ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕ್ರಮೆಂಟೋದಲ್ಲಿ ವೈಭವದ ಕರಗ ಮತ್ತು ಯುಗಾದಿ

By Staff
|
Google Oneindia Kannada News

Karaga in Sacramento
ಕ್ಯಾಲಿಫೋರ್ನಿಯಾದ ರಾಜಧಾನಿಯಾದ ಸಾಕ್ರಮೆಂಟೋ ಸುತ್ತಮುತ್ತ ಕನ್ನಡದ ಕಹಳೆ ಮೊಳಗಿಸುತ್ತಿರುವ ಸಾಕ್ರಮೆಂಟೋ ಕನ್ನಡ ಸಂಘ, ಯುಗಾದಿ ಹಬ್ಬವನ್ನು 'ರಂಗ ವಸಂತ' ಎನ್ನುವ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಇದೇ ಏಪ್ರಿಲ್ 18ರಂದು ವಿಜ್ರಂಭಣೆಯಿಂದ ಆಚರಿಸಿತು. ಸ್ಥಳೀಯ ಕನ್ನಡಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಹಾಗು ರಂಗ ಪ್ರಬೇಧಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಆಗಮಿಸಿದ್ದ 250ಕ್ಕೂ ಹೆಚ್ಚಿನ ಕನ್ನಡಿಗರ ಮನಸೂರೆಗೊಂಡಿತು.

* ವೇಣು ಮಲ್ಲೇಸರ, ರೋಸ್ ವಿಲ್, ಕ್ಯಾಲಿಫೋರ್ನಿಯ

ಡೇವಿಸ್ ನ ವೆಟರನ್ಸ್ ಮೆಮೋರಿಯಲ್ ಸೆಂಟರ್ ನಲ್ಲಿ ಮಧ್ಯಾಹ್ನ 2.30ಕ್ಕೆ ಸರಿಯಾಗಿ 'ನಳಪಾಕ' ಮತ್ತು 'ರಂಗೋಲಿ' ಸ್ಪರ್ಧೆಯೊಡನೆ, ಕಾರ್ಯಕ್ರಮ ಪ್ರಾರಂಭವಾಯಿತು. ಆಗಮಿಸಿದ್ದ ಪ್ರೇಕ್ಷಕರು ರುಚಿರುಚಿಯಾದ ಕ್ಯಾರೆಟ್ ಹಲ್ವಾ ಮತ್ತು ಶ್ಯಾವಿಗೆ ಉಪ್ಪಿಟ್ಟು ಸವಿದು, ಮತ ಚಲಾಯಿಸುವುದರ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು. ಇದೇ ಮೊದಲ ಬಾರಿಗೆ ಆಯೋಜಿಸಿದ್ದ 'ರಂಗೋಲಿ' ಸ್ಪರ್ಧೆಯಲ್ಲಿ ಸಂಘದ ಸದಸ್ಯರು ಭಾಗವಹಿಸಿದ್ದರು. ಎಲ್ಲರಿಗೂ ಬೇವು ಬೆಲ್ಲ ಹಂಚಿ ಯುಗಾದಿಯ ಶುಭ ಕೋರಲಾಯಿತು.

ಸ್ವಾಗತದ ನಂತರ, ಗಣೇಶ ವಂದನೆ, ಭರತನಾಟ್ಯದ ಮೂಲಕ ಕಾರ್ಯಕ್ರಮಕ್ಕೆ ರಂಗಿನ ಆರಂಭ ನೀಡಲಾಯಿತು. ಸ್ಥಳೀಯ ಪುರೋಹಿತರೊಬ್ಬರು ವಿರೋಧಿ ಸಂವತ್ಸರದ ಫಲವನ್ನು ತಿಳಿಸಿ ಶಾಸ್ತ್ರೋಕ್ತವಾಗಿ ಪಂಚಾಂಗ ಪಠಣ ಮಾಡಿದರು. ಹನುಮಾನ್, ಚಾರ್ಲಿ ಚಾಪ್ಲಿನ್, ಸೂಪರ್ ಮ್ಯಾನ್, ಬೆಸ್ತ ಹುಡುಗಿ, ರೈತ, ರಾಜ, ಕೊರವಂಜಿ, ಒನಕೆ ಒಬವ್ವ, ದುರ್ಗಾಮಾತ ಮುಂತಾದ ವೇಷ ಧರಿಸಿ ಹುರುಪಿನಿಂದ ಕುಣಿದಾಡುತಿದ್ದ ಮಕ್ಕಳ 'ಛದ್ಮವೇಷ' ಸ್ಪರ್ಧೆ ಎಲ್ಲರ ಮನಸೂರೆಗೊಂಡಿತು. ಅಂತ್ಯಾಕ್ಷರಿ, ಒಗಟುಗಳು, ಮೂಕಾಭಿನಯ, 'ರಾಮ ಶ್ಯಾಮ ಭಾಮ' ಒಳಗೊಂಡಿದ್ದ ವಿನೂತನ 'ರಸಮಂಜರಿ' ಕಾರ್ಯಕ್ರಮ ಜನರನ್ನು ರಂಜಿಸಿತು.

