• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತಾ ಕಟ್ಟಿ ಅವರೊಡನೆ ಸಂಗೀತ ಸಮಾಲೋಚನೆ

By Staff
|

ಬೇಂದ್ರೆಯವರ ಕವಿತೆಗಳನ್ನು ಸಮರ್ಥವಾಗಿ ಹಾಡುವಲ್ಲಿ ಖ್ಯಾತ ಸಂಗೀತಗಾರ್ತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರದು ಎತ್ತಿದಕೈ. ಇತ್ತೀಚೆಗೆ ಅವರು ಸಿಡ್ನಿಯಲ್ಲಿ ಹಾಡಿ ಶ್ರೋತೃಗಳನ್ನು ಭಾವಪರವಶರನ್ನಾಗಿ ಮಾಡಿದರು. ಹಾಡಿನಷ್ಟೇ ಸರಳತೆಯನ್ನೂ ಮೈಗೂಡಿಸಿಕೊಂಡಿರುವ ಸಂಗೀತಾ ಕಟ್ಟಿ ತಾವು ಸಾಗಿ ಬಂದ ಹಾದಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಮಾತುಕತೆಯ ಸಾರಾಂಶ ಇಲ್ಲಿದೆ.

* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ

"1993ರಲ್ಲಿ ರಿಕಾರ್ಡಿಂಗ್ ನಡೆಯುತ್ತಿತ್ತು, ನಿರ್ದೇಶಕರು ಅಶ್ವತ್. ನಾನು ನನಗೆ ವಹಿಸಿದ್ದ 'ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ' ಹಾಡುತ್ತಿದ್ದೆ. ಆದರೆ ನಾನು ಹಾಡಿದ ರೀತಿ ನಿರ್ದೇಶಕರಿಗೆ ತೃಪ್ತಿ ಆಗಲಿಲ್ಲ. ಹಲವಾರು ಬಾರಿ ಪ್ರಯತ್ನಿಸಿದೆ, ಫಲವಿಲ್ಲ! ಏನು ಮಾಡುವುದೋ ಯಾರಿಗೂ ಹೊಳೆಯಲಿಲ್ಲ. ಟೀ ಬ್ರೇಕ್ ಆಯಿತು. ಇನ್ನೊಂದು ಟೇಕ್ ಮಾಡೋಣ ಅಂದರು ನಿರ್ದೇಶಕರು. ನಾನು ಮೈಕಿನ ಹಿಂದೆ ನಿಂತು ನನಗೆ ಚೆನ್ನಾಗಿ ಗೊತ್ತಿದ್ದ ಬೇಂದ್ರೆಯವರನ್ನ ನೆನೆದೆ; ಅದು ಅವರದೇ ಕೃತಿ. 'ನೋಡು ಅಜ್ಜಾ, ಈ ಹಾಡು ಬರೆಯುವಾಗ ಮನಸಿನಲ್ಲಿ ಏನು ಅರ್ಥ ಇಟ್ಟುಕೊಂಡಿದ್ದೆಯೋ ತಿಳಿಸಿಬಿಡು. ಯಾಕೋ ಕಷ್ಟ ಆಗ್ತಾ ಇದೆ. ಬಂದು ನನ್ನ ಮನಸ್ಸಿನಲ್ಲಿ ನೆಲೆಸಿ ಅರ್ಥ ಹೊಳೆಯೋಹಾಗೆ ಮಾಡು', ಎಂದು ಕೇಳಿಕೊಂಡೆ. ನಂತರ ಹಾಡಿದೆ. ನೋಡಿ, ಅಶ್ವತ್ ಅವರಿಗೆ ಎಲ್ಲಿಲ್ಲದ ಆಶ್ಚರ್ಯ. ಕುಣಿದಾಡಿಬಿಟ್ಟರು. ಅಷ್ಟು ಚೆನ್ನಾಗಿ ಬಂದಿತ್ತು ಆ ಹಾಡು. ಸಂಗೀತದಲ್ಲಿ ಹೀಗೆ ಗುರುವಿನ, ಹಿರಿಯರ ಪ್ರೇರಣೆ ಬಹಳ ಮುಖ್ಯವಾಗುತ್ತದೆ".

