ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ರಾಮಾಯಣ ಕುರಿತು ವಿಶಿಷ್ಟ ಕಾರ್ಯಕ್ರಮ

By ಲೇಖನ : ಶರತ್ ಯಳಂದೂರು, ಇಲಿನಾಯ್, ಅಮೆರಿಕ
|
Google Oneindia Kannada News

ಕೌನ್ ಬನೇಗ ರಾಮಾಯಣ ಎಕ್ಸ್‌ಪರ್ಟ್! ಅರ್ರೆ ಇದ್ಯಾವ ಚಾನೆಲ್ಲಿನ ಕಾರ್ಯಕ್ರಮ? ಯಾವಗ ಬರುತ್ತೆ? ಬಹುಮಾನ ಎಷ್ಟು? ಅದರಲ್ಲಿ ಭಾಗವಹಿಸುವುದು ಹೇಗೆ? ಇನ್ನು ಅನೇಕ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಏಳುತ್ತಿರಬಹುದು ಬನ್ನಿ ಅದೆಲ್ಲಕ್ಕು ಉತ್ತರ ಪಡೆಯೋಣ.

ಹಿಂದೂ ಸ್ವಯಂಸೇವಕ ಸಂಘ (HSS)ದ ವತಿಯಿಂದ ಉತ್ತರ ಅಮೇರಿಕದಾದ್ಯಂತ ಮಕ್ಕಳಿಗಾಗಿ ಆಯೋಜಿಸಲ್ಪಟ್ಟ ಸ್ಪರ್ಧೆಯೇ ಕೌನ್ ಬನೇಗ ರಾಮಾಯಣ ಎಕ್ಸ್‌ಪರ್ಟ್ (KBRE). ಈ ಸ್ಪರ್ಧೆಯನ್ನು ಎರಡು ಹಂತದಲ್ಲಿ ಆಯೋಜಿಸಲಾಗಿತ್ತು. ಮೊದಲನೆಯದು ಅಂತರ್ಜಾಲದ ಮುಖಾಂತರ ಮತ್ತು ಎರಡನೆಯದು ಮುಖತಃ ಪರೀಕ್ಷೆ. 4ರಿಂದ 15 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಎರಡನೆಯ ಹಂತದ ಪರೀಕ್ಷೆಯನ್ನು ಮಕ್ಕಳ ವಯಸ್ಸಿಗನುಗುಣವಾಗಿ ಹಲವು ರೀತಿಯಲ್ಲಿ ನಡೆಸಲಾಯಿತು. ಉದಾ: ರಾಮಾಯಣದ ಚಿತ್ರಗಳಿಗೆ ಬಣ್ಣ ತುಂಬುವುದು, ರಾಮಾಯಣದ ಬಗೆಗಿನ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವುದು ಹಾಗು ರಾಮಾಯಣದ ಯಾವುದಾದರು ಒಂದು ಪ್ರಸಂಗವನ್ನು ಸಭಿಕರ ಮುಂದೆ ವಿವರಿಸಿ ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸುವುದು. ಎಲ್ಲಾ ಮಕ್ಕಳು ಅತ್ಯುತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಈ ಎಲ್ಲಾ ಸ್ಪರ್ಧೆಗಳ ಸಮಾರೋಪ ಸಮಾರಂಭ ಕಳೆದ ಭಾನುವಾರ (ಜೂನ್ 8ರಂದು) ಇಲಿನಾಯ್ ರಾಜ್ಯದ ಬ್ಲ್ಯೂಮಿಂಗ್ಟನ್ ಪಟ್ಟಣದ ಶಾಖೆಯವರು ಸುಮಾರು 60 ಮಕ್ಕಳನ್ನೊಳಗೊಂಡ ರಾಮಾಯಣ ನಾಟಕವನ್ನು ಪ್ರದರ್ಶಿಸಿದರು. ಸುಮಾರು ಎರಡು ತಿಂಗಳಿನಿಂದ ತಯಾರಿ ನಡೆಸಲಾಗಿದ್ದ ಈ ನಾಟಕದಲ್ಲಿ ರಾಮಾಯಣದ ಹಲವು ಪ್ರಮುಖ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು. ಅವುಗಳೆಂದರೆ ಬಾಲಕಾಂಡ, ವಿಶ್ವಾಮಿತ್ರರಲ್ಲಿನ ವಿದ್ಯಾಭ್ಯಾಸ, ಸೀತಾಸ್ವಯಂವರ, ರಾಮನವನವಾಸ, ಸೀತಾಪಹರಣ, ಲಂಕಾದಹನ, ಸೇತುಬಂಧನ, ಲಕ್ಷಣ - ಇಂದ್ರಜಿತ್ ನಡುವನ ಯುದ್ಧ, ಕುಂಭಕರ್ಣ ವಧೆ, ರಾವಣ ವಧೆ, ರಾಮನ ಅಯೋಧ್ಯಾ ಪ್ರವೇಶ, ಶ್ರೀರಾಮನ ಪಟ್ಟಾಭಿಷೇಕ.

