ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ತ್ರಿಮೂರ್ತಿಗಳ ಹಾಸ್ಯ ಸುನಾಮಿ

|
Google Oneindia Kannada News

Krishnegowda, Richard Louis, Gangavati Pranesh
ದೀಪಾವಳಿ ಹಾಗೋ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಂಗಪುರ ಕನ್ನಡಸಂಘ ನವೆಂಬರ್ 1, ಡಿ.ಬಿ.ಎಸ್. ಸಭಾಂಗಣದಲಿ ಭಾನುವಾರ ಸಂಜೆ ಜ್ಯೂ.ಬೀchi ಎಂದೇ ಖ್ಯಾತರಾಗಿರುವ ಗಂಗಾವತಿ ಪ್ರಾಣೇಶ್, ನಗೆಚಟಾಕಿಗೆ ಹೆಸರಾಗಿರುವ ಪ್ರೊ. ಕೃಷ್ಣೇಗೌಡ ಹಾಗೂ ರಿಚರ್ಡ್ ಲೂಯಿಸ್ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು.

ಸಿಂಗಪುರ ಕನ್ನಡಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರಿಂದ ಸ್ವಾಗತ ಭಾಷಣ, ಆಹ್ವಾನಿತರ ಪರಿಚಯ. ಕುಮಾರಿ ಖುಷಿ ಅವರಿಂದ ಗಣಪನಿಗೆ ವಂದನೆ.
ಅಂದು ಸಭಾಂಗಣ ತುಂಬಿತ್ತು. ಸ್ಥಳೀಯ ಕ್ರಾರ್ಯಕ್ರಮಕ್ಕೆ ಬರುವವರು ಹಲವರಾದರೆ, ಹಾಸ್ಯೋತ್ಸವ, ಸಿನಿಮಾ-ಭಾವಗೀತೆ, ರಸಮಂಜರಿ ಕಾರ್ಯಕ್ರಮಗಳಿಗೆ ಬರುವವರು ನೂರಾರು. ಏನ್ ಮಾಡ್ತೀರ ಸ್ವಾಮಿ ನಾವಿರೋದೇ ಹೀಗೆ.

ನೆರೆದಿದ್ದ ಕನ್ನಡಿಗರನ್ನು ಕಂಡು ಬೆಂಗಳೂರು ಸಿಂಗಪುರ ಮಾಡ್ತೀವಿ ಅಂದ್ರು, ಆದ್ರೆ ನೀವು ಸಿಂಗಪುರ ಬೆಂಗಳೂರು ಮಾಡಿದೀರ ಎನ್ನುತ್ತಾ ಮೈಕಾಸುರನ ಹಿಡಿದರು ರಿಚರ್ಡ್ ಲೂಯಿಸ್. ಸುಮಾರು ಮೂರುವರೆ ಗಂಟೆಗಳ ಹಾಸ್ಯದ ಹೊಳೆಯ ಪ್ರವಾಹದ ನಗೆಯ ಏರಿಳಿತದಲ್ಲಿ ನಕ್ಕೂ, ನಕ್ಕೂ ಮುಳುಗಿದವರೇ ಹೆಚ್ಚು. ರಿಚರ್ಡ್ ಅವರದು ಮದುವೆ, ಸಂಸ್ಕೃತಿ, ಮಸಣದ ವಿಷಯವಾದಲ್ಲಿ, ಪ್ರಾಣೇಶ್ ಅವರದು ಉತ್ತರ ಕರ್ನಾಟಕದ ಆಡುಭಾಷೆ, ಸಾಹಿತ್ಯಗಳ ಬಗ್ಗೆ ಕೃಷ್ಣೇಗೌಡರು ಬುಡಬುಡಿಕೆ, ಪ್ರೀತಿ ಎಂಥಾ ವಿಸ್ಮಯ, ಭಾಷೆಗಳಲ್ಲಿ ಹಾಸ್ಯ ಹೇಗೆ ಕಾಣಬಹುದು ಎಂಬುದರ ಬಗ್ಗೆ. ಆ ಕ್ಷಣಕ್ಕೆ ನಗೆಯಾದರೂ ಪ್ರತಿ ಹಾಸ್ಯದಲ್ಲೂ ಒಂದು ಸಂದೇಶವಿತ್ತು, ಭಾಷೆ, ಪರಿಸರದ ಕಾಳಜಿ ಇತ್ತು. ಅಭಿಮಾನ ಇತ್ತು. ಕೃಷ್ಣೇಗೌಡರು ಬುಡುಬುಡಿಕೆಯವನ ಪದ್ಯ, ಹಳ್ಳಿಹೈದರ ನಾಟಕ ಡಯಲಾಗ್ ಇತ್ಯಾದಿ ಅಟಂಬಾಂಬುಗಳನ್ನು ಸಿಡಿಸಿತು.

