ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗಿದ್ದರು ಸರ್ ಎಡ್ಮಂಡ್ ಹಿಲ್ಲರಿ.

By Staff
|
Google Oneindia Kannada News


ಇನ್ನೊಬ್ಬರ ಸಂತೋಷವೇ ನನ್ನ ಸಂತೋಷವೆಂದು ಭಾವಿಸುವವರು ವಿರಳ. ಅಂಥ ವಿರಳರಲ್ಲಿ ವಿರಳ ವ್ಯಕ್ತಿ ಹಿಲರಿ.

  • ಪ್ರಕಾಶ್ ರಾಜಾರಾವ್,ಆಕ್ಲೆಂಡ್, ನ್ಯೂಜಿಲೆಂಡ್.

May his soul ever rest in peace ಸಾಮಾನ್ಯವಾಗಿ ನ್ಯೂಜಿಲೆಂಡ್‌ನ ಪ್ರಸಿದ್ಧ ವ್ಯಕ್ತಿಗಳು ಯಾರೂ ತಮ್ಮ ಹೆಸರನ್ನು ದೂರವಾಣಿ ಡೈರೆಕ್ಟರಿಗೆ ನೀಡುವುದಿಲ್ಲ. ಗೋಪ್ಯತೆಗಾಗಿ ಮಾತ್ರವಲ್ಲ ಅದು ಒಂದು ರೀತಿಯ ಪ್ರತಿಷ್ಠೆಯ ವಿಷಯ ಎನ್ನಬಹುದು. ಆದರೆ, ನಾನೊಬ್ಬ ಸಾಮಾನ್ಯ ಪ್ರಜೆ ಎಂದು ಕರೆದುಕೊಳ್ಳುತ್ತಿದ್ದ ಸರ್ ಎಡ್ಮಂಡ್ ಇದಕ್ಕೆ ಅಪವಾದ. ಅವರ ಹೆಸರು ವಿಳಾಸ ಎಲ್ಲ ವಿವರಗಳನ್ನು ಪ್ರಕಟಿಸಲು ಅನುಮತಿ ನೀಡಿದ್ದರು. ಒಮ್ಮೆ ಓಲಿ ಬ್ರಾಡ್ ಶಾ ಎಂಬ 14 ವರ್ಷದ ಪ್ರೌಢಶಾಲಾ ವಿದ್ಯಾರ್ಥಿ 20ನೇ ಶತಮಾನದ ಯಶಸ್ವಿ ವ್ಯಕ್ತಿಯೊಬ್ಬರ ಬಗ್ಗೆ ಒಂದು ಪ್ರಬಂಧ ಬರೆಯಬೇಕಾಗಿತ್ತು. ಅವನು ಆರಿಸಿಕೊಂಡದ್ದು ಸರ್ ಎಡ್ಮಂಡ್ ಅವರನ್ನು. ಅವನಿಗೆ ಅದನ್ನು ಬರೆಯಲು ಅಗತ್ಯವಾದ ಮಾಹಿತಿಯಾಗಲಿ, ಮಾರ್ಗದರ್ಶಕರಾಗಲಿ ಇರಲಿಲ್ಲ. ಮುಗ್ಧ ಓಲಿ ಸರ್ ಎಡ್ಮಂಡ್ ಅವರ ಮನೆಗೇ ನೇರವಾಗಿ ದೂರವಾಣಿ ಮಾಡಿದ. ಅವನ ಪುಣ್ಯಕ್ಕೆ ಅವರು ಮನೆಯಲ್ಲೇ ಇದ್ದರು. ಆ ಅಪರಿಚಿತ ಬಾಲಕನಿಗೆ ಅಗತ್ಯವಾದ ಎಲ್ಲಾ ಮಾಹಿತಿ ನೀಡಿ ನೆರವಾದರು.

