ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ನಲ್ಲಿ ಅಪ್ಪಟ ಕನ್ನಡ ಹಬ್ಬ

By * ಪ್ರಕಾಶ್ ರಾಜಾರಾವ್, ಆಕ್ಲೆಂಡ್
|
Google Oneindia Kannada News

Ugadi celebrated in Newzealandಜನವರಿ ಒಂದರಿಂದ ಪ್ರಾರಂಭವಾಗುವ ಹೊಸ ವರ್ಷ ಅಥವಾ ಯುಗಾದಿ ಆಚರಣೆ ನಮ್ಮ ನ್ಯೂಜಿಲೆಂಡ್‌ನಲ್ಲಿ ಮಾತ್ರ ಮುಗಿಯುವುದೇ ಇಲ್ಲ. ಚಾಂದ್ರಮಾನ , ಸೌರಮಾನ, ಚೀನಿಯರ ಯುಗಾದಿ ಹೀಗೆ ಹತ್ತು ಹಲವಾರು. ಪ್ರಪಂಚದೆಲ್ಲೆಡೆಯಿಂದ ಜನ ಬಂದು ನೆಲೆಸಿರುವ ಈ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಹೊಸ ವರ್ಷದ ಹೊಸ ಹರ್ಷದ ವಾತಾವರಣ ನಿರಂತರ.

ಹೀಗೆಂದು ಹೇಳಿದವರು, ಅಕ್ಲೆಂಡ್ನಲ್ಲಿ ಏಪ್ರಿಲ್ 12ರಂದು ನಡೆದ ಕನ್ನಡ ಕೂಟದ ಯುಗಾದಿ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ್ ಸದಸ್ಯೆ ಪ್ಯಾನ್ಸಿ ವಾಂಗ್ ಅವರು. ಈ ದೇಶದ ಪ್ರಮುಖ ವಿರೋಧ ಪಕ್ಷವಾದ ನ್ಯಾಷನಲ್ ಪಾರ್ಟಿಯ ಅಧ್ಯಕ್ಷರಾದ ಜಾನ್ ಕೀ ಅವರು [ಜನಾಭಿಪ್ರಾಯದ ಮೇರೆಗೆ ಅತ್ಯಂತ ಜನಪ್ರಿಯ ನಾಯಕರು] ಆಮಂತ್ರಿತರಾಗಿದ್ದು ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗದೆ ತಮ್ಮ ಸಂದೇಶ ಕಳುಹಿಸಿದ್ದರು. ಅವರ ಪಕ್ಷದ ಹಾಗೂ ಈ ದೇಶದ ಸಮಸ್ತ ವಲಸಿಗ ಸಮುದಾಯದ ಮುಖವಾಣಿಯಂತಿರುವ ಪ್ಯಾನ್ಸಿ ವಾಂಗ್ ಅವರು ಕನ್ನಡ ಕೂಟದಂತಹ ಸಂಸ್ಥೆಗಳು ಭಾರತೀಯ ಸಮುದಾಯದ ಬಗ್ಗೆ ಗೌರವ ಮೂಡಿಸುತ್ತವೆ ಎಂದರು.

ನ್ಯೂಜಿಲೆಂಡಿನ ಪ್ರಗತಿಗಾಗಿ ಶ್ರಮಿಸುತ್ತಿರುವ ಭಾರತೀಯರ (ಕನ್ನಡಿಗರ) ಶ್ರೇಯೋಭಿವೃದ್ಧಿಗೆ ನಮ್ಮ ಪಕ್ಷ ಕಂಕಣಬದ್ಧವಾಗಿದೆ ಎಂದು ಹೇಳಿದರು. ಕೂಟದ ಅಧ್ಯಕ್ಷರಾದ ಬೆಂಗಳೂರು ಪ್ರಭಾಕರ ಅವರು ಎಲ್ಲರನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಕಾಶ್ ಬಿರಾದರ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ ಮಾತನಾಡಿದರು.