ಪೂರ್ವ ಧ್ವನಿಮುದ್ರಿತ ಈ ನಾಟಕಕ್ಕೆ ಮಕ್ಕಳು ಮನಸೆಳೆಯುವ ಅಭಿನಯ ನೀಡಿ ನೆರೆದ್ದಿದ್ದ 600ಕ್ಕೂ ಹೆಚ್ಚು ಪ್ರೇಕ್ಷಕರನ್ನು ರಂಜಿಸಿದರು. ತಾಳಕ್ಕೆ ಸರಿಯಾದ ಮೇಳ ಬೆರೆತಂತೆ ಅಂದು ಧ್ವನಿ ಹಾಗು ಬೆಳಕಿನ ಸಂಯೋಜನೆ ಎಲ್ಲೂ ಕೈ ಕೊಡದೆ ಇಡೀ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿ ಬಂದಿತು.

ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಹಾಗು ಇಲ್ಲಿನ (ಅಮೇರಿಕೆಯ) ಸಮಾಜಕ್ಕೆ ನಮ್ಮ ಸಂಸ್ಕೃತಿ ಹಾಗು ಧರ್ಮಗ್ರಂಥಗಳನ್ನು ಪರಿಚಯಿಸುವ ಮೂಲೋದ್ದೇಶದಿಂದ ಕೂಡಿರುವ ಇಂತಹ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ ಉತ್ತರ ಅಮೇರಿಕಾ ಮಧ್ಯ ಪ್ರಾಚ್ಯ HSSನ ವಿಭಾಗದ ಉಪಾಧ್ಯಕ್ಷರಾದ ನಾರಯಣ್ ಚಾಂದಕ್‌ರವರು, ರಾಮಾಯಣದಲ್ಲಿನ ಮೌಲ್ಯಗಳನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹೇಗೆ ಉತ್ತಮ ಪ್ರಜೆಗಳಾಗಬಹುದೆಂದು ಹೇಳಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉತ್ತರ ಅಮೇರಿಕಾ HSSನ ಉಪಾಧ್ಯಾಯರಾದ ಸೌಮಿತ್ರ ಗೊಖಲೆಯವರು ಮಾತನಾಡುತ್ತಾ, ರಾಮಾಯಣದಲ್ಲಿ ಬರುವ ಜಟಾಯುವಿನ ಬಗ್ಗೆ ಪ್ರಸ್ತಾಪಿಸಿದರು. ಸೀತಾಪಹರಣದ ವಿರುದ್ಧ ಒಂದು ಸಣ್ಣಪಕ್ಷಿಯಾಗಿ ದೈತ್ಯ ರಾವಣನ ವಿರುದ್ಧ ಹೋರಾಡಿದ ಜಟಾಯುವಿನ ಪ್ರಸಂಗ ವಿವರಿಸಿ ಅನ್ಯಾಯ ಅಧರ್ಮದ ವಿರುದ್ಧ ಹೋರಾಡಲು ನಮಗೆ ದೇಹಬಲಕ್ಕಿಂತ ನಮ್ಮಲ್ಲಿರಬೇಕಾದ ಧೈರ್ಯ ಸ್ಥೈರ್ಯ ಹಾಗು ಮನೋಬಲದ ಪ್ರಾಮುಖ್ಯತೆಯನ್ನು ವಿವರಿಸಿದರು. ಹಾಗೆಯೆ ರಾಮನೊಂದಿಗೆ ಕಾಡಿಗೆ ಹೊರಡುವ ಲಕ್ಷ್ಮಣನ ಭ್ರಾತೃ ಪ್ರೇಮವನ್ನು ಕೂಡಾ ವಿವರಿಸಿ, ಒಟ್ಟಿನಲ್ಲಿ ರಾಮಾಯಣದ ಮೌಲ್ಯಗಳು ಇಂದಿಗು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಸರಳವಾಗಿ ಸುಂದರವಾಗಿ ತೋರಿಸಿಕೊಟ್ಟರು.

