ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಂದಾವನದಲ್ಲಿ ಹಿರಿಯರನ್ನು ನಲಿದಾಡಿಸಿದ ಮಕ್ಕಳು

By * ಕೃಪಾ ರಮೇಶ್
|
Google Oneindia Kannada News

Rajyotsava, Deepavali, Childrens Day in Brindavana
ಡಿಸೆಂಬರ್ 6ರಂದು ನಮ್ಮ ನ್ಯೂಜೆರ್ಸಿಯ ಬೃಂದಾವನದದಲ್ಲಿ ಮಕ್ಕಳ ದಿನಾಚರಣೆ, ದೀಪಾವಳಿ, ಕನ್ನಡ ರಾಜ್ಯೋತ್ಸವ ಎಲ್ಲಾ ಸೇರಿಸಿ ಒಂದು ಹಬ್ಬ ಆಚರಿಸಿದೆವು. ನಾಡಗೀತೆಯಾದ "ಜಯ ಭಾರತ ಜನನಿಯ ತನುಜಾತೆ" ಹಾಡಿಗೆ ದೃಶ್ಯ ಮಾಧ್ಯಮದ ಮೂಲಕ ತೆರೆಯ ಮೇಲೆ ಮೂಡಿ ಬಂದ ಕರ್ನಾಟಕದ ಕಲೆ, ನಿಸರ್ಗ ಸೌಂದರ್ಯ, ಸಿರಿ ಸಂಪತ್ತನ್ನು ಸವಿಯಿತ್ತ ನೆರೆದಿದ್ದ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ ನಂತರ ಆ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಯಿತು.

ಅಂದಿನ ವಿಶೇಷ ಏನಪ್ಪಾ ಅಂದ್ರೆ ಮೊದಲಬಾರಿಗೆ "ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ" ಏರ್ಪಟ್ಟ ಸುಂದರ ಸಂಜೆ. ಸುಮಾರು ಮುನ್ನೂರು ಮಂದಿ ಸೇರಿದ್ದೆವು, ಎಪ್ಪತ್ತೈದು ಪುಟಾಣಿಗಳಿಗಿಂತ ಮೀರಿ ಮಕ್ಕಳು ವೇದಿಕೆಯ ಮೇಲೆ ತಮ್ಮ ವಿಧ ವಿಧವಾದ ವೇಷ ಭೂಷಣಗಳಿಂದ, ಗಾನ ನೃತ್ಯ ನಾಟಕಗಳಿಂದ ನಮ್ಮನ್ನು ರಂಜಿಸಿದರು. ಏಷ್ಟು ಸುಂದರ ಹಾಗು ಶ್ಲಾಘನೀಯ ಎಂದರೆ, ಪುಟಾಣಿಗಳಿಂದ 'ಕಸ್ತೂರಿ ಕನ್ನಡ'ದಲ್ಲೇ ಆ ದಿನದ ಕಾರ್ಯಕ್ರಮಗಳು ನಡೆದಿದ್ದು.

ಕುಮಾರಿ ಸ್ಫೂರ್ತಿ ಭಟ್ಟ ತನ್ನ ಸ್ವಾಗತ ಭಾಷಣದಿಂದ ಎಲ್ಲರಿಗೂ ಆದರದ ಸ್ವಾಗತ ಕೋರಿದರೆ, ಕುಮಾರಿ ಅನಘ ಬಾಬು ಪ್ರಾರ್ಥನೆ, ಪುಟಾಣಿಗಳಾದ ಶುಭ ಹಾಗು ಅಜೇಯ್ ವಸಿಷ್ಟರಿಂದ ಬೃಂದಾವನದ ಸಂಕೇತ ಗೀತೆ, ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಕುಮಾರಿ ನೇಹಾ ಸಂತೆಬೆನ್ನೂರು ಮತ್ತು ಕುಮಾರಿ ಅಮೂಲ್ಯ ಕಟ್ಟಿಮನಿಯವರಿಂದ, ಎಲ್ಲವು ಕನ್ನಡದಲ್ಲೇ...ಅತ್ಯಂತ ಸುಂದರವಾಗಿತ್ತು. ಮೊದಲ ಬಾರಿಗೆ 'ಬೃಂದಾವನ ಐಡಲ್' ಸ್ಫರ್ಧೆ ಏರ್ಪಡಿಸಲಾಗಿತ್ತು...ಪುಟಾಣಿಗಳು ಅಂದ್ರೆ 5-6 ವರ್ಷಗಳಿರಬಹುದೇನೋ, ಆ ವಯಸ್ಸಿನಿಂದ ಹಿಡಿದು, 16-17 ವಯಸ್ಸಿನ ಯುವ ಯುವತಿಯರು ತಮ್ಮ ಗಾನ ಕಲಾವಿದ್ಯೆಯನ್ನು ಪ್ರದರ್ಶಿಸಿದರು. ನಮಗೇನೋ ನೋಡಲು ಬಹಳ ಆನಂದವಾಗಿತ್ತು, ಪಾಪ, ಆ ಸ್ಪರ್ಧೆಯ ತೀರ್ಪುಗಾರರಿಗೆ ಯಾರಿಗೆ ಅಂತ ಬಹುಮಾನ ನಿರ್ಣಯಿಸುವುದು ಅನ್ನೋದು ಬಹಳ ಕಷ್ಟದ ಕೆಲಸವೇ ಆಯಿತು.

