ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತೀಶ್ ಕುಮಾರ್ ಕಂಡಂತೆ ಕನ್ನಡ ಬ್ಲಾಗ್‌ಮಂಡಲ

By ವರದಿ : ಕೃಪೇಶ್ ಭಟ್, ವರ್ಜಿನೀಯ
|
Google Oneindia Kannada News


Sathish Kumar H.S. ವಾಷಿಂಗ್ಟನ್ ಡಿ.ಸಿ. ಪ್ರದೇಶದ ಭೂಮಿಕಾ ಸಂಸ್ಥೆ ನಡೆಸುವ ವಿಚಾರ ಮಾಲಿಕೆಯ ಜನವರಿ ತಿಂಗಳ ಕಾರ್ಯಕ್ರಮದಲ್ಲಿ ಬ್ಲಾಗ್‌ ಲೋಕ ಚರ್ಚೆಯ ಪ್ರಮುಖ ವಸ್ತುವಾಗಿತ್ತು. ಜನವರಿ 13ರ ಭಾನುವಾರದಂದು ನಡೆದ ಮಂಥನದಲ್ಲಿ ಸತೀಶ್ ಕುಮಾರ್ ಹೊಸನಗರ ಅವರು ಕನ್ನಡ ಬ್ಲಾಗ್ ಪ್ರಪಂಚವನ್ನು ಪರಿಚಯಿಸಿದರು.1997ರಲ್ಲಿ ಆರಂಭವಾಗಿ, ಇಂದು 112 ಮಿಲಿಯನ್ ಬ್ಲಾಗ್‌ಗಳ ಮಟ್ಟಕ್ಕೆ ತಲುಪಿರುವ ಈ ಹೊಸ ಮಾಧ್ಯಮದ ಸ್ಥೂಲ ಪರಿಚಯದೊಂದಿಗೆ ಸತೀಶ್ ಚರ್ಚೆ ಆರಭಿಸಿದರು. ಬ್ಲಾಗ್‌ಗಳು ಹೇಗೆ ಇತರ ಮಾಧ್ಯಮಗಳಿಗಿಂತ ಭಿನ್ನ ಎಂಬ ವಿವರಣೆ, ಬ್ಲಾಗ್‌ಗಳ ಇತಿ-ಮಿತಿ, ಹಾಗೂ ಈ ಮಾಧ್ಯಮದ ವಿಶ್ವ ವ್ಯಾಪ್ತಿಯ ಬಗ್ಗೆ ನೀಡಿದ ವಿವರಗಳು ಎಲ್ಲರನ್ನು ವಿಚಾರ ಮಂಥನಕ್ಕೆಳೆದಿತ್ತು.

ಸತೀಶ್ ಅವರು ಕನ್ನಡದಲ್ಲಿ ಮೂಡಿರುವ ಕೆಲವು ಉತ್ತಮ ಬ್ಲಾಗ್‌ಗಳ ಕಿರು ಪರಿಚಯ ಮಾಡಿಕೊಟ್ಟರು. ಹೆಚ್ಚಾಗಿ ಯುವ ಜನಾಂಗದ ಮತ್ತು ಕೇವಲ ಕನ್ನಡದಲ್ಲಿ ಬರೆಯಬೇಕೆನ್ನುವ ಹಂಬಲದಿಂದಷ್ಟೇ ಬರೆಯುವವರ ಮಾಧ್ಯಮವಿದು ಎಂಬ ಟೀಕೆಯನ್ನು ಅಲ್ಲಗಳೆದ ಸತೀಶ್, ಯು.ಆರ್. ಅನಂತಮೂರ್ತಿ, ಎಂ.ಎಸ್. ಶ್ರೀರಾಮ್, ಅಬ್ದುಲ್ ರಶೀದ್, ಜೋಗಿ, ಮುಂತಾದ ಸಾಹಿತಿಗಳ ಬರಹಗಳು ಬ್ಲಾಗ್ ಮಾಧ್ಯಮದಲ್ಲಿ ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದರು.

