ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿದ ಡ್ರಾಗನ್,ಅಹಿಂಸೆಯ ದಲೈಲಾಮ

By Staff
|
Google Oneindia Kannada News

ಇತಿಹಾಸಕಾರ ಮತ್ತು ವಿಜ್ಞಾನಿ ಜೇರ್ಡ್ ಡೈಮಂಡ್ ಜನಾಂಗಗಳ ನಡುವಿನ ಇತಿಹಾಸದ ಪ್ರಯೋಗವನ್ನು ತಿಳಿಸಲು ಮೊರಿಯೊರಿ ಜನಾಂಗದ ವಿನಾಶದ ಬಗ್ಗೆ ಬರೆಯುತ್ತಾನೆ. ನ್ಯೂಜಿಲ್ಯಾಂಡಿನ ಹತ್ತಿರವಿರುವ ಚಾತಮ್ ದ್ವೀಪದಲ್ಲಿ ಸಾವಿರಾರು ವರ್ಷಗಳಿಂದ ಬಾಳುತ್ತಿದ್ದ ಬುಡಕಟ್ಟು ಜನಾಂಗವಿದು. ತಮ್ಮತಮ್ಮಲ್ಲೇ ನಡೆಯಬಹುದಾದ ಘರ್ಷಣೆಗಳನ್ನು ತಪ್ಪಿಸಲು ಪ್ರತಿವಿವಾದಗಳನ್ನು ಶಸ್ತ್ರಾಸ್ತ್ರರಹಿತವಾಗಿ ಮಾತುಕತೆಯಲ್ಲೇ ಬಗೆಹರಿಸಿಕೊಳ್ಳಬೇಕೆಂದು ಇಡೀ ಜನಾಂಗ ನಿರ್ಧರಿಸಿಬಿಟ್ಟಿತು. ಶಾಂತಿಪ್ರಿಯರ ಈ ದ್ವೀಪದಲ್ಲಿ ಯುದ್ಧಗಳೇ ನಡೆಯಲಿಲ್ಲ. ಆಯುಧಗಳ ಉಪಯೋಗವೇ ಇಲ್ಲದಂತಾಯಿತು. ಅನೇಕ ಶತಮಾನಗಳ ಕಾಲ ಈ ರೀತಿಯ ಶಾಂತಿ ಮತ್ತು ಅಹಿಂಸೆಯ ಮೌಲ್ಯಗಳಲ್ಲೇ ಬದುಕಿ ಅವುಗಳೇ ರಕ್ತಗತವಾದವು. ಆದರೆ ಅವೆಲ್ಲಾ ಮೌಲ್ಯಗಳು ದ್ವೀಪವಾಸಿಗಳಿಗಷ್ಟೇ. ಹೊರಗಿನವರಿಗೆ ಅಲ್ಲವಲ್ಲ!

ನ್ಯೂಜಿಲ್ಯಾಂಡಿನಲ್ಲಿ ವಾಸಿಸುತ್ತಿದ್ದ ಮೌರಿ ಎನ್ನುವ ಯುದ್ಧಾಸಕ್ತ ಜನಾಂಗ ದೋಣಿಗಳಲ್ಲಿ ಬಂದು ಈ ದ್ವೀಪದ ಮೇಲೆ ದಾಳಿ ಮಾಡಿತು. ಮೌರಿಗಳು ಕ್ರೂರಿಗಳು.

