ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಸ ಸಂಭ್ರಮದ 'ಮಲ್ಲಿಗೆ' ಯುಗಾದಿ

By * ಪೂರ್ಣಿಮ ಸುಬ್ರಹ್ಮಣ್ಯ, ಡ್ಯಾಲ್ಲಸ್
|
Google Oneindia Kannada News

Mallige celebrates Ugadi
ಏಪ್ರಿಲ್ 11ರ ಸಂಜೆ ಡ್ಯಾಲಸ್ ಕನ್ನಡಿಗರಿಗೆಲ್ಲಾ ಸಂತಸ, ಸಂಭ್ರಮ ತಂದಿದ್ದು ಇಲ್ಲಿನ ಮಲ್ಲಿಗೆ ಕನ್ನಡ ಸಂಘದವರು ನಡೆಸಿದ ಯುಗಾದಿ ಹಬ್ಬ. ಕಳೆದ ದೀಪಾವಳಿ ಕಾರ್ಯಕ್ರಮದ ಯಶಸ್ಸಿನಿಂದ ಪ್ರೇರಿತರಾಗಿ ಈ ಬಾರಿ 'ದ ಕಾಲೋನಿ ಹೈಸ್ಕೂಲ್‌ನ ದೊಡ್ಡ ಸಭಾಂಗಣದಲ್ಲಿ ಹೆಚ್ಚಿನ ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸರಸ, ವಿನೋದಗಳಿಂದ ಇಡೀ ಕಾರ್ಯಕ್ರಮವನ್ನು ನಿರೂಪಿಸಿ ಅಂದಗಾಣಿಸಿದವರು ಜಯಶ್ರೀ ಮತ್ತು ಪ್ರಕಾಶ್ ಮೂರ್ತಿ. ಲಕ್ಷ್ಮಣ್ ಮಂಜುನಾಥ್ ವಕ್ರತುಂಡ ಮಾಹಾಕಾಯನಿಗೆ ವಂದಿಸಿದ ಮೇಲೆ, ಆದಿತ್ಯ ಮತ್ತು ಅರ್ಚನಾ ಮೂರ್ತಿಯವರು ಗಂ ಗಣಪತೇ ಎಂದು ಹಾಡಿದರು. ನಂತರ ಇಲ್ಲಿನ ಅರಳು ಮಲ್ಲಿಗೆ ಕನ್ನಡ ಶಾಲೆಯ ಮಕ್ಕಳಿಂದ, ರೂಪ ಶ್ರೀನಿವಾಸ್ ನಿರ್ದೇಶನದಲ್ಲಿ ಹಾಡು ನೃತ್ಯಗಳ ಸಂಭ್ರಮ.

ಶ್ರೀನಾಥ್ ಬೆಲ್ಡೋನಾ ಅವರ ಸ್ವಾಗತ ಭಾಷಣಕ್ಕೆ ಪೂರಕವಾಗಿ, ರಮೇಶ್ ಮೇಲ್ಕೋಟೆ ಬರೆದ 'ಧರಣಿ ಮಂಡಲ ಮಧ್ಯದೊಳಗೆ ಮಾದರಿ ಸ್ವಾಗತ ಗೀತೆ, ಮಾಹಿತಿ ಮತ್ತು ಮನರಂಜನೆಗಳ ಸಂಗಮವಾಗಿತ್ತು. ಆನಂದ ಪ್ರಾಡಕ್ಟ್ಸ್‌ಗಳನ್ನು ಜನರಿಗೆ ಪರಿಚಯಿಸುವ ನೃತ್ಯ ಜಯಂತಿ ಶಾಸ್ತ್ರಿ ಮತ್ತು ಕಲ್ಪನಾ ಮೂರ್ತಿಯವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿಬಂತು. ಸುಮನಾ ಹೆಗ್ಡೆ ಅವರ ತಯಾರಿಯಲ್ಲಿ ಅನೇಕ ಮಕ್ಕಳು ನಡೆಸಿಕೊಟ್ಟ ಆರ್ಕೆಸ್ಟ್ರಾ ಮನಮುದಗೊಳಿಸಿತು. ಪಿಟೀಲು ಮತ್ತು ಮೃದಂಗದಲ್ಲಿಯೂ ಮಕ್ಕಳೇ ಜೊತೆಯಾಗಿದ್ದು ವಿಶೇಷ.

