ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವ

By Staff
|
Google Oneindia Kannada News

Veena Shanteshwar inaugurates Sahityotsava, Vaidehi and Rajgopal look on
ಕನ್ನಡ ಸಾಹಿತ್ಯ ರಂಗ, ನ್ಯೂ ಜರ್ಸಿ ನಾಲ್ಕನೇ ವಸಂತ ಸಾಹಿತ್ಯೋತ್ಸವವನ್ನು ಇದೇ ಮೇ 30 ಮತ್ತು 31ರಂದು ಮೇರಿಲ್ಯಾಂಡಿನಲ್ಲಿ ಹಮ್ಮಿಕೊಂಡಿತ್ತು. ಪ್ರತಿಬಾರಿಯಂತೆ ಇದೊಂದು ಚಿಕ್ಕ, ಚೊಕ್ಕ ಸಮಾರಂಭ. ಅದರ ಕುರಿತು ಒಂದು ವಿಸ್ತೃತ ವರದಿ.

ವರದಿ : ಎಚ್ ವೈ ರಾಜಗೋಪಾಲ್, ನಳಿನಿ ಮಯ್ಯ. ಶ್ರೀವತ್ಸ ಜೋಶಿ, ಜ್ಯೋತಿ ಮಹಾದೇವ, ಫಣೀಂದ್ರ ಮಂಕಾಲೆ, ತ್ರಿವೇಣಿ ಶ್ರೀನಿವಾಸ ರಾವ್, ವಲ್ಲೀಶ ಶಾಸ್ತ್ರಿ ಮತ್ತು ಶಂಕರ ಹೆಗಡೆ
ಚಿತ್ರಗಳು : ಹರಿದಾಸ ಲಹರಿ

ಡಾ. ವೀಣಾ ಶಾಂತೇಶ್ವರ ಅವರ ಪ್ರಧಾನ ಭಾಷಣ

ಸಮ್ಮೇಳನದ ಮುಖ್ಯ ಅತಿಥಿ ಡಾ. ವೀಣಾ ಶಾಂತೇಶ್ವರರನ್ನು ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷರಾದ ಎಚ್.ವೈ. ರಾಜಗೋಪಾಲರು ಸಭೆಗೆ ಪರಿಚಯ ಮಾಡಿಕೊಟ್ಟರು. ನಮ್ಮ ವಿಶೇಷ ಅತಿಥಿಯಾದ ವೈದೇಹಿಯವರನ್ನು ಶಶಿಕಲಾ ಚಂದ್ರಶೇಖರ್ ಅವರು ಪರಿಚಯ ಮಾಡಿಕೊಟ್ಟರು. ಈ ಪರಿಚಯಗಳಾದಮೇಲೆ ವೀಣಾ ಅವರು "ಕನ್ನಡ ಕಾದಂಬರಿ ಕಳೆದ ಕಾಲು ಶತಮಾನದಲ್ಲಿ" ಎಂಬ ತಮ್ಮ ಪ್ರಧಾನ ಭಾಷಣವನ್ನು ಮಂಡಿಸಿದರು. ಸುಮಾರು ಒಂದು ಗಂಟೆಯ ಕಾಲದ ಈ ಭಾಷಣದಲ್ಲಿ ಅವರು ಕನ್ನಡದಲ್ಲಿ ಕಾದಂಬರಿ ಎಂಬ ಸಾಹಿತ್ಯ ಪ್ರಕಾರ ಹೇಗೆ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಜನಿಸಿತು, ಮೊದಲಲ್ಲಿ ವಾಸ್ತವವಾದದ ಮತ್ತು ರಮ್ಯ ಕಾದಂಬರಿಗಳನ್ನೊಳಗೊಂಡ ಅದರ ಸ್ವರೂಪ ಹೇಗಿತ್ತು ಎಂಬುದನ್ನು ಸ್ಥೂಲವಾಗಿ ವಿವರಿಸಿದರು. ನವ್ಯ ಯುಗದಲ್ಲಿ ಹೇಗೆ ಅದರ ಸ್ವರೂಪ ಮತ್ತು ಆಶಯಗಳು ಸಾಮಾಜಿಕ, ರಾಜಕೀಯ, ಧಾರ್ಮಿಕ ಪ್ರಜ್ಞಾವಂತಿಕೆ, ವೈಚಾರಿಕತೆ, ಜಾಗೃತಿ, ಅವುಗಳ ಮೂಲಕ ಸಾಧಿಸಬಹುದಾದ ಪ್ರಗತಿ-ಇವುಗಳಿಂದ ದೂರ ಸರಿದು ಮನುಷ್ಯನ ಅಂತರಾಳದ ವ್ಯಾಪಾರಗಳತ್ತ ತಿರುಗಿದುದನ್ನು ವಿವರಿಸಿದರು. ಆದರೆ ಕಾಲಗತಿ, ನಮ್ಮ ಅನುಭವಗಳು ವಿಸ್ತರಿಸಿದಂತೆ, ಈ ನವ್ಯಮಾರ್ಗದಲ್ಲೂ ಅತೃಪ್ತಿ ತೋರಿ ನವ್ಯೋತ್ತರ ಮಾರ್ಗ ಬಂದಿತು. ನವ್ಯರಂತೆಯೇ ಈ ನವ್ಯೋತ್ತರ ಮಾರ್ಗದವರೂ ಅಸ್ತಿತ್ವವಾದ(existentialism)ದಿಂದ ಪ್ರಭಾವಿತರಾದರೂ ನವ್ಯೋತ್ತರ ಲೇಖಕರು ಸಮಾಜವಾದೀ ಚಿಂತನೆಯತ್ತ ಹೆಚ್ಚಿಗೆ ಒಲವು ತೋರಿದರು. ಅವರ ಕಾದಂಬರಿಗಳು ಇತರ ಅನೇಕ ವಿಚಾರಧಾರೆಗಳಿಂದ ಪ್ರಭಾವಿತವಾಗಿವೆ. ನವ್ಯರ ಆಸ್ಥೆ ವ್ಯಕ್ತಿಕೇಂದ್ರಿತವಾದುದಾದರೆ, ನವ್ಯೋತ್ತರರ ಆಸ್ಥೆ ಮತ್ತೆ ಸಾಮಾಜಿಕ, ರಾಜಕೀಯ ಕಳಕಳಿಗಳತ್ತ ಸಾಗಿದೆ. "ಮನುಷ್ಯನ ಆಂತರಿಕ ಸ್ಥಿತಿಗಿಂತ ಸುತ್ತಲಿನ ಬಾಹ್ಯಸ್ಥಿತಿಯ ವಿಶ್ಲೇಷಣೆ ಹೆಚ್ಚು ಮುಖ್ಯ ಎಂದು ಈ ಲೇಖಕರಿಗೆ ಅನಿಸತೊಡಗಿತು. ಮನುಷ್ಯ ಸಂಬಂಧಗಳು, ಬದುಕಿನ ಸಾಂಸ್ಕೃತಿಕ ಹಿನ್ನೆಲೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವೈಚಾರಿಕತೆ ಇವು ಮುಖ್ಯ ಮೌಲ್ಯಗಳನೆಸಿದವು. ಗಾಂಧಿ, ಮಾರ್ಕ್ಸ್, ಲೋಹಿಯಾ, ಜೆ.ಪಿ., ಗೋಪಾಲಗೌಡ ಇತಾದಿ ವ್ಯಕ್ತಿಗಳ ಚಿಂತನಾಕ್ರಮಗಳು ಈ ಲೇಖಕರನ್ನು ವಿಶೇಷವಾಗಿ ಪ್ರಭಾವಿಸಿದವು" ಎಂದು ಹೇಳಿದ ವೀಣಾರವರು ಅಲ್ಲಿಂದ ಮುಂದೆ ಆ ಘಟ್ಟದ ಮತ್ತು ಅದರಿಂದ ಮುಂದುವರೆದ ಪ್ರಸ್ತುತ ಕಾಲದವರೆಗಿನ ಹಲವಾರು ಕಾದಂಬರಿಗಳ ಸಂಕ್ಷಿಪ್ತ ಪರಿಚಯವನ್ನು ಕೇಳುಗರಿಗೆ ಮಾಡಿಕೊಟ್ಟರು.

