ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಮಾರ್ದನಿಸಿದ ಕೋಗಿಲೆ ಕೂಗು

By ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ
|
Google Oneindia Kannada News

Art work by Padma Rao"ನವ ಸಂವತ್ಸರ ಭೂಮಿಗೆ ಬಂದು ಕರೆಯುತ್ತಿದೆ ನಮ್ಮನು ಇಂದು"!

ಎಂದು ರಾಷ್ಟ್ರಕವಿ ಕುವೆಂಪು ಯುಗಾದಿ ಗೀತೆಯಲ್ಲಿ ಹೇಳಿದಂತೆ, ಸಾವಿರಾರು ಕನ್ನಡಿಗರನ್ನು ಕೈಬೀಸಿ ಕರೆದಿತ್ತು ಕೆಕೆಎನ್‌ಸಿ ಸರ್ವಧಾರಿ ಸಂವತ್ಸರದ ಯುಗಾದಿ ಆಚರಣೆ, ಮೇ 3ರಂದು ಸನ್ನಿವೇಲ್ ಹಿಂದೂ ದೇವಾಲಯದ ಸಭಾಂಗಣದಲ್ಲಿ. ಮುಂಬಾಗಿಲಿನಲ್ಲಿ ಅಲಂಕೃತವಾದ ಚೈತ್ರಮಾಸವನ್ನು ಸಂಕೇತಿಸುವ ಚಿಗುರೊಡೆದ ಮರಗಿಡ, ಹೂವು ಮೊಗ್ಗು, ಚಿಲಿಪಿಲಿ ಹಕ್ಕಿ ಮತ್ತು ಕಾರಂಜಿ. ಕೃತಕವಾಗಿ ಸೃಷ್ಟಿಸಿದ ಹಿಂದೂ ದೇವಾಲಯದ ಪ್ರಕೃತಿಯಲ್ಲಿ ಕಂಗೊಳಿಸುತ್ತಾ ಅತಿಥಿಗಳನ್ನು ಆದರದಿಂದ ಸ್ವಾಗತಿಸುತ್ತಿತ್ತು. ಕಲಾಕೃತಿ ವಿಭಾಗದ ಮುಖ್ಯಸ್ಥೆ ಪದ್ಮಾ ರಾವ್ ಮತ್ತು ಸಂಗಡಿಗರು ಇದನ್ನು ಸೃಷ್ಟಿಸಿದ್ದರು.

