• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕ್ಲೆಂಡ್ ರಾಜ್ಯೋತ್ಸವದಲ್ಲಿ ಸುಧಾಮೂರ್ತಿ

By * ಪ್ರಕಾಶ್ ರಾಜಾರಾವ್
|
Google Oneindia Kannada News

ನ್ಯೂಜಿಲೆಂಡ್ ಕನ್ನಡಿಗರಲ್ಲಿ ಇರುವ ಭಾಷಾಭಿಮಾನ ಮತ್ತು ಪರಸ್ಪರ ಸುಮಧುರ ಬಾಂಧವ್ಯಗಳನ್ನು ನೋಡಿದರೆ ಸಂತಸವಾಗುತ್ತದೆ, ಇದು ಸಾಧ್ಯವಾಗುವಂತೆ ಹದಿನೈದು ವರ್ಷದ ಹಿಂದೆ ಕನ್ನಡ ಕೂಟ ಸ್ಥಾಪಿಸಿದವರನ್ನು ನಾವು ಸ್ಮರಿಸಬೇಕು ಎಂದು ಖ್ಯಾತಿ ಕಥೆಗಾರ್ತಿ ಸುಧಾ ಮೂರ್ತಿಯವರು ಹೇಳಿದಾಗ ನಮ್ಮೆಲ್ಲರಿಗೂ ಹೆಮ್ಮೆಯೆನಿಸಿತು.

ನವೆಂಬರ್ ಒಂದನೇ ತಾರೀಕಿನಂದು ಆಕ್ಲೆಂಡ್‌ನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ವಿಶ್ವ ಸಮುದಾಯ ಭಾರತೀಯರನ್ನು ನೋಡುವ ರೀತಿ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. ಇದಕ್ಕೆ ಭಾರತದಲ್ಲಿರುವ ಪ್ರತಿಭಾವಂತರು ಮತ್ತು ವಿಶ್ವದೆಲ್ಲೆಡೆ ನೆಲೆಸಿರುವ ಅನಿವಾಸಿ ಭಾರತೀಯರು ಮಾಡಿರುವ ಅಪೂರ್ವ ಸಾಧನೆಗಳೇ ಕಾರಣ ಎಂದು ಶ್ಲಾಘಿಸಿದರು.

ನ್ಯೂಜಿಲೆಂಡ್ ಕನ್ನಡಿಗರಿಗೆ ರಾಜ್ಯೋತ್ಸವದ ಸಮಯ ಆನಂದಮಯ, ಏಕೆಂದರೆ ನವೆಂಬರ್ ಒಂದನೇ ತಾರೀಖಿನಿಂದ ಎಲ್ಲರೂ ಬಯಸುವ ಬೇಸಿಗೆ ಕಾಲ ಆರಂಭವಾಗುತ್ತದೆ. ಇನ್ಫೊಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿಯವರು ಸಮಾರಂಭದ ಅಧ್ಯಕ್ಷರಾಗಿ ಆಗಮಿಸಿದ್ದು ಈ ಸಂತೋಷ ದ್ವಿಗುಣವಾಯಿತು.

ಕನ್ನಡ ಧ್ವಜಾರೋಹಣ ಮಾಡಿ, ಸುಧಾ ಅವರು ಸಾಂಪ್ರದಾಯಿಕ ಜ್ಯೋತಿ ಬೆಳಗಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮ ಆರಂಭಿಸಲಾಯಿತು. ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ರಾವ್ ಅವರು ಸ್ವಾಗತ ಭಾಷಣ ಮಾಡಿದರು. ಸೌಮ್ಯ ಕೊಳ್ಳಿ ಪ್ರಾರ್ಥನೆ ಹಾಡುವುದರೊಂದಿಗೆ ಶುರುವಾದ ಸಂಗೀತ, ವಾದ್ಯಸಂಗೀತ, ನೃತ್ಯ, ಏಕಪಾತ್ರಾಭಿನಯ, ನಾಟಕ ಇತ್ಯಾದಿಗಳು ಪ್ರೇಕ್ಷಕರ ಮನ ಮುದಗೊಳಿಸಿದವು. ಭಾಗವಹಿಸಿದ ಕಲಾವಿದರಲ್ಲಿ ಮಕ್ಕಳೇ ಹೆಚ್ಚಾಗಿದ್ದುದು ವಿಶೇಷವಾಗಿತ್ತು. ಹಳೆಯ ಕನ್ನಡ ಚಲನ ಚಿತ್ರಗಳ ಹಾಡುಗಳು ಅದರಲ್ಲೂ ಡಾ. ರಾಜ್ ಚಿತ್ರಗಳ ಹಾಡುಗಳು ಎಲ್ಲಾ ವಯಸ್ಸಿನವರಿಗೂ ಸದಾ ಕಾಲಕ್ಕೂ ಪ್ರಿಯ ಎನ್ನುವುದನ್ನು ಭಾಗವಹಿಸಿದ ಕಲಾವಿದರು ಮತ್ತೊಮ್ಮೆ ಸಾಬೀತು ಪಡಿಸಿದರು.