"ಆಗಿನ್ನೂ ನನಗೆ ಎಂಟು ವರ್ಷ ವಯಸ್ಸು. ಧಾರವಾಡದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ, ಮುಖ್ಯ ಅತಿಥಿ ಬೇಂದ್ರೆಯವರು. ಪ್ರಾರಂಭದಲ್ಲಿ ನನ್ನದೇ ಪ್ರಾರ್ಥನೆ - 'ಯಾಕೋ ಕಾಣೆ ರುದ್ರವೀಣೆ ಮಿಡಿಯುತಿರುವುದು' ಆಲಿಸಿದ ಬೇಂದ್ರೆಯವರು ನನ್ನನ್ನು ಕರೆದು ತೊಡೆಯಮೇಲೆ ಕೂರಿಸಿಕೊಂಡು 'ಬಹಳ ಚಲೋ ಹಾಡ್ದಿ. ಇಷ್ಟೇ ಅನ್ನ್ಕೋ ಬೇಡ. ಇನ್ನೂ ಬಹಳ ಹಾಡು ಬರೆದಿದ್ದೀನಿ ನಾನು. ಕೊಡ್ತೀನಿ ನಿನಗ. ನೀನು ಅದನ್ನೆಲ್ಲಾ ಕಲಿತು ಎಲ್ಲ ಕಡೆ ಹಾಡಬೇಕು.' ಅಂದರು. ನೋಡಿ ಇದೊಂದು ತರಹ ಆಶೀರ್ವಚನ ಆಯಿತು."

"ಇನ್ನು ಗುರುಗಳ ಬಗ್ಗೆ ಹೇಳಬೇಕಾಗೇ ಇಲ್ಲ. ಹಿಂದೆ ನಾನು ಬಸವರಾಜ ರಾಜ್‌ಗುರು ಅವರ ಬಳಿ ಕಲಿತೆ. ಅವರು ಹೋದ ನಂತರ ಮೂರು ವರ್ಷ ಹೊಸ ಗುರುಗಳನ್ನು ಹುಡುಕುತ್ತಾ ಇದ್ದೆ. ನಂತರ ಕಿಶೊರಿ ಅಮೊನ್‌ಕರ್ ದೊರಕಿದರು. ಅವರ ಮನೆಯಲ್ಲೇ ಐದು ವರ್ಷವಿದ್ದೆ. ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದಾರೆ ಅವರು. ಈಗಲೂ ಅವರ ಮುಂದೆ ಕುಳಿತು ಭೂಪ್ ಅಥವಾ ಯಾವುದಾದರೂ ರಾಗ ಹಾಡೋಣವೆಂದರೆ ತಲೆ ಎಲ್ಲಾ ಖಾಲಿ ಆಗಿರುವ ಅನುಭವ, ಏನೂ ಹೊಳೆಯುವುದಿಲ್ಲ. ಅವರು ಹಾಡುವುದನ್ನು ಪ್ರಾರಂಭಿಸಿದರೆ ವಿದ್ಯುತ್ ಸಂಚಾರ ನನ್ನ ಮೈಯ್ಯಲ್ಲಿ! ನಮ್ಮ ಸಂಗೀತ ಅಭ್ಯಾಸ ಮಾಡುವವರಿಗೆ ಇಂತಹ ಪ್ರೇರಕ ಶಕ್ತಿಗಳ ಅನುಗ್ರಹ ಅತ್ಯವಶ್ಯಕ. ಇವಿಲ್ಲದೆ ಏನೂ ನಡೆಯುವುದಿಲ್ಲ. ಹೀಗೆ ಹೇಳಿಕೊಳ್ಳುವುದಕ್ಕೆ ನನಗೆ ಯಾವ ಹಿಂಜರಿಕೆಯೂ ಇಲ್ಲ. ಬೇಂದ್ರೆಯವರ ಆಶೀರ್ವಾದ, ಗುರುಗಳಾದ ಬಸವರಾಜ್ ರಾಜ್‌ಗುರು ಮತ್ತು ಕಿಶೋರಿ ಅಮೋನ್‌ಕರ್ ಅವರ ಅನುಗ್ರಹ ಪಡೆದ ನಾನು ನಿಜವಾಗಿಯೂ ಭಾಗ್ಯಶಾಲಿ."

