ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ಮೇಲಿನ ದಾಳಿ ವರ್ಣದ್ವೇಷವಲ್ಲ!

By Staff
|
Google Oneindia Kannada News

Sydney Srinivas
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಸತತ ದಾಳಿಗಳಿಗೆ ಮಾಧ್ಯಮಗಳಿಂದ ಸಾಕಷ್ಟು ಬಣ್ಣಬಳಿಯಲಾಗಿದೆ. ಅದು ವರ್ಣದ್ವೇಷವಲ್ಲದೆ ಮತ್ತೇನೂ ಅಲ್ಲ ಎಂದು ಸಾರುತ್ತಿವೆ. ಆದರೆ, ಅಲ್ಲಿ ಆಗುತ್ತಿರುವುದಾದರೂ ಏನು? ದಶಕಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ, ಅಲ್ಲಿಯ ಜೀವನದ ನಾಡಿಮಿಡಿತವನ್ನು ಅರಿತಿರುವ ಕನ್ನಡಿಗ ಸಿಡ್ನಿ ಶ್ರೀನಿವಾಸ್ ಅವರು ವಸ್ತುಸ್ಥಿತಿಯನ್ನು ಬಿಂಬಿಸಲು ಯತ್ನಿಸಿದ್ದಾರೆ.

ಈ ವರೆಗೆ ಕ್ರಿಕೆಟ್‌ನಿಂದ ಪ್ರಸಿದ್ಧವಾಗಿದ್ದ ಆಸ್ಟ್ರೇಲಿಯಾ ಈಗ ಬೇರೆ ಕಾರಣಕ್ಕಾಗಿ ಕುಖ್ಯಾತಿಗೀಡಾಗಿದೆ. ಅದೆಂದರೆ ವರ್ಣದ್ವೇಷದ ಆಪಾದನೆ. ಇದು ಇತ್ತೀಚಿನ ವಿಶ್ವಸುದ್ದಿಯಾಗಿ ಪರಿಣಮಿಸಿ ಎಲ್ಲರ ಬಾಯಲ್ಲಿ ಅದೇ ಮಾತು, ಮಾಧ್ಯಮಗಳಲ್ಲಿ ಅದೇ ಪ್ರಮುಖ ವರದಿ. ಭಾರತದಿಂದ ಬಂದು ಇಲ್ಲಿನೆಲೆಸಿರುವ ನಮಗೆ ನೂರಾರು ದೂರವಾಣಿ ಕರೆಗಳು. ಪ್ರಾರಂಭದಲ್ಲೇ ಇದು ಆಸ್ಟ್ರೇಲಿಯನ್ನರ ವರ್ಣದ್ವೇಷ ಧೋರಣೆಗೆ ಸಾಕ್ಷಿ ಎಂಬ ನಿರ್ಧಾರ ಬೇರೆ! ಒಂದೆರಡು ವಾರಗಳ ಹಿಂದಿದ್ದ ಬಿಸಿ ಈಗ ಕಡಿಮೆ ಆಗಿದೆ. ಆದರೆ, ಅಲ್ಲಿ ನಿಜವಾಗಿ ನಡೆಯುತ್ತಿರುವುದಾದರೂ ಏನು?

