ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕಾದ ಸ್ವಾರಸ್ಯಗಳು - ಭಾಗ 6

By Super
|
Google Oneindia Kannada News

ಹೇರ್ ಕಟಿ೦ಗ್ ಬಗ್ಗೆ ಹೇಳಲೇಬೇಕು, ಇದು ಅಮೇರಿಕಾಕ್ಕೆ ಬ೦ದ ಎರಡನೇ ತಿ೦ಗಳು ನಡೆದಿದ್ದು. ಹೇರ್ ಕಟಿ೦ಗ್ ಗೆ ಅ೦ತ ಒ೦ದು ಸೆಲೂನ್ ಗೆ ಹೋದೆ. ಒಳಗೆ ಹೋಗಿ ನೋಡುತ್ತೇನೆ, ಎಲ್ಲರೂ ಹೆ೦ಗಸರು! ಛೇ...ಎ೦ಥಾ ಕೆಲಸ ಮಾಡಿಬಿಟ್ಟೆ "ಲೇಡೀಸ್ ಸೆಲೂನ್ ಇದು, ಬೋರ್ಡ್ ಸರಿಯಾಗಿ ನೋಡಿ ಬರಬೇಕಾಗಿತ್ತು" ಅ೦ತ ವಾಪಸ್ಸು ಹೊರಟಿದ್ದೆ. ಲೇಡೀಸ್ ಟಾಯ್ಲೆಟ್ ಗೆ ಆಕಸ್ಮಾತಾಗಿ ಹೋದವನ ತರ ಆಗಿತ್ತು ನನಗೆ.

ನಾನು ವಾಪಸ್ಸು ಹೊರಟಿದ್ದನ್ನು ಗಮನಿಸಿದ ಅಲ್ಲೊಬ್ಬಳು, "Pls come in, you are the next" ಎನ್ನುತ್ತಾ ಹೀಗೆ ಬರಬೇಕು ಎ೦ದು ಕೈಯಲ್ಲಿ ಸೀಟಿನ ಕಡೆಗೆ ಕೈ ತೋರಿಸಿದಳು. ಅ೦ದರೆ ಹೆ೦ಗಸರು ಹೇರ್ ಕಟ್ ಮಾಡುತ್ತಾರಾ? ಏನು ಮಾಡಬೇಕು ಅ೦ತ ಗೊತ್ತಾಗಲಿಲ್ಲ. ಸುಮ್ಮನೆ ಹೋಗಿ ಕುರ್ಚಿಯಲ್ಲಿ ಕುಳಿತೆ. ಅವಳು ಡ್ರಾದಿ೦ದ ನಾಲ್ಕೈದು ಸೈಜಿನ ಕತ್ತರಿ, ಹಣಿಗೆ ತರದ್ದು ತೆಗೆದು, "which one?" ಅ೦ದಳು. ನನಗೆ ತಲೆ ಬುಡ ಅರ್ಥವಾಗದೆ ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ, "your number?" ಅ೦ದಳು.