ಡಾ. ವೀಣಾ ಅವರ ಭಾಷಣದ ವಸ್ತು ಪ್ರೌಢವಾಗಿದ್ದರೂ ಸಭಿಕರಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿದ್ದು ಎಲ್ಲರ ಗಮನವನ್ನೂ ಸೆರೆಹಿಡಿದಿತ್ತು. ತಮ್ಮ ಭಾಷಣದ ಕಡೆಯಲ್ಲಿ ಕನ್ನಡ ಸಾಹಿತ್ಯ ರಂಗ ಹೊರತಂದಿರುವ ಪುಸ್ತಕವನ್ನು ಸ್ಥೂಲವಾಗಿ ಪರಿಶೀಲಿಸಿ, ಅದರಲ್ಲೂ ತಾವು ತಮ್ಮ ಭಾಷಣದಲ್ಲಿ ಪರಿಚಯಿಸಿದ ಹಲವಾರು ಪುಸ್ತಕಗಳ ದೀರ್ಘ ಅವಲೋಕನ ಇರುವುದನ್ನು ಗಮನಿಸಿ, ಅದರ ಬಗ್ಗೆ ತಮ್ಮ ಮೆಚ್ಚಿಕೆ ವ್ಯಕ್ತಪಡಿಸಿದರು.

ಇಂಥ ಶ್ರೀಮಂತ ಭಾಷಣಗಳನ್ನು ಕೇವಲ ಒಂದು ಬಾರಿ ಕೇಳಿ ಮತ್ತೆ ಮತ್ತೆ ಅವನ್ನು ಮನನ ಮಾಡುವ ಸಾಧ್ಯತೆ ಇಲ್ಲದೆ ಹೋಗುವ ದುಃಸ್ಥಿತಿ ಬಾರದಂತೆ, ಕನ್ನಡ ಸಾಹಿತ್ಯ ರಂಗ ಇದುವರೆಗೆ ನಡೆದ ಎಲ್ಲ ಸಮ್ಮೇಳನಗಳ ಪ್ರಧಾನ ಭಾಷಣಗಳನ್ನೂ ಅಚ್ಚುಹಾಕಿಸಿ ಸಮ್ಮೇಳನದಲ್ಲಿ ಭಾಗವಹಿಸಿದವರಿಗೆಲ್ಲಾ ಹಂಚಿದೆ. ಆಮೇಲೂ ಸಹ, ನಮ್ಮ ಪುಸ್ತಕಗಳನ್ನು ಕೊಳ್ಳುವವರಿಗೆಲ್ಲ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರಧಾನ ಭಾಷಣವನ್ನು ಉಚಿತವಾಗಿ ಕೊಡುವ ಯೋಜನೆಯಿದೆ. ದಯವಿಟ್ಟು ಓದುಗರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಕೋರಲಾಗಿದೆ.

ಮುಂದೆ ಓದಿ : ಪುಸ್ತಕಗಳ ಬಿಡುಗಡೆ ಮತ್ತು ಮಾರಾಟ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X