ಕಾರ್ಯಕ್ರಮ ನಿರ್ವಾಹಕರಾದ ವಿಶ್ವಾನಂದ ಮತ್ತು ಶೈಲಜ ಅವರು "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ ದ.ರಾ.ಬೇಂದ್ರೆಯವರ ಸುಪ್ರಸಿದ್ಧ ಗೀತೆಯ ಪಲ್ಲವಿಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ನಲವತ್ತು ಕನ್ನಡಕಲಿ ಮಕ್ಕಳು ಒಕ್ಕೊರಲಿಂದ ಸುಶ್ರಾವ್ಯವಾಗಿ ಕನ್ನಡ ಗೀತೆಗಳನ್ನು ಹಾಡಿ ತಾಯಿ ಶಾರದೆಯನ್ನು ಪ್ರಾರ್ಥಿಸಿದರು, ಸಂಧ್ಯಾ ರವೀಂದ್ರನಾಥ್ ಮತ್ತು ಕನ್ನಡಕಲಿ ಶಿಕ್ಷಕಿಯರ ನಿರ್ದೇಶನದಲ್ಲಿ. ನಂತರ ಎಚ್.ಎಸ್. ವೆಂಕಟೇಶ್ ಮೂರ್ತಿ ರಚಿಸಿರುವ "ಕನ್ನಡನಾಡಿನ ಮಕ್ಕಳು ನಾವು" ಇನ್ನೊಂದು ಮಕ್ಕಳ ತಂಡದಿಂದ ಸುಶ್ರಾವ್ಯವಾಗಿ ಹೊರಹೊಮ್ಮಿತು. ಈ ಗೀತೆಯನ್ನು ನಿರ್ದೇಶಿಸಿದವರು ಲಕ್ಷ್ಮಿ ನಾಗಸಮುದ್ರ. ಅಷ್ಟರಲ್ಲಿ ಸಭೆ ತುಂಬಿ ಕೃಷ್ಣರೂಪಕ ನೃತ್ಯ ನಾಟಕಕ್ಕೆ ಕಾದು ಕುಳಿತಿತ್ತು. ಕೃಷ್ಣನ ಜನುಮದಿಂದ ಆರಂಭವಾಗಿ, ಅವನ ಆಟ ಪಾಠಗಳ ಲೀಲೆಗಳನ್ನು ಅದ್ಭುತವಾಗಿ ಅಭಿನಯಿಸಿದರು. ನೃತ್ಯನಾಟಕವನ್ನು ನಿರ್ದೇಶಿಸಿದವರು ಬೇ ಏರಿಯಾದ ನೃತ್ಯಗಾತಿ-ಪುಷ್ಪಾ ರಾಮಾನುಜಮ್ ಮತ್ತು ಸಂಧ್ಯಾ ಸುಬ್ಬರಾಮು. ಒಟ್ಟು 20ಕ್ಕೂ ಹೆಚ್ಚು ಮಕ್ಕಳು ನರ್ತಿಸಿದರೆ, ಎಂಟು ಜನ ಭಾಮಿನಿಯರು ಸಂಗೀತವನ್ನು ಮಧುರವಾಗಿ ಹಾಡಿದರು. ಮಕ್ಕಳಾದ ರಿತ್ವಿಕ್ ನಾರಾಯಣ್ ತಬಲ ವಾದನ, ಮಾಧುರಿಯ ಮಧುರ ವೈಲಿನ್ ವಾದನವು ಸಭಿಕರ ಮನ ಸೂರೆ ಮಾಡಿದವು. ಕೃಷ್ಣರೂಪಕ ಹಾಡುಗಳನ್ನು ಸಂಗೀತ ವಿದುಷಿ ಭ್ರಮರಾ ಸುಬ್ಬರಾಮು ಅವರ ಆಕಾಶವಾಣಿ ಕಾರ್ಯಕ್ರಮದಿಂದ ಆರಿಸಲಾಗಿತ್ತು.

Children singing group songಯುಗಾದಿ ಕಾರ್ಯಕ್ರಮದ ಪ್ರಾಯೋಜಕರ ಪರಿಚಯ ಪ್ರಿಯಾಂಕ ಅವರು ಮಾಡುವಷ್ಟರಲ್ಲೇ, ತೆರೆ ಸರಿಸಿ ಮಾತಾಡಲು ಪ್ರಾರಂಭಿಸಿದರು ಹಾಸ್ಯಕ್ಕೆ ಸವಾಲ್ ನಿರ್ದೇಶಕಿ ಶರ್ಮಿಳಾ ವಿದ್ಯಾಧರ. 5 ತಂಡಗಳ ಹಾಸ್ಯದ ಹೊನಲು ಹರಿದಾಗ, ಪ್ರೇಕ್ಷಕರು ವೈದ್ಯನಿಗೆ (ಅಶೋಕ್ ಹಂದಿಗೋಳ್ ತಂಡಕ್ಕೆ) ಮಣೆ ಹಾಕಿದರು, ಅರ್ಥಾತ್ ವೈದ್ಯನ ತಂಡಕ್ಕೆ ವಿಜಯಶ್ರೀ ಒಲಿದಿದ್ದಳು. ಅ.ನ. ಕೃಷ್ಣರಾಯರ ನೂರನೇ ಜನ್ಮದಿನದ ವರ್ಷದ ಪ್ರಯುಕ್ತ ಕುಸುಮಾ ಅರಕಲ್ಗೂಡ್ ಅವರು ಪವರ್ ಪಾಯಿಂಟ್ ಪ್ರದರ್ಶನವನ್ನು ನೀಡಿ ಕನ್ನಡದ ಉದ್ದಾಮ ಸಾಹಿತಿಗೆ ಗೌರವ ಸಲ್ಲಿಸಿದರು. ಚೈತ್ರ ಮಾಸದ ಆದಿಯಲ್ಲಿ ಬರುವ ಬಣ್ಣ ಬಣ್ಣದ ಹೋಳಿ ಹುಣ್ಣಿಮೆ ಸಂಕೇತವಾಗಿ "ಬಣ್ಣ ಬಣ್ಣ" ಹಾಡಿಗೆ ಬಣ್ಣ, ಬಣ್ಣದ ಸೀರೆಯನ್ನುಟ್ಟು ನೃತ್ಯ ಪ್ರದರ್ಶಿಸಿದವರು ರೂಪಾಲಿ ಶಿರ್ಶ್ಯಾಡ್ ತಂಡ.

