ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಲ್ಲಿ ಸಂಗೀತ ನಿರ್ದೇಶಕ ಸಿ. ಅಶ್ವಥ್

By Staff
|
Google Oneindia Kannada News

C Ashwath
* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ

ವಾರವಿಡೀ ಸಿಡ್ನಿ, ಮೆಲ್ಬೋರ್ನ್‌ಗಳಲ್ಲಿ ಸಂಗೀತ ಮತ್ತಿತರ ಕಾರ್ಯಕ್ರಮಗಳು ಇದ್ದದ್ದರಿಂದ ಖ್ಯಾತ ಸಂಗೀತ ನಿರ್ದೇಶಕ, ಹಾಡುಗಾರ ಸಿ. ಅಶ್ವಥ್ ಅವರ ಜೊತೆ ಕುಳಿತು ನಾಲ್ಕು ಮಾತುಗಳನ್ನಾಡುವ ಅವಕಾಶ ಸಿಕ್ಕಿರಲೇ ಇಲ್ಲ. ಕೊನೆಗೂ ಸದವಕಾಶ ಸಿಕ್ಕಿದ್ದು ಅವರೊಡನೆ ಸಿಡ್ನಿಯ ಪ್ರೇಕ್ಷಣೀಯ ಬೋಂಡಾಯ್ ಬೀಚ್ ಮತ್ತು ವಾಟ್ಸನ್ಸ್ ಬೇ ನೋಡಲು ಡ್ರೈವ್ ಹೋದಾಗ. ಪ್ರಾಯಶಃ ವಿಪರೀತ ಓಡಾಟದ ಕಾರಣ ಅವರು ಮಾತಾಡಿದ್ದು ಕಡಿಮೆಯೇ. ಆದರೂ ಬಿಡದೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ಸುಗಮ ಸಂಗೀತದ ಬಗ್ಗೆ ಕೆಲವು ಕುತೂಹಲದ ವಿಷಯಗಳನ್ನು ಅರಿಯುವುದು ಸಾಧ್ಯವಾಯಿತು.

ಸುಗಮ ಸಂಗೀತ ಕನ್ನಡಕ್ಕೆ ಅನನ್ಯವಾದದ್ದು. ಹಿಂದಿಯಲ್ಲಿ ಗೀತ್ ಮೊದಲಾದ ಪ್ರಕಾರಗಳನ್ನು ಹಾಡುತ್ತಾರೆ; ತಮಿಳಿನಲ್ಲೂ ಅಷ್ಟೆ. ಆದರೆ ಸಾಹಿತ್ಯ ಪ್ರಕಾರವಾದ ಒಂದು ಭಾವಗೀತೆಯನ್ನು ತೆಗೆದುಕೊಂಡು ಅದರ ಹಿಂದಿನ ಅರ್ಥ, ಭಾವನೆಗಳು ಸೂಸುವಂತೆ ರಾಗ ಹಾಕಿ ಹೇಳುವ ಪದ್ಧತಿ ನಮ್ಮಲ್ಲಿ ಮಾತ್ರ. ಭಾವಗೀತೆ ಓದಿನೋಡಿದಾಗ ಅರ್ಥವಾಗುತ್ತದೆ, ನಿಜ. ಆದರೆ ಸಂಗೀತದ ಮೂಲಕ ಅದು ಹರಿದು ಬಂದಾಗ ಅದರ ಅರ್ಥ ವ್ಯಾಪ್ತಿ ಹೆಚ್ಚಾಗುತ್ತದೆ, ಅದು ಅನುಭವವನ್ನು ಇನ್ನೂ ಹೆಚ್ಚಿಸುತ್ತದೆ. ಇದು ಒಂದು ರೀತಿಯಲ್ಲಿ ಸಂಗೀತದ ಹಿರಿಮೆ. ಇನ್ನೂ ಒಂದು ಅಂಶ ಇದೆ. ಸಂಗೀತ, ರಾಗ ಇವುಗಳು ನಿರಾಕಾರಿಗಳು, abstract . ಅದೇ ಸಮಯದಲ್ಲಿ ಕಾರಿನ ಸಿಡಿ ಪ್ಲೆಯರ್ನಲ್ಲಿ ಬಿಸ್ಮಿಲ್ಲಾ ಖಾನರ ರಾಗ್ ಮಧುವಂತಿ ಬರುತ್ತಿತ್ತು. "ಈ ಮಧುವಂತಿಯನ್ನೇ ತೆಗೆದುಕೊಳ್ಳಿ. ಗಂಟೆಗಟ್ಟಲೆ ಹಾಡಬಹುದು; ಹೇಗೆ ಬೇಕಾದರೂ ವಿಸ್ತಾರ ಮಾಡಬಹುದು. ಆದರೆ ಅದೇ ರಾಗದಲ್ಲಿ ಒಂದು ವಚನವನ್ನೋ, ಕವಿತೆಯನ್ನೋ ಹಾಡಿದಾಗ, ಆ ರಾಗ ಮೂರ್ತವಾಗಿ, ಸ್ವರೂಪ ತಳೆದು ನಮ್ಮ ಮುಂದೆ ನಿಲ್ಲುತ್ತದೆ". ಒಮ್ಮೆಗೇ ಅಶ್ವಥ್ ಮತ್ತು ಅವರೊಡನಿದ್ದ ಗಾಯಕಿ ಮಂಗಳಾ ಅಕ್ಕಮಹಾದೇವಿಯ ಒಂದು ವಚನವನ್ನು ಇದೇ ರಾಗದಲ್ಲಿ ಹಾಡಿತೋರಿಸಿದರು. "ಹೋದೇನೂರಿಗೆ; ಇದ್ದೇ ನಾನಿಲ್ಲಿ". ಕಾರನ್ನು ಅಲ್ಲೇ ನಿಲ್ಲಿಸಿ ಇವರ ಗಾನವನ್ನೇ ಕೇಳುತ್ತಾ ಇರೋಣ ಅನ್ನಿಸಿತು. ಯಾವ ಪಕ್ಕವಾದ್ಯದ ಹಂಗೂ ಇಲ್ಲದೆ ಹರಿದುಬಂದ ಗಾನಗಂಗೆ ಇದು.

