• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರೆಯಲಾಗದ ಅವಿಸ್ಮರಣೀಯ ಅನುಭವ

By * ವಲ್ಲೀಶ ಶಾಸ್ತ್ರಿ, ಅಮೆರಿಕ
|

ತಾಂಪಾದಲ್ಲಿ ತಮ್ಮ ಒಂದು ಮನೆಯನ್ನೇ ಬಿಟ್ಟುಕೊಟ್ಟಿದ್ದ ಡಾ||ರೇಣುಕಾರಾಮಪ್ಪನವರು, ಅಟ್ಲಾಂಟ ನಾಗೇಂದ್ರ ತಮ್ಮ ಸಿನಿಮಾ ತೆಗೆಯುವದರ ಬಿಸಿಯಲ್ಲೂ ನಾಟಕಕ್ಕೆ ವ್ಯವಸ್ಥೆ ಮಾಡಿದ್ದು, ಪ್ರಕಾಶ್‌ರಂತ ಯುವ ಸಂಘಟಕರು ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮ ನಡೆಸಿದ್ದು, ಒಂದೇ ವಾರದಲ್ಲಿ ಮಿಲ್ವಾಕಿಯಲ್ಲಿ ಒಂದು ಪ್ರದರ್ಶನದ ವ್ಯವಸ್ಥೆ ಮಾಡಿದ ಡಾ|| ಶಿವರಾಂ ಹಾಗೂ ಪವನ್ ಅವರ ಸಾಹಸ, ಚಿಕಾಗೋವಿನಲ್ಲಿ ರಾಮರಾವ್ ಮತ್ತು ವೆಂಕಟೇಶ್ ಅವರ ಹೃದಯತುಂಬಿದ ಆತಿಥ್ಯ, ಸ್ಯಾನ್‌ಹೊಸೆಯಲ್ಲಿ ಹಲವಾರು ಕಾರ್ಯಕ್ರಮಗಳ ಮಧ್ಯೆ ನಾಟಕವನ್ನು ಯಶಸ್ವಿ ಪ್ರಯೋಗಕ್ಕೆ ವ್ಯವಸ್ಥೆ ಮಾಡಿದ್ದ ಪುಷ್ಪಾರಾವ್, ರಘು, ಗೋಪಿ ಹಾಗೂ ಅವರ ಸ್ನೇಹಿತರ ಸ್ನೇಹಪರ ಆತಿಥ್ಯ, ಲಾಸ್ ಏಂಜಲಿಸ್‌ನ ಅಮೃತಾಬಸವಾಪಟ್ಟಣ ಅವರ ಕಾರ್ಯಕ್ರಮ ವ್ಯವಸ್ಥೆ, ಬಾಸ್ಟನ್‌ನಲ್ಲಿ ಸಾಮಗ ಅವರ ಒಂದು ದಿನ ಪೂರ್ತಿ ಕಾರ್ಯಕ್ರಮ ವ್ಯವಸ್ಥೆ, ರಾಜಾರಾವ್ ಅವರ ಆತಿಥ್ಯ ಇವೆಲ್ಲವನ್ನೂ ಮರೆಯಲು ಸಾಧ್ಯವೇ ಇಲ್ಲ. ಪೂರ್ವ ಭಾಗದಲ್ಲಿ ಕಲಾವಿದರ ವಿಶ್ರಾಮ ತಾಣವೆಂದೇ ಹೆಸರು ಪಡೆದಿರುವ ಇನ್ನೊಂದು ಮನೆಯೆಂದರೆ ಪ್ರಸನ್ನ ಮತ್ತು ಉಷ ಅವರ ಸಂತೃಪ್ತಿ ಮನೆ. ಅಲ್ಲಿಗೆ ಬಂದ ಅತಿಥಿಗಳಿಗೆ ಸಂತೃಪ್ತಿಗಳಿಸದೇ ಕಳಿಸುವುದೇ ಇಲ್ಲ. ನ್ಯೂಯಾರ್ಕ್‌ನಲ್ಲಿ ನಾಟಕಪ್ರದರ್ಶಿಸಲು ಸಹಾಯಮಾಡಿದ ವಾಸು ಚಿಕ್ಕತ್ತೂರ್ ಅವರಿಗೂ ಚಿರಋಣಿ. ಜಯಂತ್ ಬೆಂಗಳೂರಿನ ನಾಟಕದವರ ಜೊತೆಯಲ್ಲೇ ಬೆಳೆದವ. ನಾನೂ ಅವನೂ ಜೊತೆಯಲ್ಲಿ ನಾಟಕಗಳನ್ನು ಮಾಡಿದ್ದೇವೆ. ಅವನಿಗಾಗಲಿ ಅವನ ಪತ್ನಿ ಸುಮಾಗಾಗಲಿ ನ್ಯೂಯಾರ್ಕ್‌ಗೆ ಬಂದ ಕಲಾವಿದರು ಅದರಲ್ಲೂ ನಾಟಕದ ಕಲಾವಿದರು ಬಂದು ಕಡೇ ಪಕ್ಷ ಒಂದು ದಿನದ ಆತಿಥ್ಯ ಸ್ವೀಕರಿಸಲಿಲ್ಲವೆಂದರೆ ನಿದ್ದೇಯೇ ಬರುವುದಿಲ್ಲವೇನೋ. ನ್ಯೂಯಾರ್ಕ್‌ನಲ್ಲಿ ಅವರ ಆತಿಥ್ಯವನ್ನೂ ಸ್ವೀಕರಿಸಿ ಕಡೆಯ ಪ್ರದರ್ಶನವಾದ ದಾಲ್ಲಾಸ್ ನಗರದ ರಮೇಶ್‌ರವರ ಬಹಳ ಕಡಿಮೆ ದಿನಗಳಲ್ಲಿ ಸಂಘಟಿಸಿ ಉತ್ತಮ ಆತಿಥ್ಯವನ್ನೂ ನೀಡಿ ಮೇ 31ರಂದು ಬೀಳ್ಕೊಟ್ಟಾಗ ಅಲ್ಲಿಗೆ ಮುಗಿದಿತ್ತು ಸಂಕೇತ್ ತಂಡದ ರಂಗಯಾತ್ರೆ.

ಇವೆಲ್ಲಾ ಪ್ರದರ್ಶನಗಳಾದವು, ಎಲ್ಲ ಕಡೆ ಮರೆಯಲಾಗದಂತ, ಋಣ ತೀರಿಸಲಾಗದಂತ ಆತಿಥ್ಯವನ್ನೂ ಸ್ವೀಕರಿಸಿ ಮರಳಿ ನಾಡಿಗೆ ಹೊರಟ ಈ ಕಲಾವಿದರ ಅನಿಸಿಕೆಗಳು ಅಪಾರ. ಹಣವನ್ನು ಸಂಪಾದಿಸಲಿಕ್ಕಾಗದಿದ್ದರೂ. ಅಪಾರ ಸ್ನೇಹಿತರುಗಳನ್ನು ಸಂಪಾದಿಸಿಕೊಂಡು ಹೋದರು. ಅದೇ ಸಂತೋಷ. ಬಹಳ ಮರೆಯಲಾಗದ ಹರ್ಷ ಘಟನೆಗಳನ್ನು ಅನುಭವಿಸಿ ಹೋದರು. ಕನಸಿನ ಲೋಕದ ಡಿಸ್ನಿಲ್ಯಾಂಡ್, ಚಿತ್ರರಂಗದ ವಿಸ್ಮಯ ಯೂನಿವರ್ಸಲ್ ಸ್ಟುಡಿಯೊ, ಜಲಮೃಗಗಳ ಸೀ ವರ್ಲ್ಡ್, ಸಣ್ಣ ಪುಟ್ಟ ವಾಹನ ಅಪಘಾತದ ಅನುಭವ, ದೊಡ್ದ ದುರಂತದಿಂದ ಪಾರಾದ ಅನುಭವ, 911 ಅನುಭವವೂ ಆಗಿಹೋಯಿತು.

