ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಲೆಂಡ್ ಗಣೇಶನಿಗೆ ಚಿಣ್ಣರ ಸಂಗೀತದ ಅಭಿಷೇಕ

By * ಪ್ರಕಾಶ್ ರಾಜಾರಾವ್, ನ್ಯೂಜಿಲೆಂಡ್
|
Google Oneindia Kannada News

Ganeshotsava by Auckland kannada sangha
ಜೋಗದ ಸಿರಿ ಬೆಳಕು ನಮ್ಮ ನ್ಯೂಜಿಲೆಂಡ್‌ವರೆಗೆ ಬರುವುದು ಅಸಾಧ್ಯ. ಆದರೆ ನಾಲ್ಕು ವರ್ಷದ ಕಿಶೋರಿ ಸಂಜನಾ ಸತ್ಯಕುಮಾರ್ ಕವಿ ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ಗೀತೆಯನ್ನು ನಿರರ್ಗಳವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಆಕ್ಲೆಂಡ್‌ನಿಂದಲೇ ಕನ್ನಡ ತಾಯಿಗೆ ನಿತ್ಯೋತ್ಸವ!

ನ್ಯೂಜಿಲೆಂಡ್ ಕನ್ನಡ ಕೂಟ ದಿನಾಂಕ 29ನೇ ಆಗಸ್ಟ್ 2009ರ ಶನಿವಾರದಂದು ನಡೆಸಿದ ಗಣೇಶನ ಹಬ್ಬದ ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಯಿತು. ಪುಟ್ಟ ಬಾಲಕಿ ತನ್ವಿ ಕೆಡಿಯಪ್ಪ ಗಜಮುಖನೆ ಗಣಪತಿಯೆ ನಿನಗೆ ವಂದನೆ ಎಂದು ಮುದ್ದಾಗಿ ಪ್ರಾರ್ಥನೆ ಸಲ್ಲಿಸಿದ ಮೇಲೆ ಸಿನಿಮಾ ಹಾಡು, ಭಾವ ಗೀತೆ, ಜಾನಪದ ವೃಂದಗಾನಗಳು ಸಂಗೀತ ಪ್ರಿಯರ ಮನ ತಣಿಸಿದವು.

ಹೆಸರಾಂತ ಗಾಯಕಿಯರಾದ ಚೈತ್ರಾ ರವಿಶಂಕರ್ [ಡಾ.ಜಿ.ಎಸ್.ಎಸ್.ಅವರ -ಎದೆ ತುಂಬಿ ಹಾಡಿದೆನು], ಅಖಿಲಾ ಪುತ್ತಿಗೆ [ಭೂಪತಿ ರಂಗ ಚಿತ್ರದ ರಸಿಕಾ ಓ ರಸಿಕಾ], ನಿಖಿಲ್ ಲಕ್ಷ್ಮೀನರಸಿಂಹ [ಪಡೋಸನ್ ಚಿತ್ರದ ಮೆರೆ ಸಾಮನೆವಾಲಿ ಖಿಡಿಕಿಮೆ ಗೀತೆಯ ಕನ್ನಡಿಕರಿಸಿದ ಪಕ್ಕದ ಮನೆ ಹುಡುಗಿ ಚಿತ್ರದ ಅಂದಚಂದದ ಮನೆಯ ಕಿಟಕಿ] , ಶ್ರೀಧರನಾಥ್ [ಆಕಾಶವೇ ಬೀಳಲಿ ಮೇಲೆ], ಪವನ್ ಕೌಶಿಕ್ [ರತ್ನಮಾಲಾ ಪ್ರಕಾಶ್ ಹಾಡಿರುವ ಮುಂಗಾರಿನ ಅಭಿಷೇಕಕೆ - ಭಾವಗೀತೆ], ಸತ್ಯ ಕುಮಾರ್ ಕಟ್ಟೆ ಮತ್ತು ಸಂಗಡಿಗರ ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೊ.. ತಾಯಿ ಚಾಮುಂಡಿಯ ಸೇವೆಗೆ [ಜಾನಪದ]. ಈ ಎಲ್ಲವೂ ಸದಭಿರುಚಿಯಿಂದ ಕೂಡಿದ್ದವು. ಚಿಣಕ್ ಮಿಣಕ್ ಎಂದು ಮಿಂಚು ಹೊಳೆದಂತೆ ನರ್ತಿಸಿದ ಪುಟಾಣಿ ಜೋಡಿ ಮೃದುಲಾ ಪ್ರವೀಣ್ ಹಾಗೂ ನಿಧಿ ವಿಜಯ್ ಪ್ರೇಕ್ಷಕರೂ ನರ್ತಿಸುವಂತೆ ಮಾಡಿದರು. ಕೊನೆಯಲ್ಲಿ ಹೂವು ಹಣ್ಣು ಚಿತ್ರದ ನಿಂಗಿ ನಿಂಗೀ ಹಾಡಿ ಕುಣಿದ ದಂಪತಿಗಳು ಮಂಗಳಾ ಮತ್ತು ಪ್ರಭಾಕರ ಭಲೆ ಜೋಡಿ ಎನಿಸಿದರು.

ವಾರ್ಷಿಕ ಕ್ರೀಡಾ ಕೂಟದಲ್ಲಿ ಮತ್ತು ಪಿಕ್ನಿಕ್ ಸಮಯದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರು ಹಾಗೂ ಕನ್ನಡ ಚಲನಚಿತ್ರ ಗೀತೆಗಳ ಅಂತಾಕ್ಷರಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಹಿರಿಯರಾದ ಸುದರ್ಶನ್ ರಾವ್, ಹೊ.ನಾ. ರಾಮಚಂದ್ರ ಮತ್ತು ಅಕ್ಲೆಂಡ್ ಇಂಡಿಯನ್ ಅಸೋಸಿಯೇಶನ್ ಕಾರ್ಯದರ್ಶಿ ಡಾ.ಲಿಂಗಪ್ಪ ಕಲ್ಬುರ್ಗಿ ಅವರುಗಳು ಬಹುಮಾನ ವಿತರಣೆ ಮಾಡಿದರು. ರಾಮಚಂದ್ರ ಅವರು ಹಾಸ್ಯ ಚಟಾಕಿಗಳನ್ನು ಹೇಳಿ ಕಾರ್ಯಕ್ರಮಕ್ಕೆ ನಗೆಲೇಪನ ಹಾಕಿದರು.

ಕನ್ನಡಕೂಟದ ಅಧ್ಯಕ್ಷ ರವಿ ಶಂಕರ್ ರಾವ್ ಅವರು ಸ್ವಾಗತ ಭಾಷಣ ಮಾಡಿದರು ಹಾಗೂ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಯಶಸ್ವಿಯಾಗಿ ನಡೆಸಿದವರು ಕುಮಾರಿ ವೈಷ್ಣವಿ ಶ್ರೀಧರ್. ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಹ ಈ ಸಂದರ್ಭದಲ್ಲಿ ನಡೆಸಲಾಯಿತು. ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರಗೀತೆಗಳು, ಕರ್ನಾಟಕ ನಾಡಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X