ಪರಿಸ್ಥಿತಿಯಿಂದ ಗಾಬರಿಗೊಂಡ ಶಾಂತಿಪ್ರಿಯ ಮೊರಿಯೊರಿ ಜನರು ಒಂದೆಡೆ ಸಭೆ ಸೇರಿದರು. ತಮ್ಮ ಮನೋಗುಣಕ್ಕೆ ಅನುಗುಣವಾಗಿ ನಿರ್ಣಯವನ್ನು ಸ್ವೀಕರಿಸಿ ಯುದ್ಧ ಮಾಡದೆ ಮೌರಿಗಳನ್ನೂ ಪ್ರೀತಿ ಮತ್ತು ಸ್ನೇಹದಲ್ಲಿ ತಮ್ಮ ದ್ವೀಪದಲ್ಲೇ ಇರಲು ಬಿಡುವ ನಿರ್ಧಾರವನ್ನು ಕೈಗೊಂಡರಂತೆ. ಆದರೆ ಮೊರಿಯೊರಿಗಳ ನಾಯಕ ಈ ನಿರ್ಧಾರವನ್ನು ಮೌರಿ ಆಕ್ರಮಣಕಾರರಿಗೆ ತಿಳಿಸುವ ಮುನ್ನವೇ ಮೌರಿಗಳು ಎಂತಹ ಹಿಂಸೆಯನ್ನು ಪ್ರಾರಂಭಿಸಿದರೆಂದರೆ ಇರುವೆಗಳನ್ನು ಹೊಸಕಿ ಹಾಕಿದಷ್ಟು ಸುಲಭವಾಗಿ ಆಯುಧರಹಿತ ಮೊರಿಯೊರಿಗಳನ್ನು ತರಿದುಹಾಕಿದರಂತೆ. ಬರೀ ಕೊಂದದ್ದೇ ಅಲ್ಲದೆ ಕೊಂದ ಮಕ್ಕಳನ್ನು ಬೇಯಿಸಿಕೊಂಡು ತಿಂದರಂತೆ! ಕೇವಲ ಒಂದೇ ದಿನದಲ್ಲಿ ಇಡೀ ಮೊರಿಯೊರಿ ಜನಾಂಗವೇ ನಿರ್ನಾಮವಾಯಿತಂತೆ. ಈ ಘಟನೆ ಬಹಳ ಹಿಂದಿನದಲ್ಲ; ನೂರ ಎಪ್ಪತ್ತೈದು ವರ್ಷಗಳ ಹಿಂದೆ ನಡೆದದ್ದು.

ಮೊರಿಯೊರಿಗಳು ಶಸ್ತ್ರಾಸ್ತ್ರ ಹಿಡಿಯದಿದ್ದುದೇ, ಹಿಂಸೆಯ ಮಾರ್ಗಕ್ಕೆ ಇಳಿಯದಿದ್ದುದೇ ಅವರ ವಿನಾಶಕ್ಕೆ ಕಾರಣವಾಯಿತೇ? ಟಿಬೆಟಿಯನ್ನರ ರಕ್ತದಲ್ಲಿ ಸಾವಿರಾರು ವರ್ಷಗಳಿಂದ ಇಳಿದ ಬೌದ್ಧಧರ್ಮವೇ ಅವರ ಇಂದಿನ ಅವಗತಿಗೆ ಕಾರಣವಾಯಿತೇ? ಅಹಿಂಸೆಯನ್ನು ಮೌಲ್ಯವನ್ನಾಗಿ ತಿಳಿಯುವ ಸಮಾಜ ಅದೇ ಗುಣವನ್ನು ದೌರ್ಬಲ್ಯವನ್ನಾಗಿ ಗುರುತಿಸುವ ಸಮಾಜದೊಡನೆ ಹೇಗೆ ವ್ಯವಹರಿಸಬೇಕು?

ಟಿಬೆಟಿನದೇ ದೊಡ್ಡ ರೂಪದಂತಿರುವ ಮತ್ತು ಅದಕ್ಕೆ ಬೌದ್ಧಧರ್ಮವನ್ನು ಬೋಧಿಸಿದ ಟಿಬೆಟಿನ ದೊಡ್ಡಣ್ಣ ಭಾರತ ಚೀನಾದ ಹುನ್ನಾರದ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕಾದ ಕಾಲವಿದು. ಟಿಬೆಟಿಗೆ ಮಾಡಿದಂತೆ ನೇರವಾಗಿ ಭಾರತವನ್ನು ಗುಳುಂ ಮಾಡಲು ಚೀನಾಕ್ಕೆ ಸಾಧ್ಯವಿಲ್ಲವಾದರೂ ಭಾರತವನ್ನು ಹಂತ ಹಂತವಾಗಿ ಕ್ಷಿತಿಲಗೊಳಿಸಿ ಭಕ್ಷಿಸುವ ಕುತಂತ್ರವನ್ನು ಅಲ್ಲಗಳೆಯಲಾಗದು. ಬ್ರಿಟೀಷರು ದೇಶವನ್ನು ಭಾರತೀಯರಿಗೇ ಬಿಟ್ಟುಕೊಟ್ಟ ಈ ಐವತ್ತು ವರ್ಷಗಳಲ್ಲಿ ಈಶಾನ್ಯ ಭಾರತ ಬಹಳವಾಗಿಯೇ ಕ್ಷಿತಿಲವಾಗಿದೆ. ಒಕ್ಕೂಟದಿಂದ ಬೇರ್ಪಡುವ ಸ್ವತಂತ್ರ್ಯ ಧ್ವಜಗಳು ಅಸ್ಸಾಂ, ನಾಗಾಲ್ಯಾಂಡ್ ತ್ರಿಪುರಗಳಲ್ಲೆಲ್ಲಾ ಬಿಡಿಬೀಸಾಗಿ ಹಾರುತ್ತಿವೆ.

