ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇ ಏರಿಯಾಗೆ ಬೃಂದಾವನ ತಂದ ಗೋಕುಲ ನಿರ್ಗಮನ

By * ಪೂರ್ಣಿಮಾ ರಾಮಪ್ರಸಾದ್, ಬೇ ಏರಿಯಾ
|
Google Oneindia Kannada News

Gokula Nirgamana - Dance drama in Brindavana
ಒಂದು ತಂಪಾದ ರಾತ್ರಿ ಅದೇನೋ ಯೋಚಿಸುತ್ತ ಮಲಗಿದ್ದಾಗ, ಇದ್ದಕ್ಕಿದ್ದ ಹಾಗೇ ಇಂಪಾದ ಕೊಳಲಗಾನವು ರಸಿಕ ಕವಿಯನ್ನು ಎಚ್ಚರಗೊಳಿಸಿತು. ಅದೇನೆಂದು ಸ್ವಲ್ಪ ಗಮನಿಸಿದಾಗ, ಅದು ಸ್ವತಃ ಪರಮಾತ್ಮನೇ ನುಡಿಸುತ್ತಿರುವ ಹಾಗೆ ಗೋಚರವಾಯಿತು. ಹಾಗೇ ಕವಿಯು ತಾವೇ ಗೊಲ್ಲನಾಗಿ, ರಾಧೆಯಾಗಿ ಯೋಚಿಸುತ್ತ ಹೋದಂತೆ ಇಡೀ ಗೋಕುಲವೇ ಕಣ್ಣಮುಂದೆ ಬಂದು ಬಿಟ್ಟಿತು. ರಾಧೆ ಮತ್ತು ಗೋಪಿಕೆಯರು ಸಂತೋಷದಿಂದ ಕುಣಿಯುತ್ತ 'ಬಾ ಸಖಿ ಬೃಂದಾವನಕೆ, ಆನಂದ ನಿಕೇತನಕೆ' ಎಂದು ಹಾಡುತ್ತ, ನರ್ತಿಸುತ್ತ ಕಣ್ಣ ಮುಂದೆ ಬಂದಾಗ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಕನ್ನಡ ಕೂಟ ಹಾಗು ಸೌತ್ ಇಂಡಿಯ ಫೈನ್ ಆರ್ಟ್ಸ್ ಬಾಂಧವರೆಲ್ಲರೂ ಬೃಂದಾವನಕ್ಕೆ ನಡೆದೇಬಿಟ್ಟರು.

ಅಂದು ಲಾಸ್ ಅಲ್ಟೋಸ್ ನಲ್ಲಿರುವ ಫುಟ್‌ಹಿಲ್ ಕಾಲೇಜಿನಲ್ಲಿ ಕನ್ನಡದ ಶ್ರೇಷ್ಠ ಕವಿ ಪದ್ಮಶ್ರಿ ಡಾ ಪು.ತಿ.ನರಸಿಂಹಾಚಾರ್ ಅವರ ಅತ್ಯಂತ ಶ್ರೇಷ್ಠ ಗೀತರೂಪಕವಾದ 'ಗೋಕುಲ ನಿರ್ಗಮನ'ಕ್ಕೆ ರಂಗಮಂದಿರವು ಸಜ್ಜಾಗಿತ್ತು. ಇದನ್ನು ಬಹಳ ದೊಡ್ಡ ಪ್ರಮಾಣದಲ್ಲಿ ನಿರ್ಮಾಪಿಸಿದವರು ಸ್ಥಳೀಯ ಹೆಸರಾಂತ ನಾಟಕಕಾರ್ತಿ, ವಾಗ್ಮಿ ಅಲಮೇಲು ಅಯ್ಯಂಗಾರ್ ಅವರು ಮತ್ತು ಪ್ರಸ್ತುತಪಡಿಸಿದವರು ಸೌತ್ ಇಂಡಿಯ ಫೈನ್ ಆರ್ಟ್ಸ್ ಸಂಸ್ಥೆ. "ತೊಟ್ಟಿಲ ಹಸುಗೂಸ ಮರೆ, ಪಕ್ಕದ ಗಂಡನ ತೊರೆ, ಬೃಂದಾವನಕೆ ತ್ವರೆ...." ಈ ಅಮರ ಗೀತೆಯನ್ನು ಕೇಳುತ್ತ ಬೆಳೆದವರಿಗೆ ಬೃಂದಾವನದ ಒಂದು ದೃಶ್ಯ ರಂಗದ ಮೇಲೆ ಬಂದಾಗ ಎಲ್ಲವನ್ನು ಮರೆತು ತಾವೂ ನಾಟಕದ ಒಂದು ಪಾತ್ರವಾಗಿ ಹೋಗುವಂತೆ ಮಾಡಿತು.

