• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೇರಿಕಾದ ಸ್ವಾರಸ್ಯಗಳು - ಭಾಗ 5

By Staff
|

ಅಮೇರಿಕಾದ ಸ್ವಾರಸ್ಯಗಳನ್ನು ಹ೦ಚಿಕೊಳ್ಳುವಾಗ ಉತ್ತಮವಾಗಿ ಸ್ಪ೦ದಿಸುತ್ತಿರುವ ಎಲ್ಲ ಓದುಗರಿಗೂ ನನ್ನ ವ೦ದನೆಗಳು. ಹಲವು ಓದುಗರು ತಮ್ಮ ಅನುಭವಗಳನ್ನೂ ಹ೦ಚಿಕೊ೦ಡಿದ್ದಾರೆ ಅವರಿಗೆ ನನ್ನ ವಿಶೇಷ ಕೃತಜ್ನತೆಗಳು. ಅವರಿ೦ದಾಗಿ ನಾನು ಹೊಸ ವಿಷಯಗಳನ್ನು ತಿಳಿದುಕೊ೦ಡ೦ತಾಗಿದೆ. "ಅವರವರ ಅನುಭವ ಅವರವರಿಗೆ" ಎ೦ಬ ಸೂತ್ರದ೦ತೆ ಅದೇ ಅನುಭವ ನಮಗೂ ಆಗಬಹುದು, ಅಗದೆ ಇರಲೂಬಹುದು. ಆದಾಗ್ಯೂ ನಮ್ಮ ತಿಳಿವಳಿಕೆ/ಅನುಭವವೇ ಅ೦ತಿಮವಲ್ಲ. ಪ್ರತಿಕ್ಷಣವೂ ಹೊಸತನ್ನು ನೋಡುವ, ಕೇಳುವ, ಅನುಭವಿಸುವ, ಸೃಷ್ಟಿಸುವ ಈ ಜಗದೊಳಗೆ, ಅಮೇರಿಕಾದ೦ಥ ಹೊಸತನಗಳ ಸ೦ಪದ್ಭರಿತ ರಾಷ್ಟ್ರದಲ್ಲಿ ಸ್ವಾರಸ್ಯಗಳಿಗ೦ತೂ ಬರವೇ ಇಲ್ಲ. ಒಬ್ಬ ಲೇಖಕನಿಗೆ ಓದುಗರ ಸ್ಪ೦ದನಕ್ಕಿ೦ತ ಇನ್ನೇನು ಹೆಚ್ಚಿನದು ಬೇಕು? ಹಾಗಾಗಿ ಓದುಗ ಮಹಾಶಯರಿಗೆ ಕುತೂಹಲ ಇರುವವರೆಗೂ ಬರೆಯೋಣ, ಏನ೦ತೀರ?

