ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಏಈನಲ್ಲಿ 35ನೇ ಬಂಟರ ಕೂಡುಕಟ್

By * ಸರ್ವೋತ್ತಮ ಶೆಟ್ಟಿ, ಅಬುಧಾಬಿ
|
Google Oneindia Kannada News

UAE Bunts 35th annual gettogether 2009
ಸಭೆಯಲ್ಲಿ ಚಂಡೆ ಕೊಂಬು ಕಹಳೆಗಳು ಮೊಳಗಲಾರಂಭಿಸಿದವು, ತಾಳ ಮದ್ದಲೆಗಳು ಡೊಳ್ಳುಗಳು ಹೊಡೆಯಲಾರಂಭಿಸಿದವು. ರಕ್ತವರ್ಣದ ಛತ್ರ ಕಂಡಿತು ಕುತೂಹಲದಿಂದ ಏನಪ್ಪಾ ಬಲಿರಾಯ ಬಂದನೇ ಎಂದುಕೊಳ್ಳುವಾಗ, ಭಾವಗುತ್ತು ರಘುರಾಮ ಶೆಟ್ಟರು ಬಲಿರೂಪಿಯಾಗಿ ಬರುತ್ತಿದ್ದರೆ ಜನರೆಲ್ಲ ಎದ್ದು ನಿಂತು ಬಹುಪರಾಕ್ ಬಹುಪರಾಕ್ ಎನ್ನುತ್ತಿದ್ದರು. ನಿಜ ಕನ್ನಡ ಮಾತೆಯ ವರಪುತ್ರ, ತೌಳವರ ಮುಕುಟಮಣಿ ಭಾರತ ಮಾತೆಯಿಂದ ಪದ್ಮಶ್ರೀ ಸಮ್ಮಾನದಿಂದ ಅಲಂಕೃತರಾದ ರಘುರಾಮ ಶೆಟ್ಟರು ಬಲಿಯರಸನಂತೆ ಸಭಾಂಗಣವನ್ನು ಪ್ರವೇಶಿಸಿದರು. ಮೇ ಎಂಟರಂದು j.w marriotನ ಸಭಾಂಗಣದಲ್ಲಿ 35ನೇ ಬಂಟರ ಕೂಡುಕಟ್ಟಿನ ಸಮಾರಂಭದಲ್ಲಿ ಡಾ.ಬಿ.ಆರ್. ಶೆಟ್ಟರನ್ನು ಸಮ್ಮಾನಿಸಲಾಯಿತು.

ಯು.ಏ.ಈ ಯಲ್ಲಿರುವ ದಕ್ಷಿಣಕನ್ನಡದ ಬಂಟ ಸಮುದಾಯ, ಆ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗ್ರಾಮೀಣ ಸಂಸ್ಕೃತಿಯ ಮೌಲ್ಯಗಳನ್ನು ಮತ್ತು ಸೌಂದರ್ಯಗಳನ್ನು ಚಿಗುರಿಗೆ ಪರಿಚಯಿಸುತ್ತ ತಮ್ಮ ಬೇರನ್ನು ಗಟ್ಟಿ ಮಾಡಿಕೊಳ್ಳುವ ಪರಂಪರೆಗೆ ಮೂವತ್ತೈದು ವರ್ಷಗಳು ಸಂದವು. ಜೀವನದ ವಿಘಟನೆ ನಡೆದಷ್ಟು ಸುಲಭದಲ್ಲಿ ಮನಸ್ಸಿನ ವಿಘಟನೆ ನಡೆಯದು ಭೌತಿಕವಾದದ್ದು ಚೂರಾಗುವಂತೆ ಮನಸ್ಸು ಚೂರಾಗಲಾರದು.