ಕೃಷ್ಣನ ಕೊಳಲಿನ ಗಾನಕೆ ತಲೆದೂಗದವರಾರು? ಗೊಲ್ಲರು, ಗೋಪ ಬಾಲ, ಬಾಲೆಯರು ತಮ್ಮ ತಮ್ಮ ಕೆಲಸಗಳನ್ನು ಬದಿಗೊತ್ತಿ, ಕೆಲಸವನ್ನು ಬಿಟ್ಟು ಕೇಳುತ್ತ ಕೂರುವರು. ಕೃಷ್ಣನಿಗಾಗಿ ಕಾಯುತ್ತ ರಾಧೆಯು ಸಖಿಯರೊಡನೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಮುರಲೀಧರನ ವೇಣುವಾದನ ಕೇಳಿಸಿದರೂ ಅವನು ಮಾತ್ರ ಕಾಣಿಸುತ್ತಿಲ್ಲವಲ್ಲ, ಅವನೆಲ್ಲಿ ಎಂದು ಯೋಚಿಸುತ್ತ ತನ್ನ ಸಖಿ ನಾಗವೇಣಿಯಲ್ಲಿ ತನ್ನ ಮನದ ಇಂಗಿತವನ್ನು ತೋಡಿಕೊಳ್ಳುತ್ತಾಳೆ. ತಾವರೆ ಕಂಗಳ ತನ್ನಿನಿಯನು ಬಂದನೇ ಎಂದು ಹಾತೊರೆಯುತ್ತಿರುವಾಗ, ಇನ್ನು ಕಾಯಿಸುವುದು ಸಲ್ಲದೆಂದು ಮಾಧವನು ರಾಧೆಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ರಾಧೆಯು ನಾಚಿಕೆ ಸಂತೋಷಗಳಿಂದ ಅವನನ್ನು ಬರಮಾಡಿಕೊಳ್ಳುತ್ತಾಳೆ. ಅದೇಕೋ ಅವಳಿಗೆ ತಾನೆಷ್ಟು ಹತ್ತಿರವಿದ್ದರೂ ವಿಧಿಯು ತಮ್ಮನ್ನು ದೂರ ಮಾಡಿಬಿಡುವುದೇ ಎಂಬ ಅನುಮಾನವು ಸತತವಾಗಿ ಕಾಡುತ್ತಿರುತ್ತದೆ. ರಾಧೆಯು ತನ್ನ ಮಾಧವನ ಸನ್ನಿಧಿಯಲ್ಲಿ ಮೈ ಮರೆತು ಮನ ತಣಿಯುವಷ್ಟು ನರ್ತಿಸಿ ಆನಂದಿಸುವುದನ್ನು ಗೋಪಿಕೆಯರೆಲ್ಲರು ಸಂತಸದಿಂದ ನೋಡಿ ಹಿಗ್ಗುವರು. ತಾವೆಲ್ಲರೂ ಕೃಷ್ಣನನ್ನು ಪ್ರೀತಿಸಿದರೂ ರಾಧೆಯ ಬಗ್ಗೆ ಯಾರಿಗೂ ಯಾವ ಅಸೂಯೆಯೂ ಇಲ್ಲ, ಅವಳಿಂದಲಾದರೂ ತಮಗೆ ತಮ್ಮ ಇನಿಯನ ಸಂಗ ಸಿಗುವುದಲ್ಲ ಎಂಬ ಸಾರ್ಥಕ ಭಾವನೆ. ರಾಧೆಗಾದರೂ ಅವರೆಲ್ಲ ಎಲ್ಲಿ ತನ್ನ ಮಾಧವನನ್ನು ತನ್ನಿಂದ ದೂರ ಮಾಡುವರೋ ಎಂಬ ಸಂದೇಹವು ಕಿಂಚಿತ್ತೂ ಇರಲಿಲ್ಲ. ಗೆಳತಿಯರನ್ನೆಲ್ಲ ಕೂಡಿಸಿಕೊಂಡು ತನ್ನಿನಿಯನಿಗೆ ಆರತಿ ಮಾಡುವಳು. ಬೃಂದಾವನದ ಗೊಲ್ಲ ಬಾಲಕರು ತಮ್ಮ ಗೆಳೆಯನ ಆನಂದದಲ್ಲಿ ಪಾಲ್ಗೊಳ್ಳುತ್ತ ಹಿಗ್ಗಿ ಕುಣಿದಾಡುವರು. ಬೃಂದಾವನದ ವಯೋವೃದ್ಧರೂ ಗೋವಿಂದನ ಕೊಳಲು ಕೇಳಿದರೆ ತಮ್ಮ ಮುಪ್ಪು ಸಾರ್ಥಕವಾಗುವುದೆಂದು ಭಾವಿಸಿದ್ದರು.