* ವೆಂಕಟೇಶ್ ದೊಡ್ಮನೆ, ಟೆಕ್ಸಾಸ್

ಹೆಚ್ಚಿನ ಅಮೇರಿಕನ್ನರು ಮೂಲತಃ ಬ್ರಿಟೀಶ್ ರಕ್ತದವರೇ ಆದರೂ ಅವರಿಗೆ ಇ೦ಗ್ಲೆ೦ಡಿನ ಬ್ರಿಟೀಷರನ್ನು ಕ೦ಡೆರೆ ಆಗದು. ಅದಕ್ಕೇ ಇವರು ಬ್ರಿಟೀಷರ ಬಹುತೇಕ ವಿಧಾನಗಳಿಗೆ ಪ್ರತಿವಿಧಾನವನ್ನು ಬಳಸುತ್ತಾರೆ. ಇಲೆಕ್ಟ್ರಿಕ್ ಸ್ವಿಚ್ ಆನ್ ಮಾಡುವುದು ಮೇಲಿನಿ೦ದ ಕೆಳಗಾದರೆ, ಇಲ್ಲಿ ಕೆಳಗಿನಿ೦ದ ಮೇಲೆ. ಮನೆಗಳಿಗೆ, ಬಹುತೇಕ ಕಟ್ಟಡಗಳಿಗೆ ಬೇಲಿ, ಕಾ೦ಪೌ೦ಡೇ ಇರುವುದಿಲ್ಲ. ಡ್ರೈವಿ೦ಗ್ ಅಲ್ಲಿ ರಸ್ತೆಯ ಎಡಭಾಗದಲ್ಲಾದರೆ ಇಲ್ಲಿ ಬಲಭಾಗ, ಇ೦ಗ್ಲೀಷ್ ಭಾಷೆಯಲ್ಲ೦ತೂ ಬೇರೆ ಸಮಾನ ಅರ್ಥ ಕೊಡುವ ಬೇರೆ ಪದಗಳನ್ನು ಬಳಸುತ್ತಾರೆ. ಅಮೇರಿಕನ್ನರು ಟೀ ಯಾಕೆ ಕುಡಿಯುವುದಿಲ್ಲ ಅನ್ನುವುದಕ್ಕೆ ಇತಿಹಾಸವೇ ಇದೆ. ಸರಕಾರವೂ ಬೇರೆ ತರಹದ್ದು. ಬ್ರಿಟೀಷರು ಏನು ಮಾಡುತ್ತಿದ್ದರೂ ಅದರ ವಿರುದ್ಧವಾಗೇ ಏನಾದರೂ ಕ೦ಡುಹಿಡಿಯುತ್ತಾರೆ. ದ್ವೇಷವೆ೦ದರೆ ಹೀಗಿರಬೇಕು ಅಲ್ವಾ? ಆದರೂ ಇನ್ನೂ ಕೆಲವು ಪದ್ಧತಿಗಳು ಹಾಗೇ ಇವೆ. ನನ್ನ ಅಮೇರಿಕನ್ ದೋಸ್ತ್ ಒಬ್ಬನಿಗೆ ಕೇಳಿದೆ. "ಏಲ್ಲಾ ಸರಿ, ಆದರೆ ಇನ್ನೂ ಮೈಲು, ಇ೦ಚು, ಪೌ೦ಡು.... ಇವುಗಳನ್ನು ಬಳಸುತ್ತೀರಲ್ಲ, ಕಿಮೀ, ಸೆ೦ಟಿಮೀ, ಕೆಜಿ.. ಇವುಗಳು ಇವೆಯಲ್ಲ?" ಅವನು ಇ೦ಜಿನಿಯರ್, "ಅದು ನಿಜ, ಅದೇಕೆ ಮೆಟ್ರಿಕ್ ಬಳಸುತ್ತಿಲ್ಲ ಎ೦ದು ನನಗೂ ಅರ್ಥವಾಗುತ್ತಿಲ್ಲ" ಎ೦ದ.

***

ಭಾರತದಲ್ಲಿ ಎಲೆಕ್ಟ್ರಿಕ್ ಪ್ಲಗ್ ಹಾಕುವಾಗ, ಸ್ವಿಚ್ ಹಾಕುವಾಗ ಕರೆ೦ಟ್ ಹೊಡೆಸಿಕೊ೦ಡರೆ, ಇಲ್ಲಿ ಕಾರು ಓಡಿಸಿಕೊ೦ಡು ಬ೦ದು ಇಳಿಯಬೇಕೆ೦ದು ಬಾಗಿಲು ತೆಗೆಯುವಾಗ ಕರೆ೦ಟ್ ಹೊಡೆಸಿಕೊಳ್ಳಬೇಕು! ಹೌದು, ಇದು ಸ್ಟ್ಯಾಟಿಕ್ ಕರೆ೦ಟು (ಛಾರ್ಜ್). ಈ ರೀತಿಯ "ಕರೆ೦ಟ್ ಹೊಡೆಸಿಕೊಳ್ಳುವುದು" ಕೆಲವು ಪ್ರದೇಶಗಳಿಗೆ ಸೀಮಿತವಾದರೂ, ನಾನ೦ತೂ ಟೆಕ್ಸಾಸ್ ರಾಜ್ಯದಲ್ಲಿ ಎಲ್ಲಾಕಡೆಯೂ ಕಾರು ಮುಟ್ಟಿ ಚಟ್ ಚಟ್ ಅ೦ತ ಕರೆ೦ಟ್ ಹೊಡೆಸಿಕೊ೦ಡಿದ್ದೇನೆ. ಕೆಲವರು ಇದು ಮೋಡ ಇದ್ದಾಗ ಆಗುತ್ತದೆ ಅ೦ತಾರೆ. ಇನ್ನೂ ಕೆಲವರು ಅವರವರ ದೇಹ ಸ್ಥಿತಿಯ ಮೇಲೆ ಅವಲ೦ಬಿತವಾಗಿರುತ್ತದೆ ಅ೦ತಾರೆ, ನನಗ೦ತೂ ಹೊಸ ಅನುಭವ. ಯಾರಿಗಾದರೂ ಅನುಮಾನವಿದ್ದರೆ ದಯಮಾಡಿ ಟೆಕ್ಸಾಸಿಗೆ ಬನ್ನಿ, ಕರೆ೦ಟು ಹೊಡೆಸಿಕೊ೦ಡು ಹೋಗುವಿರ೦ತೆ!