ಪ್ರಸ್ತುತ ವಿವಾದಕ್ಕೆ ಕಾರಣ ಮೇ 24ರಂದು ಮೆಲ್ಬರ್ನ್‌ನಲ್ಲಿ ನಡೆದ ಘಟನೆ. ರಾತ್ರಿಸಮಯ. ಮನೆಯೊಂದರಲ್ಲಿ ಸುಮಾರು 20 ಮಂದಿ ಭಾರತೀಯ ಯುವಕರು ಪಾರ್ಟಿಮಾಡಿಕೊಂಡಿದ್ದಾರೆ. ಅಲ್ಲಿಗೆ ಇಬ್ಬರು ಆಗಂತುಕರು (teenagers) ನುಗ್ಗಿಬಂದು ಒಬ್ಬ ಯುವಕನನ್ನು (ಶ್ರವಣ ಕುಮಾರ್ ತೀರ್ಥಲಾ) ಹಿಡಿದು, ಅವನ ತಲೆಗೆ ಸ್ಕ್ರೂ ಡ್ರೈವರ್‍ನಲ್ಲಿ ಚುಚ್ಚಿದ್ದರಿಂದ ಆತ ಗಾಯಗೊಂಡು ಆಸ್ಪತ್ರೆ ಸೇರಬೇಕಾಯಿತು. ಸಿಡಿದೆದ್ದ ಭಾರತೀಯ ಯುವಕರು ಒಮ್ಮೆಗೇ ಪ್ರತಿಭಟಿಸಿದರು. ಮೆಲ್ಬರ್ನ್‌ಗೆ ಸಾವಿರ ಕಿಲೋಮೀಟರ್ ದೂರದಲ್ಲಿರುವ ಸಿಡ್ನಿಯಲ್ಲಿ ಅದೇ ಸಮಯಕ್ಕೆ ರಾಜೇಶ್ ಕುಮಾರ್ ಎಂಬ ವಿದ್ಯಾರ್ಥಿಯಮೇಲೆ ಹಲ್ಲೆ ನಡೆಯಿತು. ಈಗ ಉಪಯೋಗಿಸಿದ ಆಯುಧ- ಕಾರ್ ಬಾಂಬ್; ಪರಿಣಾಮ ಶೇಕಡಾ 30ರಷ್ಟು ಸುಟ್ಟುಹೋದ. ಮೂವರು ಯುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ಒಂದು ಘಟನೆಯೂ ಆದದ್ದುಂಟು.

ಯಾರು, ಏತಕ್ಕೆ ಈ ಹಿಂಸಾಚಾರ ನಡೆಸಿದರು - ಹೇಳುವುದು ಕಷ್ಟ. ಒಂದು ಟೀವಿ ವರದಿಯ ಪ್ರಕಾರ ಮೆಲ್ಬರ್ನ್‌ನಲ್ಲಿ ಹಲ್ಲೆ ನಡೆಸಿದವರು ಆಸ್ಟ್ರೇಲಿಯಾದ ಹತ್ತಿರವಿರುವ ದ್ವೀಪಗಳಿಂದ ಬಂದ ಜನ (islanders). ಸಿಡ್ನಿಯಲ್ಲಿ ಹಲ್ಲೆ ನಡೆಸಿದವರು ಲೆಬನೀಸ್ ಯುವಕರು ಎಂಬುದು ಹೆಚ್ಚೂ ಕಡಿಮೆ ಖಾತ್ರಿಯಾಗಿದೆ.

ಭಾರತೀಯರ ಮೇಲೆ, ಅಲ್ಪಸಂಖ್ಯಾತರ ಮೇಲೆ ಈ ತರಹ ಯಾವುದೇ ಹಲ್ಲೆ ನಡೆದರೆ ಜನ ಮೊದಲು ಅದಕ್ಕೆ ವರ್ಣದ್ವೇಷದ ಬಣ್ಣ ಹಾಕುತ್ತಾರೆ; ಕಾರಣ ಬಹು ಹಿಂದೆ ಈ ದೇಶ ಅದಕ್ಕೆ ಹೆಸರುವಾಸಿ ಆಗಿತ್ತು. ಆದರೆ ಈಗ ಆಗಿರುವುದು ಕ್ರೌರ್ಯ. ಅದೂ ಆಗುತ್ತಿರುವುದು ಯಾವುದೋ ಒಂದೆರಡು ಗುಂಪುಗಳಿಂದ, ಬಿಳಿ ಜನರಿಂದ ಅಲ್ಲವೇ ಅಲ್ಲ. ಮತ್ತೆ ಕೆಲವು ಭಾರತೀಯ ಪತ್ರಿಕೆಗಳಲ್ಲಿ ಈ ಘಟನೆಗಳಿಗೆ ಸದ್ಯದ ಹಣಕಾಸಿನ ಪರಿಸ್ಥಿತಿ ಕಾರಣ, ಇಲ್ಲಿ ಬಹಳ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಓಳ್ಳೊಳ್ಳೆ ಕೆಲಸದಲ್ಲಿರುವ ಭಾರತೀಯರಮೇಲೆ ಇಲ್ಲಿ ಜನರ ಕಣ್ಣು, ಅದಕ್ಕೆ ಈ ಗಲಭೆ ಎಂದೆಲ್ಲಾ ಬರೆಯಲಾಗಿದೆ. ಇದು ಹುರುಳಿಲ್ಲದ ಮಾತು, ಮರೆತು ಬಿಡಿ.