ಹೀಗೆ ರಾಧಾ-ಮಾಧವರ ರಾಸ ಕ್ರೀಡೆ, ಪ್ರಣಯ ಇತ್ಯಾದಿ ಮುಗಿಯದಿರಲಿ ಎಂದು ಎಲ್ಲರೂ ಯೋಚಿಸುತ್ತಿರುವಾಗ, ಅತ್ತ ಮಧುರೆಯಿಂದ ಅಕ್ರೂರನ ಆಗಮನವಾಗುತ್ತದೆ. ಅಕ್ರೂರನು ಕೃಷ್ಣ ಹಾಗು ಬಲರಾಮರನ್ನು ಬಿಲ್ಲ ಹಬ್ಬಕ್ಕೆಂದು ಮಧುರೆಗೆ ತೆರಳಲು ಆಮಂತ್ರಿಸುತ್ತಾನೆ. ಮುಂದೆ ಕೃಷ್ಣನಿಂದ ಜಗದೋದ್ಧಾರವಾಗಬೇಕೆಂಬುದು ತಿಳಿದಿರುವ ಬಲರಾಮನು ಅವನನ್ನು ಕೊಳಲು ಬಿಟ್ಟು ತನ್ನೊಡನೆ ಮಧುರೆಗೆ ನಡೆಯಲು ಆದೇಶಿಸುತ್ತಾನೆ. ಆಗ ಕೃಷ್ಣನು ಬೃಂದಾವನದ ತನ್ನ ಸ್ನೇಹಿತರಿಗೆ ತನ್ನ ನೆನಪಿಗಾಗಿ ತನ್ನ ಕೊಳಲನ್ನು ಕೊಟ್ಟು, ಮತ್ತೆ ಬರುವೆನಂದು ತಿಳಿಸಿ ಹೊರಟು ಹೋಗುತ್ತಾನೆ. ಇದು ತಿಳಿದ ರಾಧೆಯ ಸಂಕಟಕ್ಕೆ ಕೊನೆ ಮೊದಲಿಲ್ಲದಂತಾಗುತ್ತದೆ. ಸಖಿಯರೆಲ್ಲರು ಅವಳನ್ನು ರಮಿಸಿ, ಅವನ ಕೊಳಲನ್ನು ಕೊಟ್ಟು, ಅದೇ ಅವನ ನೆನಪಿನ ಸಂಕೇತವೆಂದು ಸಂತೈಸುವಲ್ಲಿಗೆ ನಾಟಕವು ಕೊನೆಗೊಳ್ಳುತ್ತದೆ.