ನ್ಯೂಯಾರ್ಕ್‌ನಿಂದ ನಯಾಗಾರ ಫಾಲ್ಸ್ ನೋಡಲು ವ್ಯಾನ್ ಮಾಡಿಕೊಂಡು ಹೋಗಿದ್ದೆವು. ಬರುವಾಗ ರಾತ್ರಿ 12 ಗಂಟೆ ಸಮಯ. ನ್ಯೂಜೆರ್ಸಿ ತಲುಪಲು ಇನ್ನೇನು ಒಂದು ಘಂಟೆಯ ಡ್ರೈವಿಂಗ್ ಇರಬಹುದು. ಗುಡ್ಡಗಾಡು ಪ್ರದೇಶ. ವ್ಯಾನಿನಲ್ಲಿ ಕೆಲವರು ಮಲಗಿದ್ದಾರೆ. ಸಿಹಿಕಹಿ ಚಂದ್ರು, ಶ್ರೀನಾಥ್ ವಸಿಷ್ಟ ಹಾಗೂ ಡ್ರೈವ್ ಮಾಡುತ್ತಿದ್ದ ನಾನು ಕೆಲವು ಜೋಕುಗಳನ್ನು ಹೇಳಿಕೊಂಡು ಬರುತ್ತಿದ್ದೇವೆ. 70ಕ್ಕೂ ಹೆಚ್ಚು ಮೈಲಿ ವೇಗದಲ್ಲಿ ಚಲಿಸುತ್ತಿದ್ದ ವ್ಯಾನಿಗೆ ಚಂಗ್ ಅಂತ ಒಂದು ಕಾಡು ಜಿಂಕೆ ಬಂದು ಹೊಡೆಯಬೇಕೆ. ಸಾಮಾನ್ಯವಾಗಿ ಆ ಹೊಡತಕ್ಕೆ ಕಾರುಗಳು ಜಜ್ಜಿ ಹೋಗುತ್ತವೆ ಹಾಗೂ ದೊಡ್ಡ ಅಪಘಾತವಾಗುತ್ತದೆ. ನಮ್ಮ ಅದೃಷ್ಟ ಚೆನ್ನಾಗಿತ್ತು. ವ್ಯಾನ್ ಮುಂದೆ ಹೋಗುತ್ತಿತ್ತು. ಅಬ್ಭಾ ಏನು ಆಗಲಿಲ್ಲವಲ್ಲ ಎಂದು ಮುಂದಕ್ಕೆ ವ್ಯಾನ್ ಡ್ರೈವ್ ಮಾಡಿಕೊಂದು ಹೋಗುತ್ತಿದ್ದನ್ನು ನೋಡಿ, ಗಾಡಿಗೆ ಏನೂ ಆಗಿಲ್ಲವೇನೋ ಅಂದುಕೊಂಡೆವು. ಆದರೆ ಸ್ವಲ್ಪ ದೂರಕ್ಕೆ ವ್ಯಾನ್ ನಿಂತು ಹೋಯಿತು. ವ್ಯಾನ್‌ನಿಂದ ಹೊರಕ್ಕೆ ಬಂದು ನೋಡಿದರೆ, ವ್ಯಾನ್ ಮುಂಬಾಗದಲ್ಲಿ ಜಜ್ಜಿ ಹೋಗಿತ್ತು. 911ಗೆ ಕಾಲ್ ಮಾಡಿ, ಪೋಲೀಸ್‌ಗೆ ತಿಳಿಸಿದ್ದಾಯಿತು. ಸೆಲ್ ಫೋನ್‌ಗೆ ಅಡ್ದಬಿದ್ದೆ. ಎಂತಹ ಆಪದ್ಭಾಂದವ ಎನಿಸಿತು. ಎಲ್ಲೋ ಕಾಡಿನ ಮಧ್ಯದಲ್ಲಿ ಸಹಾಯಕ್ಕಾಗಿ ಕರೆಯಲು ಎಲ್ಲಿಂದ ಸಾಧ್ಯವಿತ್ತು. ನಡು ರಾತ್ರಿ ಸಮಯ. ರಸ್ತೆಯ ಬದಿಯಲ್ಲಿ ಎಲ್ಲಾ ನಿಂತಿದ್ದೇವೆ. ತಂಡದವರಿಗೆ ಒಂದೇ ಹೆದರಿಕೆ. ಪೋಲಿಸ್‌ನವರು ಬರುತ್ತಾರೆ. ಏನೇನು ಕೇಳುತ್ತಾರೆ. ಎಲ್ಲರ ಮುಖದಲ್ಲೂ ಗಾಢವಾದ ಮೌನ ಆವರಿಸಿತ್ತು. ಬಣ್ಣ ಬಣ್ಣದ ಲೈಟ್‌ಗಳನ್ನು ಹಾಕಿಕೊಂಡು ಸೈರನ್ ಊದುತ್ತಾ ಪೋಲಿಸ್ ಗಾಡಿ ಬಂತು.

