• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡಿಂಗ್‌ನಲ್ಲಿ ಮಿತವಾದ ಹಿತವಾದ ಯುಗಾದಿ

By Staff
|

ಜಗತ್ತಿನಲ್ಲಿ ಎಲ್ಲೆಡೆಯಿರುವಂತೆ ಇಂಗ್ಲೆಂಡಿನಲ್ಲಿಯೂ ಆರ್ಥಿಕ ಬಿಕ್ಕಟ್ಟಿನ ಬಿಸಿ ವಿರೋಧದ ಅಲೆ ಎಬ್ಬಿಸಿದೆ. ಕೆಲಸ ಕಳೆದುಕೊಳ್ಳುವ ಭೀತಿಯ ತೂಗಕತ್ತಿ ತಲೆಯ ಮೇಲೆ ನೇತಾಡುತ್ತಿದೆ. ಅಂಥದರಲ್ಲಿಯೂ ರೆಡಿಂಗ್ ನಲ್ಲಿರುವ ಕನ್ನಡಿಗರು ಯುಕೆ ತಂಡದ ಸದಸ್ಯರು ಹಿತವಾಗಿ ಮತ್ತು ಮಿತವಾಗಿ ಸಂಭ್ರಮದಿಂದ ಮಾರ್ಚ್ 28ರಂದು ಯುಗಾದಿ ಆಚರಿಸಿದರು.

* ಪವನ್ ಮೈಸೂರ್, ಕನ್ನಡಿಗರು ಯು.ಕೆ

2008ರಿಂದ ಹಠಾತ್ತನೆ ದಿನನಿತ್ಯದ ನೌಕರಿ, ಚಾಕರಿಗಳಿಗೆ ಕುತ್ತು. ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಮಹಾನ್ ಘಟಾನುಘಟಿಗಳಾಗಿ ಮೆರೆದ ದೊಡ್ಡ ಪ್ರಮಾಣದ ಕಂಪನಿಗಳು ಮಡಚಿಕೊಂಡು ಹೋದವು. ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಹಬ್ಬಿರುವ ಈ ಅರ್ಥ(ಅ)ವ್ಯವಸ್ಥೆಯ ರೋಗ ಎಲ್ಲರನ್ನೂ ಆಪೋಷನ ತೆಗೆದು ಕೊಳ್ಳುವುದೇನೋ ಎಂಬ ಆತಂಕಮಯ ವಾತಾವರಣ. ಅದರಲ್ಲೂ ಇಂಗ್ಲೆಂಡ್ ನಂತಹ ಸಣ್ಣ ರಾಷ್ಟ್ರ ಸದ್ಯದ ಪರಿಸ್ಥಿತಿಯಲ್ಲಿ ನಲುಗಿ ಹೋಗಿದೆ. ಇಲ್ಲಿ ನೆಲೆಸಿರುವ ಪ್ರತಿಯೊಂದು ಜೀವಿಯೂ ಮತ್ತು ಕನ್ನಡಿಗರು ಮತ್ತು ಕನ್ನಡೇತರರು ಕೊಂಚ ಕಂಗಾಲಾಗಿರುವುದು ಸುಳ್ಳೇನಲ್ಲ.

ಇಂತಹ ವಾತವರಣದಲ್ಲಿ ಕನ್ನಡಿಗರು ಯು.ಕೆ ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸುವುದು ಹೇಗೆ? ಹಿಂದಿನ ದಿನಗಳಂತಲ್ಲ ಈಗ. ಬೆಲೆ ಏರಿಕೆ, ನೌಕರಿಗಳ ಆತಂಕ, ಭಾರತಕ್ಕೆ ಹಿಂತಿರುಗುವ ಮಾತುಗಳು ಮತ್ತು ಕಾರ್ಯಕಾರಿ ಸಮಿತಿಯವರಿಗೆ ಎಲ್ಲರಂತೆಯೇ ವೇಳೆಯ ಅಭಾವ. (ಇದರಿಂದಾಗಿಯೇ ಅಲ್ಲವೇ, ಈ ಬರಹವನ್ನು ಇಷ್ಟು ದಿನಗಳ ನಂತರ ನಿಮ್ಮ ಮುಂದಿಡಲು ಸಾಧ್ಯವಾದದ್ದು?) ಕಡೆಗೂ ದೃಢಚಿತ್ತದಿಂದ ಉಗಾದಿ ಹಬ್ಬವನ್ನು ಮಾರ್ಚ್ 28ರಂದು ಆಚರಿಸಲು ನಿರ್ಧರಿಸಿ ಮತ್ತೆ ಟೊಂಕ ಕಟ್ಟಿ ನಿಂತೆವು. 2008ರ ರಾಜ್ಯೋತ್ಸವದ ಯಶಸ್ಸು ಒಂದು ರೀತಿಯಲ್ಲಿ ಕನ್ನಡಿಗರು ಯು.ಕೆಯ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಹಬ್ಬದ ಆಚರಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿತ್ತು.