ಇದೇ ಸಮಯದಲ್ಲಿ ಬೇರೆ ಒಂದು ಹಾಲಿನಲ್ಲಿ ಮತ್ತೆ, ಮೊದಲ ಬಾರಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ. ಅದೂ ಸಹ ಪುಟ್ಟ ಮಕ್ಕಳಿಂದ ಹಿಡಿದು ಹೈಸ್ಕೂಲು ಮಕ್ಕಳ ತನಕ ವಿಧವಿಧ ವಯಸ್ಸಿಗೆ ತಕ್ಕಂತೆ ವಿಷಯ ಕೊಟ್ಟು (ಭಾರತದ ರಾಷ್ಟ್ರ ಪಕ್ಶಿ, ಪ್ರಾಣಿ, ಕರ್ನಾಟಕದ ಪ್ರೇಕ್ಶಣೀಯ ಸ್ಥಳ ಇತ್ಯಾದಿ), ಆ ಸ್ಥಳದಲ್ಲೇ, ಚಿತ್ರ ಬಿಡಿಸಿ, ಬಣ್ಣ ತುಂಬಲು ಹೇಳಲಾಗಿತ್ತು. ಮಕ್ಕಳ ಮನೊಧರ್ಮ, ನೈಪುಣ್ಯತೆ ನೋಡಿಯೇ ತಿಳಿಯಬೇಕಷ್ಟೆ.
ಇದೆರಡು ಮುಗಿಯುವ ಹೊತ್ತಿಗೆ ಸರಿಯಾಗಿ ತಯಾರಿತ್ತು ದೊಡ್ಡವರಿಗೆ ರುಚಿ ರುಚಿಯಾದ ಪಕೊಡ, ಚೌಚೌ, ಕಾಫಿ, ಟೀ ಹಾಗು ಮಕ್ಕಳಿಗೆ ಡೊನಟ್ಸ್ ಹಾಗು ಚಾಕೋಲೇಟ್ ಹಾಲಿನ ವ್ಯವಸ್ಥೆ. ಕೇವಲ ದರ್ಶನ ಶ್ರವಣಾನಂದದಿಂದ ಮನ ತುಂಬಿತ್ತು, ರುಚಿಕರ ತಿಂಡಿಯಿಂದ ಹೊಟ್ಟೆ ಸಹ ತುಂಬಿತು...ಅ ಛಳಿ ಮಳೆಗೆ ಹಿತಕರವಾದ ಚೌ ಚೌ ಭಲೇ ಅನ್ನಿಸಿತ್ತು.