ಈ ಗೀತರೂಪಕವನ್ನು ನಿರ್ದೇಶಿಸಿ, ನೃತ್ಯ ಸಂಯೋಜಿಸಿ, ರಾಧೆಯ ಪಾತ್ರದಲ್ಲಿ ರಂಜಿಸಿದವರು ಬೇ ಏರಿಯಾದ ನುರಿತ ಭರತನಾಟ್ಯ ನೃತ್ಯ ಕಲಾವಿದೆ ಗಾರ್ಗಿ ಪಂಚಾಂಗಂ. ''ಬರುತಿಹನೇ ನೋಡೆ ವಾರಿಜ ಲೋಚನ, ಬರುವನೆ ಇತ್ತೆಡೆ ಪೇಳು ನನ್ನಾಣೆ'' ಎಂದು ತನ್ನ ಪ್ರಿಯತಮ ಬರಲಿಲ್ಲವಲ್ಲ ಎಂದು ಕಾತುರ ವ್ಯಕ್ತಪಡಿಸುವುದಾಗಲಿ, ಮುಟ್ಟಿಕೊಂಡರೂ ದೂರದೊಳಿಹನು .. '' ಎಂಬಲ್ಲಿ ಮುನಿಸು ಮತ್ತೆ ನಾಚಿಕೆಯನ್ನು ಸೂಸುತ್ತ ನರ್ತಿಸುವುದಾಗಲಿ, ಗಾರ್ಗಿಯವರ ಪ್ರಬುದ್ಧ ಅಭಿನಯವು ಜನರನ್ನು ಮೂಕವಿಸ್ಮಿತರನ್ನಾಗಿಸಿತು. ಗೋಕುಲದಿಂದ ಕೃಷ್ಣನ ನಿರ್ಗಮನವಾದ ವಿಷಯ ತಿಳಿದಾಗ 'ಹಾ, ಹೊರಟನೇ, ನೆನೆದನೇ, ನನ್ನ ನೆನೆದನೇ'' ಭರತನಾತ್ಯದು ಅಳುತ್ತಾ, ವಿಷಾದಿಸುತ್ತ ಅವನನ್ನು ನೆನೆಯುತ್ತ ಕುಳಿತ ರಾಧೆಯ ಜೊತೆಯಲ್ಲಿ ದುಃಖಿಸಿದವರು ಆಕೆಯ ಸಖಿಯರಷ್ಟೇ ಅಲ್ಲದೆ, ಅಲ್ಲಿ ನೆರೆದ ಪ್ರೇಕ್ಷಕರೆಲ್ಲರ ಕಣ್ಣುಗಳು ತೇವವಾಗಿದ್ದವು ಅಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲವೇ ಅಲ್ಲ.

ಈಕೆ ಏನು ದೇವತೆಯೋ, ಇವಳೇ ರಾಧೆಯೋ, ಇವಳು ನಿಜವೋ, ಇಲ್ಲ ಮಾಯೆಯೋ ತಿಳಿಯದೇ ಹೋಯಿತು. ಗಾರ್ಗಿಯವರ ಸಮಕ್ಕೆ ನೃತ್ಯಾಭಿನಯವನ್ನು ಪ್ರದರ್ಶಿಸಿ ಕೃಷ್ಣನ ಪಾತ್ರವನ್ನು ಸಮರ್ಪಕವಾಗಿ ವಹಿಸಿದವರು ಮೋಹಕ ನೃತ್ಯಕಲಾವಿದೆ ಪುಷ್ಪಾ ರಾಮಾನುಜ ಅವರು. ರಾಧಾ-ಮಾಧವರ ಜೊತೆಗೆ ನರ್ತಿಸಿದ ಗೋಪ ಗೋಪಿಕೆಯರು ಕಥೆಯ ಓಟಕ್ಕೆ ಸರಿಹೊಂದುವ ಕೋಲಾಟ, ರಾಸ ಕ್ರೀಡೆ, ದೀಪಾರತಿ, ಇತ್ಯಾದಿ ನೃತ್ಯಗಳನ್ನು ಸುಂದರವಾಗಿ ಸಮರ್ಪಿಸಿದರು. ಎಲ್ಲಾ ಕಲಾವಿದರೂ ನೃತ್ಯ ನಾಟಕಗಳನಲ್ಲಿ ಪರಿಣತಿ ಪಡೆದಿದ್ದು, ನೃತ್ತ ಮತ್ತು ಅಭಿನಯವನ್ನು ಪಕ್ವವಾಗಿ ತೂಗಿಸಿದರು. 'ಕೊಳಲನೂದು ಗೋವಿಂದ' ಎನುವ ಹಾಡಿನ ಮೂಲಕ ಗೋಕುಲದ ಹಿರಿಯರು ಕೃಷ್ಣನನ್ನು ಕೊಳಲನ್ನೂದುತ್ತ. ತಮ್ಮ ಮುಪ್ಪಿನ ಸಂಕಟಗಳನ್ನು ದೂರಾಗಿಸು ಎನ್ನುತ್ತಿರುವಾಗಲಂತೂ, ನೋಡುಗರ ಕಣ್ಣು ಮಂಜಾಗಿದ್ದರೆ ಆಶ್ಚರ್ಯವೇ ಇಲ್ಲ! ಅಕ್ರೂರನ ಪಾತ್ರವನ್ನು ಸ್ಥಳೀಯ ಹವ್ಯಾಸಿ ಯಕ್ಷಗಾನ ಕಲಾವಿದರಾದ ಅಶೋಕ್ ಉಪಾಧ್ಯ ಅವರು ಸುಂದರವಾಗಿ ನಿರ್ವಹಿಸಿದರು.

