ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇತ್ ತಂಡದ ಅಮೆರಿಕ ರಂಗಯಾತ್ರೆ

By * ವಲ್ಲೀಶ ಶಾಸ್ತ್ರಿ, ಅಮೆರಿಕ
|
Google Oneindia Kannada News

Drama show by Sanket
ಇದಕ್ಕೆ ನನ್ನ ಕನಸೆನ್ನಬೇಕೋ, ಪರಭಾಷೆಗಳ ನಾಟಕಗಳನ್ನು ನೋಡಿ ಅಸೂಯೆಯೋ ಒಟ್ಟಿನಲ್ಲಿ ಬೆಂಗಳೂರಿನಿಂದ ಒಂದು ತಂಡವನ್ನು ಕರೆಸಿ ಕನ್ನಡ ನಾಟಕವನ್ನು ಅಮೆರಿಕೆಯ ಬೇರೆ ಬೇರೆ ಸ್ಥಳಗಳಲ್ಲಿ ಆಡಿಸಲೇಬೇಕೆಂಬ ಹುಚ್ಚು ನಾಲ್ಕು ವರ್ಷಗಳ ಹಿಂದೆಯೇ ಹುಟ್ಟಿತು. ಬಾಲ್ಟಿಮೋರ್ ಅಕ್ಕ ಸಮ್ಮೇಳನದಲ್ಲಿ ಮೊದಲ ಪ್ರಯತ್ನ. ಬೆನಕ ತಂಡವನ್ನು ಕರೆಸಿ ನಾಟಕ ಆಡಿಸಬೇಕೆಂದು ಕಷ್ಟಪಟ್ಟರೂ ಇನ್ನೇನು ನನ್ನ ಕಾರ್ಯ ಫಲಿಸಿತು ಎನ್ನುವುದರಲ್ಲಿ ವಿಸಾ ತೊಂದರೆಯಿಂದ ನಿಂತು ಹೋಯಿತು. ಬಹಳಷ್ಟು ನಿರೀಕ್ಷೆಯಿಟ್ಟಿದ್ದ ಅಮೆರಿಕನ್ನಡ ನಾಟಕ ಪ್ರಿಯರಿಗಂತೂ ಬಹಳ ಬೇಸರವಾಯಿತು. ನಂತರ ಮುಂದಿನ ಚಿಕಾಗೋ ಅಕ್ಕ ಸಮ್ಮೇಳನದಲ್ಲಿ ಪೂರ್ಣ ತಂಡವನ್ನು ತರಿಸುವ ಬದಲು ಬೆನಕ ತಂಡದ ನಾಲ್ಕು ಕಲಾವಿದರ ತಂಡವನ್ನು ತರಿಸಿ ಇನ್ನು ಮಿಕ್ಕವರನ್ನು ಅಮೆರಿಕೆಯಲ್ಲೇ ಹುಡುಕಿ ಜೋಕುಮಾರಸ್ವಾಮಿ ನಾಟಕವನ್ನು ಪ್ರದರ್ಶಿಸಿ, ನಾಗಾಭರಣ ನೇತೃತ್ವದ ನಾಲ್ಕು ಜನರ ತಂಡ ಅಮೆರಿಕೆಯ ನಾನಾ ಭಾಗಗಳಲ್ಲಿ ನಾಗಾಭರಣ ಏಕವ್ಯಕ್ತಿ ಪ್ರಯೋಗವಾದ ಆಹತ ಹಾಗೂ ಹಾಸ್ಯ ಪ್ರಹಸನ ಹೆಲ್ಲೊ ಪ್ರದರ್ಶಿತಗೊಂಡವು.