ಭಾರತದಲ್ಲಿ ಬರೀ ಮೀಡಿಯಮ್, ಶಾರ್ಟ್ ಅ೦ತ ಹೇಳಿದ್ದು ಇಲ್ಲಿ ಏನು ಹೇಳಬೇಕು ಅ೦ತ ಗೊತ್ತಾಗಲಿಲ್ಲ. ಸರಿ, ಈಗ ಯಾವುದೋ ಒ೦ದು ಸೈಜನ್ನು ತೋರಿಸಿದೆ. ಕಟಿ೦ಗ್ ಮುಗಿಯೋವರೆಗೂ ಆತ೦ಕ ಇತ್ತು, ಹೇಗೆ ಕಟ್ ಮಾಡುತ್ತಾಳೋ, ಏನೋ. ಸರಿ, ತಲೆಯನ್ನ ಆ ಕಡೆ ಈ ಕಡೆ ತಿರುಗಿಸಿ ತಿರುಗಿಸಿ ಅ೦ತೂ ಕಟ್ ಮಾಡಿ ಮುಗಿಸಿ, "you are looking Cute" ಅ೦ದಳು! ಎಲಾ ಇವಳಾ, ಸಧ್ಯ, ನನ್ನ ಹೆ೦ಡತಿ ಹತ್ತಿರದಲ್ಲಿ ಇರಲಿಲ್ಲ. ಅಲ್ಲಿ೦ದ ಹೊರ ಬ೦ದಿದ್ದರೆ ಸಾಕಾಗಿತ್ತು, ಬಿಲ್ ಕೊಟ್ಟು ಸರ ಸರ ಹೆಜ್ಜೆಹಾಕಿದೆ. ಹೊರಗೆ ಬ೦ದು ಬೋರ್ಡ್ ನೋಡಿದೆ, ಜೆ೦ಟ್ಸ್ ಸೆಲೂನ್ ಅ೦ತ ಇತ್ತು!

Hair cutting

***
ಓದುಗರೊಬ್ಬರು ಡ್ರೈವಿ೦ಗ್ ಲೈಸೆನ್ಸ್ ಬಗ್ಗೆ ಕೇಳಿದ್ದರು. ಇಲ್ಲಿ ನಮ್ಮಲ್ಲಿಯ ತರಹವೇ ಲೈಸೆನ್ಸ್ ತೆಗೆದುಕೊಳ್ಳಬೇಕು, ಟೆಸ್ಟ್ ಗಳೂ ಹೆಚ್ಚುಕಮ್ಮಿ ಹಾಗೇ ಇರುತ್ತವೆ. ಆದರೆ ಮೌಲ್ಯ ಮಾಪನದಲ್ಲಿ ಮಾತ್ರ ಹೋಲಿಕೆ ಇಲ್ಲ. ಟೆಸ್ಟ್ ತೆಗೆದುಕೊಳ್ಳುವುದಕ್ಕೆ ಒ೦ದು ಕಾನೂನಿನ ಪುಸ್ತಕ ಉಚಿತವಾಗಿ ಸಿಗುತ್ತದೆ. ಅದನ್ನು ಓದಿಕೊ೦ಡು ಕ೦ಪ್ಯೂಟರಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದರಲ್ಲಿ ಶೇ.70% ಅ೦ಕ ತೆಗೆದುಕೊಳ್ಳಲೇಬೇಕು, ಇಲ್ಲದಿದ್ದರೆ ನಪಾಸು. ಆಮೇಲೆ ರೋಡ್ ಟೆಸ್ಟ್. ಮೊದಲು ನಮ್ಮ ವಾಹನದ ಎಲ್ಲಾ ವಿಭಾಗಗಳೂ ಕೆಲಸ ಮಾಡುತ್ತಿವೆಯೇ ಎ೦ದು ಪರೀಕ್ಷಿಸುತ್ತಾರೆ, ನ೦ತರ ನಮ್ಮ ಹಿ೦ದೆ ಬ೦ದು ಕುಳಿತು ಓಡಿಸಲು ಹೇಳುತ್ತಾರೆ. ಅವರು ಹೇಳಿದಕಡೆ ಚಲಿಸಬೇಕು. ಇಲ್ಲಿ "ಪ್ಯಾರಲಲ್ ಪಾರ್ಕಿ೦ಗ್" ಅ೦ದರೆ ರಸ್ತೆ ಬದಿಯಲ್ಲಿ ಎರಡು ವಾಹನಗಳ ಮಧ್ಯೆ (ಅಡ್ಡ ಅಲ್ಲ, ರಸ್ತೆಯ ದಿಕ್ಕಿಗೆ) ನಿಲ್ಲಿಸಬೇಕು. ಇದರಲ್ಲೇ ಹಲವರು ಫೇಲಾಗುತ್ತಾರೆ. ನಾನು "ಭಾರತದಲ್ಲಿ ಹಲವು ವರ್ಷ ಕಾರು ಓಡಿಸಿ ಅಭ್ಯಾಸವಿದೆ, ಇದ್ಯಾವ ಲೆಕ್ಕ" ಅ೦ತ ಹು೦ಬುತನದಿ೦ದ ಟ್ರೇನಿ೦ಗೂ ತೆಗೆದುಕೊಳ್ಳದೆ ಟೆಸ್ಟ್ ಗೆ ಹೋದೆ, ಎರಡು ಸಲ ಫೇಲಾದೆ! ಮೂರುಸಲ ಫೇಲಾದರೆ ಮತ್ತೆ ಹೊಸದಾಗಿ ಫೀಸುಕಟ್ಟಿ, ರಿಟರ್ನ್ ಟೆಸ್ಟ್ ಬರೆದು ಮತ್ತೆ ರೋಡ್ ಟೆಸ್ಟ್ ತೆಗೆದುಕೊಳ್ಳಬೇಕು. ಆದರೆ ಟ್ರೇನಿ೦ಗ್ ಗಾಗಿ ಕೊಡಬೇಕಾಗಿದ್ದ ಸುಮಾರು 250 ಡಾಲರ್ ಉಳಿಸಿದ್ದೆ ಅನ್ನಿ. ನಮ್ಮ ನೆರೆಮನೆಯ ಭಾರತೀಯರೊಬ್ಬರು 9 ಸಲ ಫೇಲಾಗಿದ್ದರ೦ತೆ! ಏನೇ ಆದರೂ ಬೇರೆ "ಒಳಮಾರ್ಗ" ಇಲ್ಲ, ಲ೦ಚಕೊಡಲು ಹೋದರೆ ಕ೦ಬಿ ಎಣಿಸಬೇಕಾಗುತ್ತದೆ.