ಪೋಲಿಸ್ ಬಂದಿಳಿದಾಗ ಅವರು ಕೇಳಿದ ಮೊದಲ ಪ್ರಶ್ನೆ ನಿಮ್ಮಲ್ಲಿ ಯಾರಿಗಾದರೂ ಗಾಯವಾಗಿದೆಯೇ? ಕಾರ್ ರೆಂಟಲ್ ಕಂಪನಿಗೆ ಫೋನ್ ಮಾಡಿ ಮಾರನೆದಿವಸ ಬೆಳಿಗ್ಗೆ ಇನ್ನೊಂದು ವ್ಯಾನ್ ತೆಗೆದುಕೊಳ್ಳುವ ವ್ಯವಸ್ಥೆಯಾಯಿತು. ಅಲ್ಲಿಯವರೆವಿಗೆ ಎಲ್ಲಿ ಇರುವುದು. ತಕ್ಷಣ ಪೋಲಿಸ್‌ನವರು ಹತ್ತಿರ ಸ್ಕ್ಯಾಂಟನ್ ಪಟ್ಟಣದ ಹೊಟೆಲ್‌ಗಳಿಗೆ ಫೋನ್ ಮಾಡಿ ನಮ್ಮ ಬಜೆಟ್‌ಗೆ ಅನುಕೂಲಕ್ಕೆ ನಮಗೆ ರೂಮುಗಳನ್ನು ಕಾದಿರಿಸಿದರು. ಅದೂ ಅಲ್ಲದೆ ನಮಗೆ ಡಿಸ್ಕೌಂಟ್ ಕೊಡಲು ಹೊಟೆಲ್‌ರವರೊಡನೆ ವ್ಯವಸ್ಥೆಯನ್ನೂ ಮಾಡಿದರು. ಅಲ್ಲಿಗೆ ಹೋಗುವ ಬಗೆ ಹೇಗೆ? ನಮ್ಮ ವ್ಯಾನ್ ಡ್ರೈವ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ನಾವಿರುವುದು 6 ಜನ. ಒಂದು ಪೋಲಿಸ್ ವ್ಯಾನ್‌ನಲ್ಲಿ ಹೋಗಲು ಸಾಧ್ಯವಿರಲಿಲ್ಲ. ತಕ್ಷಣ ಪೋಲಿಸ್‌ನವರೇ ಫೋನ್ ಮಾಡಿ ಇನ್ನೂ ಎರಡು ಪೋಲಿಸ್ ಕಾರುಗಳನ್ನು ತರಿಸಿ ನಮ್ಮನ್ನೆಲ್ಲಾ ಹೊಟೆಲ್ ಬಳಿ ಬಿಟ್ಟು ಹೋಗುವಾಗ ನಮ್ಮ ತಂಡದವರಿಗೆ ನಂಬಲೇ ಆಗಲಿಲ್ಲ. ಇವರೆಲ್ಲಾ ಪೋಲಿಸ್‌ನವರಾ? ಅಂತ. ನಮ್ಮ ದೇಶದಲ್ಲಿ ಈ ರೀತಿ ಆಗಿದ್ದರೆ ಏನು ಆಗುತ್ತಿತ್ತು ಅಂತ ನೆನೆಸಿಕೊಂಡು ಶ್ರಿನಾಥ್ ಹೇಳಿದ್ದು ಹೀಗೆ ಸಾರ್ ನಮ್ಮೂರಲ್ಲಿ ಏನಾದರೂ ಈ ರೀತಿ ಆಗಿದ್ದರೆ ನಮ್ಮ ಪೋಲಿಸ್‌ನೋರಿಗೆ ಹಬ್ಬ. ಏನಿಲ್ಲಾಂದರೂ ನಮ್ಮ ಕೈಯಿಂದ ಲಂಚ ಲಕ್ಷ ಕೈಬಿಡತಿತ್ತು. ಏನ್ ಸಾರ್ ಈ ಊರಲ್ಲಿ ಲಂಚ ಇರಲಿ ನಮಗೆ ಇಷ್ಟು ಸಹಾಯ ಮಾಡಿ, ನಮ್ಮನ್ನ ಹೊಟೆಲ್ ತನಕ ಬಿಟ್ಟಿ ಬಿಟ್ಟು ಹೋದರಲ್ಲಾ? ಹ್ಯಾಟ್ಸ್ ಆಫ್ ಟು ದೆಮ್ ಸಾರ್. ನಮ್ಮ ಗುಂಪಿನಲ್ಲಿ ಇದ್ದ ಒಬ್ಬರೇ ಹೆಂಗಸು ಅಂದರೆ ಸಾರಿಕಾ ಗೋಡ್ಕಿಂಡಿ ಅವರು. ಅವರು ಹೇಳಿದ್ದು. ನಮ್ಮೂರಲ್ಲಿ ನಡು ರಾತ್ರೀಲಿ ಈ ರೀತಿ ಆಕ್ಸಿಡೆಂಟ್ ಆಗಿ ಪೋಲಿಸ್‌ನೋರು ಬಂದಿದ್ರೆ ನಮಗೆ ಆಕ್ಸಿಡೆಂಟ್ ಹೇಗಾಯ್ತು, ಯಾರ್ಗಾರು ಪೆಟ್ಟಾಗಿದಯಾ ಅಂತ ಕೇಳೋ ಬದ್ಲು ಕೇಳ್ತಾ ಇದ್ದಿದ್ದು 5 ಜನ ಗಂಡಸ್ರು ಒಂದು ಹೆಂಗಸು ಈ ರಾತ್ರಿ ಎಲ್ಲಿ ಹೋಗಿದ್ರಿ ಎಂದು.