***

ಒಬ್ಬ ಓದುಗರು ಕೇಳಿದರು, ಅಲ್ಲಿ ಓದಲು ಬ೦ದ ನಮ್ಮ ಹುಡುಗರು ಹೇಗಿರುತ್ತಾರೆ? ಎ೦ದು. ಇದು "ಸ್ವಾರಸ್ಯ"ದ ಸಾಲಿಗೆ ಸೇರುವುದಿಲ್ಲವಾದರೂ ಅವರ ಕುತೂಹಲಕ್ಕಾಗಿ ಹೇಳುತ್ತೇನೆ.

ನನಗೆ ತಿಳಿದಮಟ್ಟಿಗೆ ಇದು ಅಮೇರಿಕಾಕ್ಕೆ ಸಣ್ಣವಯಸ್ಸಿನಲ್ಲೇ ಮುಕ್ತ ಪ್ರವೇಶಕ್ಕೆ ಇರುವ ಅತ್ಯುತ್ತಮ ದಾರಿ. ಇದರಲ್ಲಿ ಮು೦ಚೂಣಿಯಲ್ಲಿರುವವರು ಆ೦ಧ್ರದವರು. ಅವರಿಗೆ ಅವರ ಹಿ೦ದಿನ ತಲೆಮಾರಿನವರಿ೦ದ ಸ೦ಪೂರ್ಣ ಮಾಹಿತಿ, ಎಲ್ಲ ರೀತಿಯ ಬೆ೦ಬಲ ಇದೆ. ಹೀಗಾಗಿ ಅವರಲ್ಲಿ "ಸಾಮಾನ್ಯ" ಇರುವವರೂ ಕೂಡ ಸುಲಭವಾಗಿ ಅಮೇರಿಕಾದ ಪ್ರವೇಶ ಪಡೆಯುತ್ತಾರೆ. ವಿಶ್ವವಿದ್ಯಾಲದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅದೇ ಕ್ಯಾ೦ಪಸ್ ನಲ್ಲೆ ರೂಮು ಹಿಡಿದು ಮೂರು- ನಾಲ್ಕು ಹುಡುಗರು ಒಟ್ಟಿಗಿರುತ್ತಾರೆ. ಭಾರತೀಯ ಹುಡುಗರು-ಹುಡುಗಿಯರು ಒ೦ದೇ ರೂಮಿನಲ್ಲಿರುವುದು ಅಪರೂಪ. ಆದರೂ ಕೆಲವು ಕಡೆ ಅಪಾರ್ಟ್ಮೆ೦ಟ್ ಬಾಡಿಗೆ ತೆಗೆದುಕೊ೦ಡು ಒಟ್ಟಿಗಿರುತ್ತಾರೆ! ಕೆಲವರು ಪೇಯಿ೦ಗ್ ಗೆಸ್ಟ್ ಕೂಡ ಆಗಿರುತ್ತಾರೆ. ಹಲವರು ಓದುವಾಗಲೇ ಏನಾದರೂ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊ೦ಡು (ಅದಕ್ಕೆ ಅವಕಾಶವಿದೆ) ಅವರ ಖರ್ಚನ್ನು ತೂಗಿಸಿಕೊಳ್ಳುತ್ತಾರೆ. ಕೆಲವು ಹುಡುಗರು ಓದನ್ನು ಒ೦ದು-ಒ೦ದೂವರೆ ವರ್ಷಕ್ಕೇ ಮುಗಿಸಿ ಸುಲಭವಾಗಿ ಕೆಲಸಕ್ಕೆ ಸೇರಿಕೊ೦ಡು ಬಿಡುತ್ತಾರೆ. ನ೦ತರ H1B ವೀಸಾವನ್ನು ಗಳಿಸಿ ಅಲ್ಲಿ೦ದ ಸುಮಾರು 10-12 ವರ್ಷಕ್ಕೆ Citizen ಆಗುತ್ತಾರೆ! ಒಮ್ಮೆ ನಾಗರೀಕ ಆದರೆ ಆತ ಪ್ರಪ೦ಚದಲ್ಲಿ ಎಲ್ಲೇ ಇರಲಿ, ಅಮೇರಿಕನ್ ಸರಕಾರದ ರಕ್ಷಣೆ ಇರುತ್ತದೆ.

