ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿ

By Staff
|
Google Oneindia Kannada News

ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿಬೆನಕ ತಂಡದ ಜೋಕುಮಾರಸ್ವಾಮಿ ನಾಟಕವನ್ನು ನೋಡಿರುವ ನಾನು ಅರ್ಧಂಬರ್ಧ ಮನಸ್ಸಿನಿಂದಲೇ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ದೆ. ತಡವಾಗಿ ಬಂದರೂ ಬಾಗಿಲಲ್ಲೇ ಸಂಕ್ರಾಂತಿಯ ಎಳ್ಳು ತಿಂದು ಅಲ್ಲೇ ಜಾಗ ಹುಡುಕಿ ಕುಳಿತಿದ್ದೆ. ನಾಟಕ ಪ್ರಾರಂಭವಾಯಿತು. ಜೋಕುಮಾರಸ್ವಾಮಿಗೆ ಜಯಕಾರ ಹೇಳುತ್ತಾ ಬಂದ ದಕ್ಷಿಣ ಕ್ಯಾಲಿಫೋರ್ನಿಯಾದ ರಂಗಧ್ವನಿ ತಂಡದ ಮೇಳ ಮೆರವಣಿಗೆ ಬಂದಾಗಲೇ ಸಿಲಿಕಾನ್ ವ್ಯಾಲಿಯ ಕನ್ನಡಿಗರಿಗೆ ಸಂಕ್ರಾಂತಿಯ ಕೊಡುಗೆಯಾಗಿ ಒಂದು ನಾಟಕದ ಅನುಭವದ ರುಚಿ ಉಂಡಿದ್ದರು.

ಆದರ್ಶ್, ಸಾಂತಾಕ್ಲಾರ

25ಕ್ಕೂ ಹೆಚ್ಚು ನಟರನ್ನೊಳಗೊಂಡ ಡಾ||ಚಂದ್ರಶೇಖರ ಕಂಬಾರರ ಜಾನಪದ ನಾಟಕ ಜೋಕುಮಾರಸ್ವಾಮಿ ತಂಡ ರಂಗ ಪ್ರವೇಶ ಮಾಡಿದಾಗಲೇ ತಿಳಿಯಿತು ನಾಟಕದ ಪ್ರೌಢತೆ. ಪ್ರಾರಂಭಕ್ಕೆ ಎಲ್ಲ ಕನ್ನಡ ಸಂಘಗಳಿಗೂ ಇರುವ ಪ್ರಾರಂಭಿಕ ಮೈಕಾಸುರನ ಹಾವಳಿ ಬಿಟ್ಟರೆ, ನಾ ನೋಡಿದ ನಾಟಕ ಬೆನಕ ತಂಡದ ನಾಟಕಕ್ಕಿಂತ ಕಡಿಮೆ ಏನೂ ಇರಲಿಲ್ಲ. ಸಮಯಾಭಾವದಿಂದ ಶಾರಿಯ ಪಾತ್ರವನ್ನು ಕಾಣದಿದ್ದರೂ ನಾಟಕದ ಅಮೆರಿಕನ್ನಡಿಗರಿಗೆ ಸ್ವಲ್ಪ ಇರುಸು ಮುರಸು ತರುವ ಸಂಭಾಷಣೆಗಳನ್ನು ಬಹಳ ಶ್ರಮವಹಿಸಿ ಎಲ್ಲೂ ಯಾರಿಗೂ ಮುರಸಾಗದ ರೀತಿ ತೆಗೆದು ಹಾಕಿದ್ದಾರೆ ನಿರ್ದೇಶಕರು. ಮೂಲ ಕಥೆಗೆ ಯಾವುದೇ ಧಕ್ಕೆ ಬರದಂತೆ ಮಾಡಿರುವ ಬದಲಾವಣೆಗಳೂ ನಿರ್ದೇಶಕರ ಚಾಕಚಕ್ಯತೆಯನ್ನು ಎತ್ತಿ ತೋರಿಸುತ್ತಿತ್ತು.

ಗೌಡನಾಗಿ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ವಲ್ಲೀಶ ಶಾಸ್ತ್ರಿಯವರ ಪ್ರೌಡ ಅಭಿನಯ ಎಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ಬಸಣ್ಯನಾಗಿ ಶ್ರೀನಿವಾಸ್, ಗುರ್ಯನಾಗಿ ವೆಂಕಿ ಅವರ ಅಭಿನಯ ಪಾತ್ರಗಳಿಗೆ ಜೀವ ತುಂಬಿತ್ತು. ಗೌಡ್ತಿಯಾಗಿ ವಿದ್ಯಾ ಮೆರೆದಿದ್ದರು. ಗೌಡತಿ ಮನೆಯಲ್ಲಿ ನಡೆಯುವ ಹಬ್ಬ ದೃಶ್ಯ ನಾಟಕಕ್ಕೆ ಮೆರಗನ್ನು ಕೊಟ್ಟಿತ್ತು. ಗುರ್ಯನ ಹಾಸ್ಯ ದೃಶ್ಯಗಳು, ನಾಟಕದ ನೃತ್ಯಗಳು ಪ್ರೇಕ್ಷಕರ ಮೆಚ್ಚುಗೆ ಪಡೆದು ಚಪ್ಪಾಳೆ ಗಿಟ್ಟಿಸಿತ್ತು. ರಂಗ ಮೇಲಿನ ಹಳ್ಳಿಯ ವಾತಾವರಣ ಮೂಡಿಸುವುದರಲ್ಲಿ ಅನಂತ ಕೃಷ್ಣ ಅವರ ರಂಗ ಸಜ್ಜಿಕೆ ಎಲ್ಲರನ್ನೂ ಮೂಕಸ್ಮಿತರನ್ನಾಗಿಸಿತ್ತು. ವೀಣಾ ಕೃಷ್ಣ ಮತ್ತು ಹರಿ ಅವರ ರಾಗ ಸಂಯೋಜನೆ ಮೂಲ ಕಂಬಾರ ಸಂಗೀತಕ್ಕೆ ಹೊಂದಿಕೊಂಡಿತ್ತು. ಮೇಳದ ಹಾಡುಗಳು ಎಲ್ಲರ ಬಾಯಲ್ಲೂ ಗುನುಗುತಿದ್ದವು.

