ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ

By Staff
|
Google Oneindia Kannada News

Dr. Vasundhara Doreswamy
ಭಾರತದ ಶಾಸ್ತ್ರೀಯ ನೃತ್ಯ ಶೈಲಿ ಭರತನಾಟ್ಯದ "ಮಾರ್ಗಂ" ಎಂಬ ಶೀರ್ಷಿಕೆಯಲ್ಲಿ ಪ್ರಬುದ್ಧ ಪ್ರದರ್ಶನವನ್ನು ನೀಡಿ ರಸಿಕರ ಮನ ತುಂಬಿದ ನಮ್ಮ ಕರ್ನಾಟಕದ ಹೆಮ್ಮೆಯ ಹಿರಿಯ ಕಲಾವಿದೆ ಡಾ ವಸುಂಧರಾ ದೊರೆಸ್ವಾಮಿ ಅವರ ಕಾರ್ಯಕ್ರಮವು ಮೇರಿಲ್ಯಾಂಡ್ ನ ಮುರುಗನ್ ದೇವಾಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ಗುರು ಡಾ ವಸುಂಧರಾ ಅವರು ಸಭಿಕರನ್ನೆಲ್ಲ ಅಮೋಘ ಅಭಿನಯ ಮತ್ತು ಲಯಗಾರಿಕೆಯಿಂದ ಮಂತ್ರ ಮುಗ್ಧಗೊಳಿಸಿದರು.

* ಭ್ರಮರಿ ಶಿವಪ್ರಕಾಶ್

ಡಾ ವಸುಂಧರಾ ದೊರೆಸ್ವಾಮಿ ಅವರು ತಮ್ಮ ಶಿಷ್ಯರಾದ ವಿದುಷಿ ವಾಣಿ ರಮೇಶ್ ಮತ್ತು ವಿದುಷಿ ಶೀಲಾ ಕುಮಾರ್ ಅವರ ನೃತ್ಯ ಶಾಲೆಯಲ್ಲಿ ಕಾರ್ಯಾಗಾರವನ್ನು ನಡೆಸಿಕೊಡಲು ಬಂದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತು. ನೃತ್ಯ ಕಾರ್ಯಕ್ರಮಕ್ಕೆ ಮನಸ್ಸು ಮತ್ತು ದೇಹವನ್ನು ತಯಾರುಮಾಡಿಕೊಳ್ಳುವ ಒಂದು ನೃತ್ಯ ಬಂಧ ಮೇಳ ಪ್ರಾಪ್ತಿ ಜತಿಯಿಂದ ಕಾರ್ಯಕ್ರಮ ಆರಂಭಗೊಂಡಿತು. ಮತ್ತೆ ನಡೆದದ್ದು ವಿಘ್ನ ವಿನಾಶಕ ಗಣಪತಿಯ ಪ್ರಾರ್ಥನೆ. ಅಂಬಲದ ಆರಾಧ್ಯ ದೈವ ಸುಬ್ರಹ್ಮಣ್ಯನನ್ನು ಸ್ತುತಿಸುವ ನೃತ್ಯಬಂಧ ಷಣ್ಮುಖ ಕೌತ್ವಂ ಮೂರನೆಯದಾಗಿ ಪ್ರಸ್ತುತಗೊಂಡಿತು. ಮಯೂರ ಗತಿಯನ್ನು ಅಳವಡಿಸಿ ನವಿಲನ್ನು ಏರಿ ಬರುವ ಷಣ್ಮುಖನ ಸೊಬಗು ನೆರೆದ ಎಲ್ಲರ ಕಣ್ತುಂಬಿತು.