ಇಂಡಿಯನ್ ಲಿಟರಸಿ ಪ್ರಾಜಕ್ಟ್(ಐ.ಎಲ್.ಪಿ.) ಸಂಸ್ಥೆಯ ಪರಿಚಯಿಸಿ, ಅದರ ಅಭಿವೃದ್ಧಿಗೆ ಯುವ ಸಮಿತಿಯ ಮುಖ್ಯಸ್ಥೆ ಅನು ಜಗದೀಶ್ ಮತ್ತು ಸದಸ್ಯ ಸುಭಾಷ್ ಸಹಾಯ ಕೋರಿದರು. ಇದಾದ ನಂತರ ತೆರೆಯ ಮೇಲೆ ಬಂದಿದ್ದು "ಬಾರಯ್ಯಾ ಬಾರಯ್ಯ" ಜನಪದ ನೃತ್ಯ, ಉಮಾ ಕಳಸಾಪುರರ ನಿರ್ದೇಶನದಲ್ಲಿ. ಸಮಿತಿಯ ಯುವತಂಡ ತಮ್ಮ ಕಾರ್ಯ ಚಟುವಟಿಕೆಗಳಾದ ರಕ್ತದಾನ ಶಿಬಿರ, ಬ್ಯಾಕ್-ಪ್ಯಾಕ್ ಡ್ರೈವ್ಗಳ ಅಭಿವೃದ್ಧಿ ಹಾಗೂ ಪರಿಶುದ್ಧ ಭೂಮಿ ರಕ್ಷಣೆಗೆ (ಗ್ರೀನ್ ಪ್ಲಾನೆಟ್) ಮಾಡಬೇಕಾದ ರೀಸೈಕ್ಲಿಂಗ್ ಮಾಡುವ ವಿಧಾನಗಳನ್ನು ತಿಳಿಸಿದರು. ನಂತರ ವೇದಿಕೆಯ ಮೇಲೆ ಜೋಗಿಗೆ ಮನಸೋತ ಹೆಂಗೆಳೆಯರ ಗುಂಪು ಮತ್ತು ನಾಲ್ಕು ಪುಟಾಣಿಗಳು ಜೋಗಿ ಚಿತ್ರದ ಎಲ್ಲೋ ಜೊಗಪ್ಪ ನಿನ್ನರಮನೆ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದರು. ನೃತ್ಯ ನಿರ್ದೇಶನ ಮಾಡಿದವರು ಶೀಲ ಶಂಕರ್.