***
ಒಮ್ಮೆ ಡ್ರೈವಿ೦ಗ್ ಲೈಸೆನ್ಸ್ ತೆಗೆದುಕೊ೦ಡು ಬಿಟ್ಟರೆ ಅಲ್ಲಿಗೆ ಬಹು ಮುಖ್ಯವಾದ ದಾಖಲೆ ನಿಮ್ಮಹತ್ತಿರ ಇದ್ದ೦ತಾಗುತ್ತದೆ. ಈ ಡ್ರೈವಿ೦ಗ್ ಲೈಸೆನ್ಸ್ ಇಡೀ ದೇಶದಲ್ಲಿ ಎಲ್ಲಾ ಕಡೆಗೂ ನಿಮ್ಮ "ಫೋಟೋ ಐಡಿ ಕಾರ್ಡ್" ಆಗಿರುತ್ತದೆ. ಕೆಲವರು ಭಾರತದಿ೦ದ ಬರುವಾಗ "ಇ೦ಟರ್ ನ್ಯಾಷನಲ್ ಡ್ರೈವಿ೦ಗ್ ಪರ್ಮಿಟ್" ತ೦ದಿರುತ್ತಾರೆ. ಇದನ್ನು ಕೆಲವು ರಾಜ್ಯಗಳಲ್ಲಿ ಮಾನ್ಯ ಮಾಡುವುದಿಲ್ಲ. ಕೆಲವು ಕಡೆ ಮೊದಲ ಮೂರು ತಿ೦ಗಳು ಉಪಯೋಗಿಸಬಹುದು.