ಭಾರತದ ಕೇಂದ್ರದಿಂದ ಈಶಾನ್ಯ ಭಾಗದ ದಿವ್ಯ ನಿರ್ಲಕ್ಷ್ಯ, ಮತಾಂತರಗಳ ಮುಖಾಂತರ ಸಾಂಸ್ಕೃತಿಕ ಕೊಂಡಿಗಳ ಬಲಹೀನತೆ, ವಿರೋಧಗಾಮಿಗಳಿಗೆ ಚೀನಾದ ಬೆಂಬಲ ಈ ಭಾಗವನ್ನು ಭಾರತದಿಂದ ಆಗಲೇ ಬೇರ್ಪಡಿಸುತ್ತಿವೆ. ಹಣ್ಣಿನ ತೊಟ್ಟು ಮರದಿಂದ ಕಳಚುತ್ತಿದೆ ಮತ್ತು ಕೆಳಗೆ ಚೀನಾ ಬಾಯಿಬಿಟ್ಟು ಕುಳಿತಿದೆ. ಟಿಬೆಟನ್ನು ನೇರಳೆಹಣ್ಣಿನಂತೆ ಜಗಿದು ಬೀಜವನ್ನು ಉಗುಳಬಹುದಾದರೆ ಭಾರತ ಸ್ವಲ್ಪಸ್ವಲ್ಪವೇ ಕೊಚ್ಚಿ ತಿನ್ನ ಬಹುದಾದ ಹಲಸಿನ ಹಣ್ಣಿನಂತೆ ಕಾಣುತ್ತಿದೆ ಚೀನಾಕ್ಕೆ. ಚೀನಾದ ದುರಾಕ್ರಮಣಗಳನ್ನು ತಡೆಯಲು ಭಾರತದ ಯಾವ ನೆರೆಹೊರೆಯವರೂ ಕೈಜೋಡಿಸಲಾರರು, ಬದಲಾಗಿ ನೇರವಾಗಿ ಅಥವ ಪರೋಕ್ಷವಾಗಿ ಚೀನಾದೊಡನೆಯೇ ನಿಂತಾರು. ದೂರದೃಷ್ಟಿಯ ರಾಜಕಾರಣವಿಲ್ಲದ ಪಾಕಿಸ್ತಾನ ಭಾರತವನ್ನು ಕ್ಷಿತಿಲವಾಗಿಸುವಲ್ಲಿಯೇ ತನ್ನ ಸಾರ್ಥಕತೆಯನ್ನು ಕಾಣುವಂತಿದೆ.

ದೂರದೃಷ್ಟಿಯಿಲ್ಲದ ರಾಜಕಾರಣವೆಂದು ಭಾರತದ ನೆರೆಹೊರೆಯವರನ್ನು ದೂಷಿಸುವ ಮೊದಲು ಭಾರತದ ರಾಜಕಾರಣವನ್ನೂ ಮತ್ತು ಚೀನಾ ಟಿಬೆಟ್ ಒಳಗೊಂಡಂತೆ ಅದರ ವಿದೇಶಾಂಗ ನೀತಿಗಳನ್ನೂ ಅವಲೋಕಿಸುವ ಅಗತ್ಯವಿದೆ. ಹಾಗೆ ನೋಡಿದರೆ ಪಾಕಿಸ್ತಾನ ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇಪದೇ ಎತ್ತಿ ತನ್ನದೇ ರೀತಿಯಲ್ಲಿ ಆ ವಿವಾದವನ್ನು ಜೀವಂತವಾಗಿಟ್ಟಿದ್ದರೆ ಭಾರತದ ಪಾಲಿಗೆ ಟಿಬೆಟ್ ಎಂದೋ ಮೃತವಾದ ವಿವಾದ. ತನ್ನ ಪೂರ್ವಗಡಿಯಲ್ಲಿ ಬಂದು ನಿಂತ ಡ್ರಾಗನ್ ಸೈನ್ಯದ ಬಗೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೊಬ್ಬೆ ಹೊಡೆಯುವ ಬದಲು ಅದನ್ನು ಮುಚ್ಚಿಡುವ ಪ್ರಯತ್ನಗಳೇ ಭಾರತದಿಂದ ಹೆಚ್ಚು. ಹಾಗಾಗಿಯೇ, ಇತ್ತೀಚಿನ ಟಿಬೆಟ್ ಸ್ವತಂತ್ರ್ಯ ಹೋರಾಟಗಾರರ ಬಗೆಗೆ ಭಾರತ ತಳೆದಿರುವ ನಿಲುವನ್ನು ಚೀನಾ ಮನಸಾರೆ ಹೊಗಳಿದೆ!