ನಂತರ ಶುರುವಾದದ್ದು, ಮಕ್ಕಳು ಹಲವು ವಾರಗಳಿಂದ ಅಭ್ಯಾಸ ಮಾಡಿದ್ದ ಹಲವಾರು ಗಾನ, ನೃತ್ಯ ನಾಟಕಗಳ ಪ್ರದರ್ಶನ. ವಿವಿಧ ವೇಶ ಧರಿಸಿದ್ದ, ಕೃಷ್ಣ, ರಾಧೆ, ಹನುಮ, ಬಭ್ರುವಾಹನಗಳ ಜೊತೆ ಮೀನು ಮಾರುವವಳು, ಕಣಿ ಹೇಳುವವಳು ಎಲ್ಲಾ ಸೇರಿದ್ದರು ವೇದಿಕೆಯ ಮೇಲೆ. ಬೊಂಬೆ ಹಬ್ಬ ಕಣ್ಣಿಗಾನಂದ ನೀಡಿತು. ದೀಪಾವಳಿಯ ಪ್ರಯುಕ್ತ ದೀಪಗಳೊಂದಿಗೆ ನೃತ್ಯ, ಶಿವ ಪಂಚಾಕ್ಷರಿ ಸ್ತೋತ್ರಕ್ಕೆ ಭರತನಾಟ್ಯ, ನಂತರ 1970ರಿಂದ 2008ವರೆಗೆ ಪ್ರಚಲಿತ ಕನ್ನಡ ಸಿನಿಮಾ ಹಾಡುಗಳಿಗೆ ಕಾಲಕ್ಕೆ ತಕ್ಕಂತೆ ನರ್ತನ.."ತಾಳ ಮೇಳ"..ಎಷ್ಟೊಂದು ಮಕ್ಕಳು, ಎಷ್ಟೊಂದು ವೇಗದಲ್ಲಿ ವೇಷ ಬದಲಾವಣೆ, ಎಷ್ಟೊಂದು ರೀತಿಯ ನೃತ್ಯ, ಅವರ ಸಂತೋಷ, ಸಂಭ್ರಮ ಬಹಳ ಸೊಗಸಾಗಿತ್ತು. ಅಂತಿಮ ನಾಟಕ "ಒನಕೆ ಓಬ್ಬವ್ವ"...ಸ್ತೇಜ್ ಸೆಟ್ಟಿಂಗ್, ಮಕ್ಕಳ ವೇಷಗಳು, ಅವರ ಅಭಿನಯ, ಕನ್ನಡದಲ್ಲೇ ನಿರೂಪಣೆ ಎಲ್ಲವು ಅತ್ಯಂತ ಅದ್ಭುತವಾಗಿತ್ತು.

ಜಯಂತ್ ಕಾಯ್ಕಿಣಿಯವರ "ನಮ್ಮ ನಾಡು ಕರುನಾಡು" ಹಾಡಿನ ವೃಂದಗಾನದೊಂದಿಗೆ ಮೂರು ತಾಸುಗಳಿಗು ಹೆಚ್ಚಾಗಿ ಅತ್ಯಂತ ರಂಜನೀಯವಾಗಿ ನಡೆದ ಬೃಂದಾವನದ "ಮಕ್ಕಳ ದಿನಾಚರಣೆ, ರಾಜ್ಯೋತ್ಸವ ಹಾಗು ದೀಪಾವಳಿ" ಕಾರ್ಯಕ್ರಮ ಕೊನೆಗೊಂಡಿತು. ಆ ದಿನದ ಕಾರ್ಯಕ್ರಮಕ್ಕೆ ಬಂದಿದ್ದ ಹಿರಯರೆ ಮುಖ್ಯ ಅತಿಥಿಗಳಾಗಿದ್ದರು. ಅವರಿಂದ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಾಗು ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆದ ನಂತರ "ಸ್ವಾಗತ್ ಗೌರ್ಮೆಟ್"ನಿಂದ ತರಿಸಲಾಗಿದ ಶುಚಿ ರುಚಿಯಾಗಿದ್ದ ಪುಷ್ಕಳ ಭೋಜನ "ಹಬ್ಬದೂಟ"ವನ್ನು ಮೀರಿಸುವಂತಿತ್ತು.

