• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾಲ್ಲಸ್‌ನ 'ಮಲ್ಲಿಗೆ'ಯಲ್ಲರಳಿದ ಯುಗಾದಿ

By Staff
|

Music by R.K. Srikanthanಇದೇನಿದು, ಯುಗಾದಿ ಹಬ್ಬದ ಹೊತ್ತಿಗೆ ಮಲ್ಲಿಗೆ ಅರಳುತ್ತೇ ಹೊರತು, ಮಲ್ಲಿಗೇಲಿ ಯುಗಾದಿ ಅರಳತ್ಯೇ ಅಂತ ಯೋಚಿಸ್ತಿದೀರಾ? ಇಲ್ಲಿ ಹೇಳಕ್ಕೆ ಹೊರಟಿರೋದುಡಾಲ್ಲಸ್‍ನ ಮಲ್ಲಿಗೆ ಕನ್ನಡ ಸಂಘದಲ್ಲಿ ಮೇ 18ರಂದು ನಡೆದ ಯುಗಾದಿ ಹಬ್ಬದ ಬಗ್ಗೆ.

ವರದಿ: ಪೂರ್ಣಿಮ ಸುಬ್ರಹ್ಮಣ್ಯ ಡಾಲ್ಲಸ್, ಟೆಕ್ಸಾಸ್

(ಮಾಹಿತಿ ಸಹಕಾರ: ಲಕ್ಷ್ಮಿ ಭಟ್).

ಮೇ 18ರಂದು, ಡಾಲ್ಲಸ್ ನಗರದಲ್ಲೊಂದು ಸುಂದರ ಸಂಜೆ. ಶ್ರೀಧರ್ ಮತ್ತು ಕೃಷ್ಣಮೂರ್ತಿ ಅವರ ಪ್ರಯತ್ನದಿಂದ ದೊರಕಿದ 'ಆಲನ್ ಲೈಬ್ರರಿ ಸಿವಿಕ್ ಆಡಿಟೋರಿಯಮ್' ಆಲನ್, ಟೆಕ್ಸಾಸ್‌ನಲ್ಲಿ ಮಲ್ಲಿಗೆ ಕನ್ನಡ ಸಂಘ ಯುಗಾದಿ ಆಚರಿಸಿತು. ಸಂಘದ ಉಪಾಧ್ಯಕ್ಷೆ ವಸುಂಧರಾ ಕಿಕ್ಕೇರಿಯವರ ಸುಂದರ ನಿರೂಪಣೆ, ಗಜವದನನನ್ನು ಬೇಡಿದ ಮೇಘನಾ ಬಳ್ಳಾರಿಯ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಇಲ್ಲಿ ಹುಟ್ಟಿ ಬೆಳೆದ ಮಕ್ಕಳೇ (ಮೇಘನಾ ಬಳ್ಳಾರಿ, ಮೇಧಾ ಭಾರದ್ವಾಜ್, ಪ್ರಿಯಾಂಕ ಮೇಲ್ಗಿರಿ, ಶೃತಿ ಹೆಗಡೆ, ಮಧುವಂತಿ ಕಿಕ್ಕೇರಿ) ಕನ್ನಡದಲ್ಲಿ ನಡೆಸಿಕೊಟ್ಟದ್ದು ಒಂದು ವಿಶೇಷ.

ಅರಳು ಮಲ್ಲಿಗೆ : ಮಲ್ಲಿಗೆ ಸಂಘದ ಕಾರ್ಯಕ್ರಮ ಅಂದರೆ , ಇಲ್ಲಿನ ಹಿಂದೂ ದೇವಾಲಯದಲ್ಲಿ ನಡೆಯುವ ಅರಳು ಮಲ್ಲಿಗೆ ಕನ್ನಡ ಶಾಲೆಯ ಮಕ್ಕಳಿಂದ ಮನರಂಜನೆ ಇದ್ದೇ ಇರುತ್ತೆ. ಅಲ್ಲಿಯ ಚಿಲ್ಟು-ಪಲ್ಟುಗಳು ಕೇವಲ 3 ಬಾರಿ ಅಭ್ಯಾಸದೊಂದಿಗೆ, 'ಭಾಳ ಒಳ್ಳೇವ್ರು ನಮ್ಮಿಸ್ಸು' ಎಂದು ತಮ್ಮ ಮೆಚ್ಚಿನ ಮಿಸ್ ರೂಪಾ ಶ್ರೀನಿವಾಸರನ್ನು ಹಾಡಿ ಕುಣಿದು ಹೊಗಳಿದರು. ನಂತರ ಮತ್ತೊಬ್ಬ ಶಿಕ್ಷಕಿ ಜಯಶ್ರೀ ಅವರ ಮಾರ್ಗದರ್ಶನದಲ್ಲಿ 'ಬೇವು-ಬೆಲ್ಲ' ನಾಟಕ. ಯುಗಾದಿ ಆಚರಣೆಯ ರೀತಿ-ನೀತಿ, ವಿಶೇಷ-ವೈವಿಧ್ಯ ಮತ್ತು ಸಂಪ್ರದಾಯಗಳನ್ನು ಮಕ್ಕಳು ಚಿತ್ರಿಸಿದ ರೀತಿ ಬಲು ಚೆನ್ನ.