ಸಾವಿರದ ಒಂಭೈನೂರ ಅರವತ್ತೆರಡರ ಭಾರತ ಮತ್ತು ಚೀನಾ ಗಡಿವಿವಾದ ಯುದ್ಧದ ಸಮಯದಲ್ಲಿ ಭಾರತೀಯ ಕಮ್ಯುನಿಷ್ಟರು ಚೀನಾವನ್ನು ಮುಕ್ತವಾಗಿ ಬೆಂಬಲಿಸಿದ್ದನ್ನು ಇತಿಹಾಸ ಬಲ್ಲ ಭಾರತೀಯರು ಇನ್ನೂ ಮರೆತಿಲ್ಲ. ಭಾರತ ಮತ್ತು ಚೀನಾ ಗಡಿಯುದ್ಧವನ್ನು ಕಾರ್ಮಿಕವರ್ಗಕ್ಕೂ ಕ್ಯಾಪಿಟಲಿಸ್ಟರಿಗೂ ನಡೆದ ಸಂಘರ್ಷವೆಂದು ಅಂದು ವ್ಯಾಖ್ಯಾನಿಸಿದ್ದನ್ನು ಕಮ್ಯುನಿಸ್ಟ್ ಪಾರ್ಟಿ ಇಂದೂ ಬದಲಿಸಿಕೊಂಡಿಲ್ಲ. ಅದೇ ಕಮ್ಯುನಿಷ್ಟರು ಅಧಿಕಾರದಲ್ಲಿರುವಾಗ ಚೀನಾದ ವಿರುದ್ಧ ಅವರು ಮಾತನಾಡುತ್ತಾರೆಂದು ಊಹೆ ಮಾಡುವುದಾದರೂ ಹೇಗೆ? ಇಂತಹ ಭಾರತೀಯ ಕಮ್ಯುನಿಷ್ಟರ ಪ್ರತಿಯೊಂದು ನಡೆ, ನುಡಿ, ರೀತಿ ರಿವಾಜಿಗೂ ಭಾರವಾದ ಪದಗಳ ಸೈದ್ಧಾಂತಿಕ ನಿಲುವುಗಳನ್ನು ಕಟ್ಟಿ ಅವರನ್ನು ಸದಾಕಾಲ ಬೆಂಬಲಿಸುವ ಬುದ್ಧಿಜೀವಿಗಳ ದೊಡ್ಡ ಪಡೆಯೇ ಭಾರತದಲ್ಲಿದೆ.

ಚೀನಾದ ಟಿಬೆಟ್ ಕಬಳಿಕೆ, ಅದಲ್ಲಿ ನಡೆಸುತ್ತಿರುವ ಜನಾಂಗ ಹಿಂಸೆ, ಟಿಬೆಟಿನ ನೆಲಕ್ಕೆ ಚೀನಿಯರ ವ್ಯವಸ್ಥಿತ ವಲಸೆ, ತಮ್ಮ ನೆಲದಲ್ಲೇ ಅನಾಥರಾಗಿ ಕೊನೆಯಲ್ಲಿ ಗುಲಾಮರಾಗುತ್ತಿರುವ ಟಿಬೆಟಿಯನ್ನರು ಇವೆಲ್ಲದರ ಬಗ್ಗೆ ಪ್ರಪಂಚ ಹೆಚ್ಚು ಕಡಿಮೆ ಮೌನವಾಗಿದೆ. ಬಹುಮಟ್ಟಿಗೆ ಈ ಮೌನ ಚೀನಾದೊಡನೆಯ ವಾಣಿಜ್ಯ ಸಂಬಂಧದಿಂದ ಹುಟ್ಟಿದ್ದು. ಈ ರೀತಿಯ ವಾಣಿಜ್ಯ ಬಂಧ ಚೀನಾಕ್ಕೆ ಪ್ರಪಂಚದ ಮೇಲೆ ಪರಮೋಚ್ಛ ಅಧಿಕಾರವನ್ನು ನೀಡುವುದಾದರೆ ಅದು ಖಂಡಿತವಾಗಿ ಮಾನವತೆಯ ದುರಂತ. ಸರಕಾರಗಳನ್ನು ಮೀರಿ ಅನೇಕ ಜನಾಂದೋಳನ ದನಿಗಳು ಕೇಳುತ್ತಿವೆಯಾದರೂ ಮುಂದುವರೆದ ದೇಶಗಳಿಂದ ಬರುವ ಅಂತಹ ಧ್ವನಿಗಳನ್ನು ಹೊಟ್ಟೆ ತುಂಬಿದವರ ಮಾತು ಎಂದು; ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಬರುವ ಅಂತಹ ಧ್ವನಿಗಳನ್ನು ಬಲಹೀನರ ಕೊರಗು ಎಂದು ಅರ್ಥೈಸಿ ಉದ್ಧೇಶಪೂರ್ವಕ ಭೇದಗಳಿಂದ ದೃತಿಗೆಡಿಸುವ ಪ್ರಯತ್ನಗಳಿಂದ ಆ ಧ್ವನಿಗಳು ಮುಕ್ತವಾಗಬೇಕಿವೆ.