ಸ್ಥಳ : ಸಿಡ್ನಿ, ಸಂದರ್ಭ : ಸಂಗೀತ ಕಟ್ಟಿ ಕುಲಕರ್ಣಿ ಅವರ ಸಂಗೀತ ಕಾರ್ಯಕ್ರಮಗಳು, ಸಿಡ್ನಿ ಕನ್ನಡ ಸಂಘದ ಆಶ್ರಯದಲ್ಲಿ. ಜೂನ್ 20ರಂದು North Ryde School of Arts Community centre Hallನಲ್ಲಿ. ಇದರಲ್ಲಿ ಎರಡು ಭಾಗಗಳು. ಮೊದಲು ಭಾವಗೀತೆ, ವಚನಗಳ ಅಮೃತಧಾರೆ - 'ಮುಗಿಲ ಮಾರಿಗೆ, ಇನ್ನೂ ಯಾಕೆ ಬರಲಿಲ್ಲ ಹುಬ್ಬಳಿಯವ, ಮಡಕೇರೀಲ್ ಮಂಜು, ನಾಕು ತಂತಿ' ಇತ್ಯಾದಿ. ಎರಡನೆಯ ಭಾಗ 'ಸಂಗೀತ್ ಸರಿತಾ' - ಇಲ್ಲಿ ಶಾಸ್ತ್ರೀಯ ರಾಗಗಳ ಪರಿಚಯ - ಯಮನ್, ಪಹಾಡಿ ಮತ್ತು ಭೈರವಿ. ರಾಗದ ಆರೋಹಣ, ಅವರೋಹಣ, ಹಿಂದಿ, ಕನ್ನಡ ಚಲನ ಚಿತ್ರಗಳಲ್ಲಿ ಈ ರಾಗಗಳು ಹೇಗೆ ಬಳಸಲ್ಪಟ್ಟಿವೆ? ಸೋದಾಹರಣ ನಿರೂಪಣೆ. ಅಷ್ಟೇ ಅಲ್ಲ, ಪ್ರೇಕ್ಷಕರನ್ನು ಹುರಿದುಂಬಿಸಿ ತಮ್ಮೊಡನೆ ಧ್ವನಿಗೂಡಿಸುವಂತೆ ಮಾಡಿದ್ದು ಕಾರ್ಯಕ್ರಮ ಜೀವಂತವಾಗಿವಂತೆ ಮಾಡಿತು; ನೆರೆದಿದ್ದವರೆಲ್ಲಾ ನಿನ್ನೆಯ ಹಾಡುಗಳನ್ನು ಮತ್ತೆ ನೆನೆಯುವಂತೆ ಮಾಡಿತು. ಮಾರನೆಯದಿನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ - 'ಮಧುವಂತಿ' ರಾಗದಲ್ಲಿ ಸೊಗಸಾದ ಖ್ಯಾಲ್, ನಂತರ ದೇವರನಾಮಗಳು - 'ಯಾರಿಗೆ ವಧುವಾಗುವೆ, ಕರವ ಮುಗಿವೆ ಮುಖ್ಯಪ್ರಾಣ', ಅಭಂಗುಗಳು ಇತ್ಯಾದಿ.