ಸಿಡಿ ಪ್ಲೇಯರಿನಲ್ಲಿ ಈಗ ಅಶ್ವಿನಿ ಬಿಡೆ ಹಾಡಿರುವ ರಾಗ್ ಲಲಿತ್ ಪ್ರಾರಂಭವಾಯಿತು. "ಇದು ಲಲಿತ್ ರಾಗ. ಏಷ್ಟು ಇಂಪಾದ ರಾಗ ಗೊತ್ತಾ?" ಎಂದು ಅದರ ಲಕ್ಷಣಗಳನ್ನು ವಿವರಿಸತೊಡಗಿದರು. ಕೂಡಲೆ ಈ ರಾಗದಲ್ಲಿ ಅವರು ನಾಗಮಂಡಲ ಸಿನಿಮಾಕ್ಕೆಂದು ಮಾಡಿದ ರಚನೆಯೊಂದನ್ನು ಪ್ರಾರಂಬಿಸಿದರು "ಕಂಬದಾ ಮೇಲಿನ ಗೊಂಬೆ..." ಒಂದು ಕವಿತೆ ಅಥವ ಪದ್ಯ ಸಂಗೀತದ ಬೆನ್ನೇರಿದಾಗ ಏನು ಸೊಗಸು ಎನ್ನಿಸಿತು.

"ನಾನು ಇತ್ತೀಚೆಗೆ ಕವಿತೆಗೆ ರಾಗ ಸಂಯೋಜನೆ ಮಾಡುವುದಿಲ್ಲ; ಬದಲಾಗಿ ಸ್ವರ ಸಂಯೊಜನೆ ಮಾಡುತ್ತೇನೆ. ರಾಗ ಸಂಯೋಜನೆಯಲ್ಲಿ ನಾವು ಯಾವುದಾದರೊಂದು ಸೂಕ್ತ ರಾಗವನ್ನು ಹಿಡಿದು ಅದರ ಬೆನ್ನೇರುತ್ತೇವೆ. ಈ ಸಾಲನ್ನು ತೆಗೆದುಕೊಳ್ಳಿ (ಅವರು ಕೊಟ್ಟ ಉದಾಹರಣೆಯ ನೆನಪಿಲ್ಲ). ಇದಕ್ಕೆ ಸಿಂಹೇಂದ್ರಮಧ್ಯಮ ರಾಗ ಹಾಕಿದರೆ ಹೀಗಿರುತ್ತೆ. ಇಲ್ಲಿ ಈ ಸಾಲಿನ ಅರ್ಥ ಸರಿಯಾಗಿ ಹೊರಬರುವುದಿಲ್ಲ. ಬದಲಾಗಿ ಹೀಗೆ ಹಾಡಿದರೆ ಎಷ್ಟು ಅರ್ಥಗರ್ಭಿತ ಅನಿಸುತ್ತೆ ನೊಡಿ. ಅಂದರೆ ನಾವು ಸಿಂಹೇಂದ್ರಮಧ್ಯಮವನ್ನ ಕೈಬಿಟ್ಟಂತಾಯಿತು. ಈಗ ಇನ್ನಾವುದೋ ರಾಗ ಆಗಬಹುದು ಇದು. ಆದ್ದರಿಂದ ನಾನು ಒಂದೊಂದು ಪದಕ್ಕೂ ಯಾವ ಸ್ವರ ಸರಿ ಎಂದು ನೋಡುತ್ತೇನೊ ಹೊರತು ಅದು ಯಾವ ರಾಗ ಅಂತ ನೊಡೋದಿಲ್ಲ. ಒಂದು ಹಾಡಿನಲ್ಲಿ ಇಪ್ಪತ್ತು ರಾಗ ಬರಬಹುದು; ಪರವಾಗಿಲ್ಲ. ಯಾವ ಯಾವ ಸಂದರ್ಭಕ್ಕೆ, ಯಾವ ಯಾವ ಸ್ವರ ಎಂಬ ಕಲ್ಪನೆ ಈಗ ನನ್ನಲ್ಲಿ ಪಕ್ವವಾಗಿದೆ" ಎಂದು ಅವರು ವಿವರಿಸಿದರು.