ಪ್ರಶಸ್ತಿ, ಪುರಸ್ಕಾರ : ಈ ಹಾಸ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಸಿಂಗಪುರ ಕನ್ನಡ ಸಂಘ 2009ನೇ ಸಾಲಿನ ಆಜೀವ ಸಾಧನ ಪ್ರಶಸ್ತಿಯನ್ನು ಮತ್ತೋರ್ವ ಹಿರಿಯ ಚಿತ್ರದುರ್ಗ ಕೇಶವಮೂರ್ತಿ ಅವರಿಗೆ ಸಿಂಗಪುರ ಕನ್ನಡ ಸಂಘದ ಮೊದಲ ಅಧ್ಯಕ್ಷರಾಗಿದ್ದ ಎ.ಎನ್. ರಾವ್ ಅವರು ನೀಡಿ ಗೌರವಿಸಿದರು. ಸಿ.ಕೆ.ಮೂರ್ತಿ ಅವರು ಸಿಂಗಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್, ಬಿಲ್ಡಿಂಗ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ತಮ್ಮ ಸ್ವ-ಉದ್ಯಮದ ಮೂಲಕ ಸಿಂಗಪುರದ ಹಲವು ಕಟ್ಟಡಗಳ ರೂವಾರಿ(ಸಿಂಗಪುರದ ಪಾರ್ಲಿಮೆಂಟ್ ಹೌಸ್, ನೈಟ್ ಸಫಾರಿ, ಅಮರಹೋಟೆಲ್ ಶಾಪಿಂಗ್ ಸೆಂಟರ್, ಸಿಂಗಪುರ ಕ್ರಿಕೆಟ್ ಕ್ಲಬ್). ಅತ್ಯಂತ ಹತ್ತಿರದಿಂದ ಬಲ್ಲ ಮೂರ್ತಿಯವರನ್ನು "ಡಾಕ್ಟರ್ ಆಫ್ ಬಿಲ್ಡಿಂಗ್" ಎನ್ನುತ್ತಾರೆ.

2009 ಸಾಲಿನ ಸಿಂಗಪುರ ಕನ್ನಡ ಸಂಘ ನೀಡುವ ಸಿಂಗಾರ ಪುರಸ್ಕಾರ ವಿಜೇತರು ಪ್ರಜ್ವಲ ಪ್ರಕಾಶ್ ಹಾಗೂ ಜಯಂತ್ ಗಣಪತಿ. ಅವರನ್ನೂ ಇದೇ ವೇದಿಕೆಯ ಮೇಲೆ ಗೌರವಿಸಲಾಯಿತು. ಸಿಂಗಾರ ಪುರಸ್ಕಾರ ಜಿ.ಸಿ.ಎ 'ಒ' ಲೆವೆಲ್ ಹಾಗೂ ಜಿ.ಸಿ. 'ಎ' ಲೆವೆಲ್ ಪರೀಕ್ಷೆಯಲಿ ಹೆಚ್ಚು ಅಂಕ ಪಡೆದ, ಜೊತೆಗೆ ಇನ್ನಿತರ ಆಟ-ಪಾಠಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಕನ್ನಡಿಗ ವಿದ್ಯಾರ್ಥಿಗಳಿಗೆ ನೀಡುವ ಪುರಸ್ಕಾರವಿದು.