ಬೆಳಗ್ಗಿನ ಹನ್ನೊಂದು ಗಂಟೆಗೆ j.w marriotನಲ್ಲಿ ಪಂಚವಾದ್ಯಗಳೊಂದಿಗೆ ಯು.ಏ.ಈ ಬಂಟರ ಮೂವತ್ತೈದನೇ ಕೂಡು ಕಟ್ಟು ಪ್ರಾರಂಭವಾಯಿತು. ವೇದಿಕೆಯಲ್ಲಿ ಬಿ. ಆರ್. ಶೆಟ್ಟಿ ಶೇಖರ್ ಶೆಟ್ಟಿ, ಬಂಟರ ಸಂಘ ಮುಂಬೈಯ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈಯ ಕನ್ನಡ ತುಳು ರಂಗಭೂಮಿಯ ಕಲಾವಿದ ವಿಜಯ ಕುಮಾರ್ ಶೆಟ್ಟಿ. ಸುಧೀರ್ ಶೆಟ್ಟಿ ಹಾಗೂ ಸಂಘಟಕರೆಲ್ಲರು ಅಬ್ಬಲಿಗೆ ಮಲ್ಲಿಗೆ ಪಿಂಗಾರದಿಂದ ಅಲಂಕೃತವಾದ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕ್ರತುಂಡನಿಗೆ ಮೊನಿಶ್ ರೈ ಮತ್ತು ಬಳಗ ನೃತ್ಯ ನಮನ ಸಲ್ಲಿಸಿತು. ಜ್ಯೋತಿಕಾ ಹರ್ಷ ಶೆಟ್ಟಿ ಸ್ವಾಗತ ಭಾಷಣ ಮಾಡಿ ನೆರೆದ ಸಭಿಕರನ್ನು ಗಣ್ಯರನ್ನೂ ಸ್ವಾಗತಿಸಿದರು.

ಸಾಲಾಗಿ ಪುಟ್ಟ ಪುಟ್ಟ ಮಕ್ಕಳು ಮರ್ಜಾನಿ ಮರ್ಜಾನಿ ಹಾಗೂ ಬಚ್ನಾ ಏ ಹಸೀನೋ ಹಾಡಿಗೆ ವಿವಿಧ ಬಗೆಯಲ್ಲಿ ಹೆಜ್ಜೆ ಹಾಕಿ ರಂಜಿಸಿದರು. ಹದಿಹರೆಯದ ಷೋಡಶಿಯರ ಡಾರ್ಜಲಿಂಗ್ ಸ್ಟಾರ್ಸ್, ರಿದಮಿಕ್ ರಾಕರ್ಸ್, ಹಾಗೂ ಜಿಯಾ ಜಲೆ ನೃತ್ಯಗಳು ಚೆನ್ನಾಗಿ ಮೂಡಿ ಬಂದವು. ಮಧ್ಯಾಹ್ನ ಭೋಜನದ ಮೊದಲು ನವರತ್ನಗಳ ಫಾಶನ್ ಶೋ ನಡೆಯಿತು. ಅಬುಧಾಬಿ ಬಂಟರ ಲಲನಾಮಣಿಗಳು ವಜ್ರ ಮಾಣಿಕ್ಯ ಮುತ್ತು ಮರಕತ ನೀಲದ ಮಣಿಗಳಾಗಿ ನೋಡುಗರ ಕಣ್ಣಿಗೆ ಹಬ್ಬವಾದರು. ಅಗಲಿದ ಬಾಂಧವರಿಗೆ ಸಂತಾಪವನ್ನು ಸೂಚಿಸಿ ಒಂದು ನಿಮಿಷದ ಮೌನವನ್ನಾಚರಿಸಿ ಗೌರವವನ್ನು ಸಲ್ಲಿಸಿದರು.

ಈ ವರ್ಷದ ನಿರ್ಗಮಿಸುವ ಸಂಘಟನಾ ಸಮಿತಿಯ ಸದಸ್ಯರನ್ನು ವೇದಿಕೆಗೆ ಕರೆದು ಪರಿಚಯಿಸಿದರು. ಜ್ಯೋತಿಕಾ ಮತ್ತು ಹರ್ಷ ಶೆಟ್ಟಿ, ಪವನ ಮತ್ತು ಸುದರ್ಶನ್ ಶೆಟ್ಟಿ, ರೇಖಾ ಮತ್ತು ವೀಣಾಧರ್ ಶೆಟ್ಟಿ, ಗೀತಾ ಮತ್ತು ಸುರೇಂದ್ರ ಶೆಟ್ಟಿ, ವಿನುತಾ ಮತ್ತು ನವೀನ್ ಶೆಟ್ಟಿ, ಶೃತಿ ಮತ್ತು ಸುಧೀರ್ ಶೆಟ್ಟಿ , ಸುಪ್ರಿಯಾ ಮತ್ತು ಸದಾನಂದ್ ಶೆಟ್ಟಿ, ರೇಖಾ ಶೆಟ್ಟಿ ದಂಪತಿ, ಹರೀಶ್ ಶೆಟ್ಟಿ ದಂಪತಿ, ಶರತ್ ಶೆಟ್ಟಿ ದಂಪತಿಗಳಿಗೆ ಜವಾಬ್ದಾರಿಯುತವಾದ ನಿರ್ವಹಣೆಗೆ ಬಂಟರೆಲ್ಲರ ಪರವಾಗಿ ಸರ್ವೋತ್ತಮ ಶೆಟ್ಟರು ಅಭಿನಂದನೆಗಳನ್ನು ಸಲ್ಲಿಸಿದರು.

