ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜರ್ಸಿಯಲ್ಲಿ ಗಣ್ಪತಿ ಕೂರ್ಸಿದ್ರು

By Staff
|
Google Oneindia Kannada News

Ganesha Fest in NewJersy by HS Satish kumarದಿನಾಂಕ ಸೆಪ್ಟೆಂಬರ್ 14 ರಂದು ನ್ಯೂ ಜೆರ್ಸಿಯ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ - ಬೃಂದಾವನದವರು ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಧ್ಯಾಹ್ನ ಎರಡೂವರೆಯ ಹೊತ್ತಿಗೆ ಸಾಂಪ್ರದಾಯಿಕ ಗಣೇಶ ಪೂಜೆಯಿಂದ ಆರಂಭಗೊಂಡ ಕಾರ್ಯಕ್ರಮ ರಾತ್ರಿ ಹತ್ತು ಘಂಟೆಯವರೆಗೂ ಹಲವಾರು ಕಲಾವಿದರನ್ನು ವೇದಿಕೆ ಮೇಲೆ ವಿಜೃಂಭಿಸುವ ಮೂಲಕ, ಸ್ಥಳೀಯ, ದೂರದಿಂದ ಬಂದ ಹಾಗೂ ಹೊರ ನಾಡಿನ ಕನ್ನಡಿಗರನ್ನು ಪರಿಚಯಿಸುವ ಮೂಲಕ, ಅಲ್ಲದೇ ಮಕ್ಕಳಿಂದ ಹಿಡಿದು ಎಲ್ಲರಿಗೂ ಮುದ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ನೋಂದಾಯಿತ ಸದಸ್ಯರು ಹಾಗೂ ಅತಿಥಿಗಳೂ ಸೇರಿ ಸುಮಾರು ನಾಲ್ಕು ನೂರು ಜನ ಸೇರಿದ್ದು ಬೃಂದಾವನದ ಕಾರ್ಯಕ್ರಮದ ದಾಖಲೆಗಳಲ್ಲೊಂದು.

ಲೇಖನ : ಹೊಸನಗರ ಸತೀಶ್ ಕುಮಾರ್, ನ್ಯೂಜರ್ಸಿ

ಸಮಯಕ್ಕೆ ಸರಿಯಾಗಿ ಹಾಗೂ ಕಾರಣಾಂತರಗಳಿಂದ ತಡವಾಗಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಕಂಪ್ಯೂಟರಿನಲ್ಲಿ ಅವರ ನೋಂದಾವಣೆಯನ್ನು ಪರಾಮರ್ಶಿಸಿ ಅತಿಥಿಗಳಿಗೆ ತಮ್ಮ ನೇಮ್ ಟ್ಯಾಗ್ ಅನ್ನು ಕೊಟ್ಟವರು ಸ್ವಾಗತ ಸಮಿತಿಯವರು. ಗಣಪನ ಪೂಜೆಗೆ ಬಂದವರಿಗೆ ಗಣಕದ ಸಹಾಯದಿಂದ ಹೆಸರನ್ನು ಗುರುತಿಸಿ ಗುರುತಿನ ಚೀಟಿ ನೀಡಲಾಗುತ್ತಿದ್ದುದರಿಂದ ಅದರಲ್ಲಿ ಯಾವುದೇ ವಿಘ್ನವೂ ಇರಲಿಲ್ಲ ಎಂದರೆ ಸರಿ.