ಮತ್ತೊಂದು ಅಂಶ - ರಾತಿಹೊತ್ತು ಬೀದಿಯಲ್ಲಿ ಜನರನ್ನು ನಿಲ್ಲಿಸಿ ಅವರ ಬಳಿ ಇರುವ ಹಣ ಇತ್ಯಾದಿಗಳನ್ನು ಕಿತ್ತುಕೊಂಡು ಹೋಗುವ ಘಟನೆಗಳು ಇಲ್ಲಿ ಬಹಳ ಸಾಮಾನ್ಯ. ಇದಕ್ಕೆ ಭಾರತೀಯರೊಬ್ಬರೇ ಅಲ್ಲ, ಚೀನಿಯರು ಮೊದಲಾಗಿ ಎಲ್ಲ ರಾಷ್ಟ್ರೀಯರೂ ಗುರಿ. ಬಿಳಿ, ಕರಿ ಎಂಬ ಭೇದ ಭಾವವಿಲ್ಲ. ಇವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಯೇ ಆಗುತ್ತಿವೆ. ಮೆಲ್ಬರ್ನಿನಲ್ಲಿ ಹೋದವರ್ಷ 1500 ಕಳ್ಳತನಗಳಾಗಿವೆ - ಭಾರತೀಯ ವಿದ್ಯಾರ್ಥಿಗಳ ಮನೆಗಳಲ್ಲಿ.

ಈಗ ನಮ್ಮ ವಿದ್ಯಾರ್ಥಿಗಳತ್ತ ಬನ್ನಿ. ಬಹುತೇಕ ಮಂದಿ ಇಲ್ಲಿಗೆ ವಲಸೆ ಬರುವ ಗುರಿ ಹೊಂದಿದವರು. ಭಾರತದಲ್ಲಿ ಏಜೆಂಟರುಗಳು ಇವರಿಗೆ ಆಸೆ ತೋರಿಸುತ್ತಾರೆ. ಕೆಲಸಕ್ಕೆ ಬಾರದ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶವನ್ನೂ ಗಿಟ್ಟಿಸಿಕೊಡುತ್ತಾರೆ. ಮೂವತ್ತು, ನಲವತ್ತು ಲಕ್ಷ ರೂಪಾಯಿ ಸಾಲಹೊತ್ತು ಯುವಕರು ಇಲ್ಲಿ ಬರುತ್ತಾರೆ. ಇಳಿದುಕೊಳ್ಳುವ ಮನೆ, ಊಟ ತಿಂಡಿಯ ಖರ್ಚು ಇವುಗಳ ಬಗ್ಗೆ ಸರಿಯಾಗಿ ಯೋಚಿಸುವುದಿಲ್ಲ. ಇಲ್ಲಿಗೆ ಬಂದು ಬಿಡುತ್ತಾರೆ- ಎರಡು ವರ್ಷ ಹೇಗೋ ತಳ್ಳಬಹುದು ಅಂತ. ಆದರೆ ಇಲ್ಲಿ ಮನೆ, ಆಹಾರ ಎಲ್ಲಾ ದುಬಾರಿ. ಹಲವಾರು ಮಂದಿ ಕೂಡಿ ಒಂದು ಅಪಾರ್‍ಟ್‌ಮೆಂಟ್ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳಿರಬಹುದಾದ ಚಿಕ್ಕ ಮನೆಯಲ್ಲಿ ಎಂಟು ಹತ್ತು ಮಂದಿ ವಾಸಿಸುತ್ತಾರೆ. ಇಲ್ಲಿ ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ; ಇದು ಇಲ್ಲಿ ಎಲ್ಲರಿಗೂ, ಸರ್ಕಾರಕ್ಕೂ ತಿಳಿದ ವಿಚಾರ. ಇನ್ನು ಊಟ, ತಿಂಡಿ ಮತ್ತಿತರ ಖರ್ಚಿಗೆ ಕೆಲಸ ಮಾಡುತ್ತಾರೆ. ಇಲ್ಲಿ ಇಂತಹ ಮಂದಿಗೆ ಸಿಗುವ ಕೆಲಸವೆಂದರೆ ಪೆಟ್ರೊಲ್ ಸ್ಟೇಷನ್‌ನಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ. ಮಧ್ಯ ರಾತ್ರಿಯವರೆಗೆ ಕೆಲಸ. ಮನೆಗೆ ಹಿಂತಿರುಗುವುದು ಅವೇಳೆಯಲ್ಲಿ. ಇಲ್ಲಿ ರಾತ್ರಿ ಆರೇಳು ಗಂಟೆಯಾದ ಮೇಲೆ ಬೀದಿಯೆಲ್ಲಾ ನಿರ್ಜನ. ಒಬ್ಬೊಬ್ಬರೇ ನಡೆದು ಬರುವಾಗ, ಟ್ರೈನ್ ಇಳಿದು ಬರುವಾಗ, ಇಂತಹ ಜನರನ್ನೇ ಕಾದು ನಿಂತಿರುವ ಪುಂಡರು ಯಾರು ಸಿಕ್ಕಿದರೂ ಬಿಡುವುದಿಲ್ಲ. ಅದರಲ್ಲೂ ಕಾಲೇಜುಗಳಿಂದ ಹಿಂತಿರುಗಿ ಬರುವ ಭಾರತೀಯ ವಿದ್ಯಾರ್ಥಿಗಳು ಅಂದರೆ ಅವರ ಬಳಿ ಲ್ಯಾಪ್ ಟಾಪ್, ಐಪಾಡ್, ಮೊಬೈಲ್ ಗ್ಯಾರಂಟಿ. ಯಾರು ಬಿಟ್ಟಾರು! ಕೇಳಿದ ತಕ್ಷಣ ಕೊಟ್ಟರೆ ಸರಿ; ಇಲ್ಲದಿದ್ದರೆ ಚಾಕು ತೋರಿಸಿ ಅಥವ ಇರಿದು, ಹೊಡೆದು ತೆಗೆದುಕೊಳ್ಳುತ್ತಾರೆ.