ಸಂಕಟ ಬಂದಾಗ ವೆಂಕಟರಮಣ ಎಂಬ ನಮ್ಮ ಭಾರತೀಯ ಸಂಪ್ರದಾಯವನ್ನನುಸರಿಸಿ ಈ ಯುಗಾದಿಗೆ ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಉದ್ದೇಶದೊಂದಿಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ಕೈಗೊಳ್ಳುವ ಕಾರ್ಯಕ್ಕೆ ಇಲ್ಲಿನ ಬಾಲಾಜಿ ದೇವಸ್ಥಾನದ ಅಪರೂಪ ಕನ್ನಡ ಅರ್ಚಕರಾದ ಪ್ರಸಾದ್ ಅವರ ಸಕಾರಾತ್ಮಕ ಪ್ರತಿಕ್ರಿಯೆಯಿಂದ, ಈ ಸಾಮೂಹಿಕ ಪೂಜೆ ಸಾಕಾರವಾಯಿತು. ಇದಲ್ಲದೇ ಅನೇಕರು ತಮ್ಮ ಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರದರ್ಶಿಸಲು ಮುಂದು ಬಂದರು. ರೆಡಿಂಗ್ ಹಿಂದೂ ದೇವಾಲಯದ ಸಭಾಂಗಣವನ್ನು ಈ ಆಚರಣೆಗೆ ಆಯ್ಕೆ ಮಾಡಿದೆವು. ಇನ್ನೇನು, ಹಬ್ಬದ ಆಚರಣೆಗೆ ಬೇಕಾದುದೆಲ್ಲಾ ಪೂರಕವಾಗಿ ನೆರವೇರಿದಂತಾಯಿತು.

ಸುಮಾರು 260 ಕನ್ನಡಿಗರ ಸಮಾಗಮ, ಮಂತ್ರ ಘೋಷಗಳು, ಜನರ ಹರಟೆ, ಪರಸ್ಪರ ಯುಗಾದಿ ಶುಭಾಶಯಗಳ ವಿನಿಮಯ, ಸಣ್ಣ ಮಕ್ಕಳ ಓಡಾಟ ರೆಡಿಂಗ್ ನಲ್ಲಿ ಮನೆಯ ಹಬ್ಬದ ವಾತವರಣ ಸೃಷ್ಟಿಸಿತ್ತು. ಆಗಮಿಸಿದ್ದ ಪ್ರತಿಯೊಬ್ಬರಿಗೂ ಬೇವು, ಬೆಲ್ಲ, ಮತ್ತು ಫಲ ಪ್ರಸಾದ ವಿನಿಯೋಗವಾಯಿತು. ಪ್ರಸಾದ ವಿನಿಯೋಗ ಮುಗಿದ ಮೇಲೆ ಊಟ ತಯಾರಾಗಿತ್ತು. ನಾವೆಲ್ಲರೂ ಅಚ್ಚು ಕಟ್ಟಾಗಿ ಸಾಲಿನಲ್ಲಿ ನಿಂತು ಹಬ್ಬದ ಊಟ ಮುಗಿಸಿದೆವು. ಕೊಂಚ ಹೊತ್ತಿನಲ್ಲಿ ನೋಡು ನೋಡುತ್ತಿದ್ದಂತೆ ನೆರೆದಿದ್ದ ಎಲ್ಲರೂ ಸೇರಿ ಸಭಾಂಗಣವನ್ನೆಲ್ಲ ಸ್ವಚ್ಚಗೊಳಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಮಾಡಿದರು. 3.15ಕ್ಕೆ ವೇದಿಕೆ ಸಜ್ಜಾಗಿ ಪ್ರಾರ್ಥನೆ ಮತ್ತು ಚುಟುಕು ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಯಿತು.

"ಜಲಲ ಜಲಲ ಜಲಧಾರೆ" ಮತ್ತು "ಬಂಗಾರ ತೀರ ಕಡಲಾಚೆ" ಸಮೂಹ ಗೀತೆಗಳು (ಅರ್ಚನ, ಪಲ್ಲವಿ, ವೀಣ, ಸೌಮ್ಯ, ಸನಮ್, ಕಿರಣ್, ನಾಗೇಶ್, ದಿವಾಕರ್, ಸಂದೀಪ್), ಚಿಣ್ಣರ ವೇಷಭೂಷಣ(ಆಂಚಲ್ ಮತ್ತು ಚೇತನಾ ನಿರ್ದೇಶನ), ವಯೋಲಿನ್ ತಬಲ ಜುಗಲಬಂದಿ (ಸೂರಜ್ ಮತ್ತು ಅನಿಲ್) , ಹಾಸ್ಯಭರಿತ "ಉಪ್ಪಿಟ್ಟು" ಕಿರು ನಾಟಕ (ಆನ್ನಪೂರ್ಣ, ಆನಂದ), "ರೆಡಿಂಗ್ ರಾಣಿ" ಸಾಮೂಹಿಕ ಆಟ, ಮಕ್ಕಳಿಂದ ಬಾಲಿವುಡ್ ನೃತ್ಯಗಳು (ಜ್ಯೋತಿ, ಅರ್ಪಿತ, ಭೂಮಿಕ,ಅನುಷ್ಕ, ಸಾಕ್ಷಿ ಮತ್ತು ಸ್ನೇಹ) ಮುಗಿದಾಗ 5.45. ಕಡೆಯದಾಗಿ "ಮಾಯದಂತ ಮಳೆ ಬಂತಣ್ಣ" ಜನಪದ ಗೀತೆಗೆ ಸಾಮೂಹಿಕ ನೃತ್ಯ ಮುಗಿಯುತ್ತಿದ್ದಂತೆ ಮಳೆರಾಯ "ಅಯ್ಯೊ ಮರೆತೆನಲ್ಲ" ಎಂದು ಮಳೆತರಿಸಿದ. ಎಲ್ಲರಿಗೂ ಕನ್ನಡಿಗರು ಯು.ಕೆ ಯ ಪರವಾಗಿ ಧನ್ಯವಾದಗಳನ್ನರ್ಪಿಸುವ ಮೂಲಕ ಯುಗಾದಿ ಹಬ್ಬದ ಆಚರಣೆ ತೆರೆ ಕಂಡಿತು.

