ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಮನಮೂರ್ತಿ : ಮರೆಯಾದ ಶಿಕ್ಷಕ ಮರೆಯದ ನೆನಪು

By * ವರದಿ: ಪ್ರಕಾಶ್ ರಾಜಾರಾವ್
|
Google Oneindia Kannada News

Beloved teacher Vamana Murthy remembered
ಪ್ರೊ. ವಾಮನ ಮೂರ್ತಿಯವರಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ಶಿಷ್ಯ ವಾತ್ಸಲ್ಯವಿತ್ತು, ಕಲಿಸುವುದರಲ್ಲಿ, ಸಂಶೋಧನೆಗೆ ನೆರವಾಗುವುದರಲ್ಲಿ ಅವರಿಗಿದ್ದ ಆಸಕ್ತಿ ಅಪಾರ ಎಂದು ತಮ್ಮ ಸುಮಾರು ನಾಲ್ಕು ದಶಕಗಳ ಸಹೋದ್ಯೊಗಿಯಾಗಿದ್ದ ದಿ. ಎಂ.ಕೆ. ವಾಮನ ಮೂರ್ತಿ ಅವರನ್ನು ಸ್ಮರಿಸಿದರು ಆಕ್ಲೆಂಡ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಡೇವಿಡ್ ಗಾಲ್ಡ್.

ಶಿಕ್ಷಕರ ದಿನದಂದೇ ಮೈಸೂರಿನಲ್ಲಿ ಜನಿಸಿ [ಜನನ 5ನೇ ಸೆಪ್ಟೆಂಬರ್ 1934, ನಿಧನ 6ನೇ ಎಪ್ರಿಲ್ 2009] ಗಣಿತ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ಸುಮಾರು ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿದ್ದ ಎಲ್ಲರ ಪ್ರೀತಿಯ ಅಂಕಲ್ ವಾಮನ ಮೂರ್ತಿ ನ್ಯೂಜಿಲೆಂಡ್ ಕನ್ನಡ ಕೂಟ, ಭಜನ್ ಸತ್ಸಂಗ, ಕರ್ನಾಟಕ ಸಂಗೀತ ಸೊಸೈಟಿ, ಗುರು ರಾಘವೇಂದ್ರ ಭಕ್ತಿ ಪ್ರಚಾರ ಪೀಠ, ಬಸವ ಸಮಿತಿ ಮುಂತಾದ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಲು ನೆರವಾದವರು.