ಕಲ್ಪನಾ ಅವರನ್ನು ಬಿಟ್ಟರೆ ಬಹುಶಃ ಎಲ್ಲರಿಗೂ ಮೊದಲ ಪ್ರವಾಸ. ಎಲ್ಲರಿಗೂ ಇರುವಂತೆ ಇವರಿಗೂ ಅಮೆರಿಕೆ ಹೀಗೆ ಇರುತ್ತೆ ಹಾಗೆ ಇರುತ್ತೆ ಎನ್ನುವ ಅನಿಸಿಕೆಗಳು. ಎಲ್ಲರಿಗೂ ನನ್ನ ಪರಿಚಯವೂ ಇಲ್ಲ. ನಾನು ಹೇಗೆ ಎನ್ನುವುದೂ ಗೊತ್ತಿಲ್ಲ. ನಾನು ಬೇರೆ ಇವರು ಅಮೆರಿಕ ಬಂದಿಳಿದಾಗ ಪ್ಯಾರಿಸ್‌ನಲ್ಲಿ ಇದ್ದೆ. ಎಲ್ಲರೂ ಅಂದು ಕೊಂಡಿದ್ದರಬೇಕು ಇವನೆಂತ ಆರ್ಗನೈಸರ್, ನಾವು ಅಮೆರಿಕೆ ಬಂದಿದ್ದರೆ ಪ್ಯಾರಿಸ್‌ಗೆ ಹೋಗಿದ್ದಾನೆ ಅಂತ. ಅದೃಷ್ಟದಿಂದ ಕಲ್ಪನಾ ಒಂದು ಬಾರಿ ಬಂದು ಹೋದವಳು. ಅವಳಿಗೆ ನನ್ನ ವ್ಯವಸ್ಥೆಗಳು ಹೇಗಿರುತ್ತದೆ ಎನ್ನುವುದೂ ಗೊತ್ತಿತ್ತು. ಅವಳೇ ಇವರೆಲ್ಲರಿಗೂ ಸಮಾಧಾನ ಮಾಡುತ್ತಿದ್ದಳಂತೆ. ಆದರೂ ಇವರು ಇಳಿದುಕೊಳ್ಳುತ್ತಿದ್ದ ಮನೆಗಳಲ್ಲಿ ಇವರು ಸಿಗುತ್ತಿದ್ದ ಆತಿಥ್ಯ, ಗೌರವ, ಪ್ರೀತಿ ನೋಡಿ ತಮ್ಮ ಬಂದಿಳಿದಾಗ ಅನಿಸಿಕೆಗಳೇ ಬದಲಾಗಿ ನೂರಾರು ಸ್ನೇಹಿತರುಗಳ ಆತಿಥ್ಯವನ್ನು ಸ್ವೀಕರಿಸಿ, ಸ್ನೇಹವನ್ನು ಪಡೆದು ಇನ್ನೊಮ್ಮೆ ಬರುವುದಾಗಿ ಹೇಳಿ ಹೊರಟಾಗ ಬಹು ದೂರ ಹೋಗುತ್ತಿದ್ದಾರಲ್ಲಾ ಎಂದೆನಿಸಿತು.

« ಸಂಕೇತ್ ತಂಡದ ಅಮೆರಿಕ ರಂಗಯಾತ್ರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X