ಈ ನೃತ್ಯ ರೂಪಕಕ್ಕೆ ಸಮರ್ಪಕವಾದ ಗೋಕುಲದ ಒಂದು ದೃಶ್ಯವನ್ನು ರಂಗದ ಮೇಲೆ ತೋರಿಸಿದ ಶ್ರೀವತ್ಸ ದುಗ್ಲಾಪುರ ಹಾಗು ಸೌಜನ್ಯ ಕೇಣಿಯವರ ಕಲ್ಪನೆ ಎಲ್ಲರ ಮನಸೂರೆಗೊಂಡಿತು. ಎಲ್ಲಾ ಕಲಾವಿದರ ವಸ್ತ್ರಾಲಂಕಾರ ಮತ್ತು ಪ್ರಸಾಧನ ಸೊಗಸಾಗಿದ್ದು ಕಣ್ಮನಗಳನ್ನು ತಣಿಸಿತು. ಸುಂದರವಾದ ಬೆಳಕಿನ ಸಂಯೋಜನೆ ಪ್ರತಿ ದೃಶ್ಯಕ್ಕೂ, ನೃತ್ಯಕ್ಕೂ ಪೂರಕವಾಗಿದ್ದು, ಕಲಾವಿದರ ಅಭಿನಯವನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾಯಿತು.

ಇಷ್ಟು ಸುಂದರವಾದ ನೃತ್ಯರೂಪಕಕ್ಕೆ ಕಿರೀಟವಿಟ್ಟಂತೆ ಇದ್ದ ಸಂಗೀತ ಸಂಯೋಜನೆಯ ಬಗ್ಗೆ ಹೇಳಲೇಬೇಕು. ಈ ರೂಪಕಕ್ಕೆ ಸಂಗೀತ ನಿರ್ದೇಶನ ಮಾಡಿದವರು ಶುಭಪ್ರಿಯ ಶ್ರೀವತ್ಸನ್ ಹಾಗು ಅವರ ಪತಿ ಹೆಮ್ಮಿಗೆ ಶ್ರೀವತ್ಸನ್. ರಾಧಾ-ಕೃಷ್ಣರಂತಿರುವ ಈ ದಂಪತಿಗಳು ರಾಧಾ ಕೃಷ್ಣರಿಗೆ ಹಾಡಿ ಪ್ರತಿಯೊಂದು ರಸವನ್ನೂ ಹಾಡಿನಲ್ಲಿ ತೋರಿಸಿ ನಾಟ್ಯಕ್ಕೂ, ಅಭಿನಯಕ್ಕೂ ಮೆರಗು ತಂದುಕೊಟ್ಟರು. ಜೊತೆಯಲ್ಲಿ ಹಾಡಿದವರು ಪ್ರಿಯ ಪರಮೇಶ್ವರನ್, ಗಾಯತ್ರಿ ಅವ್ವಾರಿ, ಅನಿಲ್ ನರಸಿಂಹ, ಕಾರ್ತಿಕ್ ಗೋಪಾಲರತ್ನಮ್ ಹಾಗು ಪುಟಾಣಿ ರಾಮ ನಾರಾಯಣ ಶ್ರೀವತ್ಸನ್.