ಸುಧಾ ಮೂರ್ತಿಯವರು ಮಾತನಾಡಿ, ಕನ್ನಡ ಕೂಟದ ಸಂಸ್ಥಾಪನಾಧ್ಯಕ್ಷರಾದ ದಿ. ಎಂ.ಕೆ. ವಾಮನ ಮೂರ್ತಿ ಅವರು ಮೈಸೂರಿನಲ್ಲಿ ತಮ್ಮ ಪತಿ ನಾರಾಯಣ ಮೂರ್ತಿಯವರಿಗೆ ಗುರುವಾಗಿದ್ದವರು, ಅವರ ಸುಸಂಸ್ಕೃತ ನಡೆ ನುಡಿಗಳು ಅನುಕರಣೀಯ ಎಂದು ಹೇಳಿದರು. ವಾಮನ ಮೂರ್ತಿ ಸ್ಮರಣ ಸಂಚಿಕೆ ತರಲು ನೆರವಾದ ಪ್ರಧಾನ ಸಂಪಾದಕ ನಾ. ಭಾಸ್ಕರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿಲಾಯಿತು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿ ಎಂದು ಹೆಸರಾದ ಬೆಳೆಗೆರೆ ಜಾನಕಮ್ಮನವರ ಎರಡು ಕವನಗಳನ್ನು, ಉಡುಗೊರೆ ಕಾಣಿಕೆಗಳನ್ನು ಸ್ವೀಕರಿಸಲೊಲ್ಲದ ಈ ಜಗದ್ಗೆಳತಿಗೆ ಅರ್ಪಿಸುತ್ತೇವೆ ಎಂದು ಗೋಷ್ಠಿ ಗಾಯನ ಗುಂಪಿನ ಗಾಯಕಿಯರು ಸುಧಾ ಅವರನ್ನು ಕುರಿತು ಹಾಡಿದ್ದು ಸಂದರ್ಭೋಚಿತವಾಗಿತ್ತು.

ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರಗೀತೆಗಳು ಹಾಗೂ ಕರ್ನಾಟಕ ನಾಡಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕನ್ನಡ ಕೂಟದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಸುಮಂಗಲಾ ಗುರುನಾಥ್ ಅವರು ನಿರ್ವಹಿಸಿದರು.

ಮೌಂಟ್ ರಾಸ್ಕಿಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಕೂಟ ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಸುಧಾ ಮೂರ್ತಿಯವರು ತಮ್ಮ ಅನೇಕ ಅನುಭವಗಳನ್ನು ಹಂಚಿಕೊಂಡರು. ಸುಮಾರು ಏರಡು ಗಂಟೆಗಳ ಕಾಲ ಮಾತನಾಡಿದ ಸುಧಾ ಅವರ ಸರಳತೆ, ಸುಂದರ ಕನ್ನಡ ಎಲ್ಲರಲ್ಲೂ ಆತ್ಮೀಯ ಭಾವನೆ ಮೂಡಿಸಿ, ಬಹುಕಾಲದ ನಂತರ ಮನೆಯ ಹಿರಿಯರೊಬ್ಬರು ಮನೆಯವರೆಲ್ಲರೊಂದಿಗೆ ಕುಳಿತು ಮನಬಿಚ್ಚಿ ಮಾತನಾಡಿದ ಅನುಭವವುಂಟಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X