ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಲೆಂಡಿನಲ್ಲಿ ಕಳೆಕಟ್ಟಿದ ಗಣೇಶನ ಹಬ್ಬದ ಆಚರಣೆ

By ವರದಿ : ಪ್ರಕಾಶ್ ರಾಜಾರಾವ್
|
Google Oneindia Kannada News

Dance programme by Maori peopleಈ ನಾಡಿನ ಮೂಲ ನಿವಾಸಿಗಳಾದ ಮಾವೊರಿ ಜನಾಂಗದ ಶರೊನ್ ಕರೌನ ಮತ್ತು ಅವರ ಕುಟುಂಬದವರು ದಿನಾಂಕ 20ನೇ ಸೆಪ್ಟೆಂಬರ್ 2008ರಂದು ಕನ್ನಡ ಕೂಟ ಆಯೋಜಿಸಿದ ಗಣೇಶನ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಧುರ ಮಾವೊರಿ ಸಂಗೀತ ಮತ್ತು ಪ್ರಸಿದ್ಧ ರುದ್ರ ರಮಣೀಯ ಯುದ್ಧ ನೃತ್ಯ ಕಾಪಾ ಹಾಕಾಗಳಿಂದ ಸಭಿಕರ ಮನ ಸೆಳೆದರು. ಅವರ ತಂಡದವರ ಆಹ್ವಾನದ ಮೇರೆಗೆ ಕನ್ನಡದ ಮಕ್ಕಳೂ ವೇದಿಕೆಯ ಮೇಲೇರಿ ಹಾಡಿ ನರ್ತಿಸಿದಾಗ ಎರಡು ಪ್ರಾಚೀನ ಸಂಸ್ಕೃತಿಗಳ ಸಂಗಮವಾಯಿತು.

ನಮ್ಮ ಮಾವೊರಿ ಸಹೋದರ ಸಹೊದರಿಯರು ಇನ್ನು ಮುಂದೆಯು ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಆಹ್ವಾನವಿತ್ತು ಅತಿಥಿ ಕಲಾವಿದರನ್ನು ಹಿರಿಯ ಕನ್ನಡಿಗರಾದ ಪ್ರಾಚಾರ್ಯ ಎಂ.ಕೆ. ವಾಮನಮೂರ್ತಿ ಅವರು ಸನ್ಮಾನಿಸಿದರು. ಸಾಂಪ್ರದಾಯಿಕ ಗಣೇಶನ ಪೂಜೆಮಾಡಿ ಎಲ್ಲರಿಗೂ ಶುಭ ಹಾರೈಸಿದರು ಬೆಂಗಳೂರು ಪ್ರಭಾಕರ ಅವರು. ಶರಣು ಬೆನಕ ಎಂದು ಎರಡೂವರೆ ವರ್ಷ ವಯಸ್ಸಿನ ಮೋಹಕ ಬಾಲೆ ತನ್ವಿ ಕಿಡಿಯಪ್ಪ ಪ್ರಾರ್ಥಿಸಿ ಸುಧೀರ್ಘ ಕರತಾಡನ ಗಳಿಸಿದ. ಕೂಟದ ಉಪಾಧ್ಯಕ್ಷರಾದ ಪ್ರಕಾಶ್ ಬಿರಾದರ್ ಅವರು ಸ್ವಾಗತ ಭಾಷಣ ಮಾಡಿದರು.