Rayara Mane Ugadi drama showನಗೆ ಮಲ್ಲಿಗೆ : ವಿದ್ಯಾ ದತ್ತ ಅವರ ರಚನೆ, ನಿರ್ದೇಶನದಲ್ಲಿ ನಡೆದ ನಗೆ ನಾಟಕ "ರಾಯರ ಮನೆ ಯುಗಾದಿ". ಸತ್ಯನಾರಾಯಣನ ಪೂಜೆಯನ್ನೂ ಸಿನೆಮಾ ಹಾಡಿಂದ ಮಾಡಿಸುವ ಸರಸಿ ಸುಬ್ರಾಯ(ಸುಕುಮಾರ್ ಮುತ್ಯ), ಪೂಜೆ ಎಲ್ಲಾ ನಾರಾಯಣನಿಗೆ ಆದ ಮೇಲೆ, ಅಟ್ಲೀಸ್ಟ್ ಹಾಡಾದ್ರೂ ಲಕ್ಷ್ಮಿ ಮೇಲೆ ಬೇಡವೇ ಅನ್ನೋ ಈಕ್ವಾಲಿಟಿ ಕ್ರೇಜಿನ ಭಾಮ(ವಿದ್ಯಾ ದತ್ತ), ಆಗ ತಾನೇ ಹುಟ್ಟಿದ ಅವಳಿ-ಜವಳಿ ಮಕ್ಕಳ ಒಂದಾ-ಎರಡರ ಸ್ಟಾಟಿಸ್ಟಿಕ್ಸ್‍ನಲ್ಲಿ ಮಗ್ನನಾದ ರಾಯರ ತಮ್ಮ ಕುಮಾರ(ರಮೇಶ್ ಮೇಲುಕೋಟೆ), ಹಬ್ಬಕ್ಕೆ ತಮ್ಮ ಮಕ್ಕಳ ಸೈನ್ಯದೊಂದಿಗೆ ಬಂದು 'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಡಿ ಕುಣಿದ ಇಸ್ಮಾಯಿಲ್(ದಿಡ್ಡೇಪುರ ಸುಬ್ರಹ್ಮಣ್ಯ); ಇವರೆಲ್ಲರೂ ತಮ್ಮ ಚುರುಕು ಸಂಭಾಷಣೆಯೊಂದಿಗೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಧ್ವನಿ ಮತ್ತು ಬೆಳಕಿನ ಸಹಕಾರ ಒದಗಿಸಿಕೊಟ್ಟವರು ದತ್ತಪ್ರಸಾದ್. ನಂತರದ ಪಕೋಡ, ಕಾಫಿ/ಟೀ ವಿರಾಮದಲ್ಲಿ ಪಾತ್ರಧಾರಿಗಳೆಲ್ಲರನ್ನು ಜನರೆಲ್ಲಾ ಅಭಿನಂದಿಸುತ್ತಿದ್ದ ದೃಶ್ಯ ನಾಟಕದ ಸಫಲತೆಯ ಸಂಕೇತವಾಗಿತ್ತು.

