ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ

By * ಪ್ರಕಾಶ್ ರಾಜಾರಾವ್, ನ್ಯೂಜಿಲೆಂಡ್
|
Google Oneindia Kannada News

Program by children in the memory of Vamana Murthy
2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ ಮೂರ್ತಿಯವರು ಆ ಹುಡುಗನ ಕೈ ಹಿಡಿದು ವೇದಿಕೆಯ ಮೇಲೆ ಕರೆದೊಯ್ದು, "ಮೊದಲು ಈ ಮಗುವಿನ ಹಾಡು ನಂತರ ನನ್ನ ಮಾತು" ಎಂದು ತಿಳಿಸಿದರು. ವಾಸ್ತವವಾಗಿ ನ್ಯೂಜಿಲೆಂಡ್ ಕನ್ನಡ ಕೂಟವನ್ನು ಸ್ಥಾಪಿಸಿದ ಮೂಲ ಉದ್ದೇಶವೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಲೆಂದು.

ಮೊದಲ ಹತ್ತು ವರ್ಷ ಕನ್ನಡ ಕೂಟದ ಅಧ್ಯಕ್ಷರಾಗಿದ್ದ ದಿ. ಎಂ.ಕೆ.ವಾಮನ ಮೂರ್ತಿಯವರ ಸ್ಮರಣಾರ್ಥ ದಿನಾಂಕ 13ನೇ ಜೂನ್ 2009ರ ಶನಿವಾರದಂದು ಆಕ್ಲೆಂಡಿನ ಮೌಂಟ್ ರಾಸ್ಕಿಲ್ ಸಮರ ಸ್ಮಾರಕ ಭವನದಲ್ಲಿ ಮಕ್ಕಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವರ್ಷದ ಯುಗಾದಿ ಹಬ್ಬದ ಕಾರ್ಯಕ್ರಮ ವಾಮನ ಮೂರ್ತಿಯವರ ನಿಧನದ ಕಾರಣ ಮುಂದೂಡಲಾಗಿತ್ತು.

ಕು.ವರ್ಷಾ ಪೈ ಅವರಿಂದ ಪ್ರಾಥನೆಯ ನಂತರ ಕೂಟದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ಎಲ್ಲರನ್ನು ಸ್ವಾಗತಿಸಿದರು. ಆ ಮೇಲೆ ನಡೆದ ಕರ್ನಾಟಕ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮೂವತ್ತು ಮಕ್ಕಳೂ ವೇದಿಕೆಯ ಮೇಲೆ ಉಪಸ್ಥಿತರಾಗಿ ಎಲ್ಲ ಪ್ರಶ್ನೆಗಳಿಗೂ ತಡಬಡಿಸದೆ ಉತ್ತರಿಸಿದ್ದು ವಿಶೇಷವಾಗಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತರು, ಭಾರತ ರತ್ನ ಪ್ರಶಸ್ತಿ ಗಳಿಸಿದವರು, ಸಿನೆಮಾ, ಸಂಗೀತ, ಸಾಹಿತ್ಯ, ರಾಜಕೀಯ, ಕ್ರಿಕೆಟ್ ಹೀಗೆ ಹಲವು ಹತ್ತು ಬಗೆಯ ವಿಷಯಗಳನ್ನೊಳಗೊಂಡ ರಸಪ್ರಶ್ನೆಗಳಿಗೆ ಮಕ್ಕಳು ಉತ್ತರಿಸುತ್ತಿದ್ದಾಗ ಸಭಿಕರಷ್ಟೇ ಅಲ್ಲ ಕಾರ್ಯಕ್ರಮದ ನಿರ್ಣಾಯಕರಾಗಿದ್ದ ಹೊ.ನಾ. ರಾಮಚಂದ್ರ ಮತ್ತು ದತ್ತಾತ್ರೇಯ ಮಳವಳ್ಳಿ ಅವರುಗಳೂ ಚಪ್ಪಾಳೆ ತಟ್ಟುತ್ತಿದ್ದರು. ಅವಧಿ ಮುಗಿದು ಯಾರೂ ಸೋಲುವ ಸೂಚನೆ ಸಿಗದಿದ್ದಾಗ ಟೈ ಆಯಿತೆಂದು ಘೋಷಿಸಿ ಎಲ್ಲರಿಗೂ ಬಹುಮಾನ ನೀಡಲು ನಿರ್ಧರಿಸಲಾಯಿತು. ಸತ್ಯ ಕುಮಾರ್ ಕಟ್ಟೆ ಮತ್ತು ಅವಿನಾಶ್ ಅವರ ನೆರವಿನಿಂದ ಪ್ರಕಾಶ್ ರಾಜಾರಾವ್ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