ಟಿಬೆಟ್ ಚೀನಾ ಸೇರಿದಂತೆ ಪ್ರಪಂಚದ ಶಾಂತಿಗಾಗಿ ದಲೈಲಾಮ ಪ್ರಾರ್ಥಿಸುತ್ತಲೇ ಇದ್ದಾನೆ ಶಾಂತಮೂರ್ತಿ ಬುದ್ಧನ ಪ್ರತಿಮೆಯೆದುರು ಮಂಡಿಯೂರಿ. ಶಾಂತಿ ಮತ್ತು ಅಹಿಂಸೆಯಂತೆ ಪ್ರಾರ್ಥನೆ ಕೂಡ ಅನೇಕ ದೇಶ ಮತ್ತು ಜನಾಂಗಗಳಿಗೆ ಅರ್ಥವಾಗದಷ್ಟು ಉದಾತ್ತ ಮೌಲ್ಯ. ಪ್ರಾರ್ಥನೆಯ ಭಾಷೆ ಅತ್ಯಂತ ಕೋಮಲ ಮತ್ತು ಕಿವಿಗಳಿಗಲ್ಲದೆ ನೇರವಾಗಿ ಹೃದಯವನ್ನು ಉದ್ಧೇಶಿಸುವ ಸೂಕ್ಷ್ಮವೇದಿ. ಸಂಸ್ಕಾರಯುಕ್ತ ಮನಸ್ಸುಗಳು ಮಾತ್ರ ಪ್ರಾರ್ಥನೆಯ ತರಂಗಗಳನ್ನು ಗ್ರಹಿಸಬಲ್ಲವು. ರಿಡಿಫ್ ಡಾಟ್ ಕಾಮ್‌ನಲ್ಲಿ ಪ್ರಕಟವಾಗಿದ್ದ ದಲೈಲಾಮನ ಪ್ರಾರ್ಥನೆಯ ಚಿತ್ರಕ್ಕೆ ಬುದ್ಧಿವಂತ ಓದುಗನೊಬ್ಬ ವ್ಯಾಖ್ಯಾನ ಬರೆದಿದ್ದ - While Dalai Lama is praying for the world peace, China is preying the world in pieces. ಪ್ರಾರ್ಥನೆಯ ಭಾಷೆ ಬಿಟ್ಟು ಬೇರೆ ರೀತಿಯಲ್ಲಿ ವ್ಯವಹರಿಸುವುದು ದಲೈಲಾಮನಿಗೆ ತಿಳಿದಂತೆ ಕಾಣುವುದಿಲ್ಲ. ಚೀನಾಕ್ಕೆ ಪ್ರಾರ್ಥನೆಯ ಭಾಷೆ ಅರ್ಥವಾಗುವುದಿಲ್ಲ.

ಸಧ್ಯಕ್ಕೆ ಪಂದ್ಯದಲ್ಲಿ ಚೀನಾ ಮುಂದಿರುವಂತೆ ಕಾಣುತ್ತಿದೆ. ಆದರೆ ಅಂತಿಮವಾಗಿ ದಲೈಲಾಮನ ಪ್ರಾರ್ಥನೆ ಗೆಲ್ಲುವುದೋ ಚೀನಾಸತ್ತೆಯ ನೆಲದ ದಾಹವೋ ಕಾಲವೇ ತಿಳಿಸಬೇಕು.

ಹಿಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X