ಮೊದಲನೆ ಕಾರ್ಯಕ್ರಮದ ಅಂಗವಾಗಿ ವೇದಿಕೆ ಮೇಲೆ ಗಣಪತಿ ಪೂಜೆಯನ್ನು ಮಕ್ಕಳಿಂದ ನೆರವೇರಿಸಲಾಯಿತು. ಗಣಪನ ಮುಂದೆ ಎರಡು ಸಾಲಿನಲ್ಲಿ ಮಕ್ಕಳು "ಓಂ ಗಣೇಶಾಯ ನಮಃ"ದಿಂದ ಆರಂಭಿಸಿ ಗಣಪೂತಿಯನ್ನು ವಿಶೇಷವಾಗಿ ಪೂರೈಸುವುದನ್ನು ನೋಡಲು ಆಯಾ ಮಕ್ಕಳ ಪೋಷಕರಷ್ಟೇ ಅಲ್ಲದೇ ಎಲ್ಲರೂ ಸಭೆಯಲ್ಲಿ ಸೇರಿಕೊಂಡಿದ್ದರು. ಮಕ್ಕಳಿಗೆ ಗಣೇಶ ಸ್ತೋತ್ರದ ಒಂದೊಂದೇ ಸಾರಾಂಶವನ್ನು ಬಿಡಿ ಬಿಡಿಯಾಗಿ ವಿವರಿಸಿ ಅವರನ್ನು ಪೂಜೆಯಲ್ಲಿ ತಲ್ಲೀನರಾಗಿಸುವುದರಲ್ಲಿ ಡಾ. ಎಂ.ಜಿ.ಪ್ರಸಾದ್ ಯಶಸ್ವಿಯಾಗಿದ್ದರು. ಅವರು ಹೇಳಿಕೊಟ್ಟಂತೆ ಮಕ್ಕಳು ತಮ್ಮ ಮುಂದಿದ್ದ ತಟ್ಟೆಗಳಲ್ಲಿ ಪ್ರೀತಿಯಿಂದ ಬೊಂಬೆ ಗಣಪನನ್ನು ಪೂಜಿಸಿದರು. ವರ್ಷಕ್ಕೊಮ್ಮೆ ಜರುಗುವ ಕಾರ್ಯಕ್ರಮದ ಇದೊಂದೇ ಎಳೆ ಸಾಕು ಇಲ್ಲೇ ಹುಟ್ಟಿ ಬೆಳೆದ ಮಕ್ಕಳಲ್ಲಿ ನಮ್ಮತನವನ್ನು ಬಿತ್ತಿ ಬೆಳೆಸಲು ಎನ್ನುವಂತಿತ್ತು ಗಣೇಶ ಪೂಜೆ.

ಈ ಗಣೇಶೋತ್ಸವದ ವಿಶೇಷವೆಂದರೆ ಸ್ಥಳೀಯ ಕಾರ್ಯಕ್ರಮಕ್ಕೆ ದೂರದಿಂದ ಬಂದ ಅತಿಥಿ ಬಳಗದ ಕಲಾವಿದರು. ವಾಷಿಂಗ್ಟನ್ ಪ್ರದೇಶದಿಂದ ಆಗಮಿಸಿದ ಕುಮಾರಿ ರಂಜಿನಿ, ಕುಮಾರಿ ಸಾರಿಣಿ ಹಾಗೂ ಶ್ರೀಮತಿ ಉಮಾ ಇಟ್ಟಿಗಿಯವರು ಭರತ ನಾಟ್ಯ ಕಾರ್ಯಕ್ರಮಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ವರ್ಷಾನುಗಟ್ಟಲೆ ಪಟ್ಟ ಪರಿಶ್ರಮವೂ ಹಾಗೂ ಕಲಾವಿದರ ತನ್ಮಯತೆಯೂ ಮೇಳೈಸಿದ ನೃತ್ಯಗಳಲ್ಲಿ ಪ್ರೇಕ್ಷಕರು ಭರತ ನಾಟ್ಯದ ಹಲವು ಉನ್ನತ ಭಂಗಿಗಳನ್ನು ನೋಡಿ ಆನಂದಿಸಿದರು.

ಕುಮಾರಿ ತೇಜಸ್ವಿ ಗೌಡ ಅವರ ಹಿಂದೂಸ್ತಾನಿ ಗಾಯನವೂ ಹಾಗೂ ಶ್ರೀ ಸಾಮ್ರಾಟ್ ಕಕ್ಕೇರಿಯವರ ತಬಲವಾದನವೂ ಮುದ ನೀಡಿತು. ಹಿಂದೂಸ್ತಾನಿ ಗಾಯನ ತನ್ನದೇ ಭಾವಪರವಶತೆಯಲ್ಲಿ ಶ್ರೋತೃಗಳನ್ನು ರಂಜಿಸಿದರೆ ಸಾಮ್ರಾಟ್ ಅವರು ತೀನ್‌ತಾಲ್ ಇಂದ ಆರಂಭಗೊಂಡು ಇಬ್ಬರು ಸ್ನೇಹಿತರ ನಡುವಿನ ಸಂಭಾಷಣೆ, ಹಾರ್ಲಿ ಡೇವಿಡ್‌ಸನ್ ಮೋಟಾರ್ ಸೈಕಲ್ ಶಬ್ದವನ್ನೂ ತಬಲದಲ್ಲಿ ಕೇಳಿಸಿ ತೋರಿಸಿದ್ದು ಪ್ರೇಕ್ಷರನ್ನು "ವಾರೆ ವಾಹ್" ಎನ್ನುವಂತೆ ಮಾಡಿತು. ತಮಗೊದಗಿಸಿದ ಕಾಲಾವಕಾಶದಲ್ಲಿ ಪ್ರೇಕ್ಷಕರನ್ನು ಹೊಸ ತಬಲಾ ಪ್ರಯೋಗಳಲ್ಲಿ ಕಟ್ಟಿ ಹಿಡಿದು ಹಾಕಿದ ಯಶಸ್ಸು ಸಾಮ್ರಾಟ್ ಅವರದು.

