ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುರ ಮಧುರವೀ ಮಂಜುಳಾ ಗುರುರಾಜ್ ಗಾನ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Local talent Suhas singing with Manjula in Singapore
ಚಿಕ್ಕ-ಚೊಕ್ಕ ನಾಡಾದ ಸಿಂಗಪುರದಲಿ ಈ ವರುಷ ಸಿಡಿಲು, ಮಿಂಚು, ಗುಡುಗು, ಥಟ್ಟನೆ ಸುರಿವ ಮಳೆಯ ಸುಳಿವೇ ಇಲ್ಲ. ಬೆವರಿನ ಮಳೆಗೆ ನಿಲುಗಾಲವಿಲ್ಲ. ಏನು ಬಿಸಿಲಪ್ಪಾ, ಎಂಥಾ ಧಗೆಯಪ್ಪಾ ಎನ್ನುವಂಥ ಪರಿಸ್ಥಿತಿ. ಈ ಬೇಗೆಗೆ ಬಳಲುತ್ತಿದ್ದ ಕನ್ನಡಿಗರಿಗೆ ಮಾತ್ರ ಮನಕೆ ಇಂಪುಗಾನದ ಮಂಜುಳ ಗಾನದ ಸಿಂಚನ.

ಈ ಇಂಪುಗಾನದ ಮಂಜುಳ ಸಿಂಚನ ಆದದ್ದು ಆಗಸ್ಟ್ 16, ಭಾನುವಾರ ಸಂಜೆ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲಿ ಸಿಂಗಪುರ ಕನ್ನಡ ಸಂಘ ನಿಯೋಜಿಸಿದ್ದ ಮಂಜುಳಾ ಗುರುರಾಜ್ ಅವರ "ಸುಮಧುರ ಸಂಜೆ" ಕಾರ್ಯಕ್ರಮದಲಿ. ರಾಜ್ಯ ಪ್ರಶಸ್ತಿ ವಿಜೇತೆ ಮಂಜುಳಾ ಗುರುರಾಜ್ ಅವರ ಮಧುರ ಮಧುರವೀ ಮಂಜುಳ ಗಾನದಲಿ ಮಿಂದ ಅನುಭವ.

ಜಿ.ಎಸ್ ಕರ್ಕಿ ಅವರ ಕವನ 'ಹಚ್ಚೇವು ಕನ್ನಡದ ದೀಪ'ದ ಮೂಲಕ ಸಂಗೀತ ಸಂಜೆ ಪ್ರಾರಂಭಗೊಂಡಿತು. ಮಂಜುಳಾ ಗುರುರಾಜ್ ಅವರ ಕಂಠದಸಿರಿ ಶ್ರೋತೃಗಳ ಮೋಡಿ ಮಾಡಿತು. ಮುಂದೆ ಸಾಗಿತು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ 'ಋತು ವಸಂತ ಬಂದನಿದೋ', ಗೋಪಾಲಕೃಷ್ಣ ಅಡಿಗರ 'ಇಂದು ಕೆಂದಾವರೆಯ', ಎಚ್.ಎಸ್. ವೆಂಕಟೇಶ ಮೂರ್ತಿ ಅವರ 'ಹವಳ ಕೆಂಪಿನ ಸಂಜೆ, ವಸಂತ ಬರಲು ಮರ ಚಿಗುರುವುದು', ಕುವೆಂಪು ಅವರ 'ತೇನವಿನಾ' ಕವನಗಳ ಭಾವಸಂಗಮ ಬೇಗೆಯಿಂದ ದಣಿದ ಮನಕೆ ತಂಪೆರೆಚಿತ್ತು.