ಪೊಲೀಸ್ ಬಂದೋಬಸ್ತಿನ ಪ್ರಶ್ನೆ ಏಳುವುದು ಸಹಜ. ನಿಜ ಹೇಳಬೇಕಾದರೆ ಇಲ್ಲಿನ ಪೊಲೀಸ್ ತೀರ ನಿಷ್ಕ್ರಿಯ. ಒಂದು ಪಕ್ಷ ಈ ಪುಂಡರನ್ನು ಹಿಡಿದು ಕೋರ್ಟಿಗೆ ಕೊಂಡೊಯ್ದರೆ ಇಲ್ಲಿನ ನೀತಿ ನಿಯಮ ಕೂಡ ತುಂಬಾ ಧಾರಾಳ. ಪುಂಡರು ಹೇಗೋ ತಪ್ಪಿಸಿಕೊಂಡುಬಿಡುತ್ತಾರೆ. ಅಲ್ಲದೆ ಭಾರತೀಯ ವಿದ್ಯಾರ್ಥಿಗಳು ಈ ಬಗ್ಗೆ ಬಹಿರಂಗವಾಗಿ ಮಾತಾಡಲು ಹಿಂಜರಿಯುತ್ತಾರೆ. ಅದಕ್ಕೆ ಕಾರಣಗಳಿವೆ. ಪ್ರತಿ ವಿದ್ಯಾರ್ಥಿ ವಾರಕ್ಕೆ 20 ಗಂಟೆ ಮಾತ್ರ ಕೆಲಸಮಾಡಬಹುದು; ಇದು ಸರ್ಕಾರಿ ನಿಯಮ. ಆದರೆ ನಮ್ಮ ಯುವಕರು ಇದಕ್ಕಿಂತ ಹೆಚ್ಚಿನ ಸಮಯ ದುಡಿಯುತ್ತಾರೆ. ಇದು ಯಾವ ರೆಕಾರ್ಡಿನಲ್ಲೂ ಬರಬಾರದು, ಪೊಲೀಸಿನವರಿಗೂ ಗೊತ್ತಾಗಬಾರದು ಎಂದು ಸುಮ್ಮನಿದ್ದುಬಿಡುತ್ತಾರೆ.