ಇಷ್ಟಾದರೂ ನನ್ನ ಕನಸು ಪೂರ್ಣ ನನಸಾದಂತಾಗಲಿಲ್ಲ. ಒಂದು ಪೂರ್ಣ ತಂಡವನ್ನು ಕರೆಸಲೇಬೇಕೆಂದು ತಲೆಯಲ್ಲಿ ಕೊರೆಯುತ್ತಿತ್ತು. ನನ್ನ ರಂಗ ಸ್ನೇಹಿತರುಗಳಾದ ಸಂಜಯ್ ರಾವ್, ರವಿ ಹರಪನಹಳ್ಳಿ, ಪ್ರಸನ್ನ, ಜಯಂತ್ ಹೀಗೆ ಹಲವಾರು ಸ್ನೇಹಿತರುಗಳೊಡನೆ ನನ್ನ ಆಸೆಯನ್ನು ಹಂಚಿಕೊಳ್ಳುತ್ತಿದ್ದೆ. ಅವರೆಲ್ಲರದ್ದೂ ಅದೇ ಕನ್ನಡದಲ್ಲಿ ಒಂದು ನಾಟಕ ತಂಡವನ್ನು ಕರೆಸಬೇಕು ಅಂತ. ಅಂತೂ ಕಡೆಗೆ ಈ ಕನಸು ನನಸಾಗಲು ಚಾಲನೆ ಸಿಕ್ಕಿದ್ದು 2007ರಲ್ಲಿ ಬೇಸಿಗೆ ರಜಕ್ಕೆ ಬೆಂಗಳೂರಿಗೆ ಹೋಗಿದ್ದಾಗ. ಒಂದು ದಿವಸ ಕಲ್ಪನಾ ನಾಗಾನಾಥ್ (ಕಲ್ಪನ ಮತ್ತು ನಾನೂ ಬೆನಕ ತಂಡದಲ್ಲಿ ಒಟ್ಟಿಗೇ ನಾಟಕಮಾಡುತ್ತಿದ್ದೆವು) ಒಂದು ನಾಟಕಕ್ಕೆ ಕರೆದಳು. ತುಂಬಾ ಚೆನ್ನಾಗಿದೆ. ನಾನೂ ನಾಟಕದಲ್ಲಿ ಮಾಡ್ತಾ ಇದ್ದೀನಿ. ಬನ್ನಿ ಎಂದಳು. ಹೆಸರೂ ಗೊತ್ತಿರಲಿಲ್ಲ. ಸುಮ್ಮನೆ ಹೋದೆ. ಅವತ್ತು ನನ್ನ ಹೆಂಡ್ತಿ ಮಗಳು ವಾಪಸ್ ಅಮೆರಿಕೆಗೆ ಹೋಗ್ತಾ ಇದ್ರು. ನಾನು ಏರ್‌ಪೋರ್ಟ್‌ಗೆ ಹೋಗಬೇಕಿತ್ತು. ಅದನ್ನೂ ತಪ್ಪಿಸ್ಕೊಂಡು ನಾಟಕ ನೋಡ್ಬೇಕು ಅಂತ ಹೇಳಿ ಮನೆಯಿಂದಲೇ ಬೈಬೈ ಹೇಳಿ, ಏನು ನಾಟಕದ ಹುಚ್ಚೋ ನಿಮಗೆ.. ಅಂತೆಲ್ಲಾ ಬೈಸ್ಕೊಂಡು ಅಂತೂ ನಾಟಕಕ್ಕೆ ಹೋದೆ.

ರಂಗಶಂಕರ ರಂಗಮಂದಿರದ ಬಗ್ಗೆ ಗೊತ್ತೇ ಇದೆಯಲ್ಲ. ರಂಗ ಶಿಸ್ತು ಅಂದರೆ ಅದು. 7 ಗಂಟೆಗೆ ನಾಟಕ ಪ್ರಾರಂಭ ಅಂದ್ರೆ, ದ್ವಾರವೂ ಬಂದ್. ಒಳಗಡೆ ಹೋದರೆ ಇನ್ನೊಂದು ಲೋಕಕ್ಕೇ ಕರ್ಕೊಂಡು ಹೋಗುತ್ತೆ. ಇದಕ್ಕಿಂತ ಮುಂಚೆ ಅಲ್ಲಿ ನಾಟಕಗಳನ್ನು ನೋಡಿದ್ದೆ. ಆದರೂ ಈ ನಾಟಕ ಬಹಳ ಹೆಸರು ಮಾಡಿತ್ತು ಆಗಲೇ. ಅದಕ್ಕೇ ಕುತೂಹಲ. ನಾಟಕ ನೀನಾದರೆ ನಾನೇನೇನಾ. ಹೆಸರೇ ಅಷ್ಟು ಕಲಸು ಮೇಲೋಗ್ರ ಇದ್ದ ಹಾಗೆ ಇದೆಯಲ್ಲ. ಇನ್ನು