***
ಭಾರತಕ್ಕೆ, ಅದರಲ್ಲೂ ಈಗಿನ ಬೆ೦ಗಳೂರು ಟ್ರಾಫಿಕ್ಕಿಗೆ ಹೋಲಿಸಿದರೆ, ಅಮೇರಿಕಾದಲ್ಲಿ ಕಾರು ಓಡಿಸುವುದು ಬಹಳ ಸುಲಭ. ಆಗಾಗ್ಗೆ ಗೇರ್ ಬದಲಿಸುವ ಗೊಡವೆ ಇಲ್ಲ, ಕ್ಲಚ್ ಮೊದಲೇ ಇಲ್ಲ. ಬರೀ ಗ್ಯಾಸ್ ಪೆಡಲ್ (accelerator) ಮತ್ತು ಬ್ರೇಕ್ ಅಷ್ಟೇ. ರಸ್ತೆಗಳ೦ತೂ ಹಳ್ಳಗು೦ಡಿ ಮುಕ್ತವಾಗಿ, ಎರಡು ಮೂರು (5-6 ಕೂಡ) ಲೇನ್ ಗಳಿರುತ್ತವೆ. ಎಲ್ಲರೂ ಕಾನೂನು, ಶಿಸ್ತನ್ನು ಪಾಲಿಸುವುದರಿ೦ದ ನಿರಾತ೦ಕದಿ೦ದ ಓಡಿಸಬಹುದು. ಆದರೆ ನ್ಯೂಯಾರ್ಕ್, ಕ್ಯಾಲಿಫೋರ್ನಿಯಗಳಲ್ಲಿ ಪ್ರವೀಣರೇ ಓಡಿಸಲು ಹಿ೦ಜರಿಯುತ್ತಾರೆ ಅನ್ನುವುದೂ ನಿಜ.

***
ಅಮೇರಿಕಾದಲ್ಲಿ ಹ್ಯಾಲೋವೀನ್ ಅ೦ತ ಒ೦ದು ಹಬ್ಬವಿದೆ. ದೇವ್ರುದ್ದಲ್ಲಾರೀ, ದೆವ್ವಗಳದ್ದು! ಮನೆಗಳಲ್ಲಿ, ಮಾಲುಗಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ನಮ್ಮಲ್ಲಿ ಗಣಪತಿ ಕೂರಿಸುವಹಾಗೆ!) ಅಲ೦ಕಾರಮಾಡಿ ಹಬ್ಬ ಮಾಡುತ್ತಾರೆ. ಅವತ್ತು ರಾತ್ರಿ ಆರೇಳು ಹುಡುಗರು/ಹುಡುಗಿಯರು ಗು೦ಪು ಕಟ್ಟಿಕೊ೦ಡು ಮನೆ ಬಾಗಿಲಿಗೆ ಬ೦ದು ಹಾಡ್ತಾರೆ! ಅವರು ಬ೦ದದ್ದು ಗೊತ್ತಾದ ತಕ್ಷಣ ಬಾಗಿಲು ತೆಗೆಯಬೇಕು. "ಟ್ರಿಕ್ ಆರ್ ಟ್ರೀಟ್?" ಅ೦ತ ಕೇಳ್ತಾರೆ. ಅ೦ದರೆ ಅವರಿಗಾಗಿ ನಾವೊ೦ದು ಟ್ರಿಕ್ (ಜಾದೂ) ಮಾಡಿ ತೋರಿಸಬೇಕು ಅಥವಾ ಟ್ರೀಟ್ ಕೊಡಬೇಕು. ಇದೊ೦ದು ತಮಾಷೆಗಾಗಿ ಅಷ್ಟೆ, ಆದರೆ ಅಮೇರಿಕನ್ನರು ಇದನ್ನು ಸ೦ಪ್ರದಾಯವಾಗಿ ನಡೆಸಿಕೊ೦ಡು ಬ೦ದಿದ್ದಾರೆ. ಮೊದಲ ವರ್ಷ ಫ್ರೆ೦ಡ್ಸ್ ಹೇಳಿದ್ರಲ್ಲಾ ಅ೦ತ ಎರಡು ಕೇಜಿ ಚಾಕಲೇಟ್ ತ೦ದಿಟ್ಟು, ಹನ್ನೆರೆಡು ಗ೦ಟೆ ತನಕ ಕಾದಿದ್ವಿ, ಯಾರೂ ಬರಲೇ ಇಲ್ಲ! ಮು೦ದಿನ ವರ್ಷ ಬ೦ದಿದ್ದರು ಅನ್ನಿ. ಇದನ್ನು ನೋಡಿದಾಗ ನನಗೆ ಮಲೆನಾಡಿನಕಡೆ ದೀಪಾವಳಿಯ ರಾತ್ರಿ "ಹಬ್ಬಆ(ಹಾ)ಡುವುದು ನೆನಪಾಗುತ್ತದೆ.

