ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಬೋನಿನೊಳಗೆ ಸಿಗಿಬಿದ್ದ ಚೀನಿ ಇಲಿ!

By Staff
|
Google Oneindia Kannada News

ಫೆ 7 ಮತ್ತು 8 ಚೀನಿಯರಿಗೆ ಹೊಸ ವರ್ಷದ ಸಂಭ್ರಮ. ಅವರ ಸಂಕೇತಗಳು ಹಾಗೂ ಅವರ ನಂಬಿಕೆಗಳ ಮೇಲೆ ಬೆಳಕು ಚೆಲ್ಲುವ ಸಾಂದರ್ಭಿಕ ಲೇಖನ. ಅಂತೆಯೇ, ಈ ಹೊಸ ವರ್ಷದ ಸಂಕೇತ ಇಲಿರಾಯನಾದುದರಿಂದ ಅವನ ಕುರಿತೂ ಒಂದಿಷ್ಟು.

ವಾಣಿ ರಾಮದಾಸ್, ಸಿಂಗಪುರ

ಗಾಂಗ್ ಸೀ ಫಾ ಚಾಯ್ಮನೇಲಿ ಮೂಷಿಕರು ಬಂದ್ರು ಅಂದ್ರೆ ಎಲ್ಲಿಲ್ಲದ ಹಿಡಿಶಾಪ, ಮರಿ ಹಾಕಿಬಿಡುತ್ತೆ ಎನ್ನುವ ಹೆದರಿಕೆ, ಬೋನ್ ಇಡೋದಾ ಅಥ್ವಾ ವಿಷ ಹಾಕೋದಾ, ಹೇಗೆ ಕೊಲ್ಲೋದು ಅಂತ ಪ್ಲಾನ್. ಯಾವ ಸಂದೀಲಿ ಸೇರಿಕೊಂಡಿದೆಯೋ ಹಾಳಾದ್ದು ಎಂದು ಹುಡುಕಿದ್ದೇ ಹುಡುಕಿದ್ದು. ಏನ್ ಮಾಡ್ತೀರಾ ಹಾಳಾದ್ದು ಆ ಮೌಸೇ ಹಾಗೆ, ಹುಡುಕುವಷ್ಟರಲ್ಲಿ ಪುಸಕ್ಕೆಂದು ಓಡಿರುತ್ತೆ..ಅದಕೆ ಚೆಲ್ಲಾಟ, ನಮಗೆ ಪ್ರಾಣ ಸಂಕಟ. ಚಿಕ್ಕದಾದರೂ ಅದು ಮಾಡುವ ಹಾವಳಿ ದೊಡ್ಡದು.ಈಟುದ್ದ ಬಾಲ ಇಟ್ಟುಕೊಂಡ ಚೋಟುದ್ದ ಮೂರ್ತಿ ನಿಜವಾಗಿ ಮನೇಲಿ ಉಪದ್ರವ ಮಾಡೋದೊಂದೇ ಅಲ್ಲ ಎಲೆಕ್ಟ್ರಾನಿಕ್ ರೂಪದಲ್ಲೂ ಮೌಸ್ ಆಗಿ ನಾನಿಲ್ಲದೆ ಏನನ್ನೂ ಹುಡುಕಲು ಸಾಧ್ಯವೇ ಇಲ್ಲ ಅನ್ನುತ್ತೆ.

ಇವತ್ತೇಕಪ್ಪಾ ಇಲಿಯ ಪಿರಿಪಿರಿ ಅಂತಂದ್ರೆ 2008ರ ಚೀನಿಯರ ಹೊಸ ವರುಷದ ಸಂಕೇತ ಇಲಿ,ಕೋಟ್ಯಂತರ ಚೀನಿಯರಿಗೆ ಹರುಷ ತರುವ ದಿನ. ಚೀನಾ, ಸಿಂಗಪುರ, ಮಲೇಶಿಯಾಗಳಲ್ಲಿ ಬೀದಿ, ಬೀದಿಗಳಲಿ ದೀಪಾಲಂಕಾರ. ಎಲ್ಲೆಲ್ಲೂ ಕೆಂಪು, ಕೆಂಪು ಹೊಸವರುಷದ ಸಂಭ್ರಮದ ಕಂಪು.