ಇಷ್ಟೆಲ್ಲಾ ಆಗುತ್ತಿದ್ದಂತೆ ಆಹಾರ ಕಮಿಟಿಯವರು ಸುಮ್ಮನೇನಿರಲಿಲ್ಲ. ಅತಿಥಿಗಳಿಗೆ ಸ್ನ್ಯಾಕ್, ಕಾಫಿ, ನೀರು, ಲೆಮನೇಡ್ ಮೊದಲಾದವುಗಳನ್ನು ಪೂರೈಸುತ್ತಲೇ ಇದ್ದರು. ಎಲ್ಲರಿಗೂ ಸಾಕಾಗುವಷ್ಟು ಇದ್ದ ಪದಾರ್ಥಗಳು ಹಾಗೂ ಬೇಕಾದಷ್ಟು ಸ್ಥಳಾವಕಾಶ ಯಾವುದೇ ತೊಂದರೆಗಳಿಗೆ ಎಡೆ ಮಾಡಿಕೊಡಲಿಲ್ಲ. ಸ್ನ್ಯಾಕ್ ಆದ ನಂತರ ಬಾಯಲ್ಲಿ ನೀರೂರುಸುವ ಪಕ್ಕೋಡ, ವಡೆ, ಕೇಸರಿ ಬಾತ್ ಹಾಗೂ ಕಡಲೆ ಕಾಳು ಉಸುಳಿ ತಯಾರಾಗಿ ಇದ್ದು ತಮ್ಮ ಸೇವೆಯನ್ನು ಸಮರ್ಪಿಸಿಕೊಂಡವು.

