ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಭಾಷೆ ಎಲ್ಲೆ ಮೀರಿದ ಸಂಗೀತ ಸಮಾರಾಧನೆ

|
Google Oneindia Kannada News

Swara Raga Sudha completes 10 years
ದಿ. ಆ.ನ.ಕೃ. ಅವರ ಸಂಧ್ಯಾರಾಗ ಕಾದಂಬರಿಯಲ್ಲೊಂದು ಸುಂದರ ದೃಶ್ಯವಿದೆ. ಕಥಾನಾಯಕ ಲಕ್ಷ್ಮಣ [ಈ ಪಾತ್ರಕ್ಕೆ ಡಾ.ರಾಜ್ ಜೀವ ತುಂಬಿದ್ದರು] ಹಳ್ಳಿಯ ಗುಡಿಯಲ್ಲಿ ಹಾಡುತ್ತಿರುವಾಗ ಅಕಸ್ಮಾತಾಗಿ ಅಲ್ಲಿಗೆ ಹಿರಿಯ ಗಾಯಕ ಮುಳುಬಾಗಿಲು ಚನ್ನಪ್ಪ ಬರುತ್ತಾರೆ. ಲಕ್ಷ್ಮಣ ಅವರನ್ನು ಸಂಗೀತ ಕಲಿಸುವಂತೆ ಕೋರಿದಾಗ ಚನ್ನಪ್ಪ ಹೇಳುತ್ತಾರೆ, ಮಗಾ ನೀನು ಕಲಿಯೋಕೆ ಹುಟ್ಟಿದವನಲ್ಲ, ಕಲಿಸೋಕೆ ಹುಟ್ಟಿದವನು ಎಂದು. ನಮ್ಮ ಅಕ್ಲೆಂಡಿನ ಸ್ವರ ರಾಗ ಸುಧಾ ಸಂಗೀತ ಶಾಲೆಯ ಗುರು ವಿದ್ವಾನ್ ಎಂ.ಡಿ. ದಿವಾಕರ್ ಸುಮಾರು ನಲವತ್ತು ಮಕ್ಕಳಿಗೆ ಸಂಗೀತ ಕಲಿಸಿ ಗಾಯಕರನ್ನಾಗಿಸಿರುವುದನ್ನು ನೋಡಿ ಈ ಮಾತು ನೆನಪಾಯ್ತು.

ತಮ್ಮ ಸಂಗೀತ ಶಾಲೆಯ ವತಿಯಿಂದ ದಿವಾಕರ್ ಮತ್ತು ಅವರ ಪತ್ನಿ ಶಾಂತಾ ಅವರು ದಿನಾಂಕ 26ನೇ ಸೆಪ್ಟೆಂಬರ್, ಶನಿವಾರದಂದು ಎರ್ಪಡಿಸಿದ್ದ ಸರಸ್ವತಿ ಪೂಜೆ ಕಾರ್ಯಕ್ರಮದ ಶುಭಾರಂಭ ಮಾಡಿದವರು ಶ್ರೀ ಗಣೇಶ ದೇವಾಲಯದ ಪ್ರಧಾನ ಅರ್ಚಕರಾದ ಚಂದ್ರು ಅವರು.

ಮೊದಲಿಗೆ ಅತಿ ಚಿಕ್ಕ ವಯಸ್ಸಿನ ಶಿಷ್ಯರಾದ ನಿಧಿ, ಮೃದುಲಾ ಹಾಗೂ ಇನ್ನಿತರ ಗಾಯಕಿಯರು ಶ್ರೀ ಗಣನಾಥ ಸಿಂಧೂರ ವದನ ಎಂದು ಪ್ರಾರ್ಥಿಸಿದರು. ನಂತರ ಭಾಗವಹಿಸಿದ ಕಿರಿಯ ಕಲಾವಿದರು ಮತ್ತು ಅವರಿಗೆ ವಾದ್ಯ ಸಂಗೀತದ ನೆರವು ನೀಡಿದ ಹಿರಿಯ ಕಲಾವಿದರು ಸುಮಾರು ಐದು ಗಂಟೆಗಳ ಕಾಲ ಕರ್ಣಾಟಕ ಸಂಗೀತದ ರಸಧಾರೆ ಹರಿಸಿ ಶ್ರೋತೃಗಳನ್ನು ಪರವಶರಾಗಿಸಿದರು. ದೇಶ ಭಾಷೆಗಳ ಎಲ್ಲೆಮೀರಿದ ಮಕ್ಕಳು ಹಾಡದ ರಾಗವಿರಲಿಲ್ಲ, ಸ್ಮರಿಸದ ಗಾಯಕರಿರಲಿಲ್ಲ. ಕನ್ನಡೇತರ ಮಕ್ಕಳಿಂದ ಕನ್ನಡದ ಹಾಡುಗಳನ್ನು ಹಾಡಿಸಿದ್ದು ವಿಶೇಷವೆನಿಸಿತು. ದಾಸರು, ದೀಕ್ಷಿತರು, ಹೀಗೆ ಹಲವಾರು ಪುಣ್ಯಜೀವಿಗಳಿಗೆ ಅವರ ಕೃತಿಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಿದ ಎಲ್ಲರ ಪ್ರೇರಣೆ ದಿವಾಕರ್ ಎಂದರೆ ಅತಿಶಯೋಕ್ತಿಯಲ್ಲ.