ಕನ್ನಡ ಕೂಟದ ಸಂಸ್ಥಾಪನಾಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಲು 5ನೇ ಸೆಪ್ಟೆಂಬರ್ 2009ರಂದು ಒಂದು ಕಾರ್ಯಕ್ರಮ ಏರ್ಪಡಿಸಿ ವಾಮನಮೂರ್ತಿ.. ಚಿರಸ್ಮರಣೆ, ವಾಮನ್ ಇನ್ ಮೆಮೊರಿಯಮ್ ಎಂಬ ಸ್ಮರಣ ಸಂಚಿಕೆಯನ್ನು ಹೊರತರಲಾಯಿತು. ಅಂಕಲ್ ಅವರ ಪತ್ನಿ ಶ್ರೀಮತಿ ರತ್ನಾ ವಾಮನ ಮೂರ್ತಿ ಹಾಗೂ ಅವರ ಕುಟುಂಬದ ಇತರ ಸದಸ್ಯರು , ಆಕ್ಲೆಂಡ್ ವಿಶ್ವವಿದ್ಯಾನಿಲಯದ ಅವರ ಸಹೋದ್ಯೊಗಿಗಳು, ಕನ್ನಡ ಕೂಟ ಹಾಗೂ ಕನ್ನಡೇತರ ಅಭಿಮಾನಿಗಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಪ್ರೊ.ಡೇವಿಡ್ ಗಾಲ್ಡ್ ಮತ್ತು ಹಿರಿಯ ಕನ್ನಡಿಗ ಶ್ರೀನಿವಾಸ ನಾಡಿಗೇರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ವಾಮನಮೂರ್ತಿ ಚಿರಸ್ಮರಣ ಸಂಚಿಕೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬರೆದ ಲೇಖನಗಳಿವೆ. ವಾಮನ ಮೂರ್ತಿಯವರ ಕುಟುಂಬದವರು , ಆಕ್ಲೆಂಡ್ ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದ ಸಹೋದ್ಯೊಗಿಗಳು, ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಎಂ.ಕಲ್ಬುರ್ಗಿ, ಮೈಸೂರಿನ ಪತ್ರಕರ್ತ ಗೌರಿ ಸತ್ಯ [ನ್ಯೂಜಿಲೆಂಡ್ ಮಡಿಲಲ್ಲಿ ಎಂಬ ಸುಂದರ ಪ್ರವಾಸ ಕಾದಂಬರಿ ಕರ್ತೃ], ಹಿರಿಯ ಕನ್ನಡತಿ ಉಷಾ ಪಾಲಾಕ್ಷಪ್ಪ , ಡಾ.ಲಿಂಗಪ್ಪ ಕಲ್ಬುರ್ಗಿ, ರವಿಶಂಕರ್ ರಾವ್, ಪ್ರಕಾಶ್ ಬಿರಾದರ್, ಬಾಲಕ ವಾದಿರಾಜ್ ಉಮೇಶ್ ಅವರನ್ನೊಳಗೊಂಡು ಹಲವಾರು ಲೇಖಕರು ಬರೆದ 36 ಲೇಖನ ಕವನಗಳು, ಅಪೂರ್ವ ಛಾಯಚಿತ್ರಗಳು ಎಲ್ಲವೂ ನಮ್ಮೆಲ್ಲರ ಪ್ರೀತಿಯ ಅಂಕಲ್ ವಾಮನ ಮೂರ್ತಿ ಬಾಳಿದ ಸಾರ್ಥಕ ಬದುಕಿನ ಬಗ್ಗೆ, ಕನ್ನಡ ಅಭಿಮಾನದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂತಹ ಉತೃಷ್ಟ ಸಂಪಾದಕೀಯ ಬರೆದು ಈ ಅರ್ಥಪೂರ್ಣ ಸ್ಮರಣ ಸಂಚಿಕೆಯನ್ನು ಹೊರತರಲು ಶ್ರಮಿಸಿದ ಪ್ರಧಾನ ಸಂಪಾದಕ ನಾರಾಯಣಪ್ಪ ಭಾಸ್ಕರ್ ಅಭಿನಂದನಾರ್ಹರು.

ಕಾರ್ಯಕ್ರಮವನ್ನು ಧೀರಜ್ ವೆಂಕಟ್, ಅನೂಷಾ ದತ್ತಾತ್ರೇಯ, ವರ್ಷಾ ಪೈ, ಸುಮಂತ್ ಸುರೇಶ್, ಪವನ್ ಕೌಶಿಕ್, ಅಧೀರಾ ವೆಂಕಟ್ ಹಾಗೂ ವಸಂತಾ ಕಲ್ಬಾಗಲ್ ಅವರ ನೇತೃತ್ವದ ಗೋಷ್ಠಿ ಗಾಯನ ಗುಂಪಿನವರು ಭಕ್ತಿ ಸಂಗೀತ ಹಾಡುವುದರೊಂದಿಗೆ ಪ್ರಾರಂಭಿಸಲಾಯಿತು. ಪ್ರೊ. ಡೇವಿಡ್ ಗಾಲ್ಡ್ , ಕೂಟದ ಅಧ್ಯಕ್ಷ ರವಿ ಶಂಕರ್ ರಾವ್, ಕಾರ್ಯದರ್ಶಿ ಪ್ರಕಾಶ್ ಬಿರಾದರ್, ಡಾ.ಗೀತಾ ಗಲಗಲಿ, ಆಕ್ಲೆಂಡ್ ಇಂಡಿಯನ್ ಸಂಸ್ಥೆಯ ಕಾರ್ಯದರ್ಶಿ ಡಾ.ಲಿಂಗಪ್ಪ ಕಲ್ಬುರ್ಗಿ, ಶ್ರೀನಿವಾಸ ನಾಡಿಗೇರ್, ಉಮೇಶ್ ಪ್ರಸಾದ್, ಪ್ರಕಾಶ್ ರಾಜಾರಾವ್ ಅವರುಗಳು ಮಾತನಾಡಿ ದಿ. ವಾಮನ ಮೂರ್ತಿಯವರಿಗೆ ಶ್ರದ್ಧಾಂಜಲಿಯನ್ನರ್ಪಿಸಿದರು. ಚಿ.ವಾದಿರಾಜ್ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X