"ಈಗ ಶ್ರೀ ನಾಗಾಭರಣ ಮತ್ತು ತಂಡದವರಿಂದ ಹಲ್ಲೋ ನಾಟಕ" ಎಂದು ವೇದಿಕೆಯಲ್ಲಿ ಶಬ್ದ ಮಾರ್ದನಿಗೂಡುತ್ತಿದ್ದಂತೆ ಸಾಕಷ್ಟು ಪ್ರೇಕ್ಷಕರು ತಮ್ಮ ತಮ್ಮ ಸ್ಥಳಗಳಿಗೆ ಆಸಕ್ತಿಯಿಂದ ಲಗುಬಗೆಯಲ್ಲಿ ಹಿಂತಿರುಗುವ ದೃಶ್ಯ ಮುಂಬರುವ ಕಾರ್ಯಕ್ರಮದ ಮಹತ್ವ ಸಾರುವಂತಿತ್ತು. ಶ್ರೀ ನಾಗಾಭರಣ, ಅವರ ಶ್ರೀಮತಿ, ಹಾಗೂ ಕಲ್ಪನಾ ನಾಗನಾಥ್ ಅವರು ಮುಖ್ಯ ಪಾತ್ರವಹಿಸಿದ್ದರು. ಮೊಬೈಲ್ ಶಾಸ್ತ್ರಿಗಳ ವಿಶೇಷ ಪಾತ್ರದಲ್ಲಿ ಭಾಗವಹಿಸಲೆಂದು ವರ್ಜೀನಿಯಾದಿಂದ ಶ್ರೀ ಸಂಜಯ್ ರಾವ್ ಆಗಮಿಸಿದ್ದರು. ನಾಗಾಭರಣರವರನ್ನು ನಿರ್ದೇಶಕರಾಗಿ ಬಹಳಷ್ಟು ಮಂದಿ ಬಲ್ಲರು ಆದರೆ ಅವರಲ್ಲಿನ ರಂಗಭೂಮಿಯ ಕಲಾವಿದ ಇನ್ನೂ ಜೀವಂತವಾಗಿಯೇ ಇದ್ದಾನೆ ಎಂದೇ ಹೇಳಬೇಕು. ಸ್ಥಳೀಯ ನಾಟಕಗಳಲ್ಲಿ ಭಾಗವಹಿಸಿ ನಮ್ಮದೇ ಹೆಚ್ಚು ಎಂದು ಮೆರೆಯುವ ನಮ್ಮಂತಹ ಅನಿವಾಸಿಗಳಿಗೆ ಒಂದು ಸ್ಟ್ಯಾಂಡರ್ಡ್ ಅನ್ನು ತೋರಿಸುವ ಹಾಗಿತ್ತು ನಾಗಾಭರಣ ಅವರ ಕಲಾ ನೈಪುಣ್ಯತೆ. ಡೈಲಾಗ್ ಡೆಲಿವರಿ, ಹಾವ-ಭಾವ, ನಟನೆ ಹಾಗೂ ವೇದಿಕೆಯಲ್ಲಿ ಚುರುಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವಲ್ಲಿ ಈ ನಾಟಕದ ಕಲಾವಿದರು ಶ್ರೀ ನರಸಿಂಹ ಮೂರ್ತಿಯವರ ನಾಟಕಕ್ಕೆ ಮತ್ತೊಂದು ಆಯಾಮವನ್ನು ಒದಗಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀ ಶ್ರೀನಿವಾಸ್ ಕಪ್ಪಣ್ಣ ಹಾಗೂ ಶ್ರೀ ನಾಗಾಭರಣ ತಂಡದವರಿಂದ ದಿವಂಗತ ಬಿ.ವಿ.ಕಾರಂತರನ್ನು ಅವರ ಧಾಟಿಯಲ್ಲಿ ರಂಗಗೀತೆಗಳನ್ನು ಹಾಡುವುದರ ಮೂಲಕ ವಿಶೇಷವಾಗಿ ಸ್ಮರಿಸಿಕೊಳ್ಳಲಾಯಿತು. "ಗಜವದನ ಹೇರಂಭ" ಹಾಡಿನಿಂದ ಆರಂಭವಾದ ಕಾರ್ಯಕ್ರಮ ಶ್ರೋತೃಗಳನ್ನು ತಲ್ಲೀನರಾಗಿಸಿತ್ತು. ರಂಗಗೀತೆಗಳಿಗೆ ಹಿನ್ನೆಲೆಯನ್ನು ಶ್ರೀ ಕಪ್ಪಣ್ಣರವರು ಒದಗಿಸಿದರೆ ಶ್ರೀ ನಾಗಾಭರಣ ತಂಡ ಕಾರಂತರ ಆದೇಶದ ಮೋಡಿಗೆ ಒಳಗಾದವರಂತೆ ಪದ್ಯದ ಮಟ್ಟುಗಳನ್ನು ಕೇಳುಗರಲ್ಲಿ ಹಂಚಿಕೊಂಡಿದ್ದು ಎಂಥವರಿಗೂ ಹೆಮ್ಮೆ ಮೂಡಿಸುವಂತಿತ್ತು.