Program by children in the memory of Vamana Murthy
ನಂತರ ಕಾರ್ಯಕ್ರಮ ಮುಂದುವರೆದು ಗಾನ ನಾಟ್ಯಗಳ ರಸಧಾರೆ ಸುರಿಯಿತು. ಈಗಾಗಲೇ ಅನೇಕ ಪ್ರಶಸ್ತಿ ಗಳಿಸಿರುವ ಖ್ಯಾತ ಗಾಯಕಿಯರಾದ ಚೈತ್ರಾ ರವಿಶಂಕರ್ ಮತ್ತು ಅಖಿಲಾ ಪುತ್ತಿಗೆ ಅವರುಗಳು ಸುಶ್ರಾವ್ಯವಾಗಿ ಹಾಡಿದ 'ಯಾವ ಜನ್ಮದ ಮೈತ್ರಿ' ಮತ್ತು 'ಹೂವು ಚೆಲುವೆಲ್ಲಾ ನಂದೆಂದಿತು' ಚಿತ್ರ ಗೀತೆಗಳು ಮೆಲುಕುಹಾಕುವಂತಿದ್ದವು. ಇದಲ್ಲದೆ, ಅನೂಶಾ ದತ್ತಾತ್ರೇಯ ಹಾಡಿದ 'ಅಪರಾಧಿ ನಾನಲ್ಲ' [ದೇವರ ನಾಮ] , ಸುಶ್ಮಿತಾ ದೇಶಪಾಂಡೆ 'ಉತ್ತುಂಗದ ನಾಡಿನಿಂದ' [ಜಾನಪದ], ಸಂಪ್ರೀತ್ ಮತ್ತು ಸಚಿನ್ 'ಜಗದಗಲ ಮುಗಿಲಗಲ' [ವಚನ] ಆದಿತ್ಯ ಕಟ್ಟಿ 'ಒಂದು ಎರಡು' [ಮಗ್ಗಿ ಹಾಡು], ನಿಖಿಲ್ 'ಈ ಭೂಮಿ ಬಣ್ಣದ ಬುಗುರಿ' [ಚಿತ್ರಗೀತೆ] - ಈ ಎಲ್ಲ ಹಾಡುಗಳ ಗಾಯನ ಉತೃಷ್ಟವಾಗಿತ್ತು.

ನಾಲ್ಕು ವರ್ಷದ ಕಿಶೋರಿಯರಾದ ಸಂಜನಾ [ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ] ತನ್ವಿ [ಸರ್ವ ಸಮರ್ಪಣ] ನಿಶ್ಚಲ [ಕ್ಷೀರಾಬ್ಧಿ ನಯನ ನಾರಾಯಣ] ಅವರುಗಳ ಗಾಯನ ಅದ್ಭುತವಾಗಿತ್ತು. ಪೂಜಾ ಭಗತ್ ಅವರ ಚಲನ ಚಿತ್ರಗೀತೆಗಳ ರೀಮಿಕ್ಸ್ ನೃತ್ಯ ಮತ್ತು ವರ್ಷಾ ಪೈ ಹಾಗೂ ಪೂಜಾ ಭಗತ್ ಅವರ ಮುಸ್ಸಂಜೆ ಮಾತು ಚಿತ್ರದ ಹಾಡಿಗೆ ಜೋಡಿ ನೃತ್ಯಗಳು ಮನೋಹರವಾಗಿದ್ದವು. 'ಕೆರೆ ಹಳ್ಳ ಭಾವಿ' ಎಂಬ ವಚನಕ್ಕೆ ಕು. ಸ್ನೇಹಾ ಸಾಲಿಮಠ್ ಮತ್ತು ಸ್ನೇಹಾ ಮಲಕಪ್ಪ ಅವರು ಸಂಯೋಜಿಸಿದ್ದ ನೃತ್ಯ ರೂಪಕ ಭಾಗವಹಿಸಿದ್ದ ಆರು ಬಾಲ ಕಲಾವಿದರ ಪರಿಶ್ರಮದಿಂದ ಸುಂದರವಾಗಿ ಮೂಡಿಬಂತು.

ಕನ್ನಡ ಕೂಟದ ಅಧ್ಯಕ್ಷ ರವಿ ಶಂಕರ್ ರಾವ್ ಕಾರ್ಯಕ್ರಮ ನಡೆಸಲು ನೆರವಾದ ಎಲ್ಲರನ್ನು ಅಭಿನಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಬೆಂಗಳೂರು ಪ್ರಭಾಕರ ಅವರು ವಂದನಾರ್ಪಣೆ ಮಾಡಿದರು. ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರಗೀತೆಗಳು ಹಾಗೂ ಕರ್ನಾಟಕ ನಾಡಗೀತೆಗಳನ್ನು ಹಾಡುವುದರೊಂದಿಗೆ ಮುಕ್ತಾಯವಾದ ಕಾರ್ಯಕ್ರಮ ದಿ. ವಾಮನ ಮೂರ್ತಿಯವರಿಗೆ ಸೂಕ್ತ ಶ್ರದ್ಧಾಂಜಲಿಯೆನಿಸಿತು.

ವಿ.ಸೂ. : ಜುಲೈ 4, 2009ರ ಶನಿವಾರ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿಯವರ ಗಾಯನ ಕಾರ್ಯಕ್ರಮ ಸ್ವರ ಮಾಧುರ್ಯ ಅಕ್ಲೆಂಡಿನ ಮೌಂಟ್ ಈಡನ್ ವಾರ್ ಮೆಮೊರಿಯಲ್ ಹಾಲ್ ನಲ್ಲಿ ಬೆಳಿಗ್ಗೆ 10.00ರಿಂದ ಮಧ್ಯಾನ್ಹ 2.00 ಗಂಟೆಯವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನ್ಯೂಜಿಲೆಂಡ್ ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ರಾವ್ ಅಥವಾ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X