ನಮ್ಮಲ್ಲಿ ಹನ್ನೆರಡು ರಾಶಿಗಳು ಇರುವಂತೆ ಚೀನಿಯರಲ್ಲಿ ಹನ್ನೆರಡು ಪ್ರಾಣಿಗಳು ವರುಷದ ಸಂಕೇತ. ಮೊದಲಿಗೆ ಇಲಿ, ಎತ್ತು, ಹುಲಿ, ಮೊಲ, ಡ್ರಾಗನ್, ಹಾವು, ಕುದುರೆ, ಮೇಕೆ, ಕೋತಿ, ಕೋಳಿ, ನಾಯಿ ಮತ್ತು ಹಂದಿ ಹೀಗೆ ಪ್ರತಿ ವರುಷ ಈ ಪ್ರಾಣಿಗಳ ಸಂಕೇತಗಳು. ಆಯಾ ಪ್ರಾಣಿಗಳ ಮನೋಭಾವದಂತೆ ಆ ವರುಷಗಳಲ್ಲಿ ಶುಭಾ-ಶುಭಗಳು ನಡೆಯುತ್ತದೆ ಎಂದು ಚೀನಿಯರ ಬಲವಾದ ನಂಬಿಕೆ. ಅವರಲ್ಲಿ ಸರಿ ಸಂಖ್ಯೆ ಯಿನ್-ಸ್ತ್ರೀ ಹಾಗೂ ಬೆಸ ಸಂಖ್ಯೆ ಯಾಂಗ್-ಪುರುಷ. ಇಲಿ ಮೊದಲನೆಯ ಪ್ರಾಣಿ ಬೆಸ ಸಂಖ್ಯೆ ಪುರುಷ ಗುಂಪಿಗೆ ಸೇರಿದೆ. ಚೀನಿಯರು ಚಾಂದ್ರಮಾನ ಪರಿಪಾಲಕರು.

ಚೀನಿಯರು ಹೊಸ ವರುಷವನ್ನು ಬಹಳ ಮುತುವರ್ಜಿಯಿಂದ ಕೊಂಡಾಡುತ್ತಾರೆ.'ಗಾಂಗ್ ಸೀ ಫಾ ಚಾಯ್"- ಹೊಸವರುಷದ ಶುಭಾಶಯಗಳು ಎಂದರ್ಥ. ಮನೆಯ ಹಿರಿಯ ಕಿರಿಯರೆಲ್ಲರೂ ಕೂಡಿ "ಫ್ಯಾಮಿಲಿ ರಿ ಯೂನಿಯನ್" ಎಂದು ಹಬ್ಬದ ಹಿಂದಿನ ರಾತ್ರಿ ದೊಡ್ಡ ಔತಣ ಮಾಡಿ ಎಲ್ಲರು ಒಂದೆಡೆ ಸೇರುತ್ತಾರೆ. ಊಟವಾದ ಮೇಲೆ ಚಿಕ್ಕವರು ಹಿರಿಯರು ನೀಡುವ ಕೆಂಪು ಬಣ್ಣದ 'ಹಾಂಗ್-ಬಾವ್ ಪೊಟ್ಟಣಗಳಿಗಾಗಿ ಕಾಯುತ್ತಾರೆ. ಈ ಪೊಟ್ಟಣಗಳು ಮದುವೆ ಆಗದಿರುವ ಯುವಕ ಯುವತಿಯರಿಗಾಗಿ ಮತ್ತು ಚಿಕ್ಕ ಮಕ್ಕಳಿಗಾಗಿ ಮೀಸಲು.

' ಕೆಂಪು ಪೊಟ್ಟಣಗಳು ಗರಿ ಗರಿಯಾದ ನೋಟುಗಳು" ಪರಸ್ಪರರಿಗೆ ಉಡುಗೊರೆಯಾಗಿ ನೀಡುತ್ತಾರೆ. ಈ ಪೊಟ್ಟಣಗಳಲ್ಲಿ ಸಮ ಸಂಖ್ಯೆಗಳಲ್ಲಿ ಹಣ ಇಟ್ಟಿರುತ್ತಾರೆ. ಕಿತ್ತಳೆ, ಪಾಲಕ್, ಕಡಲೆಕಾಯಿ, ಗೋಡಂಬಿ, ಚಿಕ್ಕಿ, ಮೀನುಗಳು ಈ ಹಬ್ಬದ ಸಂದರ್ಭದಲಿ ಉಪಯೋಗಿಪ ಶುಭ ಪದಾರ್ಥಗಳು.