ಕನ್ನಡ ಸಂಘದ ಸದಸ್ಯೆ ಶಶಿಮುಖಿ ಶ್ಯಾನ್‌ಭಾಗ್ ಅವರಿಂದ ವಂದನಾರ್ಪಣೆ ನಡೆಯಿತು. ಹಾಸ್ಯೋತ್ಸವ ಕಾರ್ಯಕ್ರಮದ ಸಹ ಪ್ರಾಯೋಜಕರು ಎಸ್.ಬಿ.ಐ ಸಿಂಗಪುರ, ಎಸ್.ಪಿ. ಜೈನ್ ಸೆಂಟರ್, ಕಾಮತ್ ರೆಸ್ಟೋರಾಂಟ್, ಡಿವೈನ್ ಪಾರ್ಕ್, ಸಿಂಗಪುರ್ ಪ್ರೊಫೆಷನಲ್ಸ್ ಅಂಡ್ ಎಕ್ಸಿಕ್ಯೂಟಿವ್ಸ್ ಕೊಆಪರೇಟಿವ್. ತಾಯ್ನಾಡಿನಲ್ಲಿ ನೆರೆ ಹಾವಳಿ ಸಾವಿರಾರು ಮಂದಿ ಮನೆ-ಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇದಕ್ಕಾಗಿ ಸಿಂಗಪುರ ಕನ್ನಡಸಂಘವೂ ಇಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಪರಿಹಾರ ನಿಧಿಗಾಗಿ ಮನವಿ ಮಾಡಿತು.

ನಗೆಯ ಸುನಾಮಿ : ಹಾಸ್ಯ ತತ್‌ಕ್ಷಣ ಹೊರ ಹೊಮ್ಮುವ ಪ್ರಕ್ರಿಯೆ. ಹಾಸ್ಯ ಎಲ್ಲೆಡೆಯೂ ಇದೆ. ಆದರೆ ಅದನ್ನು ಹುಡುಕುವ ಮನೋಭಾವವಿರಬೇಕು. ದಿನ ನಿತ್ಯದ ಆಗು-ಹೋಗುಗಳಲ್ಲಿ ಕೂಡ ಹೇಗೆ ಹಾಸ್ಯವನ್ನು ಕಾಣಬಹುದು, ನಗಿಸುವುದು ನಮ ಧರ್ಮ, ಕೇಳುವುದು ನಿಮ ಕರ್ಮ ಎಂಬ ನಗುವಿನ ಮರ್ಮವನು ತಮ್ಮ ವಾಕ್ಚಾತುರ್ಯದ ಹಾಸ್ಯದ ಹೊಳೆ ಪ್ರವಹಿಸಲು ಆಗಮಿಸಿದ್ದರು ತೌರಿನ ಈ ತ್ರಿವಿದೂಷಕರು. ಹಾಸ್ಯ ಒಂದು ಕಲೆ. ಅದು ಎಲ್ಲರಲ್ಲೂ ಇರುತ್ತದೆ. ಅದನ್ನು ಬಿತ್ತರಿಸಲು ವಾಕ್ಚಾತುರ್ಯ, ಹಾಸ್ಯ ಕಾಣ್ಬ ದೃಷ್ಟಿ ಅತ್ಯಗತ್ಯ. ಅನಾದಿ ಕಾಲದಿಂದಲೂ ಹಾಸ್ಯ ಚಕ್ರವರ್ತಿಗಳಿಗೆ ಒಂದು ಸ್ಥಾನ ಇದ್ದೇ ಇದೆ.

ಡಿವಿಜಿ ಯವರು ಹೇಳುವಂತೆ ನಗುವುದು ಸಹಜ ಧರ್ಮ, ನಗಿಸುವುದು ಪರ ಧರ್ಮ, ಸಹಜ, ಪರ, ಅತಿಶಯದ ಧರ್ಮವನ್ನು ಕರಗತ ಮಾಡಿಕೊಂಡಿರುವ ಹಾಸ್ಯೋತ್ಸವ ತಂಡ. ಇಂದಿನ ಆಧುನಿಕ ಜಗತ್ತಿನಲ್ಲಿ ಹಾಸ್ಯೋತ್ಸವ, ನಗೆ ಜಾಗರಣೆ ಇವೆಲ್ಲವೂ ನಡೆಯುತ್ತಲೇ ಇರುತ್ತದೆ. ಜನರು ತಮ್ಮ ನಿತ್ಯ ಜಂಜಾಟ ಮರೆತು ಕೆಲವು ಗಂಟೆಗಳ ಮಟ್ಟಿಗಾದರೂ ನಗೆಗಡಲಲ್ಲಿ ತೇಲಲಿ ಎಂಬ ಆಶಯ. ನಗುತಾ ನಲೀ ನಲೀ ಏನೇ ಆಗಲಿ...