ಮುಂದೆ ವಿದುಷಿ ಗೀತಾ ಸೀತಾರಾಂ ಅವರು ಕನ್ನಡದಲ್ಲಿ ರಚಿಸಿದ ಪದವರ್ಣ ವೇಣುಗೋಪಾಲ ಸ್ವಾಮಿಯ ಕರೆ ತಾರೆಲೆ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಈ ಆತ್ಮ ಪರಮಾತ್ಮನಲ್ಲಿ ಲೀನವಾಗಲು ಹಂಬಲಿಸುವುದನ್ನು ನಾಯಕ ನಾಯಕಿ ಭಾವದ ಮೂಲಕ ಡಾ ವಸುಂಧರಾ ಅವರು ಮನೋಜ್ಞವಾಗಿ ಅಭಿನಯಿಸಿದರು. ಕನ್ನಡ ಭಾಷೆಯಲ್ಲಿ ರಚಿತವಾದ ಶಾಸ್ತ್ರೀಯ ಭರತನಾಟ್ಯದ ನೃತ್ಯ ಬಂಧಗಳು ಬಹಳ ವಿರಳವಾದದ್ದರಿಂದ ನವ್ಯ ವಾಗ್ಗೇಯಕಾರರ ಇಂಥ ಪ್ರಯತ್ನ ಪ್ರಶಂಸನಾರ್ಹ.

ಮುಂದಿನ ಹಂತದಲ್ಲಿ ಗಂಗಾವತರಣವನ್ನು ಚಿತ್ರಿಸುವ ಮಹಾದೇವ ಶಿವ ಶಂಭೋ ಮತ್ತು ಮಹಿಷಾಸುರ ಮರ್ದನದ ಕಥೆಯನ್ನು ಹೇಳುವ ಜಯದುರ್ಗೆ ದುರ್ಗತಿ ಪರಿಹಾರಿಣಿ ಹೃದಯ ಸ್ಪರ್ಶಿಯಾಗಿದ್ದವು. ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ವಿದುಷಿಯಾಗಿರುವ ಡಾ ವಸುಂಧರಾ ಅವರು ತಿಲ್ಲಾನಕ್ಕಾಗಿ ಆಯ್ದ ಕೃತಿ ಶ್ರೀಮತಿ ನಾಗಮಣಿ ಶ್ರೀನಾಥ್ ಅವರು ರಚಿಸಿದ ಶಿವಶಕ್ತಿ ರಾಗದ ನೃತ್ಯ ಬಂಧ. ಇದರಲ್ಲಿ ಭಕ್ತ ಶ್ರೇಷ್ಠ ಸಂತ ಕನಕದಾಸರಿಗೆ ಕಡೆಗೋಲು ಹಗ್ಗ ಹಿಡಿದ ಮುದ್ದು ಬಾಲ ಕೃಷ್ಣ ದರ್ಶನ ನೀಡಿದ ಸಂದರ್ಭವನ್ನು ತೋರಿಸಿ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಧ್ವನಿ ಮುದ್ರಿತ ಹಿನ್ನೆಲೆ ಸಂಗೀತ ಒಂದೊಮ್ಮೆ ಕೈಕೊಟ್ಟು ರಸಾಭಾಸವಾಗಿ ಆಯೋಜಕರು ತಾಳ್ಮೆಕೆಟ್ಟರೂ ಸಂಯಮದಿಂದಿದ್ದ ಡಾ ವಸುಂಧರಾ ನೆರೆದಿದ್ದ ಎಲ್ಲ ಗಣ್ಯರು ಮತ್ತು ನನ್ನಂಥ ಎಲ್ಲ ಶಿಷ್ಯವೃಂದದವರಿಗೆ ಆದರ್ಶ ಪ್ರಾಯರಾಗಿ ಇಡೀ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. ಮುರುಗನ್ ದೇವಸ್ಥಾನದ ಅರ್ಚಕರು ದೇವರ ಪ್ರಸಾದ ಆಶೀರ್ವಾದಪೂರ್ವಕವಾಗಿ ನೀಡಿ ದೇವಾಲಯದ ಕಾರ್ಯಕರ್ತರು ಕಲಾವಿದೆಯನ್ನು, ಸಂಘಟಕರನ್ನು ಅಭಿನಂದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X