ನ್ಯೂಜಿಲೆಂಡ್ ಕರ್ನಾಟಕ ಸಂಗೀತ ಸೊಸೈಟಿಯ ಅಧ್ಯಕ್ಷ ಡಾ. ಅಶೋಕ್ ಮಾಲೂರ್, ಶ್ರೀಮತಿ ಶ್ಯಾಮಲಾ ಹರಿಹರನ್, ಸ್ವಾಮಿನಾಥನ್, ಹಿಂದೂಸ್ತಾನಿ ತಬ್ಲಾ ವಾದಕ ಬಸಂತ್ ಮಾಧುರ್, ಕಿರಿಯರಾದ ಚಿ. ಸಾಕೇತ್, ಶೃತಿ ಅವರುಗಳು ವಯೋಲಿನ್, ತಬಲಾ ಮತ್ತು ಕೀಬೋರ್ಡ್ ಗಳ ಸಾಥ್ ನೀಡಿ ಕಾರ್ಯಕ್ರಮವನ್ನು ಮತ್ತಷ್ಟು ಮಧುರವಾಗಿಸಿದರು. ದಿವಾಕರ್ ಹಾಡಿದ ಜಗದೇಕ ವೀರನ ಕಥೆ ಚಿತ್ರದ ಶಿವ ಶಂಕರಿ ಶಿವಾನಂದ ಲಹರಿ ಶಾಸ್ತ್ರೀಯ ಸಂಗೀತಾಧಾರಿತ ಗೀತೆ ಕರ್ಣಾಮೃತವಾಯಿತು.

ಮಾನಸಿ ಮತ್ತು ಕೃತಿಕಾ ನಿರೂಪಿಸಿದ ಕಾರ್ಯಕ್ರಮ ಕೊನೆಯಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗ್ಯದಾ ಲಕ್ಷ್ಮೀ ಬಾರಮ್ಮಾಹಾಡುವುದರೊಂದಿಗೆ ಮುಕ್ತಾಯವಾಯಿತು. ಸ್ವರ ರಾಗ ಸುಧಾ ಸಂಗೀತ ಶಾಲೆಯ ಸ್ಥಾಪಕರಾದ ವಿದ್ವಾನ್ ದಿವಾಕರ್ ಅವರು ವೃತ್ತಿಯಿಂದ ಇಂಜಿನೀಯರ್, ಪ್ರವೃತ್ತಿಯಿಂದ ಗಾಯಕರು ಮತ್ತು ವೈಣಿಕರು. ಕಳೆದ ಹತ್ತು ವರ್ಷಗಳಿಂದ ಆಕ್ಲೆಂಡಿನ ವಿದ್ಯಾರ್ಥಿಗಳಿಗೆ ಕರ್ಣಾಟಕ ಸಂಗೀತ, ವೀಣೆ ಮತ್ತು ಕೀಬೊರ್ಡ್ ವಾದನ ಕಲಿಸಿದ್ದಾರೆ. ಇಲ್ಲಿನ ಹವಾಮಾನಕ್ಕೆ ಒಗ್ಗುವಂತೆ ವೀಣೆಯನ್ನು ಪರಿಷ್ಕರಿಸಿದ್ದಾರೆ. ಇದನ್ನು ನೋಡಿ ಮೆಚ್ಚಿದ ಹರಿದಾಸರಾದ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು ಈ ವೀಣೆಗೆ ಸಾರಂಗ ಸರಸ್ವತಿ ಎಂದು ನಾಮಕರಣಮಾಡಿದರು.

ದಿವಾಕರ್ ಅವರಿಂದ ಸಂಗೀತ ಕಲಿತ ವಿದ್ಯಾರ್ಥಿಗಳು ಸ್ಥಳೀಯ ಕನ್ನಡ ಕೂಟ, ಭಜನ್ ಸತ್ಸಂಗ, ಬಸವ ಸಮಿತಿ, ರಾಘವೇಂದ್ರ ಭಕ್ತಿ ಪ್ರಚಾರ ಪೀಠ ಮುಂತಾದ ಹಲವಾರು ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆ ಗಳಿಸಿ ತಮ್ಮ ಗುರುಗಳಿಗೆ ಕೀರ್ತಿ ತಂದಿದ್ದಾರೆ. ವಿದ್ವಾನ್ ದಿವಾಕರ್ ಮತ್ತು ಅವರ ಎಲ್ಲ ಸಾಧನೆಗೆ ಬೆನ್ನೆಲುಬಾಗಿರುವ ಶಾಂತಾ ದಿವಾಕರ್ ಅವರ ಸಂಗೀತ ಸೇವೆ ನಿರಂತರವಾಗಿ ಮುಂದುವರೆಯಲೆಂದು ಸಂಗೀತಾಸಕ್ತರೆಲ್ಲರ ಹಾರೈಕೆಯಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X