ಎಂಟು ಜನ ಸಂಗೀತಗಾರರ ಸಂಗೀತಸುಧೆ "ಸ್ವರ ಮಾಧುರಿ" ಶಾಸ್ತ್ರೀಯ ಮತ್ತು ಚಲನಚಿತ್ರ ಗೀತೆಗಳ ಕಾರ್ಯಕ್ರಮ ತೆರೆಯ ಮೇಲೆ ತೇಲಿ ಬಂದಿತು. ತೀರ್ಪುಗಾರರ ಆಯ್ಕೆಯಲ್ಲಿ ಉಷಾ ಪ್ರಭು, ಅರ್ಚನ ರಾಜೇಶ್ ಮತ್ತು ಸುಬ್ರಹ್ಮಣ್ಯ ಅವರು ಕ್ರಮವಾಗಿ ಪ್ರಥಮ ಮೂರು ಸ್ಥಾನ ಪಡೆದರು. ಗಾರ್ಗಿ ಪಂಚಾಂಗಮ್, ನಳಿನಿ ಕೇಶವ್ ಮತ್ತು ಶೇಷಪ್ರಸಾದ್ ಚಿಕ್ಕತ್ತುರ್ ತೀರ್ಪುಗಾರರಾಗಿದ್ದರು. ಸ್ವರ್ಣಸೇತು ವಾರ್ಷಿಕ ಸಂಚಿಕೆ ಹಮ್ಮಿಕೊಂಡಿದ್ದ ಯುಗಾದಿ ಕಥಾಸ್ಪರ್ಧೆಯಲ್ಲಿಯೂ ಒಟ್ಟು 12 ಕಥೆಗಳು ಬಂದಿದ್ದವು. ಪ್ರಥಮ ಮೂರು ಬಹುಮಾನಗಳು ಕ್ರಮವಾಗಿ ರವೀಂದ್ರ ವಿಶ್ವನಾಥ್, ಮಂಗಳಾ ಕುಮಾರ್ ಮತ್ತು ಸೌಮ್ಯ ಸಂಕೇತ್ ಅವರಿಗೆ ಲಭಿಸಿತು.

ಅಷ್ಟರಲ್ಲೇ ಹಬ್ಬದೂಟಕ್ಕೆ ಸಮಯ ಕೂಡಿ ಬಂದಿತ್ತು. ದೋಸ ಪ್ಲೇಸ್ ಅವರ ಘಮ ಘಮ ಅಕ್ಕಿರೊಟ್ಟಿ, ದೋಸ, ಮತ್ತು ಒಬ್ಬಟ್ಟಿನ ಊಟ ಎಲ್ಲರನ್ನು ಕೈ ಚಾಚಿ ಕರೆದಿತ್ತು. ಊಟದಿಂದ ಪ್ರಫುಲ್ಲವಾದ ಮನಸ್ಸಿಗೆ ಪಂಡಿತ್ ಹಬೀಬ್ ಖಾನ್ ಅವರ ಶಾಸ್ತ್ರೀಯ ಸಂಗೀತ ಮತ್ತು ಸಿತಾರ್ ವಾದನ ಎಲ್ಲರಲ್ಲಿ ಮನೋಲ್ಲಾಸ ಇನ್ನಷ್ಟು ಹೆಚ್ಚಿಸಿತು.

ಕ್ರೀಡಾ ಸಮಿತಿಯವರು, ಮುಂಬರುವ ಕ್ರೀಡಾದಿನದ ಚಟುವಟಿಕೆಗಳಲ್ಲಿ ಸದಸ್ಯರಿಗೆ ಭಾಗವಹಿಸಲು ಕೇಳಿಕೊಳ್ಳುವುದರ ಮೂಲಕ, ನಡೆಯುವ(ವಾಕಿಂಗ್) ಕ್ಲಬ್‌ನಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಲು ಕೋರಿದರು. ಸಮಾರಂಭದ ಕೊನೆಯ ಕಾರ್ಯಕ್ರಮವಾದ "ಯಕ್ಷಗಾನ" ತಂಡವು ಬಣ್ಣ-ಬಣ್ಣದ ವೇಷ-ಭೂಷಣವನ್ನು ಧರಿಸಿ "ಕಂಸವಧೆ"ಯನ್ನು ಪ್ರದರ್ಶಿಸಿತು. 15-ಮಾಜಿ ಕನ್ನಡಕೂಟದ ಅಧ್ಯಕ್ಷರುಗಳಿಗೆ ಈಗಿನ ಕೂಟದ ಅಧ್ಯಕ್ಷರಾದ ಭವಾನಿ ಕುಮಾರ್ ಅವರು, ಅವರ ಸೇವೆಯನ್ನು ಸ್ಮರಿಸಿ, ಸನ್ಮಾನಿಸಿ ಫಲಕಗಳನ್ನು ನೀಡಿ ಗೌರವಿಸಿದರು. ಯುಗಾದಿ ಕಾರ್ಯಕ್ರಮವನ್ನು ಅದ್ಭುತವಾಗಿ ನಿರ್ವಹಿಸಿದವರು ವಿಶ್ವಾನಂದ್ ಮತ್ತು ಶೈಲಜಾ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X