ನಡ ಕೂಟದ ಕಾರ್ಯಕ್ರಮಗಳನ್ನು ಸ್ಥಳೀಯ ವ್ಯಾಪಾರಿ ಸಂಸ್ಥೆಗಳು ಪ್ರಾಯೋಜಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ. ಈ ಬಾರಿಯೂ ಈ ಉದ್ದಿಮೆಗಳು ಕಾರ್ಯಕ್ರಮವನ್ನು ಪ್ರಾಯೋಜಿಸವಂತೆ ಈ ಸಮಿತಿ ಪ್ರೇರೇಪಿಸಿದ್ದು ಒಂದು ಹೆಗ್ಗಳಿಕೆ.

ಯಶಸ್ವಿಯಾಗಿ ಜರುಗಿದ ಈ ಕಾರ್ಯಕ್ರಮದ ಕೆಲ ಅಂಶಗಳನ್ನು ಉತ್ತಮಗೊಳಿಸಬಹುದು ಎನಿಸುತ್ತದೆ. ಭಾಷಣಗಳ ಅವಧಿ ಮತ್ತು ಸಂಖ್ಯೆ ಹೆಚ್ಚಾಗದಂತೆ ನೋಡಿಕೊಂಡರೆ ಸಭಿಕರು ಸಂಪೂರ್ಣ ಆಸಕ್ತಿ ಉಳಿಸಿಕೊಳ್ಳುತ್ತಾರೆ. ಕಾರ್ಯಕ್ರಮಗಳ ನಡುವೆ ಕಳೆವ ಸಮಯ ಕಡಿಮೆಯಾಗಬೇಕು. ಸಭಿಕರೂ ಸಹ ಸಾಧ್ಯವಾದಷ್ಟು ನಿಶ್ಯಬ್ದವಾಗಿ ರಂಗದ ಮೇಲೆ ನಡೆಯುವ ಚಟುವಟಿಕೆಗಳನ್ನು ಆಸ್ವಾದಿಸಿದರೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಪಟ್ಟವರನ್ನು ಪ್ರೋತ್ಸಾಹಿಸಿದಂತಾಗುತ್ತದೆ.

ಬೇ ಏರಿಯಾದ ಕನ್ನಡ ಸಮುದಾಯ ಬಹಳ ದೊಡ್ಡದಾಗಿದ್ದರೂ ದಶಕಗಳಿಂದ ಒಟ್ಟಾಗಿ ಕನ್ನಡಕೂಟದ ಚಟುವಟಿಕೆಗಳಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳುತ್ತಿರುವುದು ಬಹಳ ಹೆಮ್ಮೆಯ ವಿಷಯ. ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಸ್ನೇಹ ಸಪ್ತಮಿಯಂತಹ ಕಾರ್ಯಕ್ರಮಗಳ ಪಾತ್ರ ಶ್ಲಾಘನೀಯವಾದುದು.

ಸ್ನೇಹ ಸಪ್ತಮಿ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X