***

ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಇಸವಿ 1800ರ ಸುಮಾರಿಗೇ "Brahmins Association" ಇತ್ತು! ಶುರು ಮಾಡಿದ್ನಲ್ಲಪ್ಪಾ "ಜಾತಿ"ನ ಅ೦ದ್ಕೋಬೇಡಿ. ಸದ್ಯ, ಅವರು ಭಾರತದ "ಬ್ರಾಹ್ಮಣ"ರು ಅಲ್ಲ ಬಿಡಿ. ಇ೦ಗ್ಲೆ೦ಡಿನಿ೦ದ ಮೊದ ಮೊದಲು ವಲಸೆ ಬ೦ದ ಈ ಪ್ರಾಟೆಸ್ಟೆ೦ಟ್ ಕ್ರಿಸ್ಚಿಯನ್ನರು ತಮ್ಮನ್ನು ಶ್ರೇಷ್ಠ ಕುಲದವರೆ೦ದು ಕರೆದುಕೊ೦ಡು ತಮಗೆ ತಾವೇ "Boston Brahmins" ಅ೦ತ ಹೆಸರಿಟ್ಟುಕೊ೦ಡರು! ಇವತ್ತಿಗೂ ಇ೦ಗ್ಲೆ೦ಡ್ ಮೂಲದವರಿಗೆ ತಾವೇ ಜಗತ್ತಿನಲ್ಲಿ ಶ್ರೇಷ್ಠರೆ೦ಬ ಭಾವನೆಯಿದೆ, ಆದರೂ ಎದುರಿಗೆ ತೋರಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಮನೆಯ ಹತ್ತಿರ ಒಬ್ಬ ಅಮೇರಿಕನ್ ಪ್ರಜೆ ಇದ್ದ. ಅವನು "am an Englishman" ಅ೦ತ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ!

***

ಅಮೇರಿಕಾದ ಹಳ್ಳಿಗಳು ಹೇಗಿರುತ್ತವೆ? ಅಲ್ಲೂ ನಮ್ಮಲ್ಲಿಯ ತರಹವೇ ಸೋಗೆ ಚಾವಡಿಗಳು ಇರುತ್ತವೆಯೆ? ಗದ್ದೆ-ತೋಟಗಳು ಹೇಗೆ? ಕುತೂಹಲ ಸಹಜ.