ಇದೇ ಸಮಯದಲ್ಲಿ ಸೈಬೀರಿಯಾ, ಇಂಡೋನೇಶಿಯಾ, ಥೈಲ್ಯಾಂಡ್, ಸಿಂಗಾಪುರ ಹಾಗು ಇನ್ನು ಅನೇಕ ದೇಶಗಳಲ್ಲಿನ ಸಂಸ್ಕೃತಿಯಲ್ಲಿ ರಾಮಾಯಣ ನಾಟಕಗಳ ಪ್ರಯೋಗಗಳ ಬಗ್ಗೆ ಒಂದು ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. HSSನ ವತಿಯಿಂದ ವಾರಕ್ಕೊಮ್ಮೆ (ಶನಿವಾರ/ಭಾನುವಾರ) ಮಕ್ಕಳಿಗಾಗಿ ನಡೆಯುವ ಬಾಲಗೋಕುಲಂ ಶಾಲೆಯ ಬಗ್ಗೆ ಸಹ ಒಂದು ಕಿರುಚಿತ್ರ ಪ್ರದರ್ಶಿಸಲಾಯಿತು. ಈ ಕಿರುಚಿತ್ರದಲ್ಲಿ ಮಕ್ಕಳು ಬಾಲಗೋಕುಲಂನಲ್ಲಿ ಹೇಗೆ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಹಾಗು ನಮ್ಮ ಧರ್ಮ, ಶಾಸ್ತ್ರ ಗ್ರಂಥಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂಬುದನ್ನು ಮಕ್ಕಳ ಧ್ವನಿ ಮುದ್ರಣದೊಂದಿಗೆ ಪ್ರಸ್ತುತಪಡಿಸಿದ್ದು ಅಭಿನಂದನೀಯವಾಗಿತ್ತು.

ಇದೇ ಸಂದರ್ಭದಲ್ಲಿ KBRE ಪರೀಕ್ಷೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಹಾಗೆಯೆ ರಾಮಾಯಣ ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗು ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು. ಎರಡು ತಿಂಗಳ ಕಾಲ ಸತತ ಪರಿಶ್ರಮದೊಂದಿಗೆ ಮಕ್ಕಳನ್ನು ತರಬೇತುಗೊಳಿಸಿದ ತಂಡ, ಪ್ರತಿದೃಶ್ಯಕ್ಕೆ ವೇದಿಕೆಯನ್ನು ಅಣಿಗೊಳಿಸುತ್ತಿದ್ದ ತಂಡ, ದೃಶ್ಯ ಹಾಗು ಧ್ವನಿ ಸಂಯೋಜನೆಯ ಹಿಂದೆ ಪರಿಶ್ರಮಿಸಿತ್ತಿದ್ದ ತಂಡ, ಎಲ್ಲಾ ಕಾರ್ಯಕರ್ತರಿಗೂ ಹಾಗೂ ಇನ್ನು ಅನೇಕ ಕಾಣದ ಕೈಗಳಿಗೂ ಕಾರ್ಯಕ್ರಮ ಮುಗಿದಾಗ ಧನ್ಯತಾಭಾವ. ಕೊನೆಯೆ ದೃಶ್ಯಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಕಿವಿಗಡಚಿಕ್ಕುವ ಕರತಾಡನವಾದಾಗಲಂತು ಕೆಲವರ ಕಣ್ಣುಗಳು ಸಂತೋಷದಿಂದ ತುಂಬಿ ಬಂದದ್ದು ಕಂಡು ಬಂತು.

ಅಮೇರಿಕಾದಾದ್ಯಂತ ಅನೇಕ ಪಟ್ಟಣಗಳಲ್ಲಿ HSSನವರು ಸ್ಥಳೀಯ ಮಕ್ಕಳನ್ನೊಳಗೊಂಡ ರಾಮಾಯಣ ನಾಟಕ ಪ್ರದರ್ಶಿಸಲಿದ್ದಾರೆ. ನಿಮ್ಮ ಊರಿನಲ್ಲಿ ನಡೆದರೆ ದಯವಿಟ್ಟು ಭೇಟಿ ಇತ್ತು ವೀಕ್ಷಿಸಿ, ಈಗಾಗಲೆ ನಡೆದಿದ್ದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

ರಾಮಾಯಣ ಇನ್ನಷ್ಟು ಅರಿಯಿರಿ

ರಾಗಮಾಲಿಕಾ ಸುಂದರಕಾಂಡ ಧ್ವನಿಸಂಪುಟ
ರಾಮನಿಗೇಕೆ ಒಬ್ಬ ಹೆಂಡತಿ, ದಶರಥನಿಗೇಕೆ ಮೂವರು?
ಹೆಸರಲ್ಲೇನಿದೆ ?ವಾಲ್ಮೀಕಿ ರಾಮಾಯಣದ ನೀತಿಕತೆ
ಬೊಂಬೆಗಳಲ್ಲಿ ರಾಮಾಯಣ ಕೂಡಿಸಿದ ಸವಿತಾ ರವಿಶಂಕರ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X