ಇಲಿ ಶ್ರಮಜೀವಿ, ಎಲ್ಲಿ ಬೇಕಾದರೂ ನುಸುಳುವ ಛಾತಿವಂತಿಕೆ, ಕುಟುಂಬದಲ್ಲಿ ಆಸ್ಥೆಯುಳ್ಳದ್ದು, ಎಲ್ಲವನ್ನೂ ಕೆದಡುವ ಸ್ವಭಾವ, ಕೊಚ್ಚಿ ಹಾಕುವ ಸ್ವಭಾವ, ಚಳಿಗಾಲಕ್ಕೆ ಆಹಾರ ಉಳಿಸುವ ಮುಂಜಾಗ್ರತೆಯುಳ್ಳದ್ದು. ಅತೀ ಮಹತ್ವಾಕಾಂಕ್ಷಿ, ತಂತ್ರಗಾರಿಕೆ ಹಾಗೂ ಕುಶಾಗ್ರ ಬುದ್ಧಿಯಿದ್ದು. ಎಲ್ಲವನೂ ಕಚ್ಚಿ, ಕೊಚ್ಚಿ ಹಾಕುವ ಸ್ವಭಾವ, ತೆರೆ ಮರೆಯಲಿ ನಿಂತು ಹೇಡಿತನ ತೋರುವ ಪ್ರಾಣಿ. ಇವು ಹುಟ್ಟಿದ ಐದು ವಾರಗಳಲ್ಲೇ ಸಂತಾನೋತ್ಪತ್ತಿ ಶಕ್ತಿ ಗಳಿಸುವುದು. ಹಾಗಾಗಿಯೇ ಶೀಘ್ರ ಸಂತತಿ ಬೆಳೆಸಲು ಕಾರಣವಾಗುತ್ತದೆ. ಈ ಗುಣಗಳು ಇಲಿ ವರುಷದಲಿ ಹುಟ್ಟುವ ಮಕ್ಕಳಲ್ಲಿ ಕಾಣಬರುವುದೆಂದು ಚೀನಿಯರ ಹೇಳಿಕೆ. ಹಿಂದಿನ ಕಾಲದಲ್ಲಿ ಹಡಗುಗಳಲ್ಲಿ ಇಲಿ ಇರದಿದ್ದಲ್ಲಿ ಚೀನಿಯರು ಆ ಹಡಗುಗಳಲ್ಲಿ ಪಯಣಿಸುತ್ತಿರಲಿಲ್ಲವಂತೆ. ಇತ್ತೀಚೆಗೆ ಸುನಾಮಿ ಸಂಭವಿಸಿದ ಪ್ರದೇಶಗಳಲ್ಲಿ ಮನೆ, ಹೋಟೆಲುಗಳಿಂದ ಇಲಿಗಳು ಒಮ್ಮೆಲೆ ಹೊರ ಬಂದಿತಂತೆ.

ಇಲಿ ನಂಬಿಕೆ: ಚೀನಿಯರ ಪ್ರಕಾರ ಮಾನವನಿಗೆ ಅಕ್ಕಿ ಉಡುಗರೆಯಾಗಿ ನೀಡಿದ, ರಾಶಿ ಚಕ್ರದಲ್ಲಿ ಮೊದಲಿಗ ಬ್ರೌನ್ ರ್ಯಾಟ್ ಶುಭಕಾರಕ. ಬಿಳಿ ಇಲಿ ಶುಭ, ಕಪ್ಪು ಇಲಿ ಅಶುಭ ರೋಮನ್ನರಿಗೆ. ಜಪಾನಿಯರಲ್ಲಿ ಕೂಡ ಬಿಳಿ ಇಲಿ ಅದೃಷ್ಟಕಾರಕ.

ರಾಜಸ್ಥಾನದ ಬಿಕಾನೇರಿಂದ 32 ಕಿ.ಮಿ. ದೂರದಲ್ಲಿರುವ ದೆಶ್ನೋಕ್ ಹಳ್ಳಿಯೊಂದರಲ್ಲಿ ಶ್ರೀ ಕಾರ್ನಿಮಾತಾ(ದುರ್ಗಾದೇವಿ) ದೇಗುಲ ಇಪ್ಪತ್ತು ಸಾವಿರ ಇಲಿಗಳ ನೆಲೆದಾಣವಾಗಿದೆ. 1900ರಲ್ಲಿ ಮಹಾರಾಜ ಗಂಗಸಿಂಗ್ ಈ ದೇಗುಲವನ್ನು ಕಟ್ಟಿಸಿದನಂತೆ. ಈ ದೇಗುಲ ಚರಣ್ ಎಂಬ ಒಂದು ಪಂಗಡಿಗರ ದೇಗುಲ. ಈ ದೇಗುಲದಲ್ಲಿ ಸಣ್ಣಿಲಿ, ದೊಡ್ಡಿಲಿ, ರೋಗಿಲಿ, ಕಪ್ಪಿಲಿ ಎಂದು ಇಲಿಗಳು ನಿರ್ಭಯವಾಗಿ ಓಡಾಡುತ್ತಿರುತ್ತದೆ. ಅಲ್ಲಿಗೆ ದಿನ ನಿತ್ಯ ಭೇಟಿ ನೀಡುವ ಕೆಲವರೊಂದಿಗೆ ಪ್ರಸಾದ ತಿನ್ನುತ್ತದೆ. ಇದರಿಂದ ಯಾರಿಗೂ ರೋಗ-ರುಜಿನಗಳು ಬಂದಿಲ್ಲವೆಂದು ಭಕ್ತಾರ್ಥಿಗಳ ಹೇಳಿಕೆ.