ಬೆಳಗಿನ ಸಭೆಯ ಪ್ರಮುಖ ಆಕರ್ಷಣೆಯೆಂದರೆ ಪದ್ಮಶ್ರೀ ಪ್ರಶಸ್ತಿ ಸಮ್ಮಾನಿತ ಡಾ.ಬಿ. ಆರ್. ಶೆಟ್ಟಿಯವರಿಗೆ ಬಂಟರೆಲ್ಲರ ಹೃದಯ ತುಂಬಿದ ಅಭಿನಂದನಾ ಸಮಾರಂಭ. ಯು.ಏ.ಈಯ ಬಂಟರ ಗರಿ ಹಿಡಿದ ಗುರಿಕಾರನಿಗೆ ಪ್ರಜೆಗಳ ಪ್ರೀತಿಯ ಕಪ್ಪದ ಕಾಣಿಕೆ, ಗೌರವಾರ್ಪಣೆ. ಹಿಂದಿನ ದಿನವೇ ಅಬುಧಾಬಿಯ 115 ಸಂಘ ಸಂಸ್ಥೆಗಳು ಹಾಗೂ ಭಾರತೀಯ ದೂತಾವಸದವರು ಜಂಟಿಯಾಗಿ ಅಭಿನಂದಿಸಿದ್ದರು. ಆದರೆ ಬಂಟರು ಅವರನ್ನು ರಾಜನಂತೆ ಅಲಂಕರಿಸಿ, ಛತ್ರ ಛಾಮರ, ಚೆಂಡೆ, ಕೊಂಬು ಕಹಳೆಗಳೊಂದಿಗೆ ಕಲಶ ಮತ್ತು ದೀಪ ಹಿಡಿದ ಮಾನಿನಿಯರ ಮೆರವಣಿಗೆಯಲ್ಲಿ ವೇದಿಕೆಗೆ ಬರಮಾಡಿಕೊಂಡರು. ಬಿ. ಆರ್ ಶೆಟ್ಟಿಯವರ ಹತ್ತು ನಿಮಿಷಗಳ ಸಾಕ್ಷ್ಯ ಚಿತ್ರ ಪ್ರದರ್ಶನವಾಯಿತು. ಶಾರ್ಜ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಗಣೆಶ್ ರೈಯವರು ನೆನಪಿನ ಬುತ್ತಿಯಾಗಿ ಫೊಟೋ ಆಲ್ಬಮ್ ಅರ್ಪಿಸಿದರು.

ತದನಂತರ ಜರ್ನಿ ತ್ರೂ ಬಾಲಿವುಡ್ ಎಂಬ ಆಕರ್ಷಕ ಸಂಗೀತ ನೃತ್ಯ ಹಾಗೂ ಮಾಮಿ ಮರ್ಮಾಯೆ ಎಂಬ ನೃತ್ಯ ರೂಪಕ ದುಬೈ ತಂಡದವರು ಪ್ರಸ್ತುತ ಪಡಿಸಿದರು. ಪೂನಾದಿಂದ ಆಗಮಿಸಿದ ಪೂನಾ ಬಂಟರ ಸಂಘದ ಮಹಿಳಾ ವಿಭಾಗದ ಸದಸ್ಯರು ನೃತ್ಯ ಸಾದರಪಡಿಸಿದರು. ಎಲ್ಲೂ ಒಂದರೆ ಕ್ಷಣವೂ ಬೇಸರಗೊಳ್ಳದಂತೆ ಆಕರ್ಷಕವಾಗಿ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದವರು ತುಳುವಿನಲ್ಲಿ ಸರ್ವೋತ್ತಮ ಶೆಟ್ಟಿ, ಮಣಿಮಾಲಿನಿ ರೈ, ಕನ್ನಡದಲ್ಲಿ ಸೊಲ್ಲು ಸೊಲ್ಲಿಗೆ ಮಂಕು ತಿಮ್ಮನ ಕಗ್ಗದ ಹಬ್ಬವನು ಬಡಿಸಿದ ಮಂಗಳಾ ಪ್ರಕಾಶ್ ಶೆಟ್ಟಿಯವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X