ನಾಟಕ ಎಷ್ಟು ಗೋಜಲು ಇರಬಹುದು ಅಂದುಕೊಂಡೆ ನಾಟಕ ನೋಡಲು ಕುಳಿತೆ. ಯಾರೋ ಒಬ್ಬ ಕಲಾವಿದೆ ಬರಲು ತಡ ಅಂತ ನಾಟಕ ಸ್ವಲ್ಪ ತಡವಾಗೇ ಶುರುವಾಯಿತು. ನಾಟಕದುದ್ದಕ್ಕೂ ಎಷ್ಟು ನಕ್ಕಿದ್ದೀನಿ ಅಂದ್ರೆ ಹೇಳ್ತೀರದು. ಪಾಪ ನನ್ನ ಹೆಂಡ್ತಿ, ಮಗಳು ಮಿಸ್ ಮಾಡ್ಕೊಂಡ್ರಲ್ಲ ಅಂತ ಅಂದ್ಕೊಡೆ. ನಾಟಕ ಮುಗಿದ ಮೇಲೆ ಹೊರಗೆ ಕಾಯ್ಕೊಂಡು ಕಲ್ಪನ, ಶ್ರೀನಿವಾಸ ಪ್ರಭು ಮತ್ತು ಸೂರಿ (ನಾಟಕದ ನಿರ್ದೇಶಕರು) ಅವರನ್ನು ಭೇಟಿ ಮಾಡಿ ಶಭಾಶ್‌ಗಿರಿ ಹೇಳಿ ಮನೆಗೆ ಹೊರಡುವ ಮುನ್ನ, ಸೂಕ್ಷ್ಮವಾಗಿ ಸೂರಿ ಬಳಿ ಈ ನಾಟಕವನ್ನು ಅಮೆರಿಕೆಗೆ ತರುವ ಯೋಚನೆಯನ್ನೇಕೆ ಮಾಡಬಾರದು ಎಂದೆ? ಅಲ್ಲಿಂದ ಪ್ರಾರಂಭವಾದ ಈ ರಂಗಯಾತ್ರೆಯ ಯೋಜನೆ ಕಾರ್ಯರೂಪಕ್ಕೆ ತರಲು ಒಂದು ವರ್ಷಕ್ಕೂ ಹೆಚ್ಚು ಕಾಲ ಹಿಡಿಯಿತು.

ವಿಸಾ ವಿಷಯದಲ್ಲಿ ಒಮ್ಮೆ ಕೈಸುಟ್ಟುಗೊಂಡಿದ್ದ ನನಗೆ ಈ ತಂಡಕ್ಕೆ ವಿಸಾ ಸಿಗುವ ಭರವಸೆ ಇರಲಿಲ್ಲ. ಅಂತೂ ಎಲ್ಲರಿಗೂ ವಿಸಾ ಸಿಕ್ಕಾಗ ಖುಷಿಯೇನೋ ಆಯಿತು ಆದರೆ ಅಮೆರಿಕೆಯ ಎಕಾನಮಿ ತನ್ನ ತಳಭಾಗವನ್ನು ಕಂಡಂತಹ ದಿವಸಗಳು. 2009ರ ಮೇ ಮತ್ತು ಜೂನ್ ತಿಂಗಳಲ್ಲಿ ಪ್ರವಾಸ ಮಾಡುವ ಉದ್ಧೇಶ. ಯಥಾ ಪ್ರಕಾರ ನನ್ನ ರಂಗ ಸ್ನೇಹಿತರುಗಳನ್ನು ವಿಚಾರಿಸಿದೆ. ಯಾರಿಂದಲೂ ಉತ್ತೇಜಕರ ಮಾತುಗಳು ಬರಲಿಲ್ಲ. ಅದರಲ್ಲೂ ನನ್ನ ರಂಗ ಸ್ನೇಹಿತರುಗಳಲ್ಲೇ ಇಬ್ಬರಿಗೆ ಕೆಲಸ ಹೋಗಿತ್ತು. ಅವರನ್ನು ಕೇಳುವುದಾದರೂ ಹೇಗೆ? ಬರುತ್ತಿರುವ ಕಲಾವಿದರೆಲ್ಲಾ ಕಿರುತೆರೆಯ ಕಲಾವಿದರು ಹಾಗು ಕೆಲವರು ಸಿನಿಮಾ ಕಲಾವಿದರೂ ಕೂಡ. ಅಷ್ಟು ಕಷ್ಟ ಪಟ್ಟು ವಿಸಾ ತೆಗೆದುಕೊಂಡು, ಮೇ ಜೂನ್ ತಿಂಗಳಲ್ಲಿ ಬರಬೇಕು ಎಂದರೆ ತಮ್ಮ ಎರಡು ತಿಂಗಳ ಶೂಟಿಂಗ್ ಶೆಡ್ಯೂಲ್‌ಗಳನ್ನು