ಕವನಗಳ ಕಲರವ ಮುಗಿದಂತೆ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಮಂಜುಳಾ ಹಾಡಿದರು. ಸ್ಥಳೀಯ ಪ್ರತಿಭೆಗಳನ್ನು ತಮ್ಮೊಟ್ಟಿಗೆ ಹಾಡಲು ವೇದಿಕೆಯ ಮೇಲೆ ಆಹ್ವಾನಿಸಿದರು. ಸಿಂಗಪುರದ ಕಲಾವಿದರಾದ ವಿನುತಾ ಭತ್ ಜೊತೆಗೂಡಿ ಹೊಸಬೆಳಕು ಚಿತ್ರದ 'ತೆರೆದಿದೆ ಮನೆ ಓ ಬಾ ಅತಿಥಿ', ಶ್ರೀಕಾಂತ್ ಜೊತೆ 'ಜನುಮದ ಜೋಡಿ ನೀನು ನನ್ನ ಕನಕ', ಸುಹಾಸ್ ಅವರೊಂದಿಗೆ 'ಜೊತೆಯಲಿ ಜೊತೆ ಜೊತೆಯಲೀ' ಹಾಡಿದಾಗ ಒನ್ಸ್ ಮೋರ್ ಕೇಳಿ ಬಂದವು. ಮಂಜುಳಾ ಗುರುರಾಜ್ ಅವರು ಸ್ಥಳೀಯ ಪ್ರತಿಭೆಗಳಿಗೆ ನೀಡಿದ ಸದವಕಾಶ, ಪ್ರೋತ್ಸಾಹ ಪ್ರಶಂಸನೀಯ. ಡಾ.ರಾಜ್ ಅವರ ಧ್ವನಿಯೊಂದಿಗೆ ಬೆರೆತ 'ಹೃದಯದಲಿ ಇದೇನಿದು ನದಿಯೊಂದು ಓಡಿದೆ', ಹುಲಿಯ ಹಾಲಿನ ಮೇವು ಚಿತ್ರದ 'ಚಿನ್ನದ ಮಲ್ಲಿಗೆ ಹೂವೇ' ಹಾಡುಗಳು ಮತ್ತೆ ರಾಜ್‌ಕುಮಾರ್ ಅವರನ್ನು ನಮ್ಮ ಕಣ್ಮುಂದೆ ತಂದವು.

ಎಸ್.ಜಾನಕಿ ಅವರ 'ಗಿಲಿ ಗಿಲಿ ಗಿಲಕ್' ಕಾಲ್ಗಳು ತಾಳ ಹಾಕುವಂತೆ ಮಾಡಿತು. ಆಶಾ ಭೋಸ್ಲೆ ಅವರ 'ಆವೋ ಹುಜೂರ್ ತುಮ್ ಕೊ, ಪಿಯ ತೂ ಅಬ್ ತೊ ಆಜಾ' ಓಲ್ದ್ ಈಸ್ ಗೋಲ್ದ್ ಸಿದ್ದಾಂತಕ್ಕೆ ಮತ್ತೆ ತಲೆ ಬಾಗುವಂತೆ ಮಾಡಿತು. ಮಂಜುಳಾ ಗುರುರಾಜ್ ಪ್ರಸಿದ್ಧಿ ತಂದದ್ದು ನಂಜುಂಡಿ ಕಲ್ಯಾಣ ಚಿತ್ರದ ಗುಂಡಿನ ಹಾಡು 'ಒಳಗೆ ಸೇರಿದರೆ ಗುಂಡು' ಹಾಡಿಗೆ ಧಡಬಡನೆ ಸುರಿಯಿತು ಶಿಳ್ಳುಗಳ ಸುರಿಮಳೆ. ಅಡೆತಡೆಯಿಲ್ಲದೆ 3 ಗಂಟೆಗಳ ಮಂಜುಳ ನಿನಾದದ ಮಳೆ ನಿಂತಾಗ ಮಧುರ ಮಧುರವೀ ಮಂಜುಳ-ಗಾನ ಹೃದಯ ತಣಿಸುವಾ ಹೊಸ ತಾನ ಎಂದು ಸಿರಿಕಂಠ ತನ್ನದೇ ಛಾಪನ್ನು ಅಚ್ಚೊತ್ತಿತ್ತು.

ಕನ್ನಡ ಸಂಘ ಸಿಂಗಪುರ 2009ನೇ ಸಾಲಿನ ನೂತನ ಅಧ್ಯಕ್ಷರಾದ ಡಾ. ವಿಜಯ ಕುಮಾರ್ ಅವರಿಂದ ಸ್ವಾಗತ ಭಾಷಣ ಹಾಗೂ ನೂತನ ಪದಾಧಿಕಾರಿಗಳ ಪರಿಚಯ. ರಾಜೇಶ್ವರಿ ಅವರಿಂದ ನಿರೂಪಣೆ, ಸಂಘದ ಉಪಾಧ್ಯಕ್ಷ ಬಿ.ಕೆ ರಾಮದಾಸ್ ಅವರಿಂದ ವಂದನಾರ್ಪಣೆ ನಡೆಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X