ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಯುಗಾದಿ ಹಬ್ಬ ಆಚರಣೆ

By * ಮಾರುತೀಶ್ ಬಳ್ಳಾರಿ, ಬಾಯ್ಸಿ
|
Google Oneindia Kannada News

Maruteesh Bellary
ಮಂಗಳವಾರ ಮಾರ್ಚ್ ಹದಿನಾರಕ್ಕೆ ಉಗಾದಿ ಹಬ್ಬ ಇದ್ದದ್ದು ಎಲ್ಲರಿಗೂ ಗೊತ್ತಷ್ಟೇ. ಬಾಯ್ಸಿ ನಗರದಲ್ಲಿನ (ಐಡಾಹೋ ರಾಜ್ಯ, ಅಮೆರಿಕಾ) ಕನ್ನಡ ಕೂಟದ ಸದಸ್ಯರೆಲ್ಲ ಒಟ್ಟಿಗೆ ಸೇರಿ ಯುಗಾದಿ ಹಬ್ಬವನ್ನು ಆ ವಾರಾಂತ್ಯದಂದು ಆಚರಿಸಿದೆವು. ಎರಡು ವಾರದ ಮುಂಚೆಯೇ ಶ್ರೀಮತಿ ಮತ್ತು ಶ್ರೀ ಡಾ. ಪ್ರಭು ಅವಂತಿಯವರು ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳನ್ನು ಮಾಡತೊಡಗಿದರು. ಕನ್ನಡಿಗರ ಈಮೈಲ್ ಗಳನ್ನು ಕಲೆ ಹಾಕುವುದು, ಕ್ಲಬ್ ಹೌಸ್ ವಿಚಾರ ಮಾಡುವುದು, ಎಲ್ಲರೂ ಒಟ್ಟಿಗೆ ಸೇರಿದ ಮೇಲೆ ಮಾಡುವುದೇನು ಎನ್ನುವ ಮೊದಲಾದ ತಯಾರಿಗಳನ್ನು ಮಾಡಿಕೊಳ್ಳಲಾಯಿತು. ಯಾವ ಕ್ಲಬ್ ಹೌಸ್‌ಗಳೂ ಲಭ್ಯವಿಲ್ಲದಿದ್ದ ಕಾರಣ ಅವಂತಿಯವರ ಮನೆಯಲ್ಲೇ ಮಾರ್ಚ್ ಇಪ್ಪತ್ತಕ್ಕೆ ಯುಗಾದಿ ಮಾಡುವುದಾಗಿ ನಿರ್ಧರಿಸಲಾಯಿತು.

ನಿಗದಿತ ಶನಿವಾರದಂದು ಅವಂತಿಯವರ ಮನೆಯಲ್ಲಿ ಎಲ್ಲರೂ ಜಮಾಯಿಸಿದೆವು. ನೆರೆದವರೆಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡೆವು. ಕನ್ನಡದಲ್ಲೇ ಪರಿಚಯ ಹೇಳಿರೆಂದು ಕಡ್ಡಾಯ ಮಾಡಿ ಅಕ್ಕಮ ಅವಂತಿಯವರು ಸವಾಲೆಸೆದರೆ, ಎಲ್ಲರೂ ಕನ್ನಡದಲ್ಲೇ ಬಹಳ ಅಭಿಮಾನದಿಂದ ಮಾತನಾಡಿ ಸವಾಲಿಗೆ ಜವಾಬು ನೀಡಿದೆವು. ಮುಂಬೈ, ಶಿವಮೊಗ್ಗ, ಹಾಸನ, ಕೊಲ್ಕತ್ತಾ, ಬಳ್ಳಾರಿ, ಮೈಸೂರು, ಬೆಂಗಳೂರು, ಉತ್ತರ ಕನ್ನಡ ಜಿಲ್ಲೆ, ಉಡುಪಿ, ಹೈದರಾಬಾದ್, ಬೆಳಗಾವಿ, ಹೊಸಪೇಟೆ, ಗುಲ್ಬರ್ಗಗಳೇ ಮೊದಲಾದ ಸ್ಥಳಗಳಿಂದ ಬಂದಿದ್ದ ನಮ್ಮೆಲ್ಲರ ಹುಟ್ಟೂರು, ಬೆಳೆದೂರುಗಳನ್ನು ಹೆಸರಿಸುವಾಗ ನಮ್ಮೆಲ್ಲರ ಕಣ್ಣುಗಳಲ್ಲಿ ತಾಯಿ ನಾಡಿನ ಒಂದು ಮಿಂಚು ಕಾಣಿಸಿಕೊಂಡಿತ್ತು.

ಮುಂದೆ ಪಂಚಾಂಗ ಪಠಣ ಕಾರ್ಯಕ್ರಮವಿದ್ದಿತು. ಪ್ರಭಾ ಭಟ್ ಹಾಗೂ ಅರ್ಚನಾ ಅವರು ಈ ವರ್ಷದ ರಾಶಿ ಫಲವನ್ನು ಸ್ಪಷ್ಟವಾಗಿ ಓದಿ ಕೇಳಿಸಿದರು. ಮೇಷದಿಂದ ಹಿಡಿದು ಮೀನದವರೆಗೆ ಯಾವ ರಾಶಿಗೆ ಧನ ಪ್ರಾಪ್ತಿ, ಯಾರಿಗೆ ಖರ್ಚು, ಉದ್ಯೋಗ ಬದಲಾವಣೆ, ಕಛೇರಿಯಲ್ಲಿ ಕಿರುಕುಳ, ವಿವಾಹ ಯೋಗ (ಅವಿವಾಹಿತರಿಗೆ ಮಾತ್ರ ಎನ್ನುವ ಫುಟ್ ನೋಟ್ ನೊಂದಿಗೆ) ಹಾಗೂ ಯಾರಿಗೆ ಸಂತಾನ ಯೋಗ ಎಂಬುದನ್ನು ವಿಷದವಾಗಿ ಹೇಳಿ ಪಂಚಾಂಗ ಶ್ರವಣದ ಮೂಲಕ ವಿಕೃತಿನಾಮ ಸಂವತ್ಸರದ ಭವಿಷ್ಯವಾಣಿ ಕೇಳಿಸಿಕೊಟ್ಟರು.