ಅವರ ಖ್ಯಾಲ್ ಮತ್ತು ಭಕ್ತಿಪೂರಿತ ದೇವರನಾಮಗಳನ್ನು ಕೇಳಿದಾಗ ನನಗೆ ಅನ್ನಿಸಿದ್ದು - ಇವರೇಕೆ ಸುಗಮ ಸಂಗೀತದ ಗೋಜಿಗೆ ಹೋಗುತ್ತಾರೆ? ಶಾಸ್ತ್ರೀಯ ಸಂಗೀತವನ್ನು ಆಲಿಸಿದಾಗ ಸಿಗುವ ಮನಶ್ಶಾಂತಿ, ತೃಪ್ತಿ ಸುಗಮ ಸಂಗೀತದಿಂದ ಸಾಧ್ಯವೇ ಇಲ್ಲ. ಅದಕ್ಕೆ ಅವರಿತ್ತ ಉತ್ತರ-- "ನನಗೂ ಹಾಗೇ. ಶಾಸ್ತ್ರೀಯ ಸಂಗೀತ ತಂದು ಕೊಡುವ ತೃಪ್ತಿ ಏನಾದರೂ ಸುಗಮ ಸಂಗೀತದಿಂದ ಬರುವುದಿಲ್ಲ. ಆದರೆ ಜನಕ್ಕಾಗಿ ಸುಗಮ ಸಂಗೀತವನ್ನು ಹಾಡಬೇಕಾಗಿದೆ. ಶಾಸ್ತ್ರೀಯ ಸಂಗೀತಕ್ಕೆ ಶ್ರೋತೃಗಳು ಕಡಿಮೆ. ಮತ್ತೊಂದು ಕಾರಣ ನಮ್ಮ ಗುರುಗಳ ಆದೇಶ - ಯಾವ ಸಂಗೀತ ಪ್ರಕಾರವನ್ನೂ ನಿರ್ಲಕ್ಷಿಸಬೇಡ, ಎಲ್ಲವನ್ನೂ ಹಾಡು."

ಸಂಗೀತ ಅವರು ಮಧುವಂತಿ ರಾಗವನ್ನು ನಿರೂಪಿಸಿದಾಗ ಎಲ್ಲಿಯೂ ಸ್ವರಗಳನ್ನು ಬಳಸದೆ ಕೇವಲ ಸಾಹಿತ್ಯದ ಸಹಾಯದಿಂದ ಆಲಾಪನೆ, ತಾನ್ ಎಲ್ಲವನ್ನೂ ಹೆಣೆದರು. ಈ ಬಗ್ಗೆ ವಿಚಾರಿಸಿದಾಗ ಹೇಳಿದರು-- "ನೀವು ಹೇಳಿದ್ದು ಸರಿ. ಅದು ಜೈಪುರ್ ಘರಾನಾದ ಕ್ರಮ. ಇದರಲ್ಲಿ ನೀವು ಕಾಣುವುದು - ಬೋಲ್ ಆಲಾಪ್, ಬೊಲ್ ತಾನ್ ಇತ್ಯಾದಿ. ಮೊದಲು ನಾನು ಸರಿಗಮಗಳನ್ನು ಉಪಯೋಗಿಸುತ್ತಿದ್ದೆ - ಬಸವರಾಜ್ ರಾಜಗುರು ಅವರ ಹತ್ತಿರ ಕಲಿಯುತ್ತಿದ್ದಾಗ. ಈಗ ಆ ಅಭ್ಯಾಸ ಪೂರ್ತಿ ಹೊರಟು ಹೋಗಿದೆ.

"ನಾಕು ತಂತಿಯಂತಹ ಕವಿತೆಗಳ ಅರ್ಥ ನಿಲುಕುವುದು ಬಹಳ ಕಷ್ಟ, ಅವು ಬಹು ಸಂಕೀರ್ಣ. ಅವಕ್ಕೆ ರಾಗ ಸಂಯೋಜನೆ ಮಾಡುವುದು ಹೇಗೆ?" ಎಂಬ ಪ್ರಶ್ನೆಗೆ "ಹೌದು, ಅವು ಸುಲಭವಾಗಿ ಅರ್ಥವಾಗುವುದಿಲ್ಲ. ನಾನು ಮೈಸೂರು ಅನಂತಸ್ವಾಮಿಯವರ ಟ್ಯೂನ್‌ನಲ್ಲಿ ಹಾಡುತ್ತೇನೆ - ಭೈರಾಗಿ ಭೈರವ್ ರಾಗ ಆಧಾರಿತ. ಆ ಸಾಹಿತ್ಯಕ್ಕೆ ಈ ರಾಗ ಸೂಕ್ತ ಅನ್ನಿಸುತ್ತೆ. ಆದರೆ ನಾನು ಗಾಂಧಾರದ ಸಂಚಾರಗಳನ್ನು ಸೇರಿಸಿಕೊಂಡು ನನ್ನದೇ ಪ್ರಯೋಗ ಮಾಡಿದ್ದೇನೆ. ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಆ ಕವಿತೆ ನನ್ನಲ್ಲಿ ವಿಕಸನ ಹೊಂದಿದೆ. ಈಗ ಅದು ನನ್ನದಾಗಿದೆ. ಹೀಗೆ ಯಾವುದೇ ಹಾಡು ನನ್ನದಾಗುವವರೆಗೆ ಪರಿಣಾಮಕಾರಿಯಾಗಿ ಹಾಡುವುದು ಕಷ್ಟ. ಈಗ ನಾನು ನಾಕು ತಂತಿಯನ್ನ ಒಂದು ಗಂಟೆಯವರೆಗೂ improvise ಮಾಡಬಲ್ಲೆ. ಆ ವಿಶ್ವಾಸ ನನಗಿದೆ."