ಈ ತಾಣಕ್ಕೆ ವಿಶ್ವದಾದ್ಯಂತ ಪ್ರವಾಸಿಗರು ಬರುತ್ತಾರಂತೆ. ಇಲ್ಲಿ ಇಲಿಯನ್ನು ಹೊಡೆಯಬಾರದು ಮತ್ತು ಹಿಡಿಯಬಾರದು. ಅಕಸ್ಮಾತ್ ಬಿಳಿ ಇಲಿ ಕಾಣಿಸಿದಲ್ಲಿ, ಕಾಲಿನ ಮೇಲೆ ಹೋದಲ್ಲಿ ಅದೃಷ್ಟ ಖುಲಾಯಿಸುವುದಂತೆ. ಒಮ್ಮೆಲೆ ಇಪ್ಪತ್ತು ಸಾವಿರ ಇಲಿಗಳ ಮೇಳ ನೋಡಿ ಮನುಷ್ಯ ಖಲಾಸ್ ಆಗದಿದ್ದರೆ ಸಾಕು. ಈ ದೇಗುಲದ ಬಗ್ಗೆ ಹಾಗೂ ಇಲಿ ಜೊತೆಗಿನ ವಾಸದ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನಲಿನಲ್ಲಿ ಸಾಕ್ಷ್ಯ ಚಿತ್ರಗಳು ಪ್ರಸಾರಗೊಂಡಿತ್ತು.

ಇಲಿಗೂ-ಬೆಕ್ಕು ಬದ್ಧ ವೈರಿಗಳು ಏಕೆ?:ಇದಕ್ಕೆ ಉತ್ತರ ಇಲ್ಲೊಂದು ಚೀನಿಯರ ಕಥೆ...ಹನ್ನೆರಡು ರಾಶಿ ಚಕ್ರಗಳಲ್ಲಿ ಪ್ರಾಣಿಗಳನ್ನು ಸಂಕೇತವಾಗಿ ಮೂಡಿಸಲು ದೇವತೆಗಳು ಪ್ರಾಣಿಗಳ ಓಟದ ಪಂದ್ಯ ನಿಗದಿ ಪಡಿಸಿದರು. ಕಣ್ಮುಚ್ಚಿ ಕುಳಿತ ಮಾರ್ಜಾಲಕ್ಕೆ ಪಂದ್ಯದ ವೇಳೆ ಮರೆತು ಹೋಗಿ ಪುಸ ಪುಸನೆ ಸುಳಿದಾಡುತ್ತಿದ್ದ ಸುಂಡಿಲಿಯನು ಪ್ರಶ್ನಿಸಿತು "ಪಂದ್ಯದ ವೇಳೆ ಯಾವುದೆಂದು"?. ಬೆಕ್ಕಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಕಾಯುತ್ತಿದ್ದ ಕುತಂತ್ರ ಇಲಿ "ತಪ್ಪು ವೇಳೆ" ಹೇಳಿತು. ಪಂದ್ಯ ಪ್ರಾರಂಭಗೊಂಡಿತು. ಎಲ್ಲಾ ಪ್ರಾಣಿಗಳೂ ದೇವತೆಗಳ ಬಳಿ ದೌಡಾಯಿಸಿದವು. ನದಿ ದಾಟ ಬೇಕಾದ ಪರಿಸ್ಥಿತಿ. ಯಾರೂ ಅರಿಯದಂತೆ ಮೆಲ್ಲಗೆ ಎತ್ತಿನ ಬೆನ್ನನ್ನೇರಿ ಕುಳಿತು ಅನಾಯಾಸವಾಗಿ ನದಿ ದಾಟಿತು ಇಲಿ. ದಡ ಮುಟ್ಟಿದಾಕ್ಷಣ ಛಂಗನೆ ಎಗರಿ, ಸುಯ್ಯನೆ ದೇವತೆಯ ಬಳಿ ಓಡಿತು. ಮೊದಲು ಬಂದ ಇಲಿಗೆ ಚೀನಿಯರ ರಾಶಿ ಚಕ್ರದಲ್ಲಿ ಮೊದಲ ಸ್ಥಾನ, ಪ್ರಶಂಸೆ ಸಿಕ್ಕಿತು. ನಿಧಾನಿಸಿ ಬಂದ ಬೆಕ್ಕಿಗೆ ಸಿಕ್ಕಿದ್ದು ಪಂಗನಾಮ, ಬೈಗುಳ. ಇಲಿಯ ಕುತಂತ್ರತೆ ಅರಿತ ಬೆಕ್ಕು "ಸುಳ್ಳು ಹೇಳಿ, ಮೋಸ ಮಾಡಿ, ಗೆದ್ದ ಇಲಿಯನ್ನು ಕಂಡಾಗಲೆಲ್ಲ ಕೊಂದು ತಿನ್ನುವೆ" ಎಂದು ಶಪಥ ಮಾಡಿ ಅಂದಿನಿಂದ ಇಲಿಯನ್ನು ಆಜನ್ಮ ವೈರಿಯಾಗಿ ಪರಿಗಣಿಸಿತಂತೆ.