ಸಿಡ್ನಿಯ ಮಧ್ಯಭಾಗದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಹ್ಯಾರಿಸ್ ಪಾರ್ಕ್ ಎಂಬ ಬಡಾವಣೆ ಇದೆ. ಇಲ್ಲಿರುವ ಜನ ಹೆಚ್ಚಾಗಿ ಭಾರತೀಯರು. ಇಲ್ಲಿ ಅಂಗಡಿ, ರೆಸ್ಟೊರಂಟ್ ಎಲ್ಲಾ ಭಾರತೀಯರದೆ. ಬೀದಿತುಂಬಾ ಭಾರತೀಯರೆ. ಈ ಬಡವಣೆಯ ಸುತ್ತಾ ಲೆಬನೀಸ್ ಜನ. ಇಲ್ಲಿ ನಡೆಯುವ ಗಲಭೆಗಳಿಗೆ ಅವರೇ ಕಾರಣ. ಇವರ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು - ದುಷ್ಟ ಜನ, ಏನಕ್ಕೂ ಹೇಸುವುದಿಲ್ಲ, ಸದಾ ಪಿಸ್ತೂಲು, ಚಾಕುಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ. ಸಿಡ್ನಿಯಲ್ಲಿ ನಡೆಯುವ ಕ್ರೌರ್ಯಕ್ಕೆ ಮೊದಲ ಕಾರಣ ಇವರೆ. ಹೋದವಾರ ನಮ್ಮ ಮತ್ತು ಲೆಬನೀಸ್ ಯುವಕರು ಕೈಕೈ ಮಿಲಾಯಿಸುವ ಸಂದರ್ಭ ಬಂದಿತ್ತು. ತಪ್ಪಿದ್ದು ಒಳ್ಳೆಯದೇ ಆಯಿತು, ಇಲ್ಲದಿದ್ದಲ್ಲಿ ರಕ್ತಪಾತ ವಾಗುತ್ತಿತ್ತು.

ನಮ್ಮ ವಿದ್ಯಾರ್ಥಿಗಳು ಈಗ ಹೊರಬಂದು ತಮ್ಮ ಸಂಕಟವನ್ನು ಹೇಳಿಕೊಂಡಿದ್ದು ಸ್ವಾಗತಾರ್ಹ. ಭಾರತೀಯ ಸಮುದಾಯ ಮತ್ತು ಸರ್ಕಾರಗಳ ಗಮನ ಇತ್ತ ಸೆಳೆದಿದೆ. ಇದಲ್ಲದೆ ಮಿಕ್ಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾದೀತು ಎಂಬ ಆಶಾಕಿರಣ ಮೂಡಿದೆ. ಈ ಗಲಭೆಗಳಿಂದಾಗಿ ಆಸ್ಟ್ರೇಲಿಯಾದ ಸರ್ಕಾರಕ್ಕೆ, ಇಲ್ಲಿನ ವಿಶ್ವವಿದ್ಯಾಲಯಗಳಿಗೆ ಇದರಿಂದ ಭಾರಿ ಏಟು ಬಿದ್ದಿದೆ. ಈ ದೇಶ ರಫ್ತು ಮಾಡುವ ಸರಕುಗಳಲ್ಲಿ ಲೋಹದ ಅದಿರು, ಉಣ್ಣೆಗಳ ಜತೆ ವಿದ್ಯೆಯೂ ಸೇರಿದೆ. ಸುಮಾರು 15 ಬಿಲಿಯನ್ ಡಾಲರುಗಳ ಉದ್ದಿಮೆ. ಚೀನಾ, ಭಾರತ, ಮಲೇಶಿಯಾ ಮೊದಲಾದ ದೇಶಗಳ ಅನೇಕಾನೇಕ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ; ಹೋದ ವರ್ಷ 450,000 ಮಂದಿ ಇದ್ದರು. ಇವರಲ್ಲಿ 93,000 ಮಂದಿ ಭಾರತೀಯರು. ವಿಶ್ವಾದಾದ್ಯಂತ ನಡೆದಿರುವ ಅಪಪ್ರಚಾರದಿಂದ ಈ ಉದ್ದಿಮೆಗೆ ಅಪಾರ ನಷ್ಟವಾಗುವುದರಲ್ಲಿ ಸಂದೇಹವಿಲ್ಲ.