"ಗಾಯಕನ ಮತ್ತೊಂದು ಲಕ್ಷಣ ಅಂದರೆ ಅವನ ಧ್ವನಿ ಹೇಗಿದೆ ಅನ್ನೋದು. ವಾಯ್ಸ್‌ನಲ್ಲಿ 'ಜೀರು' ಇರಬೇಕು. ಇಂಗ್ಲಿಷ್‌ನಲ್ಲಿ ಇದಕ್ಕೆ ರೆವರ್ಬ್ ಅಂತೀವಿ. ಇದಿಲ್ಲದೆ ಹೋದರೆ ಸಂಗೀತ ತುಂಬಾ ಸಪ್ಪೆ (flat) ಆಗಿ ಹೋಗುತ್ತೆ. ನಮ್ಮ ಮುಖ್ಯ ಗಾಯಕರು ಭೀಮಸೇನ್ ಜೋಶಿ, ಜಗಜಿತ್ ಸಿಂಗ್ ಯಾರನ್ನೇ ತೊಗೋಳಿ. ಅವರ ಧ್ವನಿಯಲ್ಲಿ ಜೀರು ಜಾಸ್ತಿ. ಅದಕ್ಕೇ ಅವರ ಸಂಗೀತ ಪರಿಣಾಮಕಾರಿ" ಎಂದರು ಅಶ್ವತ್ಥ್.

"ನನ್ನ ಸಂಗೀತ ವಿಕಾಸಕ್ಕೆ ನಮ್ಮ ಅಣ್ಣ ವಿಶ್ವನಾಥ ರಾವ್ ಬಹಳ ಕಾರಣ. ನಾನು ಚಿಕ್ಕವನಿದ್ದಾಗ ನನಗೆ ತಬಲಾ, ಹಾರ್ಮೋನಿಯಮ್ ಗಳನ್ನು ಕೊಡಿಸಿ ಪ್ರೋತ್ಸಾಹಿಸಿದರು. ಹಿಂದೂಸ್ಥಾನಿ ಪದ್ಧತಿಯಲ್ಲಿ ಚೆನ್ನಾಗಿ ಹಾಡುತ್ತಿದ್ದೆ. ನನ್ನ ಗಾಯನ ಕೇಳಿದ ಕಾಶಿಯ ಪಂಡಿತರೊಬ್ಬರು, 'ನೀನು ನಿಜವಾಗಿಯೂ ಮೇಲೆ ಬರುತ್ತೀಯ. ನಿನಗೆ ಎಲ್ಲಾ ಪ್ರತಿಭೆ ಇದೆ. ನಮ್ಮೂರಿಗೆ ಬಾ, ನಾನು ಪಾಠ ಹೇಳಿಕೊಡುತ್ತೇನೆ, ನನ್ನ ಶಿಷ್ಯ ಆಗು' ಎಂದರು. ಅದೊಂದು ಸುವರ್ಣಾವಕಾಶ ನನಗೆ. ಆದರೆ ಕಾಶಿಗೆ ಹೋಗಲು ಹಣ ಎಲ್ಲಿತ್ತು? ಅಲ್ಲಿಗೇ ಆ ಹಂಬಲವನ್ನು ಬಿಡಬೇಕಾಯಿತು. ನಂತರ ಬೆಂಗಳೂರಿನಲ್ಲಿ ಗಾಯಕ ಶೆಣೈ ಇದ್ದರು. ಇವರು ನನಗೆ ಉತ್ತೇಜನ ನೀಡಿದರು. ಎಷ್ಟೋ ಬಾರಿ ಅವರ ಕಛೇರಿಯಲ್ಲಿ ನನ್ನನ್ನು ಪಕ್ಕದಲ್ಲಿ ಕೂಡಿಸಿಕೊಳ್ಳುತ್ತಿದ್ದರು. ಮಧ್ಯೆ ಇದ್ದಕ್ಕಿದ್ದಂತೆ 'ನೀನು ಹಾಡೀಗ' ಎನ್ನುತ್ತಿದ್ದರು. ನಾನು ಕಲ್ಪಿಸಿಕೊಂಡು ಸಂಗತಿ ಹಾಡುತ್ತಿದ್ದೆ. ಆದರೆ ನಿಲ್ಲಿಸುವುದು ಗೊತ್ತಾಗುತ್ತಿರಲಿಲ್ಲ. ಅವರು ಕೈಎತ್ತಿ ನಿಲ್ಲಿಸುವ ಸೂಚನೆ ನಿಡುತ್ತಿದ್ದರು. ನಂತರ ನಾನು ಗುರು ದೇವಗಿರಿ ಶಂಕರ ರಾವ್ ಜೋಶಿ ಅವರಲ್ಲಿ ಸಾಕಷ್ಟು ಕಲಿತೆ. 1970ರ ನಂತರ ನನ್ನ ಮನಸ್ಸು ಸುಗಮ ಸಂಗೀತದತ್ತ ತಿರುಗಿತು" ಎಂದು ಸಂಗೀತ ಪಯಣದ ಹಾದಿ ತೆರೆದಿಟ್ಟರು.