"ಇತ್ತೀಚೆಗೆ ಜನಪ್ರಿಯತೆಯ ದೃಷ್ಟಿಯಿಂದ ಸಂಗೀತಗಾರರು ಒಂದೇ ಬಗೆಯ ಹಾಡುಗಳನ್ನು ಜನಕ್ಕೆ ಬೇಕಾದ ಮಟ್ಟಿನಲ್ಲಿ ಹಾಡುವುದು ಸಾಮಾನ್ಯವಾಗಿದೆ. CD ಹಾಕಿಕೊಂಡು ಅಭ್ಯಾಸ ಮಾಡಿ, ಕಛೇರಿಯಲ್ಲೂ ಕರಿಓಕಿ ಮಾಡಿಕೊಂಡು ಮೂರು ನಿಮಿಷ ಅದೇ ಹಾಡನ್ನ ಹಾಗೇ ಹಾಡುತ್ತಾರೆ. ಇದರ ಬದಲು ಆ CDನೇ ಸಭೆಯಲ್ಲೂ ಹಾಕಿಬಿಡೋದು ಓಳ್ಳೇದಲ್ಲವೇ? ಸುಗಮಸಂಗೀತ ಬಹಳ monotonous ಆಗ್ತಾ ಇದೆ ಅನ್ನಿಸುತ್ತೆ. ಒಂದು ಹಾಡನ್ನು ತೆಗೆದುಕೊಂಡು ಅದನ್ನ ಎಕ್ಸ್‌ಪ್ಲೋರ್ ಮಾಡಬೇಕು, ಅದನ್ನ ನನ್ನದಾಗಿಸಿಕೊಳ್ಳಬೇಕು ಅನ್ನುವ ಹಂಬಲ ಈಗೀಗ ಕಡಿಮೆಯಾಗುತ್ತಿದೆ."

ಸಂಗೀತ ಅವರ ಎರಡು ಕಾರ್ಯಕ್ರಮಗಳನ್ನು ಕಂಡ, ಕೇಳಿದ ನಾನು ಇಲ್ಲಿ ಒಂದು ಮಾತು ಸೇರಿಸಬಹುದಾಗಿದೆ. ಇವರು ಹಾಡಿನ ಮೇಲೆ ಹಾಡು ಎನ್ನಿಸುವಂತೆ ಹಾಡಲಿಲ್ಲ. ಬದಲಾಗಿ ಒಂದೊಂದು ಭಾವಗೀತೆಯನ್ನೂ ಅನುಭವಿಸಿ, ವಿಸ್ತಾರವಾಗಿ ನಿರೂಪಿಸಿದರು. ಸಾಮಾನ್ಯವಾಗಿ ಸುಗಮ ಸಂಗೀತ ಗಾಯಕರು ಎತ್ತರದ ಧ್ವನಿಯಲ್ಲಿ ಹಾಡುವುದರ ಬಗ್ಗೆ "high pitchನಲ್ಲಿ ಹಾಡಬೇಕೆಂಬ ನಿಯಮ ಏನೂ ಇಲ್ಲ. ಸಂಗೀತ ಎಂದರೆ ಕಿರುಚಾಡಬೇಕಿಲ್ಲ. ತಮ್ಮ ಸ್ವಾಭಾವಿಕ ಧ್ವನಿಯಲ್ಲಿ ಹಾಡುವುದು ಪರಿಣಾಮಕಾರಿಯಲ್ಲ ಅಂತ ಯಾರು ಹೇಳ್ತಾರೆ? ಗೀತಾದತ್, ಮುಖೇಶ್ ಅವರೆಲ್ಲ ತಗ್ಗುಧ್ವನಿಯಲ್ಲೇ ಹಾಡ್ತಾ ಇರಲಿಲ್ಲವೆ? ಧ್ವನಿಯಲ್ಲಿ ರೇಂಜ್ ಇದ್ದರೆ ಒಳ್ಳೆಯದೇ. ಆದರೆ ಕಿರುಚುವ ಅವಶ್ಯಕತೆ ಇಲ್ಲವೇ ಇಲ್ಲ."