ಗೀತೆಗಳಿಗೆ ಕವಿಯು ತಮಗೆ ಸಮರ್ಪಕವೆನಿಸಿದ ರಾಗಗಳನ್ನು ಸಂಯೋಜಿಸಿಕೊಂಡೇ ಹಾಡಿಕೊಂಡು ಬರೆದಿದ್ದರಂತೆ. ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧವಾದ ನಾಟ, ಶಂಕರಾಭರಣ, ಪೂರ್ವಿಕಲ್ಯಾಣಿ, ನಾಟಕುರಂಜಿ ಮೊದಲಾದ ರಕ್ತಿ ರಾಗಗಳನ್ನೂ, ಹಿಂದೂಸ್ತಾನಿ ಸಂಗೀತದ ಪ್ರಭಾವದಿಂದ ಬಂದಿರುವ ಬಾಗೇಶ್ರೀ, ಝಂಜೂಟಿ ಮೊದಲಾದ ರಾಗಗಳೇ ಅಲ್ಲದೆ, ತಮ್ಮ ಕಲ್ಪನೆಯಲ್ಲೇ ಹುಟ್ಟಿದ ಹೊಸ ರಾಗಗಳನ್ನೂ ಕೂಡ ಪುತಿನ ಅವರು ಈ ಗೀತರೂಪಕದಲ್ಲಿ ಬಳಸಿದ್ದಾರೆ. ಈವತ್ತಿನ ಪ್ರದರ್ಶನವನ್ನು ಅವರಿದ್ದು ನೋಡಿದ್ದರೆ ಬಹುಶಃ ತಮ್ಮ ಕನಸಿನಲ್ಲಿ ಬಂದ ಗೋಕುಲ ಇದೇ ಇರಬೇಕು, ತಾವು ಯೋಚಿಸಿಕೊಂಡ ರಾಧೆ ಇವಳೇನೆ ಮತ್ತು ಕೊಳಲೂದಿದ ಗೊಲ್ಲ ಇಲ್ಲೇ ಇರುವನು ಎಂದೆನಿಸುತ್ತಿತ್ತೇನೋ.

ಕೃಷ್ಣನಿಗೆ ಕೊಳಲುವಾದನ ನೀಡಿದವರು ಪ್ರತಿಭಾವಂತ ಕೊಳಲುವಾದಕ ಮೋಹನ್ ರಂಗನ್ ಅವರು. ಮೃದಂಗ ವಾದನ ನಾರಾಯಣನ್ ನಟರಾಜನ್ ಅವರದ್ದಾಗಿದ್ದು, ವೀಣಾವಾದನ ಮಹಿಧರ್ ತಿರುಮಲ, ಪಿಟೀಲು ಅಜಯ್ ನರಸಿಂಹ, ತಬಲ ವಾದನ ರವಿ ಗುಟಾಲ ಅವರದ್ದಾಗಿತ್ತು. ನೃತ್ತಕ್ಕೆ ನಟುವಾಂಗವನ್ನು ಒದಗಿಸಿದವರು ಚಂದನ ಕೃಷ್ಣಮೂರ್ತಿ ಅವರು. ಕೃಷ್ಣ ಗೋಪಿಕೆಯರ ರಾಸಕ್ರೀಡೆಯ ಸಂದರ್ಭಕ್ಕೆ ಅತಿ ಸೂಕ್ತವಾಗಿದ್ದ, ಈ ಸಂಗೀತ ತಂಡದ ಹೊಸ ಸೃಷ್ಟಿಯಾಗಿದ್ದ, ರಾಗಮಾಲಿಕೆಯಲ್ಲಿ ಸಂಯೋಜಿಸಿದ್ದ ಚುರುಕಾದ ಜತಿಸ್ವರವು ವಿಶೇಷವಾಗಿ ಮನಸೆಳೆಯಿತು.

