ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ

By Staff
|
Google Oneindia Kannada News

Talent hunt for American budding singers
ಬೆಂಗಳೂರು, ಜುಲೈ. 31 : ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯವನ್ನು ಅಕ್ಷರಶಃ ಒಂದುಗೂಡಿಸುವ ಅನೇಕಾರು ಪ್ರಯತ್ನಗಳು ನಡೆದಿವೆ, ನಡೆಯುತ್ತಲೇಯಿವೆ. ಭಾಷೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಬಗೆಯ ಸಮ್ಮೇಳನಗಳ ಮೂಲಕ ಅನಿವಾಸಿ ಅಮೆರಿಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆ ಹಾಕುವ ಕಾರ್ಯಕ್ರಮಗಳು ನಾನಾ ಸ್ತರಗಳಲ್ಲಿ ಜರುಗುತ್ತಿರುತ್ತವೆ. ಈ ಪ್ರಯತ್ನದ ಹಾದಿಯಲ್ಲಿ ಇನ್ನೊಂದು ಮಜಲು, ರಿಯಾಲಿಟಿ ಶೋ.

ಉತ್ತರ ಅಮೆರಿಕಾದಲ್ಲಿ ಕನ್ನಡ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಗಾಯಕ ಗಾಯಕಿಯರೇನಕರಿದ್ದಾರೆ. ಅವರಲ್ಲಿ ಕೆಲವರು ಹವ್ಯಾಸಿಗಳಾಗಿದ್ದರೆ ಇನ್ನು ಕೆಲವರು ತಮ್ಮದೇ ಆದ ಗಾನವೃಂದಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಹಾಡುವುದು ವಾಡಿಕೆ. ಸಂಗೀತದಲ್ಲಿ ಪರಿಶ್ರಮದಿಂದ ಉತ್ತುಂಗಕ್ಕೆ ಬಂದು ಚಲನಚಿತ್ರಗಳಿಗೆ ಹಿನ್ನೆಲೆ ಸಂಗೀತ, ಹಿನ್ನೆಲೆ ಹಾಡುಗಾರರಾಗಿ ರೂಪುಗೊಂಡ ಪ್ರತಿಭಾವಂತರನ್ನೂ ಅಮೆರಿಕನ್ನಡದ ನೆಲ ಕಂಡಿದೆ.

ವಿಶಾಲವಾದ ಉತ್ತರ ಅಮೆರಿಕಾದದಲ್ಲಿ ಚದುರಿಹೋದ ಕನ್ನಡ ಪ್ರತಿಭೆಗಳ ಸಂಖ್ಯೆ ಅಪಾರವಾಗಿದೆ. ಇಂಥವರನ್ನು ಹೆಕ್ಕಿ ತೆಗೆಯುವುದು ಸುಲಭದ ಮಾತಲ್ಲ. ಕನ್ನಡ ಕಂಠದ ಪ್ರತಿಭಾಶೋಧ ಎನ್ನುವುದು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮೈಕೆಲ್ ಜಾಕ್ಸನ್ ನಾಡಿನಲ್ಲಿ ಇದುವರೆಗೆ ನಡೆದಿಲ್ಲ. ಅಲ್ಲಿ ಕೆಲವು ಪ್ರತಿಭೆಗಳಿಗೆ ವೇದಿಕೆಯೇ ಸಿಗುವುದಿಲ್ಲ, ಕೆಲವರಿಗೆ ವೇದಿಕೆ ಸಿಕ್ಕೀತು ಆದರೆ ಬೆನ್ನುತಟ್ಟಿ ಬೆಳೆಸುವವರಿಲ್ಲ.

