ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!

By Staff
|
Google Oneindia Kannada News

New Kannada org for US Kannadigas is on the anvil
ಅಮೆರಿಕನ್ನಡಿಗರಿಂದ, ಅಮೆರಿಕನ್ನಡಿಗರಿಗೋಸ್ಕರ, ಅಮೆರಿಕನ್ನಡಿಗರಿಗಾಗಿ ಮುಡಿಪಾದ ಸಂಸ್ಥೆಯ ಪತ್ರಿಕಾ ಪ್ರಕಟಣೆ.

ಪ್ರಿಯ ಅಮೆರಿಕನ್ನಡ ಬಂಧುಗಳೆ,

ಕನ್ನಡ ನಾಡಿನಿಂದ ಬಂದು ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿ ಇಲ್ಲಿನ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿದ್ದೀರಿ. ನಮ್ಮ ಜನಾಂಗದ ಅಭಿಲಾಷೆಗಳಲ್ಲಿ ಪ್ರಾಮುಖ್ಯವಾಗಿ ತಾಯಿಭಾಷೆಯ ಅಭಿಮಾನ, ಕರ್ನಾಟಕ ಸಂಸ್ಕೃತಿ, ಉತ್ತರ ಅಮೆರಿದದಾದ್ಯಂತ ಇರುವ ನಾನಾ ಕನ್ನಡ ಸಂಘಗಳ ಮೂಲಕ ಎಲ್ಲರನ್ನು ಮುಟ್ಟುತ್ತಿದೆ. ಆದರೆ ಮುಂದಿನ ಜನಾಂಗದ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಭಾಷೆಯನ್ನು ಬಿತ್ತಿ ಬೆಳೆಯುವುದು ನಮ್ಮೆಲ್ಲರ ಕರ್ತವ್ಯ. ಇಲ್ಲಿರುವ ಮಕ್ಕಳನ್ನು ಉತ್ತೇಜಿಸುವುದು, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಪದೇಪದೇ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ ಮತ್ತು ಗುರಿ. ಇದಕ್ಕಾಗಿ ಬೇಕಾಗುವ ಸಾಧನ, ಸಲಕರಣೆಗಳನ್ನು ನಿರ್ಮಿಸುವ, ಹಂಚಿಕೊಳ್ಳುವ ಉದ್ದೇಶದಿಂದ ಕೇಂದ್ರಬಿಂದುವಾಗಿ ಒಂದು ಹೊಸ ಸಂಸ್ಥೆಯನ್ನು ನಿಮ್ಮೆಲ್ಲರ ಸಹಕಾರದಿಂದ ಅರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಮಹತ್ಕಾರ್ಯದಲ್ಲಿ ನಿಮ್ಮೆಲ್ಲರ ಸಲಹೆ, ಸಹಾಯ ಬೇಡುತ್ತಿದ್ದೇವೆ.