ಪ್ರಭಾಕರ್ ಅವರು ಸಾಂಪ್ರದಾಯಿಕ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವ ನಿನ್ನಯ ಚರಣ ಕಮಲಕೆ ಎಂದು ಮಧುರವಾಗಿ ಪ್ರಾರ್ಥನೆ ಮಾಡಿದವರು ಮರಿ ಕೋಗಿಲೆಯೆಂದು ಹೆಸರಾದ ಗಾಯಕಿ ಅಖಿಲಾ ಪುತ್ತಿಗೆ. ಇದು ಅಖಿಲಾ ಅವರ ತಾತ ಶ್ರೀನಿವಾಸ ಶರ್ಮ ಅವರು ರಚಿಸಿದ್ದು ಗುಡ್ಡಿ ಚಿತ್ರದ 'ಹಮ್ ಕೋ ಮನ್ ಕಿ ಶಕ್ತಿ ದೇನಾ' ಹಾಡಿನ ರಾಗಕ್ಕೆ ಅಳವಡಿಸಲಾಗಿತ್ತು.

ಇದರ ನಂತರ ಸಂಗೀತ ನ್ಲತ್ಯಗಳ ಮಹಾಪೂರವೇ ಹರಿದು ಬಂದಿತು. ಹೆಸರಾಂತ ಗಾಯಕಿ ಚೈತ್ರಾ ರವಿಶಂಕರ್ ಅವರು ಹಾಡಿದ 'ಮಿಲನ' ಚಿತ್ರದ 'ನಿನ್ನಿಂದಲೇ...' ಗೀತೆ ಮೆಲುಕು ಹಾಕುವಂತಿತ್ತು. ಅನುಪಮ ಪ್ರಭಾಕರ್ ಹಾಡಿದ 'ಎಕ್ಸ್‌ಕ್ಯೂಸ್ ಮಿ' ಚಿತ್ರದ 'ಪ್ರೀತ್ಸೆ ಅಂತ...' ಗೀತೆ ನಿಜಕ್ಕೂ ಅನುಪಮವಾಗಿತ್ತು. ವರ್ಷಾ ಪೈ ಮತ್ತು ಪೂಜಾಭಗತ್ ಅವರು 'ಆಪ್ತಮಿತ್ರ' ಚಿತ್ರದ 'ರಾ ರಾ' ಹಾಡಿಗೆ ಪ್ರಭುದ್ದವಾಗಿ ನರ್ತಿಸಿದರು. ಅನೂಷಾ ದತ್ತಾತ್ರೇಯ ಮತ್ತು ನೇಹಾ ವಿಜಯ್ ಹಾಡಿದ 'ಗಜವದನ ಬೇಡುವೆ' ಹಾಗೂ ಪುಷ್ಪಾ ರಾಘವೇಂದ್ರ ಹಾಡಿದ ಎಮ್.ಎನ್.ವ್ಯಾಸ ರಾವ್ ವಿರಚಿತ 'ನೀನಿಲ್ಲದೆ ನನಗೇನಿದೆ' ಇಂಪಾಗಿತ್ತು.

ಇಂದಿಗೆ ಸರಿಯಾಗಿ ಎರಡು ವರ್ಷದ ಹಿಂದೆ ಅಗಲಿದ ಡಾ.ರಾಜ್ ಅವರನ್ನು ಮರೆಯುವುದಾದರೂ ಹೇಗೆ? ಅವರ ಛಾಯಾ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮತ್ತು ಎರಡು ನಿಮಿಷಗಳ ಕಾಲ ಮೌನವಾಚರಿಸಿ ಅವರಿಗೆ ಗೌರವ ಸಲ್ಲಿಸಲಾಯಿತು. ಕೂಟದ ಸಮಿತಿಯ ಸದಸ್ಯರಾದ ಕೃಷ್ಣಾ ನಾಗರಾಜ್ ಅಣ್ಣಾವ್ರ ಗುಣಗಾನ ಮಾಡಿ ನಂತರ ಕುಲವಧು ಚಿತ್ರದ "ಒಲವಿನ ಪ್ರಿಯಲತೆ.. ಅವಳದೇ ಚಿಂತೆ, ಅವಳ ಮಾತೆ ಮಧುರ ಗೀತೆ" ಹಾಡಿದರು. ಕ್ರಿಕೆಟ್ ಆಟಗಾರ ಪವನ್ ಕೌಶಿಕ್ ಮತ್ತು ಲತಾ ಹೆಗ್ಗಡೆ ಅವರು ಸುಶ್ರಾವ್ಯವಾಗಿ ಹಾಡಿದ 'ಒಲವೆ ಜೀವನ ಸಾಕ್ಷಾತ್ಕಾರ' ಯುಗಳ ಗೀತೆ ಡಾ.ರಾಜ್ ಬಗ್ಗೆ ವಿಶ್ವದೆಲ್ಲೆಡೆ ಕನ್ನಡಿಗರಿಗೆ ಇರುವ ಒಲವು ಮತ್ತು ಮರೆಯದ ಮಮಕಾರಗಳನ್ನು ಪುನಃರುಚ್ಛರಿಸಿದವು.