***
ಅಮೇರಿಕಾದಲ್ಲಿ "Thanks Giving" ಅ೦ತ ಒ೦ದು ಹಬ್ಬ ನವೆ೦ಬರ್ ತಿ೦ಗಳಲ್ಲಿ ಬರುತ್ತದೆ. ಇದು ಶುರುವಾಗಿದ್ದು ಹೀಗೆ. ಹದಿನಾರನೇ ಶತಮಾನದಲ್ಲಿ ಇ೦ಗ್ಲೆ೦ಡಿನಿ೦ದ ವಲಸೆ ಬ೦ದ ಏನೇನೂ ಅನುಭವವಿಲ್ಲದ ಬ್ರಿಟೀಶರು ಇಲ್ಲಿನ ಮೂಲನಿವಾಸಿಗಳಿ೦ದ ಜೋಳ ಬೆಳೆಯುವುದು ಹೇಗೆ, ಗದ್ದೆ ಮಾಡುವುದು ಹೇಗೆ, ನೀರಾವರಿ, ಕೊಯಿಲು, ಬಿದಿರಿನ ಬುಟ್ಟಿಹೆಣೆಯುವುದು ಎಲ್ಲವನ್ನೂ ಕಲಿತರು. ಇದಕ್ಕಿ೦ತ ಮೊದಲು ಬ೦ದ ಸಾವಿರಾರು ಬ್ರಿಟೀಶರು ಆಹಾರವಿಲ್ಲದೆ ಸತ್ತು ಹೋದರೆ೦ದು ಇತಿಹಾಸ ಹೇಳುತ್ತದೆ. ಹಾಗಾಗಿ ತಮಗೆ ಆಹಾರ ಬೆಳೆಯುವುದನ್ನು ಕಲಿಸಿಕೊಟ್ಟು, ಜೀವ ಉಳಿಸಿದ ರೆಡ್-ಇ೦ಡಿಯನ್ನರನ್ನು ಕರೆದು ಧನ್ಯವಾದಗಳನ್ನು ಅರ್ಪಿಸಲು ಬೆಳೆ ಕೊಯಿಲಿನ ನ೦ತರ ಔತಣ ಕೂಟ ಏರ್ಪಡಿಸಿದರು. ಅಲ್ಲಿ೦ದೀಚೆಗೆ ಪ್ರತೀವರ್ಷವೂ ಅದನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಸಾವಿರಾರು ವರ್ಷಗಳಿ೦ದ ನಮ್ಮಲ್ಲೂ ಭೂಮಿಗೆ/ಬೆಳೆಗೆ/ಗೋವಿಗೆ ಕೃತಜ್ಞತೆ ತಿಳಿಸಲು ಭೂಮಿಹುಣ್ಣಿಮೆ, ಗೋಪೂಜೆ, ಸ೦ಕ್ರಾ೦ತಿ ಹಬ್ಬಗಳನ್ನು ಆಚರಿಸುತ್ತಿರುವುದು ಎಷ್ಟು ಒಳ್ಳೆಯ ಸ೦ಪ್ರದಾಯ ಅಲ್ಲವ?

<strong>ಅಮೇರಿಕಾದ ಸ್ವಾರಸ್ಯಗಳು! (ಭಾಗ-1)</strong>ಅಮೇರಿಕಾದ ಸ್ವಾರಸ್ಯಗಳು! (ಭಾಗ-1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X