ಮಿಕಿ ಮೌಸ್..ಮಿಕಿ ಮೌಸ್ : ಇಂದು ಗಣಕ ಯಂತ್ರಕ್ಕೆ ಅಂಟಿನಿಂತ ಎಲೆಕ್ಟ್ರಾನಿಕ್ ಮೂಷಿಕ, ಪುರಾಣ ಕಥೆಯಲಿ ನಮ್ಮ ಗಣನಾಥನ ವಾಹನ. ಇಲಿ ಬಂತು ಅಂದ್ರೆ ಹುಲಿ ಬಂತು ಎಂದ್ರು, ಬೆಟ್ಟ ಅಗೆದು ಇಲಿ ಹಿಡಿತಾನಂತೆ ಎಂಬ ಗಾದೆಗಳಲೂ ಉಪಯುಕ್ತಗೊಂಡಿದೆ ಈ ಇಲಿ ಮಹಿಮೆ. ಸುಂಡಿಲಿಯ ಪ್ರಭಾವ ಎಷ್ಟು ಅಂದ್ರೆ ಇಂದಿನ ಮಕ್ಕಳಿಗೆ ಇಲಿ ಅಂದ್ರೆ ಓಹ್ "ಮಿಕಿ ಮೌಸ್" ಅಂತಾರೆ. ನಮ್ಮಂತ ಮಧ್ಯಮಿಗಳಿಗೆ ಇಲಿ ಕಥೆ ಅಂದ್ರೆ ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಬೆಕ್ಕೆಗೆ ಗಂಟೆ ಕಟ್ಟುವವರು ಯಾರು ನೆನಪಾಗುತ್ತೆ. ಛತ್ರಪತಿ ಶಿವಾಜಿಯ ಚಾಣಾಕ್ಷತೆಗೆ, ತಂತ್ರಗಾರಿಕೆ ಮೆಚ್ಚಿ "ಬೆಟ್ಟದ ಇಲಿ" ಎಂಬ ನಾಣ್ನುಡಿ ಕೂಡ ಇದೆ. 30-40ರ ದಶಕದಲ್ಲಿ ಮನೆಯಲ್ಲಿ ಇಲಿ ಸತ್ತು ಬಿತ್ತು ಎಂದರೆ ಪ್ಲೇಗ್-ಮಾರಿ ಬಂದಿತು, ಮನೆ, ಹಳ್ಳಿಗಳು ಸಾವಿನ ಮನೆಯಾದೀತು ಎಂದು ಹೆದರುತ್ತಿದ್ದರು. ಮೂರ್ತಿ ಚಿಕ್ಕದಾದರೂ ಮನುಜನಿಗೆ ಸದಾ ಸರ್ವದಾ ಉಪದ್ರವ ಕೊಡುವ ಈ ಪಾಪದ ಇಲಿ ಇಂದು ಯಾವುದೇ ವೈಜ್ಞಾನಿಕ ಪ್ರಯೋಗಕ್ಕೆ ಮೊದಲ ಬಲಿ.

ಪೂರಕ ಓದಿಗೆ:

ಚಿಟ್ಟಿಲಿ, ದಪ್ಪಿಲಿ, ಸಣ್ಣಿಲಿ, ಕಿವುಡಿಲಿ, ಕುಂಟಿಲಿ ನೋಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X