ನಂತರ ಗಾಯಕಿಯರಾದ ವರ್ಷಾ ಪೈ, 'ಗಜವದನ ಬೇಡುವೆ', ಅಖಿಲಾ ಸತೀಶ್ ಪುತ್ತಿಗೆ 'ನಂಬಿದೇ ನಿನ್ನ ನಾದ ದೇವತೆಯೆ' [ಸಂಧ್ಯಾರಾಗ ಚಿತ್ರದ ಅಮರ ಗೀತೆ], ಚೈತ್ರಾ ರವಿಶಂಕರ್ ಗಾಳೀಪಟ ಚಿತ್ರದ 'ತ ಧೀಂ ತನನಾ' ಗೀತೆಗಳನ್ನು ಹಾಡಿ ಸಂಗೀತದ ರಸದೌತಣ ನೀಡಿದರು. ಕೃಷ್ಣಾ ನಾಗರಾಜ್ ಅವರ 'ಬಾರೇ ಬಾರೇ ಚಂದದ ಚೆಲುವಿನ ತಾರೆ' ಮತ್ತು ಶ್ರೀಧರ್‌ನಾಥ್ ಅವರ 'ಪಂಚಮ ವೇದ ಪ್ರೇಮದ ನಾದ' ಗೀತೆಗಳು ಪಿ.ಬಿ.ಶ್ರೀನಿವಾಸ್ ಅವರ ನೆನಪು ತಂದವು. ಕನ್ನಡ ಕೂಟ ತನ್ನ ಸದಸ್ಯರಿಗೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಸತ್ಯ ಕುಮಾರ್ ಕಟ್ಟೆ ರಚಿಸಿದ 'ಬಾರಣ್ಣ' ವೃಂದಗೀತೆಗೆ ಸತ್ಯ ಅವರೊಡನೆ ದನಿಗೂಡಿಸಿದವರು ಪವನ್ ಕೌಶಿಕ್, ಹರ್ಷಾ ಮತ್ತು ಅವಿನಾಶ್. ಆನಂದ್ ವಸಿಶ್ಟ್ ಅವರ ತಬಲಾ ಮತ್ತು ಮಿಮಿಕ್ರಿ ಕಲಾವಿದ ಬ್ರಹ್ಮಣ್ಯಪತಿ ಶಾಸ್ತ್ರಿ ಅವರುಗಳು ಎಲ್ಲರನ್ನು ರಂಜಿಸಿದರು. ಸೊಗಸಾದ ರೇಶ್ಮೆ ಸೀರೆಯುಟ್ಟು ಸ್ತ್ರೀವೇಶಧಾರಿಯಾದ ಪ್ರಭಾಕರ್ ಮತ್ತು ರವಿ ಶಂಕರ್ ಅವರು ಕಮಾನು ಡಾರ್ಲಿಂಗ್ ಹಾಡಿಗೆ ಮನಮೋಹಕವಾಗಿ ನರ್ತಿಸಿದರು.

ಪ್ರಸಕ್ತ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಿರಿಯ ಸದಸ್ಯರಿಂದ ಬಹುಮಾನ ವಿತರಿಸಲಾಯಿತು. ಕಿರಿಯರ ವಿಭಾಗದಲ್ಲಿ ಪ್ರಜ್ವಲ್ ಮತ್ತು ಹಿರಿಯರ ವಿಭಾಗದಲ್ಲಿ ಸುಹಾಸ್ ಶಾನುಭೋಗ್ ಹೆಚ್ಚು ಬಹುಮಾನಗಳಿಸಿದರು. ನೂತನ ಕಾರ್ಯಕಾರಿ ಸಮಿತಿಯ ರಚನೆ ಮತ್ತು ಹಿಂದಿನ ಸಾಲಿನ ವರದಿಯ ಅನುಮೋದನೆ ಎಲ್ಲವೂ ಸುಗಮವಾಗಿ ನಡೆಯಿತು. ಅಮೃತಾ ವಿಶ್ವಕರ್ಮ ಮತ್ತು ವರ್ಷಾ ಪೈ ಅವರುಗಳು ಕಾರ್ಯಕ್ರಮ ನಿರೂಪಣೆಯನ್ನು ಉತ್ತಮವಾಗಿ ನಿರ್ವಹಿಸಿದರು. ಕಾರ್ಯದರ್ಶಿ ಚಕ್ರಪಾಣಿ ಅವರ ವಂದನಾರ್ಪಣೆಯ ನಂತರ ಕರ್ನಾಟಕದ ನಾಡ ಗೀತೆ, ನ್ಯೂಜಿಲೆಂಡ್ ಮತ್ತು ಭಾರತದ ರಾಷ್ಟ್ರಗೀತೆ ಹಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X