ನಾಟಕವು ಮುಗಿಯುತ್ತಿದಂತೆ ಗೋಕುಲದಲ್ಲಿ ನಡೆದಾಡಿದ ಆ ಪರಮಾತ್ಮನ ಪಾದಾರವಿಂದಕ್ಕೆ 'ಶರಣೆನುವೆಮ್ ಶರಣೆನುವೆಮ್' ಎನ್ನುತ್ತ ಈ ಕಾರ್ಯಕ್ರಮವನ್ನು ರಂಗದ ಮೇಲೆ ತರಲು ದುಡಿದವರೆಲ್ಲ ರಂಗದ ಮೇಲೆ ಬಂದಾಗ ಕರತಾಡನದ ಸದ್ದು ಮುಗಿಲೇರಿತು. ಪ್ರೇಕ್ಷಕರೆಲ್ಲ ಎದ್ದು ನಿಂತು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು. ಕೊನೆಯಲ್ಲಿ ಈ ನೃತ್ಯರೂಪಕದಲ್ಲಿ ಪಾಲ್ಗೊಂಡ ಹತ್ತರಿಂದ ಎಂಭತ್ತಕ್ಕೂ ಹೆಚ್ಚು ವಯಸ್ಸಿನ ಎಲ್ಲ ಕಲಾವಿದರನ್ನು ಅಲಮೇಲು ಅಯ್ಯಂಗಾರ್ (ಮೇರುಕವಿ ಪು.ತಿ.ನ ಅವರ ಸುಪುತ್ರಿ) ಅಭಿಮಾನದಿಂದ ಪರಿಚಯಿಸಿದರು. ಪುತಿನ ಅವರು ತಮ್ಮ ಪತ್ನಿಗೆ ಹೇಳುತ್ತಿದ್ದ "ಹಾಡೆಲ್ಲ ನಿನಗಿರಲಿ, ಪಾಡು ನನಗಿರಲಿ" ಅನ್ನುವಂತೆಯೇ, ತಮ್ಮ ಪತಿ ತಿರುನಾರಾಯಣ ಅಯ್ಯಂಗಾರ್ ಅವರು ಹೇಗೆ ನಿರ್ಮಾಣದ ಎಲ್ಲ ಹೆಜ್ಜೆಗಳಲ್ಲೂ ತಮಗೆ ಬೆನ್ನೆಲುಬಾಗಿ ನಿಂತು, ಈ ರೂಪಕವನ್ನು ರಂಗಕ್ಕೆ ತರುವಾಗಿನ ಎಲ್ಲ ತರಹದ ಕೆಲಸ-ಕಾರ್ಯಗಳನ್ನೂ ಸರಿತೂಗಿಸಿಕೊಂಡು ಹೋದರೆಂಬುದನ್ನೂ ಅಲಮೇಲು ಅವರು ವಿಶೇಷವಾಗಿ ಸ್ಮರಿಸಿದರು. ಮಗಳು ತಂದೆಗೆ ಸಲ್ಲಿಸುವ ಅತ್ಯಂತ ಶ್ರೇಷ್ಠ ಶ್ರದ್ಧಾಂಜಲಿಯನ್ನು ಈ ರೂಪದಲ್ಲಿ ಅಲಮೇಲು ಅವರು ಅರ್ಪಿಸಿ ಆ ಹಿರಿಯರ ಆತ್ಮವನ್ನು ತೃಪ್ತಿಪಡಿಸಿದರು ಎಂದರೆ ಅತಿಶಯೋಕ್ತಿಯಲ್ಲ.

'Life is good in bay area' ಎಂಬ ಮಾತು ನಿಜವೆಂದುಕೊಳ್ಳುತ್ತ ಕಾರ್ಯಕ್ರಮವನ್ನು ಮೆಲುಕು ಹಾಕುತ್ತ ಎಲ್ಲರೂ ಮನೆಕಡೆ ಕಾಲುಬಳಸಿದರು. ನಿಲ್ಲಿಸದಿರು ವನಮಾಲಿ ಕೊಳಲಗಾನವ... ನಿಲ್ಲಿಸೆ ನೀ ಕಳೆವುದೆಂತೋ ಭವಭೀತಿಯ ಕ್ಲೇಶವ....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X