ಸಂಗೀತ ಸೌರಭ : ಮಲ್ಲಿಗೆ ಯುಗಾದಿಯ ಪ್ರಮುಖ ಕಾರ್ಯಕ್ರಮ ಸಂಗೀತ ಕಲಾನಿಧಿ ಆರ್.ಕೆ. ಶ್ರೀಕಂಠನ್ ಮತ್ತು ಆರ್.ಕೆ. ರಮಾಕಾಂತರ ಕರ್ನಾಟಕ ಸಂಗೀತದ ದೈವೀ ಗಾಯನ. ರೇವತಿ ಸತ್ಯು ಅವರು ಕಲಾವಿದರ ಪರಿಚಯ ಮಾಡಿಕೊಟ್ಟ ಮೇಲೆ ಆರಂಭವಾದ ಕಚೇರಿ ಸಭಿಕರನ್ನು ಪರವಶಗೊಳಿಸಿತು. ಕೃತಿಗಳ ಆಯ್ಕೆ ಪ್ರಶಂಸನೀಯವಾಗಿದ್ದು, ಪ್ರತಿಯೊಂದು ಕೃತಿಯನ್ನೂ ಮಧುರವಾದ ದೀರ್ಘ ಆಲಾಪನೆ, ಸ್ವರಪ್ರಸ್ತಾರ ಮತ್ತು ನೆರೆವಲ್‍ಗಳೊಡನೆ ಪ್ರಸ್ತುತಗೊಳಿಸಲಾಯಿತು. ಈ ವಿದ್ವತ್ಪೂರ್ಣ ಹಾಡುಗಾರಿಕೆಯು ಸಭಿಕರ ಮೇಲುಂಟು ಮಾಡಿದ ಪರಿಣಾಮ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಸಂಗೀತ ಸಂಜೆಯು ಆರಂಭಗೊಂಡದ್ದು ಶಹನ ರಾಗದ ತಾನ ವರ್ಣ "ಕರುಣಿಂಪ"ದಿಂದ. ನಂತರ ಮಾಯಾಮಾಳವಗೌಳ ರಾಗದಲ್ಲಿ " ದೇವದೇವ ಕಲಯಾಮಿ",ಗೌಳ ರಾಗದಲ್ಲಿ " ಭಜರೇ ಮಾನಸ", ಕಾಪಿ ನಾರಾಯಣಿ ರಾಗದಲ್ಲಿ "ಸರಸ ಸಾಮದಾನ" , ಅಠಾಣ ರಾಗದಲ್ಲಿ "ನೀ ದಯರಾದು". ಹೀಗೆ ಹಂಸಧ್ವನಿ ,ಆಭೇರಿ ರಾಗಗಳಲ್ಲಿ ಹಾಡಿ, ತಮ್ಮ ಭಾವ, ಶೈಲಿ ಹಾಗು ಭಕ್ತಿಯಿಂದ ಸಂಗೀತ ರಸಿಕರನ್ನು ರಂಜಿಸಿದರು. ಸಂಗೀತದಲ್ಲಿ ತನ್ಮಯರಾದ ಸಭಿಕರು ತಮ್ಮ ಈ "ಮಾನವ ಜನ್ಮ ದೊಡ್ಡದು" ಎಂದು ಸಂತೋಷಪಟ್ಟರು. ಹಾಗೇ" ಸುಮ್ಮನೇ ಬರುವುದೇ ಮುಕ್ತಿ"," ಸ್ಮರಣೆಯೊಂದೇ ಸಾಲದೆ.." ಮೊದಲಾದ ದೇವರನಾಮಗಳು ಅಮೋಘವಾಗಿ ಮೂಡಿ ಬಂದವು. ಮಂಗಳದೊಂದಿಗೆ ಕಾರ್ಯಕ್ರಮವು ಮುಗಿಯಿತು.

ಸದ್ಗುರು ತ್ಯಾಗರಾಜರ ಶಿಷ್ಯ ಪರಂಪರೆಯಿಂದಲೇ ಬಂದಂತಹ ಆರ್.ಕೆ.ಶ್ರೀಕಂಠನ್ ಅವರ ಸಂಗೀತವನ್ನು ಕೇಳಿದ ನಾವೆಲ್ಲರೂ ಧನ್ಯರು. 88ರ ಹರೆಯದಲ್ಲೂ ಇಂತಹ ಹುಮ್ಮಸ್ಸು, ನಮ್ಮೆಲ್ಲರಿಗೂ ಸ್ಫೂರ್ತಿ. ವಯಸ್ಸು ದೇಹವನ್ನು ದಣಿಸಿರಬಹುದೇ ವಿನಃ ಅವರ ಸಂಗೀತವನ್ನಲ್ಲ. ಕಚೇರಿಯುದ್ದಕ್ಕೂ ರಮಾಕಾಂತರ ಸಹಗಾಯನ ವಿದ್ವತ್ಪೂರ್ಣವಾಗಿತ್ತು. ಪಕ್ಕವಾದ್ಯದಲ್ಲಿ ಸಮರ್ಥ ಸಹಕಾರ ನೀಡಿದವರು ವಯೋಲಿನ್ ನುಡಿಸಿದ ನರಸಿಂಹ ಕಿಕ್ಕೇರಿ ಮತ್ತು ಮೃದಂಗದೊಡನೆ ಗಣೇಶ್ ದೇವರಾಜನ್. ಆರ್. ಕೆ. ಶ್ರೀಕಂಠನ್ ಅವರನ್ನು "ಕರ್ನಾಟಕ ಸಂಗೀತ ಭೀಷ್ಮ" ಬಿರುದಿನೊಂದಿಗೆ ಗೌರವಿಸಲಾಯಿತು.