ಮಧ್ಯಂತರ ಕಾಫಿಗೋಸ್ಕರವೂ ಕಾರ್ಯಕ್ರಮಗಳು ನಿಲ್ಲದೇ ಮುಂದೋಡುತ್ತಲೇ ಇದ್ದವು. ಚಿನ್ನರ ಅಂಗಳದ ಸಾಮೂಹಿಹ ಗಾಯನಗಳು, ಕನ್ನಡ ಕಲಿಯ ಪಂಚತಂತ್ರದ ನೀತಿಕಥೆಗಳು, ಹಾಗೂ ಸಮಾರಂಭದುದ್ದಕ್ಕೂ ಅಲ್ಲಲ್ಲಿ ಭಾಗವಹಿಸುತ್ತಿದ್ದ ಮಕ್ಕಳು ತಮ್ಮ ಪಾಲಿನ ಕರ್ತ್ಯವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರು ಇಲ್ಲೇ ಹುಟ್ಟಿ ಬೆಳೆದಿದ್ದರೇನಂತೆ ಮಂತ್ರಗಳನ್ನು ಉಚ್ಚರಿಸುವಲ್ಲಾಗಲೀ ಕನ್ನಡವನ್ನು ಕಲಿತು ನಾಟಕ ಮೊದಲಾದ ಕಾರ್ಯಕ್ರಮಗಳಲ್ಲಿ ತಾವು ಹಿಂದುಳಿದಿಲ್ಲ ಎಂದು ತೋರಿಸುವಂತಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದವರು ಶ್ರೀ ಜಯಂತ್ ಕಾಯ್ಕಿಣಿ. ಕರ್ನಾಟಕದಿಂದ ಎರಡು ದಶಕಗಳಿಗೂ ಹೆಚ್ಚು ದೂರವಿದ್ದು (ಬಾಂಬೆಯಲ್ಲಿ ನೆಲೆಸಿ) ಒಂದು ರೀತಿಯಲ್ಲಿ ಅವರೂ ನಮ್ಮ ಅನಿವಾಸಿತನವನ್ನ ಬಹಳ ಹತ್ತಿರದಿಂದ ಬಲ್ಲವರು. ತಮ್ಮ ಹತ್ತೊಂಭತ್ತನೇ ವರ್ಷದಲ್ಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದು ಮುಂದೆ ಅದೇ ಪ್ರಶಸ್ತಿಯನ್ನು ನಾಲ್ಕು ಭಾರಿ ಪಡೆದು ತಮ್ಮ ಸಣ್ಣ ಕಥಾಸಂಕಲನದಿಂದ ಜನಜನಿತರಾದ ಕಾಯ್ಕಿಣಿಯವರನ್ನು "ಮುಂಗಾರು ಮಳೆ" ಹಾಡಿನ ಲೇಖಕರೆಂದು ಇತ್ತೀಚಿನವರು ಗುರುತಿಸುವುದು ಒಮ್ಮೆ ಮುಜುಗರ ಮೂಡಿಸಿದರೂ "ಅದರಲ್ಲಿ ತಪ್ಪೇನಿದೆ?" ಎಂದು ಸಮಜಾಯಿಷಿಯನ್ನು ಕೊಟ್ಟುಕೊಳ್ಳುವ ಪರಿಸ್ಥಿತಿ ನನ್ನದಾಗಿತ್ತು. ಕಾಯ್ಕಿಣಿಯವರ ಮಾತಿನಲ್ಲಿ ಕವನ, ಕಾವ್ಯ, ಸಾಹಿತ್ಯ ನಮ್ಮನ್ನು ಕಠಿಣ ಪರಿಶ್ರಮ ಹಾಗೂ ಮನಸ್ಥಿತಿಗಳಿಗೆ ಹೇಗೆ ಒಗ್ಗಿಸುತ್ತದೆ ಎನ್ನುವುದನ್ನು ಪ್ರೇಕ್ಷಕರನ್ನು ಬೇಂದ್ರೆ, ಕುವೆಂಪು ಹಾಗೂ ಕಾರಂತರ ನಿಜ ಜೀವನದ ಘಟನೆಗಳನ್ನು ಹಂಚಿಕೊಳ್ಳುವುದರ ಮೂಲಕ ಚಿಂತಿಸುವಂತೆ ಮಾಡಿದರು. ಅನಿವಾಸಿ ಭಾರತೀಯರನ್ನು ತಮ್ಮ ತಮ್ಮ ಕಾಯಕದಲ್ಲಿ ಪ್ರಗತಿಯನ್ನು ತಲುಪಿದವರು, ಕಷ್ಟ ಜೀವಿಗಳು ಎಂದು ಹೊಗಳಿದ ಕಾಯ್ಕಿಣಿ ಜೀವನದ ಕಷ್ಟವನ್ನು ಎದುರಿಸಲು ಸಾಹಿತ್ಯ, ಸಂಗೀತ ಬೇಕೇ ಬೇಕು ಎಂದು ಸಾರಿದರು. ರಾಜ್‌ಕುಮಾರ್ ಅವರ ಜೀವನ ಚರಿತ್ರೆಯಿಂದಲೂ ಆಯ್ದ ತುಣುಕುಗಳನ್ನು ಕಾಯ್ಕಿಣಿ ಕೇಳುಗರಲ್ಲಿ ಹಂಚಿಕೊಂಡರು, ಮಗುವಿನ ಮನಸ್ಸಿನಿಂದ ವಿಶಾಲ ಜಗತ್ತನ್ನು ನೋಡಬೇಕು ಎನ್ನುವುದಕ್ಕೆ ಅನೇಕ ದೃಷ್ಟಾಂತಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ದಾನಧರ್ಮದ ಕುರಿತು ವರದಿಯನ್ನು ಹಂಚಿಕೊಳ್ಳಲಾಯಿತು, ಬೃಂದಾವನ ಸಂಸ್ಥೆಯವರು ಹಲವಾರು ಕಾರ್ಯರ್ಕಮಗಳ ಮೂಲಕ ಹಾಗೂ ಅಕ್ಕದ ಮ್ಯಾಚಿಂಗ್ ಕಾಂಟ್ರಿಬ್ಯೂಷನ್ ಮೂಲಕ ಶಂಕರ ಕಣ್ಣಿನ ಪ್ರತಿಷ್ಠಾನಕ್ಕೆ ದಾನವನ್ನು ನೀಡಿದ ಬಗ್ಗೆ ವಿವರವನ್ನು ತಿಳಿಸಿದರು. ಜೊತೆಗೆ ಶಿವಮೊಗ್ಗದಲ್ಲಿ ಹೊಸದಾಗಿ ಆರಂಭವಾಗುವ ಕಣ್ಣಿನ ಆಸ್ಪತ್ರೆಗೆ ಬೃಂದಾವನ ಸಂಸ್ಥೆಯ ಹೆಸರು ಪ್ರಾಯೋಜಕರಾಗಿ ಬರಲಿದೆ ಎನ್ನುವುದನ್ನು ಸಭೆಯಲ್ಲಿ ಕರತಾಡನದಿಂದ ಸ್ವಾಗತಿಸಲಾಯಿತು. ಜೊತೆಗೆ ವೇದಿಕೆಯಲ್ಲಿ ಶ್ರೀ ನಾಗಾಭರಣ ತಂಡ, ಗುರುಕಿರಣ್ ತಂಡ ಹಾಗೂ ಸ್ಥಳಿಯ ಕಲಾವಿದರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಗುರುಕಿರಣ್ ತಂಡದ ಕಾರ್ಯಕ್ರಮದ ತಯಾರಿ ಆಗುವ ಹೊತ್ತಿಗೆ ಊಟದ ವ್ಯವಸ್ಥೆಯೂ ಸಾಗಿತ್ತು. ಹಬ್ಬದ ಊಟದ ಅಂಗವಾಗಿ ಕಡುಬು, ಚಪಾತಿ, ಪಲ್ಯಗಳು, ಉಪ್ಪಿನಕಾಯಿ, ಮೊಸರನ್ನ, ಪುಳಿಯೊಗರೆ ಹಾಗೂ ಕೋಸುಂಬರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ ಸುಮಾರು ಹತ್ತು ಘಂಟೆಯವರೆಗೆ ನಡೆದ ಗುರುಕಿರಣ್ ಹಾಡಿನ ಮೋಡಿಗೆ ಸ್ಥಳೀಯ ಯುವಕ-ಯುವತಿಯರ ನೃತ್ಯವೂ ಸೇರಿಕೊಂಡು ಮೋಜು ನೀಡಿತು.