ಜೋಗಿ ಜೋಗಿ, ರಾಜಾ ಮುಂತಾದ ಹಾಡುಗಳಿಗೆ ಥಳುಕು ಬಳುಕಿನ ಉಡಿಗೆಯಲ್ಲಿನ ಮೂರು ಪುಟ್ಟ ಪೋರಿಯರು ಕುಣಿದದ್ದು ಪ್ರೇಕ್ಷಕರ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಿದರು. ಮಕ್ಕಳನ್ನು ತಯಾರುಗೊಳಿಸಿದವರು ಶಿಲ್ಪಾ ನಾಗರಾಜ್. ನಂತರ ಅಖಿಲ ರಾವ್ ಅವರ ಶಿಷ್ಯೆಯರಿಂದ ಮೋಹಕ ಕಥಕ್ ನೃತ್ಯ. ಸಂಧ್ಯಾ ಹೊನ್ನವಳ್ಳಿ ಅವರ ಉತ್ತಮ ತರಬೇತಿಯಲ್ಲಿ ಮೂಡಿ ಬಂದ ಚಿಕ್ಕ ಚೊಕ್ಕ ನಾಟಕ "ದೇವರು ಏನು ಮಾಡಿದ ಗೊತ್ತಾ?" ಎಲ್ಲಾ ಪುಟಾಣಿಗಳೂ ಅಚ್ಚುಕಟ್ಟಾಗಿ ಸ್ವಚ್ಛ ಕನ್ನಡದಲ್ಲಿ ಮಾತಾಡಿ ಎಲ್ಲರ ಮನ ಗೆದ್ದರು.

ಸುಲತಾ ತಲಗೇರಿಯವರು ಇಲ್ಲಿನ ಉತ್ಸಾಹೀ ವನಿತೆಯರನ್ನು ತರಬೇತುಗೊಳಿಸಿ ಬಾರಯ್ಯ ಬಾರಯ್ಯ ಎಂಬ ನೃತ್ಯ ಪ್ರಸ್ತುತಪಡಿಸಿದರು. ಶ್ರೀವತ್ಸ ರಾಮನಾಥನ್ ನಿರ್ದೇಶನದ ಲಕ್ಷ್ಮಣನ ರಾಮಾಯಣ ನಾಟಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಒಬ್ಬೊಬ್ಬ ಪಾತ್ರಧಾರಿಯೂ ಒಂದೊಂದು ಶೈಲಿಯಲ್ಲಿ ಮಾತನಾಡಿದ್ದು ಬಹಳ ವಿನೋದವಾಗಿತ್ತು.

ಪುಟಾಣಿ ಖುಷಿ ಮತ್ತು ನವ್ಯ ಜೊತೆ ಎಲ್ಲರೂ ಜನಗಣಮನ ಎಂದು ಭಾರತಕ್ಕೆ ಜಯಕಾರ ಹಾಕಿದರು. ನಂತರ ವೇದಿಕೆಯೇರಿದ ಮತ್ತಷ್ಟು ಮಕ್ಕಳು ನಕ್ಷತ್ರ ಖಚಿತ ಅಮೆರಿಕಾ ಧ್ವಜಕ್ಕೆ ರಾಷ್ಟ್ರಗೀತೆಯೊಂದಿಗೆ ವಂದಿಸಿದರು. ನಂತರ ಸ್ವಾದಿಷ್ಟ ಭೂರಿ ಭೋಜನ ಎಲ್ಲರನ್ನೂ ತೃಪ್ತಿಪಡಿಸಿತು. ಈ ಕಾರ್ಯಕ್ರಮದ ಚಿತ್ರಪಟಗಳನ್ನು ಮೂರ್ತಿಯವರ ಕ್ಯಾಮರಾ ಕಣ್ಣಿನಿಂದ ಇಲ್ಲಿ ನೋಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X