1957ರಲ್ಲಿ ದಕ್ಷಿಣ ಧ್ರುವದ ಅಂಟಾರ್ಕ್ಟಿಕಾದಲ್ಲಿ ನ್ಯೂಜಿಲೆಂಡ್ ಸಂಶೋಧನಾ ಕೇಂದ್ರ ಕ್ಯಾಪ್ಟನ್ ಸ್ಕಾಟ್ ಬೇಸ್ ಸ್ಥಾಪಿಸಲು ಕಾರಣರಾದರು. ಸರಳವಾಗಿ ಮಾರ್ಪಡಿಸಿದ ಒಂದು ಸಾಧಾರಣ ಕೃಷಿ ಟ್ರಾಕ್ಟರ್ ಉಪಯೋಗಿಸಿ ಹಿಮಚ್ಚಾದಿತ ದಕ್ಷಿಣ ಧ್ರುವ ತಲುಪಿದ್ದು ಅವರ ಮತ್ತೊಂದು ಹಿಮಾಲಯ ಸದೃಶ ಸಾಧನೆಯಾಗಿತ್ತು. ಕ್ಯಾಪ್ಟನ್ ಸ್ಕಾಟ್ ಬೇಸ್‌ನ ಐವತ್ತನೇ ವರ್ಷದ ಸಂಸ್ಥಾಪನ ದಿನಾಚರಣೆಗಾಗಿ ತಮ್ಮ 87ನೇ ವಯಸ್ಸಿನಲ್ಲಿ ಮತ್ತೆ ಅಲ್ಲಿಗೆ ಹೋಗಿದ್ದು ಒಂದು ನಂಬಲಾಗದ ಸಾಹಸ.

ಹಿಮಾಲಯದ ಆರೋಹಣ ಅವರ ಸಾಹಸಮಯ ಬದುಕಿನ ಅಡಿಗಲ್ಲು ಮಾತ್ರ. ನಂತರದ ಅವರ ಬದುಕೇ ಒಂದು ಸಾಹಸಗಾಥೆ. ತಮ್ಮ ಸಾಧನೆಗಳಿಂದ ದೊರೆತ ಖ್ಯಾತಿಯನ್ನು ಉಪಯೋಗಿಸಿ ಅಸಂಖ್ಯಾತ ಬಡ ಜನರ ಬದುಕನ್ನು ಹಸನಾಗಿಸಿದ್ದು ಜಗತ್ತೇ ಬಲ್ಲ ವಿಚಾರ. ನನಗಾವ ಸ್ಮಾರಕವೂ ಬೇಡ ನಾನು ಪ್ರಾರಂಭಿಸಿದ ಹಿಮಾಲಯ ಟ್ರಸ್ಟ್ ನಡೆಸಿಕೊಂಡು ಹೋಗಿ ಜನರಿಗೆ ಅಗತ್ಯವಾದ ವೈದ್ಯಕೀಯ ಕೇಂದ್ರಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದುವನ್ನು ದೊರೆಕಿಸಿದರೆ ನನಗೆ ಸಂತೋಷ ಎಂದಿದ್ದರು ಅವರು.