ಕನ್ನಡಿಗರಿಂದ ಕನ್ನಡಿಗರಿಗಾಗಿ ದುಡಿಯಬಲ್ಲ ಸಂಸ್ಥೆಗೆ ಒಂದು ಭದ್ರಬುನಾದಿ ಹಾಕಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಉದಯವಾಗಲಿರುವ ಹೊಸ ಸಂಸ್ಥೆಯು ಆಮೆರಿಕನ್ನಡಿಗರ ಆಶೋತ್ತರಗಳನ್ನು ನೈಜವಾಗಿ ಬಿಂಬಿಸುವ ಸಂಸ್ಥೆಯಾಗಬೇಕು. ವಿಶ್ವ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯಾಗಬೇಕು. ಕನ್ನಡ ಸಂಸ್ಕೃತಿಯನ್ನು ಅದಮ್ಯವಾಗಿ ಪ್ರೀತಿಸುವ ಸಂಸ್ಥೆಯಾಗಬೇಕು. ಕನ್ನಡ ಕಲಾವಿದರನ್ನು ಗೌರವಿಸುವ ಸಂಸ್ಥೆಯಾಗಬೇಕು. ಮುಂದಿನ ಅಮೆರಿಕನ್ನಡ ಜನಾಂಗಕ್ಕೆ ಕನ್ನಡದ ಕಂಪನ್ನು ಉಳಿಸುವ ಬತ್ತದ ಸೆಲೆಯಾಗಬೇಕು. ಮುಖ್ಯವಾಗಿ, ನೂತನ ಸಂಸ್ಥೆಯು ಯಾವುದೇ ರಾಜಕೀಯ ಸಂಸ್ಥೆಯಾಗದೇ ಸಾಂಸ್ಕೃತಿಕ ಸಂಸ್ಥೆಯಾಗಬೇಕು. ಕನ್ನಡ ಸಂಘಗಳ ಆಪ್ತ ಮಿತ್ರ ಸಂಸ್ಥೆಯಾಗಿ ಬೆಳೆಯಬೇಕು. ಕನ್ನಡಿಗರಿಂದ, ಕನ್ನಡಕ್ಕೋಸ್ಕರ, ಕನ್ನಡಿಗರಿಗಾಗಿ ಕಟ್ಟಬೇಕಾದ ಸಂಸ್ಥೆಯಾಗಬೇಕೆಂಬ ಮಹದಾಸೆಯಿಂದ ಹೊಸ ಸಂಸ್ಥೆಯನ್ನು ಕಟ್ಟಲು ನಾವನೇಕರು ಹೆಜ್ಜೆ ಇಟ್ಟಿದ್ದೇವೆ.

ಹೊಸ ಸಂಸ್ಥೆಯನ್ನು ಕಟ್ಟಲು ಹೊರಟಾಗ ಹಲವಾರು ಸವಾಲುಗಳು ಬರುತ್ತವೆ ನಿಜ. ನಮ್ಮ ಈ ಸಂಸ್ಥೆಗೆ ಹಲವಾರು ಆಕಾಂಕ್ಷೆಗಳಿವೆ. ಪ್ರತಿಯೊಬ್ಬ ಹೊರನಾಡ ಕನ್ನಡಿಗನೂ ತನ್ನ ಸಂಸ್ಥೆಯೆಂದು ಹೆಮ್ಮೆಯಿಂದ ಮೆರೆಯುವಂತಾಗಬೇಕು. ಅಂತಹ ಪರಿಸರ ಕಟ್ಟಿಕೊಡುವ ಜವಾಬ್ಧಾರಿ ನೂತನ ನಾಯಕರದ್ದಾಗಿರಬೇಕು. ನೂತನ ನಾಯಕರು ಯಾರೊಬ್ಬರ ಹಿತಾಸಕ್ತಿಯ ಪ್ರತಿನಿಧಿಯಾಗದೆ ಮುಕ್ತ ಚುನಾವಣೆಯಿಂದ ಹೊರಹೊಮ್ಮಬೇಕು. ವೈಯಕ್ತಿಯ ಲಾಲಸೆಗಳಿಗಾಗಿ ಸಂಸ್ಥೆಯನ್ನೇ ಅಪಹರಿಸುವ ಅವಕಾಶವಿರಬಾರದು. ಮುಕ್ತ ಚುನಾವಣೆಗಳು ನಡೆಯಬೇಕು. ನಿಜವಾದ ಕನ್ನಡಾಭಿಮಾನಿಗಳು, ಅನುಭವಿಗಳು ಹಾಗೂ ಯುವ ನಾಯಕರು ಮುಂದೆ ಬರಬೇಕು. ಸಮಗ್ರ ಅಮೆರಿಕನ್ನಡಿಗರ ಅಪರಂಜಿಯಾಗಿ ಮುಂದೆ ಬರುವ ಎಲ್ಲ ಕನ್ನಡಿಗರಿಗೆ ಅವಕಾಶ ದೊರೆಯುವಂತಹ ಸಂಸ್ಥೆಯನ್ನು ಕಟ್ಟಲು ನಾವು ಹೊರಟಿದ್ದೇವೆ. ಪ್ರತಿಯೊಬ್ಬ ಅಮೆರಿಕನ್ನಡಿಗನೂ ಹೆಮ್ಮೆಯಿಂದ ಸಂಸ್ಥೆಯನ್ನು ಪ್ರತಿನಿಧಿಸುವಂತಹ ಸಂಸ್ಥೆಯನ್ನು ಕಟ್ಟಲು ಪಣತೊಟ್ಟಿದ್ದೇವೆ.