ಸರಿಪಡಿಸಿಕೊಳ್ಳಬೇಕು. ಅದೂ ಅವರು ಬರುತ್ತಿರುವುದು ನಾಟಕ ಹವ್ಯಾಸಕ್ಕೋಸ್ಕರ. ಅದರಿಂದ ಅವರಿಗೇನು ಸಂಪಾದನೆಯಿಲ್ಲ. ನಮ್ಮ ಬಜೆಟ್ ಪ್ರಕಾರ ನಾವು ಅಂದುಕೊಂಡಿರುವ ಸ್ಥಳಗಳಲ್ಲಿ ಪ್ರದರ್ಶಿಸಿ ಆ ಕನ್ನಡ ಸಂಘಗಳು ನಾವು ಅಂದುಕೊಂಡಿರುವಷ್ಟು ಸಂಭಾವನೆ ಕೊಟ್ಟರೆ ಅವರು ಬಂದು ಹೋಗುವ ಖರ್ಚು ಕಳೆಯುತ್ತದೆ. ಹ್ಯಾಗಾದರೂ ಆಗಲಿ ಎಂದು ಕೈ ಹಾಕಿ ಅವರುಗಳಿಗೆ ಹೂಂ ಅಂದೆ. ಕನ್ನಡ ಸಂಘಗಳಿಗೆ, ನಮ್ಮ ಸ್ನೇಹಿತರುಗಳೀಗೆ ಈ-ಮೈಲ್ ಕಳುಹಿಸಿದೆ. ಬಹುಮಟ್ಟಿಗೆ ಎಲ್ಲ ಕಡೆಯಿಂದಲೂ ಉತ್ತೇಜಕರ ಉತ್ತರಗಳೇ ಬಂದವು. ಅದನ್ನು ಕೇಳಿ ಸ್ವಲ್ಪ ಸಮಾಧಾನವಾಯಿತು.

ನನ್ನ ಆಫೀಸ್ ಕೆಲಸದ ವಿಷಯದಲ್ಲಿ ನಾನು ಪ್ಯಾರೀಸ್‌ಗೆ ಹೋಗಿದ್ದೆ. ಏಪ್ರಿಲ್ 12ರಂದು ಕಲಾವಿದರ ತಂಡ ನ್ಯೂಯಾರ್ಕ್‌ನಲ್ಲಿ ಬಂದಿಳಿಯಿತು. ನ್ಯೂಯಾರ್ಕ್‌ನಲ್ಲಿ ಕನ್ನಡದ ಯಾವುದೇ ಅತಿಥಿಗಳು ಬಂದರೆ ಸಾಮಾನ್ಯವಾಗಿ ಅವರ ಸತ್ಕಾರವನ್ನು ಮಾಡುವವರು ಪುರುಶೋತ್ತಮ್ ಚಿಕತ್ತೂರ್. ಬಂದವರಿಗೆ ಅವರ ಮನೆಯಲ್ಲೇ ಸ್ಥಳಾವಕಾಶ, ಊಟದ ವ್ಯವಸ್ಥೆ, ನಗರ ಪ್ರದರ್ಶನ. ಕನ್ನಡದ ಯಾರೇ ಕಲಾವಿದರಾಗಲಿ, ಸಾಹಿತಿಗಳಾಗಲಿ, ಮಠಾಧಿಪತಿಗಳಾಗಲಿ ಅವರ ಮನೆಗೆ ಭೇಟಿ ನೀಡಿ ಅತಿಥಿ ಸತ್ಕಾರ ಮಾಡಿಸಿಕೊಳ್ಳದೇ ಹೋದವರನ್ನು ಕಂಡಿರುವುದು ವಿರಳ. ಅಂತಹ ಉದಾರ ಮನಸ್ಕ ದಂಪತಿಗಳು ಚಿಕತ್ತೂರ್ ದಂಪತಿಗಳು. ಅಂತಯೇ ಈ ಕಲಾವಿದರ ಸತ್ಕಾರಕ್ಕೂ ಮುಂದಾದವರು ಇವರು. ಅವರಿಗೆ ಚಿರಋಣಿ. ನಂತರದ ನಿಲುಗಡೆ ವರ್ಜಿನಿಯಾದ ಸಂಜಯ್ ರಾವ್. ಸಂಜಯ್ ಮತ್ತು ಮೀನಾ ಮನೆಯಲ್ಲೂ ಅಷ್ಟೆ ವರ್ಷಕ್ಕೆ 6 ತಿಂಗಳು ಕರ್ನಾಟಕದಿಂದ ಯಾರಾದರೊಬ್ಬರು ಅವರ ಅತಿಥಿಯಾಗಿರುತ್ತಾರೆ. ಅದರಲ್ಲೂ ನಾಟಕದವರು ಎಂದರೆ ಇಬ್ಬರಿಗೂ ಪ್ರೀತಿ ಜಾಸ್ತಿ.