ಕಾರ್ಯಕ್ರಮ ನಿರೂಪಿಸುವ ಜವಾಬ್ದಾರಿಯನ್ನು ನಾನು, ರಮ್ಯ ಮತ್ತು ಗಾಯತ್ರಿ ವಹಿಸಿದ್ದೆವು. ಕಳೆದ ಯುಗಾದಿಯನ್ನು ಕೇವಲ ಸಣ್ಣ ಮಕ್ಕಳಿಂದ ನಿರೂಪಿಸಿದ್ದೆವು, ರಾಜ್ಯೋತ್ಸವಕ್ಕೆ ಸಿಲ್ಲಿ-ಲಲ್ಲಿ ಇದ್ದರು, ಹಿಂದೆಲ್ಲ ವಾರಗಟ್ಟಳೆ ಅಭ್ಯಾಸ ಮಾಡಿಕೊಂಡು ನಿರೂಪಿಸುತ್ತಿದ್ದೆವು. ಈ ಬಾರಿ, ಯಾವುದೇ ತಯಾರಿಯಿಲ್ಲದೆ ವೇದಿಕೆಯ ಮೇಲೆ ಸಹಜವಾಗಿ ಸ್ಪುರಣವಾದ ನಿರೂಪಣೆ ಇದು.

ಈ ಹಬ್ಬಕ್ಕೆ ನಮಗೆ ಹಲವು ಸ್ತರದಲ್ಲಿ ನೆರವಾದ ಪ್ರಸಾದ್, ಸತ್ಯನಾರಾಯಣ, ಆಯುರ್ವೇದಿಕ್ ಯು.ಕೆ ಅಂಜಲಿ ಜೋಷಿ), ಸುಬ್ರಹ್ಮಣ್ಯ (ಚೆನ್ನೈ ದೋಸಾ) ಮತ್ತು ದಟ್ಸ್ ಕನ್ನಡದ ಪ್ರಸಾದ್ ನಾಯಕ್ ಇವರಿಗೆ ಧನ್ಯವಾದಗಳು. ಎಲ್ಲಕ್ಕಿಂತ ಮಿಗಿಲಾಗಿ ಕಾರ್ಯಕ್ರಮಗಳನ್ನು ಸಾಂಗವಾಗಿ ನಡೆಸಿಕೊಡಲು ಸ್ಪೂರ್ತಿ ಕೊಟ್ಟು, ತಪ್ಪು ನೆಪ್ಪುಗಳನ್ನು ಮಡಿಲಿಗಿರಿಸಿ ಕಡೆಯವರೆಗೂ ಸಂಯಮದೊಂದಿಗೆ ನಮ್ಮೊಂದಿಗಿದ್ದು ಸಹಕರಿಸಿದ ನಿಮಗೆ ಯಾವ ರೀತಿಯಲ್ಲಿ ಧನ್ಯವಾದಗಳನ್ನರ್ಪಿಸಿದರೂ ಕಡಿಮೆಯೇ.

ವಿ.ಸೂ - ಈ ಬೇಸಿಗೆಯಲ್ಲಿ ಕನ್ನಡದವರೆಲ್ಲ ಒಂದು ವನ ಭೊಜನ ಮತ್ತು ಹಲವಾರು ಹೊರಾಂಗಣ ಆಟಗಳನ್ನಾಡೋಣವೆಂಬ ಇರಾದೆ ಇದೆ. ಅದರ ಜತೆಗೆ ನಾವು ಮುಂದೆ ಯಾವ ದಿಕ್ಕಿನಲ್ಲಿ ಹೇಗೆ ಸಾಗಬೇಕೆಂಬ ವಿಚಾರನನ್ನು ನಿಮ್ಮೆಲ್ಲರೊಂದಿಗೆ ಮುಕ್ತವಾಗಿ ನಿಮ್ಮೆಲ್ಲರೊಂದಿಗೆ ಚರ್ಚಿಸಬೇಕೆಂಬುದೆ ನಮ್ಮ ಉದ್ದೇಶ. ಇಷ್ಟರಲ್ಲೇ ನಿಮಗೆ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಪ್ರಕಾಶಿಸುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X