ಈ ಕೊರತೆಗಳಿಗೆ ಮಂಗಳಹಾಡಿ ವಿಶಾಲ ಅಮೆರಿಕದಲ್ಲಿ ಹರಡಿಕೊಂಡಿರುವ, ಚದುರಿರುವ ಸ್ವರ ಸಂಗೀತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮ ಇದೀಗ ತೆರೆದುಕೊಂಡಿದೆ. ಅದರ ಹೆಸರು 'ವಿಶಾಲ ಅಮೆರಿಕ ಸಂಗೀತ ಪ್ರತಿಭಾನ್ವೇಷಣೆ ಅರ್ಥಾತ್ ರಿಯಾಲಿಟಿ ಶೋ'. ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮವನ್ನು ಸಾಂಗಗೊಳಿಸಲು ಅನಿವಾಸಿ ಕನ್ನಡಿಗರ ಒಂದು ಗುಂಪು ಮುಂದೆ ಬಂದಿದೆ. ಈ ಗುಂಪಿಗೆ ತವರು ಕರ್ನಾಟಕದ ಮೇರು ಸಂಗೀತ, ಗಾಯನ ಪ್ರತಿಭೆಗಳ ಸಹಯೋಗ, ಸಹಕಾರ ಲಭ್ಯವಾಗಿದೆ.

ರಿಯಾಲಿಟಿ ಶೋ ಬರುವ ನವೆಂಬರ್ ತಿಂಗಳಿಂದ ಚಿಗಿತುಕೊಳ್ಳುತ್ತದೆ. ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡಲು ಅಮೆರಿಕಾದಲ್ಲಿ ನಾಲಕ್ಕು ಸುತ್ತಿನ ಪ್ರತಿಭಾಶೋಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ನಾಲಕ್ಕು ಪ್ರಾಂತ್ಯಗಳನ್ನು ಗುರುತಿಸಲಾಗಿದ್ದು ಶಿಕಾಗೋ, ನ್ಯೂಜರ್ಸಿ, ಕ್ಯಾಲಿಫೋರ್ನಿಯ ಮತ್ತು ಟೆಕ್ಸಾಸ್ ಪ್ರದೇಶಗಳಲ್ಲಿ ಪ್ರತಿಭೆಗಳನ್ನು ಗುರುತಿಸಲಾಗುತ್ತದೆ. ಇದನ್ನು ನಾಲಕ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಧ್ವನಿ ಪರೀಕ್ಷೆ, ಪ್ರಾಥಮಿಕ ಸುತ್ತು, ಪ್ರಾದೇಶಿಕ ಪ್ರತಿಭೆಯನ್ನು ಆಯ್ಕೆ ಮಾಡುವ ಸುತ್ತುಗಳು, ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಮೆಗಾ ಫೈನಲ್ ಹಂತಗಳನ್ನು ಒಳಗೊಂಡಿರುತ್ತದೆ.

ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರುಗಳನ್ನು ಸಂಸ್ಥೆಯೊಂದಿಗೆ ನೊಂದಾಯಿಸಿಕೊಳ್ಳಬೇಕು. ಹೆಸರು, ಲಿಂಗ ಮತ್ತು ವಿಳಾಸವನ್ನು [email protected] ಇಮೇಲ್ ಗೆ ಬರೆಯಬೇಕು.

ರಿಯಾಲಿಟಿ ಶೋ ನಿರ್ಮಾಪಕರು ಶಿಕಾಗೋ ನಿವಾಸಿ ಶಿವಮೂರ್ತಿ ಕೀಲಾರ ಮತ್ತು ನಿರ್ದೇಶಕ ಜಿ.ವಿ. ವಿನೋದ್ ಕುಮಾರ್. ರಿಯಾಲಿಟಿ ಶೋಗೆ ಪುನೀತ್ ರಾಜ್ ಕುಮಾರ್, ಮನೋಮೂರ್ತಿ, ಮತ್ತು ರಮ್ಯಾ ನ್ಯಾಯಮೂರ್ತಿಗಳಾಗಿರುತ್ತಾರೆ. ಹಂಸಲೇಖ, ರಾಜೇಶ್ ಕೃಷ್ಣನ್, ರಘು ದೀಕ್ಷಿತ್ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಇಡೀ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಭಾಗಿಗಳಾಗಿರುತ್ತಾರೆ. ಅಮೆರಿಕಾ ಗಾಯಕ ಗಾಯಕಿ ವಲಯಗಳಲ್ಲಿ ಆಕಾಂಕ್ಷೆ, ಭರವಸೆಯ ಹುಚ್ಚೆಬ್ಬಿಸಲಿರುವ ಈ ಕಾರ್ಯಕ್ರಮದ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಕಾಲಕಾಲಕ್ಕೆ ದಟ್ಸ್ ಕನ್ನಡ ವಾಹಿನಿಯನ್ನು ನೋಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X