ವಿಶ್ವವಿದ್ಯಾಲದ ಮಾತು ಬಂದಾಗ ಇನ್ನೂ ಕೆಲವು ಅಂಶ ಗಮನಿಸಬೇಕಾಗುತ್ತದೆ. ಆಸ್ಟ್ರೇಲಿಯಾದಲ್ಲಿ V8 ಗುಂಪಿಗೆ ಸೇರುವ ಎಂಟು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ ಸಿಡ್ನಿ (ನಾನು ಪಾಠ ಹೇಳುವ ವಿಶ್ವವಿದ್ಯಾಲಯ), NSW, UTS ಮೆಲ್ಬರ್ನ್, ಮೊನಾಶ್ ಇವೆಲ್ಲಾ ಇವೆ. ಮಿಕ್ಕ ವಿಶ್ವವಿದ್ಯಾಲಯಗಳ ಮೌಲ್ಯ ಕಡಿಮೆ. ಇವುಗಳಿಗೆ ಸರ್ಕಾರದಿಂದ ಬರುವ ಹಣ ಸಾಕಾಗುವುದಿಲ್ಲ. ಆದ್ದರಿಂದ ಅವುಗಳ ಉಳಿವು, ಅಳಿವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಅವಲಂಬಿಸಿದೆ. ಈ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅವರು ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಗುರಿ ಇಲ್ಲಿಗೆ ವಲಸೆ ಬರುವುದು ಎಂದು ಹಿಂದೆಯೇ ಹೇಳಿದೆ. ವಲಸೆ ಬರಬೇಕಾದರೆ ಇಲ್ಲಿ ಅವರ ಕಸುಬಿಗೆ, ನೈಪುಣ್ಯಕ್ಕೆ ಮನ್ನಣೆ ಇರಬೇಕು. ಸರ್ಕಾರ ಆಗಿಂದಾಗ್ಗೆ ಯಾವ ಯಾವ ಕಸುಬುಗಳು ದೇಶಕ್ಕೆ ಅವಶ್ಯಕವೆಂದು ಸಾರುತ್ತಾರೆ - ಕ್ಷೌರ ಕಾರ್ಮಿಕರು, ಹೊಟೇಲ್ ಕೆಲಸಗಾರರು ಹೀಗೆ. ಈ ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮವನ್ನು ಬದಲಾಯಿಸಿ ಈ ಕ್ಷೇತ್ರಗಳಲ್ಲೇ ಡಿಗ್ರಿ ಅಥವಾ ಡಿಪ್ಲೊಮಾ ನೀಡುತ್ತಾರೆ. ಇಂತಹ ವಿಶ್ವವಿದ್ಯಾಲಗಳತ್ತ ವಿದ್ಯಾರ್ಥಿಗಳು ನುಗ್ಗುತ್ತಾರೆ, ಅಲ್ಲ ಏಜೆಂಟರು ನೂಕುತ್ತಾರೆ. ಇಂತಹ ಚೋಟಾ ವಿಶ್ವವಿದ್ಯಾಲಯಗಳಿಗೆ ವಿಪತ್ತು ಕಾದಿದೆ. ನಿಜವಾಗಿಯೂ ದೊಡ್ಡ ವಿಶ್ವವಿದ್ಯಾಲಯಗಳಿಗೆ ಇತ್ತೀಚಿನ ಪ್ರಕರಣಗಳಿಂದ ಯಾವ ಹಾನಿಯೂ ಇಲ್ಲ. ಸಿಡ್ನಿ ವಿವಿಯಲ್ಲಿ 45,000 ವಿದ್ಯಾರ್ಥಿಗಳಿದ್ದು ಅದರಲ್ಲಿ 8900 ಅಂತಾರಾಷ್ಟ್ರೀಯರು, ಇವರಲ್ಲಿ 150 ಮಾತ್ರ ಭಾರತೀಯರು.

ಭಾರತೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈಗ ಬಿರುಸಾಗಿ ಮಾತನಾಡುತ್ತಿದ್ದಾರೆ, ಅಲ್ಲದೆ ಇನ್ನೂ ಅನೇಕ ಸಮಯ ಸಾಧಕ ನಾಯಕರುಗಳು ಉದ್ಭವವಾಗಿದ್ದಾರೆ. ಇಲ್ಲಿನ ಟೀವಿ, ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ಕೋಟ್ಟಿದ್ದೇ ಕೊಟ್ಟಿದ್ದು. ಇವೆಲ್ಲಾ ಇನ್ನು ತಣ್ಣಗಾಗುತ್ತವೆ. ಈಗ ವಿದ್ಯಾರ್ಥಿಗಳ ಮೇಲಾದ ದಾಳಿ ಅಥವಾ ಹನೀಫ್ ಮಹಮದ್ ತರಹ ಮಾತ್ತಾವುದೋ ಪ್ರಸಂಗವಾದಾಗ ಮತ್ತೆ ತಲೆ ಎತ್ತುತ್ತವೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X