ನನ್ನ ಬದುಕಿನ ಮಹತ್ತರ ಸಾಧನೆ ನನಗೆ ದೊಡ್ಡದಾಗಿರಲಿಲ್ಲ. ನನ್ನ ಜನ ನನಗಾಗಿ ಆನಂದ ಬಾಷ್ಪ ಸುರಿಸಿದಾಗ , ನನ್ನಿಂದ ವಿದಾಯ ಹೇಳುವ ಸಮಯದಲ್ಲಿ ಕಣ್ಣೀರಿಟ್ಟಾಗ, ಆತ್ಮೀಯರು ಕೈಕುಲುಕಿದಾಗ ದೊರೆಯುವ ತೃಪ್ತಿಗೆ ಯಾವುದೂ ಸಮನಲ್ಲ ಎನ್ನುತ್ತಿದ್ದರು ಎಡ್ಮಂಡ್. ಸರ್ ಎಡ್ಮಂಡ್ ಹಿಲ್ಲರಿ ಈಗ ನಮ್ಮ ಆಕ್ಲೆಂಡಿನ ರೆಮ್ಯುಎರಾ ಬಡಾವಣೆಯ ತಮ್ಮ ಮನೆಯಲ್ಲಿ ಚಿರ ನಿದ್ರೆಯಲ್ಲಿ ಮಲಗಿದ್ದಾರೆ. ಮುಂದಿನವಾರ ದಿನಾಂಕ 22ನೇ ಜನವರಿಯಂದು ಅವರ ಅಂತಿಮ ಕ್ರಿಯೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನಡೆಯಲಿದೆ. ಶ್ರದ್ಧಾಂಜಲಿಯ ಮಹಾಪೂರವೇ ಅವರ ನೆನೆಪಿನಲ್ಲಿ ಹರಿದು ಬಂದಿದೆ.

ಅವರ ಅಪೇಕ್ಷೆಯಂತೆ ಅವರ ಚಿತಾ ಭಸ್ಮವನ್ನು ಆಕ್ಲೆಂಡಿನ ಹೌರಾಕಿ ಸಮುದ್ರ ಕೊಲ್ಲಿಯಲ್ಲಿ ವಿಸರ್ಜಿಸಲಾಗುವುದು ಎಂದು ಪ್ರಧಾನ ಮಂತ್ರಿ ಹೆಲೆನ್ ಕ್ಲಾರ್ಕ್ ಹೇಳಿದ್ದಾರೆ.
ಅವರು ತಮ್ಮ ಹೆಂಡತಿ ಮತ್ತು ಬೆಳೆದ ಮಗಳನ್ನು ವಿಮಾನಾಪಘಾತದಲ್ಲಿ ಕಳೆದು ಕೊಂಡಿದ್ದರು. ಮಂಡಿ ನೋವು, ಉಸಿರಾಟದ ತೊಂದರೆ, ಅನಾರೋಗ್ಯದಿಂದ ದೀರ್ಘಕಾಲ ನರಳಿದ್ದರು. ಆದರೆ ಇದ್ಯಾವುದೂ ಅವರನ್ನು ಬದುಕಿನಿಂದ ವಿಮುಖವಾಗಿಸಲಿಲ್ಲ. ಸಾಹಸ, ಸಮಾಜ ಸೇವೆ, ಸರಳ ಬದುಕಿಗೆ ಜೀವಂತ ಉದಾಹರಣೆಯಾಗಿದ್ದರು.

ಪರರ ಸಂತೋಷವನ್ನು ಕಂಡು ಸಂತಸ ಪಡುವುದೇ ಪರಮ ಸಂತೋಷ ಎನ್ನುವ ಧ್ಯೇಯ ಹೊಂದಿದ್ದ ಅವರ ಸ್ಮರಣೆಯಲ್ಲಿ ಒಂದು ಯೋಗ್ಯ ಸ್ಮಾರಕ ನಿರ್ಮಿಸ ಬೇಕೆಂದು ಚಿಂತನೆ ನಡೆಯುತ್ತಿದೆ. ಮತ್ತೊಂದು ಹಿಮಾಲಯವನ್ನೆ ಅವರ ಹೆಸರಿನಲ್ಲಿ ನಿರ್ಮಾಣ ಮಾಡಿದರೂ ಸಹ ಸಾಲದೇನೋ ಎನ್ನಿಸುತ್ತದೆ. ಈ ಪ್ರಾತಃಸ್ಮರಣೀಯ ದೈವ ಮಾನವನ ಅಗಲಿಕೆಗಾಗಿ ಆಶ್ರುತರ್ಪಣ ಸಲ್ಲಿಸುತ್ತಾ ಅವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಕೀವಿ ಕನ್ನಡಿಗರೆಲ್ಲ ಪ್ರಾರ್ಥಿಸುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X