ನಮ್ಮ ಯುಗಾದಿ ಹಬ್ಬದ ಕೆಲ ಫೊಟೊಗಳು ಇಲ್ಲಿವೆ.

"ಪಾಟ್‌ಲಕ್‌ನ" ಮುಖಾಂತರ ಎಲ್ಲರ ಮನೆಗಳಲ್ಲಿ ಸಿದ್ಧವಾಗಿ ಬಂದಿದ್ದ ರುಚಿ ರುಚಿಯಾದ ಅಡುಗೆ ಪದಾರ್ಥಗಳು ನೆರೆದಿದ್ದವರ ಕಣ್ಣು, ಮನ ಹಾಗೂ ಉದರ ತಣಿಸಿದವು. ಕೋಸಂಬ್ರಿ, ಚಪಾತಿ ಕೂರ್ಮ, ಶ್ಯಾವಿಗೆ ಪಾಯಸ, ಚಿತ್ರಾನ್ನ, ಈರುಳ್ಳಿ ಪಕೋಡ, ಪ್ಲೇನ್ ಬಿರಿಯಾನಿ, ಸ್ಪೆಷಲ್ ಮಸಾಲೆ ಭರಿತ ಸಾರು ಅನ್ನ ಹಬ್ಬದ ಸಂತೋಷವನ್ನು ಹೆಚ್ಚಿಸಿದವು. ಅಮೆರಿಕಾದಲ್ಲಿ ಬೇವಿನ ಹೂ ಸಿಗದಿದ್ದರೂ ಸಹ ಪಲ್ಲವಿಯವರು ತಮ್ಮ "ಇನ್ನೊವೇಟಿವ್ ಐಡಿಯಾ" ಬಳಸಿ ಸ್ವಾದಿಷ್ಟ ಬೇವು ಬೆಲ್ಲ ತಯಾರಿಸಿದ್ದು ಶ್ಲಾಘನೀಯವಾಗಿತ್ತು.

ಭೋಜನದ ನಂತರ ಅವಂತಿಯವರ "ಬಿಗ್ ಸ್ಕ್ರೀನ್" ಟಿ.ವಿ.ಯಲ್ಲಿ ಕನ್ನಡ ಸಿನಿಮಾ ನೋಡಿದೆವು. ಹತ್ತು ಹನ್ನೆರಡು ಕನ್ನಡ ಡಿ.ವಿ.ಡಿ ಗಳಲ್ಲಿ ಯಾವ ಸಿನಿಮಾ ನೋಡಬಹುದು ಅಂತ ಓಟು ಹಾಕುವುದರ ಮೂಲಕ ನಿರ್ಧರಿಸಿ (ಈಗ ಬಿ.ಬಿ.ಎಂ.ಪಿ ಚುನಾವಣೆ ಇದೆ ನೋಡಿ, ಅದರ ಎಫೆಕ್ಟು ), "ಗಣೇಶನ ಮದುವೆ" ಸಿನಿಮಾ ಆರಿಸಿದೆವು. ದೊಡ್ಡವರು ಸಿನಿಮಾ ನೋಡುತ್ತಿದ್ದರೆ ಮಕ್ಕಳು ಪಿಯಾನೊ, ಕೇರಂಗಳೊಂದಿಗೆ ಹಾಗೂ ಕುಮಾರಿ ಮಹಿಮಾಳ ಸಾಕು ಪಕ್ಷಿಗಳೊಂದಿಗೆ ಆಟ ಆಡಿಕೊಂಡರು.

ಕೆಲಸದ ನಿಮಿತ್ತ ನಾವೆಲ್ಲ ನಮ್ಮ ನಮ್ಮ ಊರುಗಳನ್ನು ಬಿಟ್ಟು ಈ ಬಾಯ್ಸಿ ನಗರದಲ್ಲಿ ಬಂದಿದ್ದು, ಯುಗಾದಿ ಹಬ್ಬದ ನೆಪದಲ್ಲಿ ಕನ್ನಡದ ಹೆಸರಡಿಯಲ್ಲಿ ಈ ದಿನ ಸಂಧಿಸಿದ್ದು ಬಲು ವಿಶೇಷವಾಗಿತ್ತು. ಈ ಕೂಡುವಿಕೆಗೆಗಾಗಿ ಶ್ರಮವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿ ನಾವುಗಳೆಲ್ಲ ನಮ್ಮ ನಮ್ಮ ಮನೆಗಳ ದಾರಿ ಹಿಡಿದಿರಲು, ಅನಂತನಾಗ್ ಮತ್ತು ವಿನಯಾ ಪ್ರಸಾದ್ ರ "ಗಣೇಶನ ಮದುವೆ" ಡೈಲಾಗುಗಳು ತಲೆಯಲ್ಲಿ ಮರುಕಳಿಸಿ ನಾವು ಇನ್ನೂ ನಗುತ್ತಲಿದ್ದೆವು ಎಂಬಲ್ಲಿಗೆ ನಮ್ಮ ಬಾಯ್ಸಿ ಕನ್ನಡ ಸಂಘದ ವಿಕೃತಿನಾಮ ಯುಗಾದಿ ಹಬ್ಬ ಪ್ರಸಂಗದ ವರದಿ ಸಮಾಪ್ತವಾದುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X