ಇಂತಹ ಮಹತ್ಕಾರ್ಯಕ್ಕೆ ಮೊದಲೇ ಹೇಳಿದಂತೆ ನಿಮ್ಮ ಸಲಹೆ ಸಹಕಾರ ಅಗತ್ಯ. ನಿಮ್ಮ ಈ ಸಂಸ್ಥೆ ಹೇಗಿರಬೇಕು ಅನ್ನಿಸುತ್ತದೆ? ಯಾವ ರೀತಿ ಕೆಲಸ ಮಾಡಬೇಕು? ಏನು ಕೆಲಸ ಮಾಡಿದರೆ ಒಳ್ಳೆಯದು? ಮುಜಗರ ಬೇಡ, ಮುಕ್ತಮನಸ್ಸಿನಿಂದ ಹೇಳಿ. ನಿಮ್ಮ ಜೊತೆ ಮಾತನಾಡುತ್ತೇವೆ. ಆದರೆ ಅದಕ್ಕೆ ಕೆಲವು ನಿಯಮಗಳಿವೆ. ಹೆಸರಿಲ್ಲದೇ, ಕುಲವಿಲ್ಲದೇ ಅಭಿಪ್ರಾಯ ಬರೆಯುವವರಿಗೆ ಪ್ರೋತ್ಸಾಹಿಸುವುದಿಲ್ಲ ಅಥವಾ ಅಸಂಬದ್ಧ ಅಭಿಪ್ರಾಯಗಳಿಗೆ ಅವಕಾಶವಿಲ್ಲ. ನಿಮ್ಮ ಫೋನ್ ನಂಬರ್, ನಿಮ್ಮ ವಿಳಾಸ ಹಾಗೂ ನಿಮ್ಮ emailವಿಳಾಸವನ್ನು ಬರೆದು [email protected]ಗೆ ಬರೆಯಿರಿ. ನಿಮ್ಮ ಸಲಹೆಗಳನ್ನು ಬರೆಯುವುದರ ಜೊತೆಗೆ ನಿಮಗೆ ಕರೆ ಮಾಡಲು ಒಳ್ಳೆಯ ಸಮಯವ ಯಾವುದೆನ್ನುವುದನ್ನೂ ತಿಳಿಸಿ. ತಪ್ಪದೇ ಕರೆಯುತ್ತೇವೆ. ನಿಮ್ಮೊಡನೆ ಚರ್ಚಿಸುತ್ತೇವೆ. ನಿಮ್ಮ ಅಭಿಪ್ರಾಯಗಳಿಗೆ ಅವಕಾಶಕೊಡಲು ಶಕ್ತ್ಯಾನುಸಾರ ಪ್ರಯತ್ನಿಸುತ್ತೇವೆ.

ಹಾಗೆಯೇ ನಿಮ್ಮ ಸಂಸ್ಥೆಗೆ ಏನು ಹೆಸರು ಇಡಲು ಇಚ್ಛಿಸುತ್ತೀರ? ಅದನ್ನೂ ತಿಳಿಸಿ.

ಇತಿ,
ಪ್ರಾಸ್ತಾವಿಕ ಸಮಿತಿ
ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಮುಡಿಪಾದ ನೂತನ ಅಮೆರಿಕನ್ನಡಿಗರ ಸಂಸ್ಥೆ
[email protected]

ಪೂರಕ ಓದಿಗೆ

ಅಕ್ಕ ಚುನಾವಣೆ ಒಂದು ಅವಲೋಕನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X