ಹಾಗೆಯೇ, ಹಾಸ್ಯಕ್ಕೆ ಒತ್ತುಕೊಟ್ಟಿರುವ "ಮಜಾವಣಿ", "ಬೊಗಳೆ ರಗಳೆ", "ಕಾಲಚಕ್ರ" ಮುಂತಾದ ಬ್ಲಾಗ್‌ಗಳು ಜನಪ್ರಿಯವಾಗಿದ್ದರೆ, "ಅಮೇರಿಕದಿಂದ ರವಿ", "ತುಳಸಿ ವನ", "ನೆನಪು ಕನಸುಗಳು ನಡುವೆ", "ಹರಿವ ಲಹರಿ" ಮುಂತಾದ ಬ್ಲಾಗ್‌ಗಳು ಸಾಹಿತ್ಯದ ನೆಲೆಯಲ್ಲಿ ಬೆಳೆಯುತ್ತಿವೆ. ಕನ್ನಡ ಪ್ರೀತಿಗೆ ಒತ್ತು ಕೊಟ್ಟಿರುವ "ಏನ್ ಗುರು ಕಾಫೀ ಆಯ್ತ?" (ಬನವಾಸಿ ಬಳಗ), ಹಾಗು ಸಂಪದ.ನೆಟ್ ನಲ್ಲಿ ಲಭ್ಯವಿರುವ ಬ್ಲಾಗ್‌ಗಳ ಜನಪ್ರಿಯತೆಯ ಬಗೆಗಿನ ಚರ್ಚೆ ಕುತೂಹಲಪೂರ್ಣವಾಗಿತ್ತು.

ಸತೀಶ್ ಅವರು ತಮ್ಮದೇ ಆದ "ಅಂತರಂಗ", "ಕಾಲಚಕ್ರ" ಮತ್ತು "ದಾರಿದೀಪ" ಬ್ಲಾಗ್‌ಗಳನ್ನು ಪರಿಚಯಿಸುತ್ತ, ತಾವು ಏಕೆ ಬೇರೆ ಬೇರೆ ವಿಚಾರಗಳಿಗೆ ಮೀಸಲಿಟ್ಟಿರುವ ಬ್ಲಾಗ್‌ಗಳನ್ನು ಒಟ್ಟುಗೂಡಿಸಿಲ್ಲ ಎಂದು ವಿವರಿಸಿದರು. ಬ್ಲಾಗರ್‌ಗಳೇಕೆ ಬರೆಯುತ್ತಾರೆ ಎಂಬ ಪ್ರಶ್ನೆಯನ್ನು ತಮಗೇ ಅನ್ವಯಿಸಿಕೊಂಡು ಉತ್ತರಿಸಿದ ಸತೀಶ್, ಬ್ಲಾಗ್‌ನಿಂದಾಗಿ ತಮ್ಮ ಬರವಣಿಗೆ ಹೇಗೆ ಚುರುಕಾಯಿತು ಎಂಬುದನ್ನೂ ವಿವರಿಸಿದರು.

ಇಲಿನಾಯ್ ವಾಸಿ ತ್ರಿವೇಣಿ ಅವರ ಸಹಾಯದೊಂದಿಗೆ ಸತೀಶ್ ಅವರು ತಯಾರಿಸಿದ ಕನ್ನಡದ ಸುಮಾರು 40 ಪ್ರಚಲಿತದಲ್ಲಿರುವ ಬ್ಲಾಗ್‌ಗಳ ಪಟ್ಟಿಯನ್ನು ಎಲ್ಲರಿಗೂ ಹಂಚಲಾಯಿತು. ಪ್ರಶ್ನೋತ್ತರದೊಂದಿಗೆ ಕೊನೆಗೊಂಡ ಕಾರ್ಯಕ್ರಮವನ್ನು ಸತೀಶ್ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕನ್ನಡ ಬ್ಲಾಗ್ ಪ್ರಪಂಚವನ್ನು "ಬ್ಲಾಗ್‌ಮಂಡಲ" ಎಂದು ಕರೆದರೆ ಹೇಗೆ ಎಂಬ ಶ್ರೀವತ್ಸ ಜೋಶಿಯವರ ಪಂಚ್ ಲೈನ್‌ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸತೀಶ್ ಅವರ ಬ್ಲಾಗ್‌ಗಳನ್ನು ಓದಲು ಹಾಗು ಈ ಚರ್ಚೆಯ ಸಂಪೂರ್ಣ ಆಡಿಯೊ ಕೇಳಲು ಭೇಟಿ ಕೊಡಿ - http://antaranga.blogspot.com/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X