ಕಲ್ಪನಾ ನಾಗಾನಾಥ್ ಬಿಟ್ಟರೆ ತಂಡದಲ್ಲಿ ಬಂದವರೆಲ್ಲಾ ಮೊದಲ ಬಾರಿಯ ಅಮೆರಿಕೆ ಭೇಟಿ. ನನಗೆ ಪ್ಯಾರಿಸ್‌ನಲ್ಲಿ ಕೆಲಸ. ಆದರೆ ನನ್ನ ಸ್ನೇಹಿತರುಗಳ ಮೇಲೆ ನನಗೆ ಭರವಸೆ. ಅವರೆಲ್ಲರೂ ನಿಭಾಯಿಸಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ. ಮೊದಲ ಪ್ರದರ್ಶನವಿದ್ದಿದ್ದು ಜ್ಯಾಕ್ಸನ್‌ವಿಲ್, ಫ್ಲೋರಿಡಾದಲ್ಲಿ. ಹೇಗಾಗುತ್ತೋ ಅಮೆರಿಕನ್ನಡಿಗರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದೇ ಕುತೂಹಲ. ಪ್ರದರ್ಶನದ ಹೊತ್ತಿಗೆ ಲಾಸ್‌ಏಂಜಲಿಸ್ ಬಂದು ಸೇರಿದ್ದೆ. ಪ್ರತಿ ಗಂಟೆಗೊಮ್ಮೆ ಫೋನಾಯಿಸಿ ಕೇಳಿಕೊಳ್ಳುತ್ತಿದ್ದೆ. ಪ್ರದರ್ಶನದ ನಂತರ ಜ್ಯಾಕ್ಸನ್‌ವಿಲ್‌ನ ಸಂಘಟಕರಾದ ಮಹೇಶ್‌ರವರು ಫೋನ್ ಮಾಡಿ ಅಮೆರಿಕೆದಲ್ಲಿ ಇಂತಹ ಕನ್ನಡ ನಾಟಕವನ್ನು ನೋಡೆ ಇರಲಿಲ್ಲ. ನಮಗೆ ರವೀಂದ್ರ ಕಲಾಕ್ಷೇತ್ರಗಳಲ್ಲಿ ನಡೆಯುತ್ತಿದ್ದ ನಾಟಕಗಳ ಜ್ಞಾಪಕವಾಯಿತು. ನಮ್ಮ ಜನ ಹುಚ್ಚೆದ್ದು ನಕ್ಕರು ಸಾರ್ ಎಂದಾಗ ನನಗಾಗ ನಿಟ್ಟುಸಿರು. ಜ್ಯಾಕ್ಸನ್‌ವಿಲ್, ಫ್ಲೋರಿಡಾನಿಂದ ಪ್ರಾರಂಭವಾದ ಪ್ರದರ್ಶನ Tampa, FL, Washington DC, Los Angeles, CA, Atlanta, GA, Milwaukee, WI, Chicago, IL, San Jose, CA, Boston, MA, New York, New Jersey ಹಾಗೂ Dallas, TXಗಳಲ್ಲಿ ಒಟ್ಟಿನಲ್ಲಿ 12 ಪ್ರದರ್ಶನಗಳನ್ನು ನೀಡಿ ಒಂದು ದಾಖಲೆಯನ್ನೇ ಸ್ಥಾಪಿಸಿತು. ಈ ಎಲ್ಲ ಪ್ರದೇಶಗಳಲ್ಲಿ ಕನ್ನಡಿಗರು ಕಲಾವಿದರಿಗೆ ತೋರಿಸಿದ ಆದರದ ಸ್ವಾಗತ ಹಾಗೂ ಆತಿಥ್ಯವನ್ನು ಎಂದೂ ಮರೆಯಲಿಕ್ಕಾಗುವುದಿಲ್ಲ.

ಮುಂದೆ ಓದಿ : ಮರೆಯಲಾಗದ ಅವಿಸ್ಮರಣೀಯ ಅನುಭವ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X