ಇಷ್ಟು ಅಮೋಘ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದ, ಮಕ್ಕಳಿಗೂ, ಮಕ್ಕಳ ಅಭ್ಯಾಸಕ್ಕೆ, ಅವರ ವೇಷಭೂಷಗಳಿಗೆ ಸಹಾಯ ದೊರಕಿಸಿದ್ದ ಪೋಷಕರಿಗೂ, ಹಲವಾರು ಸಹಾಯಕರಿಗೂ, ಎಲ್ಲಕಿಂತ ಮಿಗಿಲಾಗಿ ಇದನ್ನು ಯೋಜಿಸಿದ್ದ ಬೃಂದಾವನದ "ಸ್ಫೂರ್ತಿ" ತಂಡದವರಿಗೂ ತುಂಬಾ ತುಂಬಾ ವಂದನೆಗಳು ಸಲ್ಲಲೇ ಬೇಕು...ಎಲ್ಲರ ಸ್ನೇಹ ಸಹಕಾರದಿಂದ ಮಾತ್ರವೇ ಈ ರೀತಿಯ ಮಧುರ ಮನೋಹರ ಕಾರ್ಯಕ್ರಮ ಸಾಧ್ಯ ಅಲ್ಲವೆ.

ಇಷ್ಟೇ ಅಲ್ಲದೆ, ಡಾ.ರಾಮ್ ಬೆಂಗಳೂರು ಮತ್ತು ಅವರ ಸಹಚರರಿಂದ ಉಚಿತ 'ಫ್ಲೂ ಶಾಟ್ಸ್' ಸಹ ಪಡೆಯಬಹುದಿತ್ತು. ಆಲ್ಲದೆ, ಲಕ್ಷ್ಮೀ ಮತ್ತು ಉದಯ ಭೂಪಾಳಮ್, ಉಷ ಮತ್ತು ಪ್ರಸನ್ನ ಕುಮಾರ್ ರವರು ಹಲವಾರು ಬಹುಮಾನಗಳ ಏರ್ಪಾಟನ್ನು ಮಾಡಿದ್ದರು..ಸುಧಾ ಹಾಗು ಡಾ. ರಾಮ್ ರವರು ಮಕ್ಕಳ ಪ್ರತಿಭೆಯಿಂದ ಅತ್ಯಂತ ಸಂತುಷ್ಟರಾಗಿ, ಭಾಗವಹಿಸಿದ್ದ ಎಲ್ಲ ಮಕ್ಕಳಿಗೂ 'ಗಿಫ್ಟ್ ಸೆರ್ಟಿಫಿಕೇಟ್ ' ಕೊಡುವುದಾಗಿ ಹೇಳಿದರು. ಈಸ್ಟ್ ವಿಂಡ್ಸರ್ ನ ಡಂಕಿನ್ ಡೊನಟ್ಸ್ ರವರಿಗೆ, ಗಾರ್ಡಿಯನ್ ಇನ್ಷುರನ್ಚ್ ನ ಶ್ರೀಧರ್ ರಾವ್ ರವರಿಗೆ, ಬೃಂದಾವನದ 'ಫುಡ್ ಡ್ರೈವ್' ಗೆ ಸಹಾಯ ಮಾಡಿದ್ದ ಸರ್ವರಿಗೂ ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು.

ಪ್ರತಿಯೊಂದು ಕಾರ್ಯಕ್ರಮದಲ್ಲು ದಾನ ಧರ್ಮಕ್ಕೆಂದು ಹಣವನ್ನು ಶೇಖರಣೆ ಮಾಡುವ ಬೃಂದಾವನ, ಈ ಬಾರಿ ಬಂದ ಹಣದಲ್ಲಿ ನ್ಯೂಜೆರ್ಸಿಯ Food Bank ಒಂದಕ್ಕೆ ಹಾಲು, ಸಿರಿಯಲ್, ಪಿನಟ್ ಬಟರ್ ಹಾಗು ಪಾಸ್ತ ವನ್ನು ದಾನಮಾಡಿತು ಎಂದು ಸ್ಪೂರ್ತಿ ತಂಡದವರು ತಿಳಿಸಿದರು. ನ್ಯೂಜೆರ್ಸಿಯ ಬೃಂದಾವನದಲ್ಲಿ ಇದೇ ರೀತಿಯಲ್ಲಿ ಸಾಂಸ್ಕೃತಿಕ ಹಾಗು ದಾನ ಧರ್ಮ ಕಾರ್ಯಕ್ರಮಗಳು ಮುನ್ನಡೆಯಲಿ ಎನ್ನುವ ಆಕಾಂಕ್ಷೆ, ಕೋರಿಕೆ...ಜೈ ಬೃಂದಾವನ..ಜೈ ಸ್ಫೂರ್ತಿ ತಂಡ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X