ಮನೆಯಲ್ಲಿ Andrew Rieu ಕಾರ್ಯಕ್ರಮದ ಡಿ ವಿ ಡಿ ನೋಡುತ್ತಲೇ ಅಶ್ವಥ್ ಮತ್ತು ಮಂಗಳಾ ಹೇಳಿದರು - "ನೋಡಿ ಅಲ್ಲಿ ಏನಿಲ್ಲಾ ಅಂದರೂ ನೂರಕ್ಕೂ ಜಾಸ್ತಿ ಜನ ವಾದ್ಯಗಳನ್ನ ನುಡಿಸ್ತಾ ಇದಾರೆ, ಅದೂ ಓಪನ್ ಏರ್ ನಲ್ಲಿ. ಒಂದೊದು ವಾದ್ಯಾನೂ ಎಷ್ಟು ಸ್ಪಷ್ಟವಾಗಿ ಕೇಳುತ್ತೆ. sound system ಅಂದರೆ ಹೀಗಿರಬೇಕು. ನಮಗೆ ಇಂಥಾ ಸಿಸ್ಟಮ್ ಇದ್ದಿದ್ದರೆ ಕನ್ನಡವೇ ಸತ್ಯ ಇನ್ನೂ ಚೆನ್ನಾಗಿ ಬರುತ್ತಿತ್ತು. ಇಂಥಾ ಸಿಸ್ಟಮ್ ಇಟ್ಟುಕೊಂಡು ಒಂದ್ಸಲಿ ಆದರೂ ಪರ್ಫಾರ್ಮ್ ಮಾಡಬೇಕು" ಎಂದು ಅವರು ಮನದಿಂಗಿತವನ್ನು ಹೇಳಿದರು.

ಅಂತೂ ಅಶ್ವಥ್ ಅವರೊಡನೆಯ ರೈಡ್ ಬಹಳ ಉಪಯುಕ್ತವಾಗಿತ್ತು. ಕೊನೆಗೆ ವಾಟ್ಸನ್ ಬೇ ಮುಂದಿದ್ದ "ಶಾಂತ"ಸಾಗರವನ್ನು ನೋಡಿದ್ದೇ ಇಬ್ಬರೂ "ಬಂಗಾರನೀರ ಕಡಲಾಚೆಗೀಚೆಗಿದೆ ನೀಲ ನೀರ ತೀರ" ಶುರು ಮಾಡೇಬಿಟ್ಟರು.

ಪೂರಕ ಓದಿಗೆ

ಸಿಡ್ನಿ ಕನ್ನಡಿಗರಿಗೆ ಸಂಗೀತದೌತಣ ಬಡಿಸಿದ ಅಶ್ವಥ್ಸಿಡ್ನಿ ಕನ್ನಡಿಗರಿಗೆ ಸಂಗೀತದೌತಣ ಬಡಿಸಿದ ಅಶ್ವಥ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X