ಹಾಸ್ಯದ ಒಂದೆರಡು ತುಣುಕುಗಳು:

ಮುಕ್ಕೋಟಿ ದೇವತೆಗಳಿದ್ರೂ ಕೂಡ ವಿಘ್ನೇಶನಿಗೆ ಮೊದಲು ಪೂಜೆ ಅದೂ ನಾಟಕದವರು ತಪ್ಪದೆ ಮಾಡ್ತಾರೆ ಯಾಕಪ್ಪಾ ಅಂದ್ರೆ ವಿಗ್ ಹಾಕೇ ಹಾಕ್ತಾರೆ, ವಿಗ್ ಬೀಳದಿರಲಪ್ಪಾ ಅನ್ನೋಕೆ ವಿಘ್ನೇಶನಿಗೆ ಅಗ್ರಪೂಜೆ ಅದೇ ಅಲ್ಲದೆ ಅವನು ಮಹಾನ್ ಬುದ್ಧಿವಂತ, ರೀಸನ್ ಅವನು ಮದ್ವೆ ಆಗ್ಲಿಲ್ಲ ಅದಕ್ಕೆ. ಅವರಪ್ಪನ್ನ ನೋಡಿ ಇವ್ನು ಮದ್ವೇನೇ ಬೇಡ ಎಂದು ಡಿಸೈಡ್ ಮಾಡಿದ್ನಂತೆ. ಅಪ್ಪನಿಗೋ ಒಬ್ಬಳು ತಲೆ ಮೇಲೆ ಮತ್ತೊಬ್ಬಳು ತೊಡೆ ಮೇಲೆ. ಈ ಲ್ಯಾಪ್‌ಟಾಪ್ ಸಹವಾಸವೇ ಬೇಡ ಎಂದು ಮೌಸ್ ಹಿಡಿದನವ.

ನೋಡಿ, ಜೀವನದಲ್ಲಿ ಪೋಸ್ಟ್‌ಪೋನ್ ಮಾಡಬಾರದು ಅದೂ ಹೆಣ್ಣು ಮಕ್ಕಳು ಮದುವೆಯನ್ನು ಮಾಡಲೇ ಬಾರದು. ನೋಡಿ ಹೆಣ್ಣು ಮಕ್ಕಳು 16-22ರ ತನಕ ಫುಟ್ಬಾಲ್..ಯಾಕಂದ್ರೆ ಸುತ್ತಲೂ ಹುಡುಗರು ಓಡಾಡ್ತಾ ಇರ್ತಾರೆ, ಯಾರನ್ನು ಬೇಕಾದರೂ ಚೂಸ್ ಮಾಡಬಹುದು. 25ರಿಂದ ಕ್ರಿಕೆಟ್, ಕ್ಯಾಚ್ ಹಿಡಿದವನ ಜೊತೆ ಮದುವೆ. ಇನ್ನು 30 ಆಯಿತು ಅಂದ್ರೆ ಟೇಬಲ್‌ಟೆನ್ನಿಸ್ ಇವ್ನು ನಂಗೆ ಬೇಡ ಅಂತಾನೆ, ಅವ್ನು ನೀ ತಗೋ ಅಂತಾನೆ. ಇದು ಐದು ವರುಷ ಅತ್ತಿತ್ತ ಹುಡುಗರಿಗೂ ಅನ್ವಯಿಸುತ್ತೆ.

ಮದ್ವೇ ಅನ್ನೋದು ಹೊಸದರಲ್ಲಿ ಚಾಕಲೇಟ್, ಆಮೆಲೆ ಚೂಯಿಂಗಮ್. ಅಗಿದದ್ದೋ ಅಗಿದದ್ದು, ಉಗುಳಲೂ ಇಷ್ಟ ಆಗೋಲ್ಲ, ನುಂಗಕ್ಕೂ ಆಗೋಲ್ಲ. ಎಳೆದಷ್ಟೂ ಎಳೆಯುತ್ತೆ. ಅದಕ್ಕೆ ಡಿ.ವಿ.ಜಿಯವರು ಹೇಳಿದ್ದು ಮದುವೆಗೋ...ಮಸಣಕೋ ಎಂದು. ನೋಡಿ ನೀ ಹೂವಿನ ಮೇಲೆ ಮಲಗಿದರೆ ಅದು ಮದನರಾತ್ರಿ, ಹೂವು ನಿನ್ನ ಮೇಲೆ ಬಿದ್ದರೆ ಅದು ಮಸಣ ರಾತ್ರಿ.