ಕೆ. ವಿ.ಸುಬ್ಬಣ್ಣನವರು ಒಂದು ಮಾತು ಹೇಳುತ್ತಿದ್ದರಂತೆ ಅನ್ನುವುದನ್ನು ಓದಿ ತಿಳಿದಿದ್ದೆ. ಅದೇನೆಂದರೆ, ನಾಟಕ ಅರ್ಥವಾಗುವುದು ಮುಖ್ಯವಲ್ಲ,ಅದು ಅನುಭವವಾದರೆ ಸಾಕು ಅಂತ. ತುಂಬಾ ಮುಖ್ಯವಾದ ಮಾತು. ಪ್ರೇಕ್ಷಕರು ಹೊರ ಹೋಗುವಾಗ ರಾಮೇ ರಾಮಪಾ.. ಎಂದು ಸ್ನೇಹಿತರೊಡನೆ ಹೇಳುತ್ತಿದ್ದದ್ದೇ ಅದಕ್ಕೆ ಸಾಕ್ಷಿಯಾಗಿತ್ತು.

ಗಡುಸಾದ ಉತ್ತರ ಕರ್ನಾಟಕದ ಶೈಲಿಯ ಭಾಷೆ ಎಲ್ಲರಿಗೂ ಎಲ್ಲಾ ಸಂಭಾಷಣೆಗಳು ಪದ ಪದವೂ ಅರ್ಥವಾಗದಿದ್ದರೂ ನಾಟಕವನ್ನು ಅನುಭವಿಸಿದ ಭಾವನೆ ಪ್ರೇಕ್ಷಕರಲ್ಲಿ ಕಾಣ ಬರುತ್ತಿತ್ತು. ಬೆನಕ ತಂಡದಲ್ಲಿ ಅಭಿನಯಿಸಿದ ಅನುಭವದಿಂದ ರಂಗದ ಮೇಲೆ 25ಕ್ಕೂ ಹೆಚ್ಚು ನಟರು, ಹಾಡುಗಾರರನ್ನು ಕೂಡಿಹಾಕಿ ರಂಗದ ಮೇಲೆ ತಂದ ಗೌರವ ವಲ್ಲೀಶ ಶಾಸ್ತ್ರಿ ಅವರಿಗೆ ಸಲ್ಲುತ್ತದೆ. ಅಮೆರಿಕೆಯಲ್ಲಿ ಇಂತಹ ಸಾಹಸಕ್ಕೆ ಕೈಹಾಕುವುದೇ ಒಂದು ಮಹತ್ವದ ಕೆಲಸ. ಆ ಕೆಲಸದಲ್ಲಿ ರಂಗಧ್ವನಿ ಗೆದ್ದಿದೆ. ನಿರ್ದೇಶನದಲ್ಲಿ ವಲ್ಲೀಶ ಶಾಸ್ತ್ರಿ ಗೆದ್ದಿದ್ದಾರೆ.

ಅಭಿನಯದಲ್ಲಿ ಎಲ್ಲಾ ನಟರು ಗೆದ್ದಿದ್ದಾರೆ. ಹಾಡಿನಲ್ಲಿ ಎಲ್ಲಾ ಗಾಯಕರೂ ಗೆದ್ದಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಸಂಘದ ಸಂಕ್ರಾಂತಿಯ ಕಾರ್ಯಕ್ರಮವಾಗಿ ಮೂಡಿಬಂದ ಈ ನಾಟಕ ಅಮೆರಿಕನ್ನಡಿಗರನ್ನು ರಂಜಿಸಿತ್ತು. ಇದೇ ನಾಟಕ ಮತ್ತೊಮ್ಮೆ ಲಾಸ್ ಏಂಜಲಿಸ್‌ನಲ್ಲಿ ಫೆ.9ರಂದು ಪ್ರದರ್ಶಿಸಲಾಗುತ್ತಿದೆ. ಈ ದೇಶದಲ್ಲಿ ಒಂದು ಅಪೂರ್ವ ರಂಗ ಅನುಭವ ನೀಡಿದ ರಂಗಧ್ವನಿ ತಂಡಕ್ಕೆ ಅಭಿನಂದನೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X