ಈ ಮಲ್ಲಿಗೆಯ ಮಾಲೆ ಪೋಣಿಸಿದವರು ಸುಧೀಂದ್ರ ಪ್ರಹ್ಲಾದನ್ ನೇತೃತ್ವದ ಹೊಸ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು. ಹಳೇ ಬೇರುಗಳ ಜೊತೆ ಹೊಸ ಚಿಗುರುಗಳಿಗೂ ಬೆಳೆಯಲು, ಮುಂದೆ ಬರಲು ಅವಕಾಶ ಒದಗಿಸಲು ಬಹಳ ಉತ್ಸುಕರಾಗಿದ್ದಾರೆ. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರಿಗೆ ಉಚಿತವಾಗಿ ನೀಡಲು ಸಾಧ್ಯ ಮಾಡಿದ ಪ್ರಾಯೋಜಕರಿಗೆ( ಮೀನಾ ಭಾರದ್ವಾಜ್, ದೀಪಕ್ ಚೆಬ್ಬಿ, ಮಹೇಶ್ ಗೋಪಾಲಕೃಷ್ಣ, ಶ್ರೀಹರಿ ಗೋವಿಂದರಾಜನ್, ರವಿ ಮೇಲ್ಗಿರಿ, ನಾಗರಾಜ ರಾವ್ ಮತ್ತು ಡಾ.ಭವಾನಿ ಸತ್ಯನಾರಾಯಣ) ಅವರು ಧನ್ಯವಾದಗಳನ್ನು ಅರ್ಪಿಸಿದರು.

ಕಾರ್ಯಕ್ರಮದ ರಸನಿಮಿಷಗಳನ್ನು ಮೆಲುಕುತ್ತಾ ನಡೆದವರು ತಲುಪಿದ್ದು, ಪಕ್ಕದ ಆಲನ್ ಸೀನಿಯರ್ ಸೆಂಟರ್‌ನಲ್ಲಿ ಅಣಿಮಾಡಿದ್ದ ಭೋಜನಶಾಲೆಗೆ. ಮಧು ಶಾಸ್ತ್ರಿಯವರ ನೇತೃತ್ವದಲ್ಲಿ ಸದಸ್ಯರು, ಸ್ವಯಂಪ್ರೇರಿತ ಉತ್ಸಾಹಿಗಳು ಎಲ್ಲರಿಗೂ ಅಚ್ಚುಕಟ್ಟಾಗಿ ಬಫೆ ವ್ಯವಸ್ಥೆ ಮಾಡಿದ್ದರು. ಬೋಂಡ-3 ವಿಧದ ಚಟ್ನಿಗಳು, ಪಲಾವ್ - ರಾಯತ, ನಾನ್- ಪನೀರ್ ಮಟರ್, ಮೊಸರನ್ನ- ಉಪ್ಪಿನಕಾಯಿ, ರಸಮಲೈ-ಜಾಮೂನ್‍ಗಳು ಮಾತು-ಕತೆಯೊಂದಿಗೆ ಎಲ್ಲರ ಹೊಟ್ಟೆ ಸೇರಿದವು. ಮಕ್ಕಳಿಗಾಗಿ ಪಿಜ್ಜಾ ವ್ಯವಸ್ಥೆ ಮಾಡಿದ್ದ ಆಹಾರ ಸಮಿತಿಯವರ ಮುಂದಾಲೋಚನೆ, ಸಿದ್ಧತೆ ಎಲ್ಲರ ಪ್ರಶಂಸೆ ಪಡೆಯಿತು.

ಹೀಗೆ ಒಂದು ಸುಂದರ ಸುಮಧುರ ಮುಸ್ಸಂಜೆಯಲ್ಲಿ ಮಲ್ಲಿಗೆಯ ಕಂಪು, ಡಾಲ್ಲಸ್‍ನಲ್ಲೆಲ್ಲಾ ಪಸರಿಸಿತ್ತು ಎಂದರೆ ಅತಿಶಯೋಕ್ತಿಯೇನಲ್ಲ! ಕೃಷ್ಣಮೂರ್ತಿಗಳು ತಮ್ಮ ಕ್ಯಾಮರಾ ಕಣ್ಣಿನಿಂದ ಅಮೋಘವಾಗಿ ಸೆರೆಹಿಡಿದಿರುವ ಕಾರ್ಯಕ್ರಮದ ಚಿತ್ರಸಂಪುಟವನ್ನು ಇಲ್ಲಿ ನೋಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more