ಒಟ್ಟಿನಲ್ಲಿ ಹೊರನಾಡಿನ ಕನ್ನಡಿಗರಿಗೆ ಸ್ಥಳೀಯ ಗಣೇಶೋತ್ಸವ ನಮ್ಮೂರಿನ ಗಣೇಶನ ಹಬ್ಬದ ದಿನಗಳನ್ನು ಮೆಲುಕು ಹಾಕುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತೆಂದರೆ ತಪ್ಪೇನೂ ಇಲ್ಲ. ವಿಘ್ನ ವಿನಾಶಕನ ಪೂಜೆಗೆ ಅನೇಕ ವಿಘ್ನಗಳು ಬರುವುದು ಸಹಜವಾದರೂ ಕಾರ್ಯಕ್ರಮದ ನಡುವೆ ಏರ್ ಕಂಡೀಷನ್ ವ್ಯವಸ್ಥೆ ಕೈ ಕೊಟ್ಟಿದೊಂದನ್ನು ಬಿಟ್ಟರೆ ಮತ್ಯಾವ ವ್ಯತ್ಯವೂ ಆಗಲಿಲ್ಲ ಎನ್ನುವುದು ಬೃಂದಾವನ ಸಂಸ್ಥೆಯ ಕಾರ್ಯಕಾರಿ ಸಮಿತಿಯವರು ಪ್ರತಿಯೊಂದನ್ನೂ ಎಷ್ಟು ವ್ಯವಸ್ಥಿತವಾಗಿ ನಡೆಸಿಕೊಟ್ಟರು ಎಂಬುದಕ್ಕೆ ಸಾಕ್ಷಿಯಾಗಿತ್ತು.
ಸಮಾರಂಭದ ಚಿತ್ರಗಳಿಗೆ 'ಬೃಂದಾವನ - ದಟ್ಸ್ ಕನ್ನಡ' ಫೋಟೋ ಗ್ಯಾಲರಿ ನೋಡಿ
ಬೆವರಿಳಿಸಿದ 'ಬೃಂದಾವನ' ಗುರುಕಿರಣ್ ರಸಸಂಜೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X