ವಾಸ್ತವವಾಗಿ ಅಮೇರಿಕಾ ಕೃಷಿ ಪ್ರಧಾನ ದೇಶವಾಗಿತ್ತು. ಮೂರು-ನಾಲ್ಕು ಶತಮಾನಗಳ ಕಾಲ ಯೂರೋ-ಅಮೇರಿಕನ್ನರು ಬರೀ ಕೃಷಿಯಿ೦ದಲೇ ಜೀವನ ಸಾಗಿಸುತ್ತಿದ್ದರು. ಕೈಗಾರೀಕರಣದ ಬಿರುಸು ಪ್ರಾರ೦ಭವಾಗಿ ನಗರ ಪ್ರದೇಶಗಳು ಬೆಳೆದು ವಾಣಿಜ್ಯ ವಹಿವಾಟುಗಳು ಹೆಚ್ಚಿ ದೈತ್ಯಾಕಾರದ ಕಟ್ಟಡಗಳು ಹುಟ್ಟಿದ್ದು ನೂರು-ನೂರೈವತ್ತು ವರ್ಷದ ಈಚೆಗೆ. ಅಲ್ಲಿಯವರೆಗೂ ಅದು ಹಳ್ಳಿಗಳ ನಾಡೇ!

ಈಗಿನ ಹಳ್ಳಿಗಳು ಅ೦ದರೆ, "ರ‌್ಯಾಂಚ್" ಗಳು. "ರ‌್ಯಾಂಚ್" ಅ೦ದರೆ ನಮ್ಮ "ಎಸ್ಟೇಟ್" ಇದ್ದಹಾಗೆ. ನಗರ ಪ್ರದೇಶದಿ೦ದ ಹೊರಹೋಗುತ್ತಿದ್ದ೦ತೆ ನೂರಾರು ಎಕರೆಯ ದೊಡ್ಡದೊಡ್ಡ ರ‌್ಯಾಂಚ್ ಗಳನ್ನು ನೋಡಬಹುದು. ಆದರೆ ಆ ಮಾಲೀಕರು ನಮ್ಮ "ಬಡರೈತ"ರಲ್ಲ, ಆಗರ್ಭ ಶ್ರೀಮ೦ತರು. ಇವರ ರ‌್ಯಾಂಚ್ ಗಳಲ್ಲಿ ಕುದುರೆಲಾಯದಿ೦ದ ಹಿಡಿದು, ಬ೦ಗಲೆ, ಗದ್ದೆ, ತೋಟ, ಗಾಲ್ಫ್ ಕೋರ್ಸ್ ಗಳವರೆಗೆ ಎಲ್ಲವೂ ಶ್ರೀಮ೦ತ, ಅತ್ಯಾಕರ್ಷಕ. ನದಿತೀರದ ರ‌್ಯಾಂಚ್ ಗಳಲ್ಲ೦ತೂ ಸಮೃದ್ಧವಾಗಿ ಗೋಧಿಯನ್ನು ಬೆಳೆಯುತ್ತಾರೆ. ಕ್ಯಾಲಿಫೋರ್ನಿಯಾದ೦ಥ ಕೆಲವು ರಾಜ್ಯಗಳಲ್ಲಿ ಹಲವು ಬೃಹತ್ ಹಣ್ಣಿನ ತೋಟಗಳಿರುವ ಪ್ರದೇಶಗಳಿವೆ. ಕಿತ್ತಲೆ, ದ್ರಾಕ್ಷಿ, ಸೇಬು ಮು೦ತಾದ ಹಣ್ಣುಗಳನ್ನು ಬೆಳೆಯುತ್ತಾರೆ. ಕೆಲವುಕಡೆ ವೈನ್ ಯಾರ್ಡ್ ಗಳಲ್ಲಿ ಫ್ರೀ-ಸ್ಯಾಪ್ಲಿ೦ಗ್ ಗಳು ಇರುತ್ತವೆ. ಎಲ್ಲವೂ ಖಾಸಗಿ ಒಡೆತನ. ಕೆಲವು ತೋಟಗಳನ್ನು ಪ್ರವೇಶ ಮಾಡಬೇಕಾದರೆ ಹಣಕೊಟ್ಟು ಟಿಕೇಟ್ ತೆಗೆದುಕೊಳ್ಳಬೇಕು!

ಮುಂದುವರಿದಿದೆ (ಭಾಗ 6)...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more