ಸಂಘದ 2009ನೇ ಚಾರಿಟಿಯಾದ ವಿಜಾಪುರದ 'ಶ್ರೀ ವಿವೇಕಾನಂದ ಕುಷ್ಠ ಸೇವಾ ಸಮಿತಿ' ಯ ಮಾಹಿತಿ ನೀಡಲಾಯಿತು. ಕರ್ನಾಟಕದ ವೈವಿಧ್ಯಮಯ ಜಾನಪದ ನೃತ್ಯಗಳ 'ನಮ್ಮೂರ ಹಬ್ಬ' ನೆರೆದಿದ್ದರವರನ್ನು ಮಂತ್ರಮುಗ್ದರನ್ನಾಗಿಸಿತು. ಕುಟೀರ, ದೇವಸ್ಥಾನ ಮುಂತಾದ ರಂಗಸಜ್ಜಿಕೆಗಳೊಡನೆ, ಮಹಿಳೆಯರು 'ಯುಗಾದಿ ಯುಗಾದಿ' ಹಾಡಿನಿಂದ ವಸಂತದ ಸಡಗರ ಪ್ರಸ್ತುತಪಡಿಸಿದರೆ, 'ಧ್ವಜ ಕುಣಿತ', 'ಎಲ್ಲಮ್ಮ ಕುಣಿತ', 'ಹರೋ ಹರ' ಮೊದಲಾದ ನೃತ್ಯಗಳು ಎಲ್ಲರ ಮೆಚ್ಚುಗಗೆ ಪಾತ್ರವಾದವು. ಸಂಘದ ಪುಟಾಣಿಗಳ 'ಕೀಲು ಕುದುರೆ' ನೃತ್ಯ ಅದ್ಭುತವಾಗಿತ್ತು. ಅಗ್ನಿ ಕುಂಡ ಹಿಡಿದ 'ವೀರ ಕುಮಾರ'ರು ಬೆಂಗಳೂರು ಕರಗವನ್ನು ಸಾಕ್ರಮೆಂಟೋಗೆ ಕರೆತಂದರು. ಅತ್ಯದ್ಭುತವಾದ ವೇಷಭೂಷಣ, ಆವೇಶಭರಿತವಾದ ಕುಣಿತ, 'ದಿಖ್ ದೀ - ದಿಖ್ ದೀ' ಘೋಷ, ನಾಡ ಹಬ್ಬವಾದ ಮೈಸೂರು ದಸರದ ನೆನಪನ್ನು ತಂದದ್ದಲ್ಲದೆ, ಎಲ್ಲರ ಕರತಾಡನಕ್ಕೆ ಪಾತ್ರವಾಯಿತು.

ವಿರಾಮದ ಸಮಯಲ್ಲಿ ಗರಂ ಗರಂ ಪಕೋಡ, ಭೇಲ್ ಪೂರಿ, ಚಹದ ವ್ಯವಸ್ತೆಯಾಗಿತ್ತು. ಸಂಘದ ಕಾರ್ಯಕರ್ತರು ತಯಾರಿಸಿದ್ದ ರುಚಿಕರವಾದ 'ಒಬ್ಬಟ್ಟು (ಹೋಳಿಗೆ)' ಯುಗಾದಿ ಹಬ್ಬದ ಆಚರಣೆಯನ್ನು ಅರ್ಥಪೂರ್ಣವಾಗಿಸಿತು. ಲಾಸ್ ಏಂಜೆಲ್ಸ್ ನ ರಂಗ ತಂಡದವರು 'ಸೀಮಂತ' ಹಾಸ್ಯ ನಾಟಕದ ಮೂಲಕ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲ ಸಹೃದಯಿ ಕನ್ನಡಿಗರಿಗೆ ಕೆ.ಎಸ್.ಎಸ್. ಧನ್ಯವಾದಗಳನ್ನು ಅರ್ಪಿಸುತ್ತಾ, ಮುಂದೂ ಕೂಡ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ವಿನಂತಿಸುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಸಾಕ್ರಮೆಂಟೋ ಕನ್ನಡ ಸಂಘ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X