"ಕನ್ನಡದಲ್ಲಿ ಎಂತೆಂತಹ ಭಾವಗೀತೆಗಳಿವೆ! ಅದನ್ನು ಹಿಂದಿನ ಗಾಯಕರು ಎಷ್ಟು ಸಮರ್ಥವಾಗಿ ಹಾಡಿದ್ದಾರೆ! ಕಾಳಿಂಗರಾಯರು ಹಾಡಿದ ಅಡಿಗರ 'ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೊಣಿ', ದಾಸರ 'ಮಾಡು ಸಿಕ್ಕದಲ್ಲಾ', ಸರೋಜಿನಿ ಹಾಡಿದ 'ಹತ್ತುವರುಷದ ಹಿಂದೆ', 'ಬಂಗಾರ ತೊಟ್ಟಿಲು', ಬೇಂದ್ರೆಯವರ 'ಉತ್ತರ ದ್ರುವದಿಂ' ಕುವೆಂಪು ಅವರ 'ಶ್ರೀ ಶಾರದಾ ದೇವಿ', ಅಮೀರ್‍ಬಾಯ್ ಕರ್ನಾಟಕಿ ಅವರ 'ವಾರಿನೋಟ', ಇತಾದಿ, ಇತ್ಯಾದಿ. ಇವುಗಳನ್ನು ಜನ ಮರೆತುಬಿಟ್ಟಿದ್ದಾರೆ. ಇವುಗಳನ್ನು ಜನರಿಗೆ ನೆನಪು ಮಾಡಿಕೊಳ್ಳುವ ಉದ್ದೇಶದಿಂದ ನಾನು 'ಪ್ರಕೃತಿ' ಕಾರ್ಯಕ್ರಮದಲ್ಲಿ ಇಂತಹ ಹಾಡುಗಳನ್ನು, ಕವಿತೆಗಳನ್ನು ಅಲ್ಲಿ ಇಲ್ಲಿ ಹುಡುಕಿ ತೆಗೆದು ಹಾಡಿ ತೋರಿಸುತ್ತೇನೆ. ಇದು ಒಂದು ರೀತಿಯಲ್ಲಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ. ನಮ್ಮ ಅಮೂಲ್ಯ ಸಂಪತ್ತನ್ನು ಎತ್ತಿ ತೋರಿಸುವುದು ನಮ್ಮ ಕರ್ತವ್ಯ."

ಕೊನೆಗೆ ಸಂಗೀತ ಅವರು ಕಳಕಳಿಯಿಂದ ಒಂದು ಮಾತು ಹೇಳಿದರು. ಸಂಗೀತಗಾರರಾದ ನಮಗೆ ಎರಡು ಸಾಮಾಜಿಕ ಜವಾಬ್ದಾರಿಗಳಿವೆ. ಒಂದು ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಎರಡು, ಭಾವಗೀತೆಗಳನ್ನು ಹಾಡುವಾಗ ಕವಿಯ ಭಾವನೆಗೆ ಅನ್ಯಾಯ ಮಾಡಬಾರದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more