ಈ ವರ್ಷ ಸ್ಥಳೀಯ ಭಾರತೀಯ ಸಮುದಾಯದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ದ್ವಿತೀಯ ಸ್ಥಾನ ಗಳಿಸಿದ ಕನ್ನಡ ಕೂಟದ ತಂಡದ ನಾಯಕ ಸುಹಾಸ್ ಶಾನುಭೋಗ್ ಮತ್ತು ಎಲ್ಲಾ ಆಟಗಾರರನ್ನು ಸನ್ಮಾನಿಸಲಾಯಿತು. ಆಟಗಾರರು ತಮಗೆ ಸ್ಪೂರ್ತಿದಾಯಕರಾದ ತಂಡದ ಮ್ಯಾನೆಜರ್ ಬಸವರಾಜ್ ಪರಮಶಿವಯ್ಯ ಅವರ ಕೊಡುಗೆಯನ್ನು ಸ್ಮರಿಸಿದರು.

ಕನ್ನಡ ಕೂಟ ನಡೆಸಿದ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ ಕಾರ್ಯಕ್ರಮದಲ್ಲಿ ವಿಜೇತರಾದ ವತ್ಸಲಾ ಪ್ರಕಾಶ್ ಮತ್ತು ತಾರಮಣಿ ಹಾಗೂ ಇನ್ನಿತರ ಸ್ಥಾನಗಳಿಸಿದ ರಮ್ಯ ರಾಜ್ ಕುಮಾರ್, ರಾಜ್ ಕುಮಾರ್ , ವಿಶ್ವನಾಥ್ ಮತ್ತು ವೆಂಕಟೇಶ್ ಅವರುಗಳಿಗೆ ಬಹುಮಾನ ವಿತರಿಸಲಾಯಿತು. ಕೂಟದ ವಾರ್ಷಿಕ ಪಿಕ್ನಿಕ್ ಸಮಯದಲ್ಲಿ ನಡೆದ ರಸಪ್ರಶ್ನೆ ಪ್ರತಿಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರಮಾ ಚಕ್ರಪಾಣಿ ಮತ್ತು ಸುಜಾತಾ ಮುತ್ತುಗದೂರ್ ಅವರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದ ನಡುವೆ ಸತ್ಯಕುಮಾರ್ ಕಟ್ಟೆ ಅವರ ಮಿಮಿಕ್ರಿ ಸಂಗೀತ ಹಾಸ್ಯ ಭರಿತವಾಗಿ ಊಟದೊಡನೆ ಉಪ್ಪಿನಕಾಯಿಯಂತಿತ್ತು. ಸ್ಮಿತಾ ಗೌರಿ ಮತ್ತು ನಮ್ರತಾ ಭಟ್ ಅವರು ಅಚ್ಚ ಕನ್ನಡದಲ್ಲಿ ಗಾದೆಗಳನ್ನು ಹೇಳುತ್ತಾ, ಅಗಾಗ ಬೆಂಗಳೂರಿನ ಪ್ಯೂರ್ ಕಂಗ್ಲಿಷ್‌ನಲ್ಲಿ ಮಾತನಾಡುತ್ತಾ, ನಡುವೆ ಪ್ರೇಕ್ಷಕರಿಗೆ ಯುಗಾದಿಯ ಬಗ್ಗೆ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಪ್ರಶ್ನೆಗಳನ್ನೆಸೆಯುತ್ತಾ, ಕಾರ್ಯಕ್ರಮ ನಿರೂಪಣೆಯಲ್ಲಿ ಬಲು ಅಪರೂಪ ನಮ್ ಜೋಡಿ ಎಂದೆನಿಸಿದರು.

ಕಾರ್ಯದರ್ಶಿ ಚಕ್ರಪಾಣಿಯವರು ವಂದನಾರ್ಪಣೆ ಮಾಡಿದರು. ಕರ್ನಾಟಕ ನಾಡ ಗೀತೆ, ಭಾರತ ಮತ್ತು ನ್ಯೂಜಿಲೆಂಡ್ ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಕನ್ನಡ ಕೂಟ ವ್ಯವಸ್ಥೆ ಮಾಡಿದ್ದ ಊಟವನ್ನು ನೆನೆಸಿಕೊಂಡ್ರೆ ಸುಮ್ಮಗೆ ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X