ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ರಂಗದಲ್ಲಿ ಪುಸ್ತಕಗಳ ಲೋಕಾರ್ಪಣೆ

By Staff
|
Google Oneindia Kannada News

ಅಮೆರಿಕದಲ್ಲಿ ನೆಲೆಸಿರುವ ಸಾಹಿತ್ಯೋತ್ಸಾಹಿಗಳೇ, ದಯವಿಟ್ಟು ಗಮನಿಸಿ. ಈಗಾಗಲೇ ತಮಗೆಲ್ಲಾ ತಿಳಿದಿರುವಂತೆ, ಮೇ 30 ಮತ್ತು 31ನೇ ತಾರೀಖು, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ಮೇರೀಲ್ಯಾಂಡಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ "ಕನ್ನಡ ಕಾದಂಬರಿ ಲೋಕದಲ್ಲಿ -- ಹೀಗೆ ಹಲವು" ಎಂಬ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಇತ್ತೀಚಿನ ಸುಮಾರು ಮೂರು ದಶಕಗಳಲ್ಲಿ ಪ್ರಕಟವಾದ 26 ವೈವಿಧ್ಯಮಯ, ಪ್ರಾತಿನಿಧಿಕ ಕಾದಂಬರಿಗಳನ್ನು ಇಲ್ಲಿ ನೆಲೆಸಿರುವ ಬರಹಗಾರರು ಅಧ್ಯಯನ ಮಾಡಿ ತಮ್ಮ ವಿಮರ್ಶಾತ್ಮಕ ಅನಿಸಿಕೆಗಳನ್ನು ಈ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ. ಕನ್ನಡದ ಪ್ರಸಿದ್ಧ ವಿಮರ್ಶಕರಾದ ಡಾ|| ಜಿ.ಎಸ್. ಆಮೂರರು ಈ ಗ್ರಂಥಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ಇದೇ ಅಲ್ಲದೇ ಅಮೆರಿಕದ ಬರಹಗಾರರು ಇತ್ತೀಚೆಗೆ ಬರೆದಿರುವ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಬಿಡುಗಡೆಗೂ ಈ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಇನ್ನೆಲ್ಲೂ ಪ್ರಕಟವಾಗಿರದ ಪುಸ್ತಕಗಳನ್ನು ನೀವು ಇಲ್ಲಿ ಲೋಕಾರ್ಪಣೆ ಮಾಡಬಹುದು. ಈ ಬಗ್ಗೆ ಆಸಕ್ತಿಯುಳ್ಳವರು ದಯವಿಟ್ಟು ನಮ್ಮನ್ನು ಕೂಡಲೇ ಸಂಪರ್ಕಿಸಬೇಕೆಂದು ಕೋರುತ್ತೇವೆ. ಅದೇ ಅಲ್ಲದೇ 'ಪುಸ್ತಕ ಪರಿಚಯ' ಎಂಬ ಗೋಷ್ಠಿಯಲ್ಲಿ ತಾವು ಇತ್ತೀಚೆಗೆ ಬರೆದಿರುವ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಸಮ್ಮೇಳನದಲ್ಲಿ ಬಂದುಸೇರುವ ಸಾಹಿತ್ಯಪ್ರಿಯರೊಂದಿಗೆ ಹಂಚಿಕೊಳ್ಳಲೂ ಅವಕಾಶವಿದೆ, ಹಾಗೂ ತಮ್ಮ ಪುಸ್ತಕಗಳ ಮಾರಾಟಕ್ಕೂ ಅವಕಾಶವಿದೆ. ಕವಿಗೋಷ್ಠಿ ಮೊದಲಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ವಿವರಗಳಿಗೆ ಸಂಪರ್ಕಿಸಿ: [email protected]. ಸಮ್ಮೇಳನದ ಇತರ ವಿವರಗಳನ್ನು ಆಗಾಗ್ಗೆ ಈ ಜಾಲತಾಣದಲ್ಲೂ ಮತ್ತು ರಂಗದ ಜಾಲತಾಣದಲ್ಲೂ ಪ್ರಕಟಿಸುತ್ತೇವೆ. ಕನ್ನಡ ಸಾಹಿತ್ಯ ರಂಗದ ಜಾಲತಾಣಕ್ಕೆ ದಯವಿಟ್ಟು ಭೇಟಿಕೊಡಿ: www.kannadasahityaranga.org.

ರಿಯಾಯಿತಿ ದರದಲ್ಲಿ ಸಮ್ಮೇಳನ ನಡೆಯುವ ತಾಣಕ್ಕೆ ಹತ್ತಿರವಾಗಿ ತಂಗಲು ಅನುಕೂಲವಾಗುವಂತೆ ಹೋಟೆಲೊಂದರ ಜೊತೆ ಏರ್ಪಾಡು ಮಾಡುತ್ತಿದ್ದೇವೆ. ಈ ಬಗ್ಗೆ ವಿವರಗಳಿಗಾಗಿ ಎದಿರುನೋಡಿ. ರಸದೌತಣ ಮತ್ತು ರಸಭರಿತವಾದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದ ಇಂಥಾ ಅಪರೂಪದ ವಾರಾಂತ್ಯದಲ್ಲಿ ಸಮಾನಾಸಕ್ತಿಯುಳ್ಳ ಕನ್ನಡ-ಬಂಧು-ಮಿತ್ರರೊಡನೆ ಕಲೆತು ಸಂತೋಷಕೂಟದಲ್ಲಿ ಭಾಗಿಯಾಗುವ ಸದವಕಾಶವನ್ನು ತಪ್ಪಿಸಿಕೊಳ್ಳಬೇಡಿ. ದಯವಿಟ್ಟು ಸಾಹಿತ್ಯಾಸಕ್ತರೆಲ್ಲರೂ ಈ ಸಮ್ಮೇಳನಕ್ಕೆ ಬರಬೇಕೆಂದು ಕೋರುತ್ತೇವೆ. ನಮ್ಮ ಈ ಯತ್ನಕ್ಕಾಗಿ ಯಾವುದೇ ರೀತಿಯ (ತನು-ಮನ-ಧನ) ವಿಶೇಷ ಸಹಾಯಮಾಡಲು ಇಚ್ಚೆಯುಳ್ಳವರನ್ನು ಕೃತಜ್ಞತಾಪೂರ್ವಕವಾಗಿ ಸ್ವಾಗತಿಸಿ ಸಮ್ಮಾನಿಸುತ್ತೇವೆ. ಸಿರಿಗನ್ನಡಂ ಗೆಲ್ಗೆ!

ಎಚ್.ವೈ.ರಾಜಗೋಪಾಲ್
ಮೈ.ಶ್ರೀ. ನಟರಾಜ
ಇನ್ನಷ್ಟು ವಿವರ
ಮೇ 30, 31ರಂದು ನಾಲ್ಕನೇ ವಸಂತ ಸಾಹಿತ್ಯೋತ್ಸವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X