ಪ್ರಾಣೇಶ್ ಅವರು ವೇದಿಕೆಗೆ ಬಂದು ಮಾತನಾಡಲು ಪ್ರಾರಂಭಿಸಿದಾಗ ಎಲ್ಲೋ ಕೆಮ್ಮಿದ ಶಬ್ದ ಕೇಳಿ, ಯಾರೋ ಕೆಮ್ತಾ ಇದ್ದಾರೆ ಹಾಗಾದ್ರೆ ನಕ್ಕು ತುಂಬ ದಿನ ಆದಹಾಗೆ ಎಂದರು. ನಿಮಗೆ ಉದಯ ಟಿ.ವಿ. ಬರುತ್ತಾ... ಇಲ್ಲಾ ಎಂದಾಗ ನೀವು ಪುಣ್ಯವಂತರು... ಸದ್ಯ ಸಾವಿರ, ಸಾವಿರ ಎಪಿಸೋಡ್ ನೋಡುವ ಕಷ್ಟ ನಿಮಗಿಲ್ಲ. ಕನ್ನಡ ಚಾನೆಲ್ಲೇ ಇಲ್ವೇ...ನೀವು ಪಾಪಿಷ್ಟರು ಬಿಡಿ. ಹಾಸ್ಯ ಎಲ್ಲೆಡೆ ಕಾಣಬಹುದು..ಒಮ್ಮೆ ಪೇಟೆ ಕಡೆ ಹೋದಾಗ ಕಣ್ಣು ಹಾಯಿಸಿ..ಗೊಮ್ಮಟೇಶ ಕ್ಲಾತ್ ಸೆಂಟರ್, ರಾಘವೇಂದ್ರ ಚಿಕನ್ ಮಾರ್ಟ್, ಅಕ್ಕಮಹಾದೇವಿ ಬ್ಯೂಟಿ ಪಾರ್ಲರ್.

ಕೃಷ್ಣೇಗೌಡರ ಅವರ ಮಾತಿನಲ್ಲಿ ಭಾಷಾಭಿಮಾನ, ಸಾಹಿತ್ಯದ ಸೊಗಡು ಬಹಳ ಇತ್ತು. ಮಾತು ಹಾಸ್ಯವಾದರೂ ಅರ್ಥ ಬಹಳ ಅಡಗಿತ್ತು.

ಜಿ.ಎಸ್.ಎಸ್. ಅವರ ಕವನದೊಂದಿಗೆ ಪ್ರಾರಂಭ ಮಾಡಿದರು ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ, ಮೋಡ ಕಟ್ಟೀತು ಹೇಗೆ...ಪ್ರೀತಿ ಎಂಥಾ ವಿಸ್ಮಯ. ಪ್ರಕೃತಿಗೆ ಪ್ರಕೃತಿಯೇ ಸಾಟಿ. ನೋಡಿ ಹೊರಗಿನವ್ರು ಬಂದು ದೀಪ ಹಚ್ತಾರೆ, ಒಳಗೆ ಇರೋವ್ರು ಬತ್ತಿ ಇಡ್ತಾರೆ. ಎಂಥಾ ನಿಜಾರ್ಥ ಅಡಗಿದೆ ಇಲ್ಲಿ..

ಕನ್ನಡಿಗರು ದೊಡ್ಡವರಾಗಿ ಬೆಳೆಯದಿದ್ದರೆ ಭಾಷೆ ಬೆಳೆಯೊಲ್ಲ. ನೀವು ಕನ್ನಡ ರಾಯಭಾರಿಗಳು. ಕನ್ನಡವನ್ನು ಜೀವಂತವಾಗಿರಿಸಿ. ನಗುವ ಸೌಭಾಗ್ಯ ಇರುವುದು ಮನುಜನಿಗೆ ಮಾತ್ರ. ಬಾರದು ಬಪ್ಪದು, ಬಪ್ಪದು ತಪ್ಪದು, ನಾಳೆ ಕಷ್ಟ ಬರುತ್ತೆ ಎಂದು ಇಂದೇ ಬಿಮ್ಮನೆ ಕೂರಬೇಡಿ, ಕೊರಗಬೇಡಿ.

ಒಳಗೆ ಕಳೆದದ್ದು, ಒಳಗೇ ಹುಡುಕಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X